ಕೃಷಿ ಬದುಕಿಗೆ ಆಶಾಕಿರಣವಾದ ವೆನಿಲ್ಲಾ ಬೆಳೆ, ಏನಿದರ ಇತಿಹಾಸ…
ನಾನಾ ಭಾಗಗಳಲ್ಲಿಯೂ ಕೂಡ ರೈತರು ಲಾಭದಾಯಕ ಬೆಳೆಯಾಗಿ ಇದನ್ನು ಆಯ್ಕೆ ಮಾಡಿಕೊಂಡಿದ್ದಾರೆ.
Team Udayavani, Sep 22, 2021, 4:48 PM IST
ಕೃಷಿ ಪ್ರಧಾನವಾದ ಭಾರತದಲ್ಲಿ ರೈತರು ಹೊಸ ಹೊಸ ಬಗೆಯ ತಳಿಗಳನ್ನು ಬೆಳೆಸುವಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಾರೆ. ಅಂತಹ ಬೆಳೆಗಳಲ್ಲಿ ವೆನಿಲ್ಲಾ ಬೆಳೆ ಕೂಡಾ ಒಂದು .ಇದು ಸಹ್ಯಾದ್ರಿಯ ಪ್ರದೇಶಗಳಲ್ಲಿ ಕಂಡುಬರುವ ಲಾಭದಾಯಕವಾದ ಉಪ ಬೆಳೆಗಳಲ್ಲಿ ಒಂದಾಗಿದ್ದು ,ರೈತನಿಗೆ ಉತ್ತಮ ಇಳುವರಿ ಕೊಡುವ ಮೂಲಕ ಆದಾಯವನ್ನು ಮತ್ತಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ.ಯಾವುದೇ ಪ್ರಾಣಿಗಳ ಕಾಟವಿಲ್ಲದ ಹೆಚ್ಚಿನ ಪ್ರಮಾಣದಲ್ಲಿ ಕೀಟ ಭಾದೆ ಇಲ್ಲದ ಮಲೆನಾಡಿನ ಪರಿಸರಕ್ಕೆ ಅತ್ಯಂತ ಸೂಕ್ತವಾದ ಉಪಬೆಳೆಯಾಗಿ ವೆನಿಲ್ಲಾ ಗುರುತಿಸಿಕೊಂಡಿದೆ. ಹೀಗಾಗಿ ಅತಿವೃಷ್ಟಿ-ಅನಾವೃಷ್ಟಿಯಿಂದ ಕಂಗಾಲಾಗಿರುವ ರೈತರಿಗೆ ಹೊಸ ಆಶಾಕಿರಣವಾಗಿದೆ.
ಇತಿಹಾಸ
ಇದೊಂದು ಆರ್ಕಿಡ್ ಪ್ರಭೇದಕ್ಕೆ ಸೇರಿರುವ ಸಸ್ಯವಾಗಿದ್ದು, ವಾತಾವರಣದಲ್ಲಿರುವ ತೇವಾಂಶ ಮತ್ತು ಪೋಷಕಾಂಶಗಳನ್ನು ಹೀರಿ ಬೆಳವಣಿಗೆ ಹೊಂದುತ್ತದೆ. ಸುಮಾರು 19ನೇ ಶತಮಾನದಲ್ಲಿ ಬೆಳಕಿಗೆ ಬಂದಿರುವ ವೆನಿಲ್ಲಾ , ಭಾರತ ಸೇರಿದಂತೆ ವಿಶ್ವದ ನಾನಾ ಭಾಗಗಳಲ್ಲಿ ರೈತರಿಗೆ ಉತ್ತಮ ಆದಾಯವನ್ನು ತಂದುಕೊಡುವಲ್ಲಿ ಯಶಸ್ವಿಯಾಗಿದೆ. ಕರ್ನಾಟಕದ ನಾನಾ ಭಾಗಗಳಲ್ಲಿಯೂ ಕೂಡ ರೈತರು ಲಾಭದಾಯಕ ಬೆಳೆಯಾಗಿ ಇದನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಹೂವಿನ ವಿನ್ಯಾಸ
ನೀಳ ಹೂವಿನಲ್ಲಿ ಕೇಸರ ಹಾಗೂ ಶಲಾಕಾಗ್ರ ಗಳ ನಡುವೆ ಪೊರೆಯಂತಹ ರಚನೆಯನ್ನು ಗಮನಿಸಬಹುದಾಗಿದೆ. ಇದು ಇತರ ಹೂವುಗಳಂತೆ ನೈಸರ್ಗಿಕ ಪರಾಗಸ್ಪರ್ಶ ಪ್ರಕ್ರಿಯೆ ಗೆ ಒಳಪಡುವುದಿಲ್ಲ. ಬದಲಾಗಿ ಕೃತಕವಾಗಿ ಪರಾಗಸ್ಪರ್ಶವನ್ನು ಮಾಡಬೇಕಾಗುತ್ತದೆ.
