ಸಿದ್ದು ಕಾರಿನ ಮೇಲೆ ಮೊಟ್ಟೆ ಎಸೆತ: ಪ್ರಕರಣಕ್ಕೆ ತಡೆ
Team Udayavani, Dec 23, 2022, 7:50 AM IST
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗು ಪ್ರವಾಸ ಕೈಗೊಂಡಿದ್ದ ವೇಳೆ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಾಂತರ ತಡೆಯಾಜ್ಞೆ ನೀಡಿದೆ.
ಆರೋಪಿಗಳಾದ ಎನ್.ಡಿ. ಸಂಪತ್ ಕುಮಾರ್ ಮತ್ತು ಬಿ.ಎಂ.ಸಂತೋಷ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ| ಎಸ್. ರಾಚಯ್ಯ ಅವರಿದ್ದ ರಜಾ ಕಾಲದ ವಿಶೇಷ ಏಕಸದಸ್ಯ ನ್ಯಾಯಪೀಠ ಗುರುವಾರ ಈ ಆದೇಶ ನೀಡಿದೆ.
ಅರ್ಜಿದಾರರ ಪರ ವಕೀಲರು ವಾದಿಸಿ ಘಟನೆಯಲ್ಲಿ ಆರೋಪಿಗಳ ಪಾತ್ರವಿದೆ ಎನ್ನುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಬಂಧನ ಮಾಡಲಾಗಿದೆ. ಇದು ಕಾನೂನು ಬಾಹಿರ ಕ್ರಮವಾಗಿದೆ. ಹಾಗಾಗಿ ಪ್ರಕರಣದ ವಿಚಾರಣೆಗೆ ತಡೆ ನೀಡಬೇಕು ಎಂದು ಕೋರಿದರು.
ವಾದ ಆಲಿಸಿದ ನ್ಯಾಯಪೀಠ, ಮೇಲ್ನೋಟಕ್ಕೆ ಅರ್ಜಿದಾರರ ವಾದದಲ್ಲಿ ಹುರುಳಿದೆ ಎನಿಸುತ್ತಿದೆ ಎಂದು ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ಪ್ರಕರಣದ ವಿಚಾರಣೆಗೆ ತಡೆ ನೀಡಿತು.
ಕಳೆದ ಆಗಸ್ಟ್ 18ರಂದು ಮಾಜಿ ಸಿಎಂ ಸಿದ್ಧರಾಮಯ್ಯ ಕೊಡಗಿನ ಪ್ರವಾಹಪೀಡಿತ ಪ್ರದೇಶಗಳ ಭೇಟಿ ಕೈಗೊಂಡಿದ್ದರು. ಆ ವೇಳೆ ಅವರು ಸಾವರ್ಕರ್ ವಿರುದ್ಧ ನೀಡಿದ್ದ ಹೇಳಿಕೆ ಖಂಡಿಸಿ ಬಿಜೆಪಿ ಯುವಮೋರ್ಚಾ ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಿತ್ತು. ಅದೇ ಅದೇ ಮಾರ್ಗದಲ್ಲಿ ಸಿದ್ದರಾಮಯ್ಯ ಕಾರಿನಲ್ಲಿ ತೆರಳುತ್ತಿದ್ದಾಗ ಅವರ ಕಾರಿನ ಮೇಲೆ ಕೆಲವು ಹಿಂದೂ ಕಾರ್ಯಕರ್ತರು ಮೊಟ್ಟೆ ಎಸೆದಿದ್ದರು.
ಈ ಬಗ್ಗೆ ಕುಶಾಲನಗರದ ವಿ.ಪಿ.ಶಶಿಧರ್ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳಿಬ್ಬರು ಸೇರಿದಂತೆ ಹಲವರನ್ನು ಬಂಧಿಸಿದ್ದರು. ಆ ಬಗ್ಗೆ ವಿಚಾರಣಾ ನ್ಯಾಯಾಲಯದಲ್ಲಿ ಪ್ರಕರಣವೂ ನಡೆಯುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.