ವಾತಾವರಣ
ವೆನಿಲ್ಲಾ ಬೆಳೆ ಬೆಳೆಯಲು ಸಮ ಪ್ರಮಾಣದ ಉಷ್ಣತೆಯ ಅವಶ್ಯಕತೆಯಿದ್ದು, ಇದು ಸಮಶೀತೋಷ್ಣವಲಯದಲ್ಲಿ ಹೇರಳವಾಗಿ ಬೆಳೆಯುತ್ತದೆ. ವಾತಾವರಣದ ಉಷ್ಣತೆಯ ಪ್ರಮಾಣ 21 ರಿಂದ 32 ಡಿಗ್ರಿ ಸೆಲ್ಸಿಯಸ್ ವರೆಗೆ ಇರುವ ವಾತಾವರಣ ಇದಕ್ಕೆ ಪೂರಕವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಪಶ್ಚಿಮ ಘಟ್ಟ ಹಾಗೂ ಮಲೆನಾಡಿನ ಪ್ರದೇಶಗಳು ವೆನಿಲ್ಲಾ ಬೆಳೆಯನ್ನು ಬೆಳೆಯಲು ಅತ್ಯಂತ ಸೂಕ್ತವಾದ ಪ್ರದೇಶಗಳಾಗಿವೆ.
ವೆನಿಲ್ಲಾದ ಬೇರುಗಳು ಭೂಮಿಯಲ್ಲಿ ಹೆಚ್ಚು ಆಳಕ್ಕೆ ಇಳಿಯದ ಕಾರಣದಿಂದ ಹೆಚ್ಚು ಸಾರಯುಕ್ತ ಹಾಗೂ ಹಗುರ ಮಣ್ಣಿನ ಪ್ರದೇಶಗಳು ಈ ಬೆಳೆಗೆ ಅತ್ಯಂತ ಉತ್ತಮವಾದದ್ದು. ಹಾಗಾಗಿ ಒಣಭೂಮಿ ಹಾಗೂ ಜೌಗುಪ್ರದೇಶಗಳಲ್ಲಿ ಈ ಬೆಳೆಯನ್ನು ಬೆಳೆಯುವುದು ಅಷ್ಟೊಂದು ಸೂಕ್ತವಲ್ಲ.ವೆನಿಲ್ಲಾ ಬೆಳ್ಳಿಯನ್ನು ಬೆಳೆಯಲು ಉತ್ತಮ ನೀರಾವರಿ ವ್ಯವಸ್ಥೆ ಅವಶ್ಯಕವಿದೆ. ಹೀಗಾಗಿ ವಾತಾವರಣದಲ್ಲಿ ನೀರಿನ ಅಂಶವನ್ನು ಸದಾ ಉಳಿಸಿಕೊಳ್ಳಲು ಮೈಕ್ರೋಜೆಟ್ ಗಳನ್ನು ಬಳಕೆ ಮಾಡಬೇಕಾಗುತ್ತದೆ.
ಬೆಳೆ ವಿಧಾನ
ಮೂಲತಃ ವೆನಿಲ್ಲಾ ಬೆಳೆಯನ್ನು ನೆರಳಿರುವ ಪ್ರದೇಶದಲ್ಲಿ ಹೆಚ್ಚು ಬೆಳೆಯಬಹುದಾಗಿದ್ದು, ಇದಕ್ಕೆ ತೋಟಗಳ ಮಧ್ಯದಲ್ಲಿ ಅಡಿಕೆ ಮರ ಅಥವಾ ಗೊಬ್ಬರದ ಗಿಡ ಸೇರಿದಂತೆ ಇತರೆ ನೆರಳಿನ ಮರಗಳ ಸಹಾಯದಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಒಂದು ವೇಳೆ ವೆನಿಲ್ಲಾ ಗಿಡಗಳ ಮೇಲೆ ಸೂರ್ಯನ ಬೆಳಕು ನೇರವಾಗಿ ಬೀಳುವುದರಿಂದ ಗಿಡಗಳಿಗೆ ಹಾನಿಯಾಗಿ ಎಲೆಗಳು ಕಂದು ಬಣ್ಣಕ್ಕೆ ತಿರುಗುತ್ತದೆ. ಅದೇ ರೀತಿಯಲ್ಲಿ ನೆರಳಿನ ಪ್ರಮಾಣ ಹೆಚ್ಚಾದರೂ ಕೂಡ, ಗಿಡಗಳು ಸಂಪೂರ್ಣ ಹಚ್ಚಹಸಿರಾಗಿ ಬೆಳೆಯುವ ಮೂಲಕ ಇಳುವರಿ ಕಡಿಮೆಯಾಗುತ್ತದೆ. ಹೀಗಾಗಿ ಶೇಕಡಾ 50ರಷ್ಟು ನೆರಳಿನಲ್ಲಿ ವೆನಿಲ್ಲಾ ಬೆಳೆಯ ಕೃಷಿ ಮಾಡುವುದು ಅತ್ಯುತ್ತಮ.
ಸುಮಾರು 9 ಅಡಿ ಅಂತರವಿರುವ ಅಡಿಕೆ ತೋಟಗಳಲ್ಲಿ ಈ ಬೆಳೆಯನ್ನು ಬೆಳೆಯುವುದು ವೆನಿಲ್ಲಾ ಕೃಷಿಗೆ ಪೂರಕವಾಗಿದ್ದು, ಒಂದು ವೇಳೆ ಅಡಿಕೆ ತೋಟಗಳಲ್ಲಿ ಉಪಬೆಳೆಯಾಗಿ ವೆನಿಲ್ಲಾವನ್ನು ಬೆಳೆಯುವುದಾದರೆ ಆರರಿಂದ ಒಂಬತ್ತು ಅಡಿಗಳ ಅಂತರದಲ್ಲಿ ಪ್ರತಿಯೊಂದು ಮರಕ್ಕೆ ವೆನಿಲ್ಲಾ ಬಳ್ಳಿಯನ್ನು ಹಬ್ಬಿಸಬಹುದು . ಆದರೆ ವೆನಿಲ್ಲಾ ಕೃಷಿಯನ್ನು ಪ್ರತ್ಯೇಕ ಬೆಳೆಯನ್ನಾಗಿ ಬೆಳೆಯುವಾಗ ಪ್ರತಿ ಸಾಲಿನಿಂದ ಸಾಲಿಗೆ 6 ರಿಂದ 8 ಅಡಿ ಅಂತರವನ್ನು ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕವಾದದ್ದು.
ನಾಟಿ ವಿಧಾನ
ಮೊದಲು ವೆನಿಲ್ಲಾ ಬಳ್ಳಿಯನ್ನು ತುಂಡುತುಂಡಾಗಿ ಮಾಡಿ ಅವುಗಳನ್ನು ನೆಡುವುದರಿಂದ ವೆನಿಲ್ಲಾ ಕೃಷಿಯನ್ನು ಮಾಡಬಹುದಾಗಿದ್ದು, ಕೇವಲ ಒಂದೇ ಗಣ್ಣಿನಿಂದ ಗಿಡವನ್ನು ಮಾಡಬಹುದಾಗಿದೆ. ಆದರೆ ಆದಷ್ಟು ಎರಡರಿಂದ ಮೂರು ಗಣ್ಣುಗಳನ್ನು ನೆಡುವುದು ಅತ್ಯಂತ ಸೂಕ್ತವಾದದ್ದು.
ಹತ್ತರಿಂದ ಹನ್ನೆರಡು ಗಣ್ಣುಗಳನ್ನೂ ಕೂಡಾ ನೆಡಬಹುದಾಗಿದ್ದು, ಇದರಿಂದ ಗಿಡ ಬೇಗನೆ ಬೆಳೆಯುವುದರೊಂದಿಗೆ ಉತ್ತಮ ಇಳುವರಿಯನ್ನು ಕೂಡ ಪಡೆಯಬಹುದಾಗಿದೆ. ಬಳ್ಳಿಗಳನ್ನು ನೆಡುವಾಗ ಆದಷ್ಟು ಹೊಸ ಬಳ್ಳಿಗಳನ್ನು ನೋಡುವುದು ಉತ್ತಮ. ಹಳೆ ಬಳ್ಳಿಗಳನ್ನು ನೆಡುವುದರಿಂದ ಅವುಗಳು ಚಿಗುರೊಡೆಯಲು ಸಮಯ ತೆಗೆದುಕೊಳ್ಳುತ್ತದೆ. ವೆನಿಲಾದ ಬಳ್ಳಿಗಳನ್ನು ನೇರವಾಗಿ ತೋಟದಲ್ಲಿ ನೆಡಬಹುದು ಅಥವಾ ಸ್ವಲ್ಪ ಸಮಯದವರೆಗೆ ನರ್ಸರಿ ಮಾಡಿ ನಂತರ ತೋಟದಲ್ಲಿ ನೆಡಬದಾಗಿದೆ..
ನಾಟಿಗೆ ಸೂಕ್ತ ಸಮಯ
ವೆನಿಲಾ ಬೆಳೆಯನ್ನು ನಾಟಿ ಮಾಡಲು ಜೂನ್ ಅಥವಾ ಸೆಪ್ಟೆಂಬರ್ ತಿಂಗಳು ಅತ್ಯಂತ ಸೂಕ್ತವಾಗಿದೆ. ಇದನ್ನು ಹೊರತುಪಡಿಸಿದರೆ ತೋಟಗಳಲ್ಲಿ ಉತ್ತಮ ನೀರಾವರಿ ವ್ಯವಸ್ಥೆಯಿದ್ದಲ್ಲಿ ಯಾವ ಸಮಯದಲ್ಲಿ ಬೇಕಾದರೂ ಕೂಡ ನಾಟಿ ಮಾಡಬಹುದಾಗಿದೆ.
ಬಳ್ಳಿಗಳ ಜೋತುಬಿಡುವಿಕೆ
ಸಾಮಾನ್ಯವಾಗಿ ವೆನಿಲ್ಲಾ ಬಳ್ಳಿ ಮರಕ್ಕೆ ಅಂಟಿಕೊಂಡು ನೇರವಾಗಿ ಬೆಳೆಯುವುದರಿಂದ ಹೂಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಗಳು ಇರುತ್ತದೆ. ಅಲ್ಲದೆ ಅಷ್ಟು ಎತ್ತರ ಬೆಳೆದ ಬಳ್ಳಿಗಳಲ್ಲಾಗುವ ಹೂವುಗಳನ್ನು ಕೃತಕ ಪರಾಗಸ್ಪರ್ಶ ಕ್ರಿಯೆಗೆ ಒಳಪಡಿಸುವುದು ಕಷ್ಟಕರ. ಹೀಗಾಗಿ ಹತ್ತರಿಂದ ಹನ್ನೆರಡು ಅಡಿ ಎತ್ತರ ಬೆಳೆದ ಬಳ್ಳಿಗಳನ್ನು ಮರದಿಂದ ಬಿಡಿಸಿ 5 ರಿಂದ 6 ಅಡಿ ಎತ್ತರದಲ್ಲಿ ತೂಗು ಬಿಟ್ಟು ತುದಿ ಚಿವುಟುವುದು ಉತ್ತಮ. ಹೀಗೆ ಮಾಡುವುದರಿಂದ ಬಳ್ಳಿಯಲ್ಲಿ ಹಲವು ಚಿಗುರುಗಳು ಹೊಡೆಯಲು ಸಾಧ್ಯವಾಗುತ್ತದೆ. ಹಾಗೂ ಉತ್ತಮ ಫಸಲನ್ನು ಕೂಡ ಪಡೆಯಬಹುದಾಗಿದೆ. ಈ ಪ್ರಕ್ರಿಯೆಯಲ್ಲಿ ಬಳ್ಳಿ ಜೋತು ಬಿಡುವಾಗ ಕತ್ತದ ಬಳ್ಳಿಗಳಿಂದ ಕಟ್ಟುವುದು ಅತ್ಯಂತ ಸುಲಭ ಹಾಗೂ ಉತ್ತಮವಾದ ವಿಧಾನವಾಗಿದೆ.
ವೆನಿಲ್ಲಾ ಬಳ್ಳಿಗಳು ಸತತ ಎರಡು ವರ್ಷಗಳ ಬೆಳೆಯನ್ನು ನೀಡಿದ ಬಳಿಕ ಅವುಗಳನ್ನು ಕತ್ತರಿಸುವುದು ಉತ್ತಮವಾದದ್ದು. ಅಕ್ಟೋಬರ್ ನ ತಿಂಗಳಿನಲ್ಲಿ ಎಲ್ಲಾ ಬಳ್ಳಿಗಳನ್ನು ತೂಗುಹಾಕಿ ಅವುಗಳ ಚಿಗುರು ಚಿವುಟುವುದು ಉತ್ತಮ. ಇದರಿಂದ ಹೆಚ್ಚಿನ ಪ್ರಮಾಣದ ಹೂಗಳನ್ನು ಪಡೆಯಲು ಸಹಾಯಕ. ಫಸಲನ್ನು ಪಡೆದ ನಂತರ ಅನುತ್ಪಾದಕವಾಗಿ ಉಳಿದಿರುವ ಬಳ್ಳಿಗಳನ್ನು ಕತ್ತರಿಸಿ ತೆಗೆಯಬೇಕು.
ಗೊಬ್ಬರ ಸಿಂಪಡಣೆ
ಬಳ್ಳಿಯ ಬುಡ ಭಾಗದಲ್ಲಿ ಆದಷ್ಟು ಸಾವಯವ ಗೊಬ್ಬರಗಳನ್ನು ಬಳಕೆ ಮಾಡುವುದರಿಂದ ಬಳ್ಳಿ ಉತ್ತಮವಾಗಿ ಬೆಳೆಯುವ ಮೂಲಕ ಹೆಚ್ಚಿನ ಇಳುವರಿಯನ್ನು ನೀಡುತ್ತದೆ. ಇದಕ್ಕಾಗಿ ಹಸುವಿನ ಗೊಬ್ಬರ, ಎರೆಗೊಬ್ಬರ, ಕುರಿ ಗೊಬ್ಬರದಂತಹ ಗೊಬ್ಬರಗಳನ್ನು ಬಳಕೆ ಮಾಡಬಹುದಾಗಿದೆ. ಹೀಗೆ ಗೊಬ್ಬರವನ್ನು ಸಿಂಪಡಿಸಿದ ಬಳಿಕ ಅವುಗಳ ಮೇಲೆ ಹುಲ್ಲಿನ ಹೊದಿಕೆಯಾಗಿ ಮಾಡುವುದು ಅತ್ಯಂತ ಉತ್ತಮ. ಇದರಿಂದಾಗಿ ಮಣ್ಣಿನಲ್ಲಿರುವ ತೇವಾಂಶ ಮತ್ತು ಪೋಷಕಾಂಶಗಳು ವ್ಯರ್ಥವಾಗುವುದಿಲ್ಲ. ಇದರ ಜೊತೆಜೊತೆಗೆ ಬಳ್ಳಿಯ ಬುಡಗಳಿಗೆ ಬಯೋಗ್ಯಾಸ್ ಸ್ಲರಿಯನ್ನು ಸಿಂಪಡಿಸುವುದರಿಂದ ಹೆಚ್ಚಿನ ಫಲಿತಾಂಶವನ್ನು ಪಡೆಯಬಹುದಾಗಿದೆ.
ರಾಸಾಯನಿಕ ಬಳಕೆ
ಇನ್ನು ಅತ್ಯುತ್ತಮ ಇಳುವರಿಯನ್ನು ಪಡೆಯಲು ಸಾವಯವ ಗೊಬ್ಬರ ದೊಂದಿಗೆ ರಾಸಾಯನಿಕ ಗೊಬ್ಬರ ವನ್ನು ಬಳಸಬಹುದಾಗಿದ್ದು, ಪ್ರತಿ ಬಳ್ಳಿಗೆ 40ರಿಂದ 60 ಗ್ರಾಂ ಸಾರಜನಕ, 20ರಿಂದ 30 ಗ್ರಾಂ ರಂಜಕ, 60 ರಿಂದ 100 ಗ್ರಾಂ ಪೋಟ್ಯಾಷ್ ಗಳನ್ನು 2ರಿಂದ 3 ಸಮಕಂತುಗಳಲ್ಲಿ ನೀಡುವುದರಿಂದ ಅತ್ಯುತ್ತಮ ಇಳುವರಿಯನ್ನು ಪಡೆಯಬಹುದಾಗಿದೆ. ಆದರೆ ಹೂಬಿಡುವ ಎರಡು ಮೂರು ತಿಂಗಳ ಮೊದಲು ರಸಗೊಬ್ಬರವನ್ನು ಬಳಕೆ ಮಾಡುವುದು ಉತ್ತಮವಲ್ಲ.
ಹೆಚ್ಚಿನ ಪ್ರಮಾಣದ ಹೂವುಗಳನ್ನು ಪಡೆಯಲು ನವೆಂಬರ್ ನಿಂದ ಜನವರಿ ಮಧ್ಯದ ಭಾಗದವರೆಗೆ ನೀರಾವರಿ ಹಾಗೂ ಗೊಬ್ಬರ ಸಿಂಪಡಣೆಯನ್ನು ಮಾಡಬಾರದು ಮತ್ತು ಹೆಚ್ಚು ನೆರಳು ಇರದ ರೀತಿ ನೋಡಿಕೊಳ್ಳುವುದರ ಜೊತೆಗೆ ಬಳ್ಳಿಯಲ್ಲಿರುವ ಎಲ್ಲಾ ಚಿಗುರುಗಳನ್ನು ಚಿವುಟಬೇಕಾಗುತ್ತದೆ. ಹೀಗೆ ಬಳ್ಳಿಗಳನ್ನು ಸೊರಗಿಸುವುದರಿಂದ ಹೆಚ್ಚಿನ ಪ್ರಮಾಣದ ಹೂವುಗಳನ್ನು ಪಡೆಯಬಹುದು. ಆದರೆ ಈ ಸೊರಗಿಸುವಿಕೆ ಪ್ರಕ್ರಿಯೆಯಲ್ಲಿ ಎಲೆಗಳು ಮೃದುವಾಗುವಷ್ಟು ಮಾತ್ರ ಸೊರಗಿಸಬೇಕು. ಯಾವುದೇ ಕಾರಣಕ್ಕೂ ಬಳ್ಳಿಗಳು ಬಾಡಿಹೋಗದಂತೆ ನೋಡಿಕೊಳ್ಳಬೇಕು. ಬಳ್ಳಿಗಳು ಬಾಡುವಿಕೆಯಿಂದಾಗಿ ಮುಂದೆ ವೆನಿಲಾ ಕೋಡುಗಳ ಇಳುವರಿ ಕುಂಠಿತವಾಗುವ ಸಾಧ್ಯತೆಗಳು ಇರುತ್ತದೆ.
ಪರಾಗ ಸ್ಪರ್ಶ
ವೆನಿಲ್ಲಾ ಬಳ್ಳಿಗಳನ್ನು ನಾಟಿ ಮಾಡಿದ ಮೂರು ವರ್ಷದಲ್ಲಿ ಬಳ್ಳಿಗಳಲ್ಲಿ ಹೂ ಬಿಡಲು ಆರಂಭವಾಗುತ್ತದೆ. ಫೆಬ್ರವರಿ ತಿಂಗಳಿನಿಂದ ಏಪ್ರಿಲ್ ತಿಂಗಳ ವರೆಗೆ ಹೂವುಗಳ ಪರಾಗ ಸ್ಪರ್ಶಕ್ಕೆ ಉತ್ತಮವಾದ ಸಮಯ. ಈ ಸಮಯದಲ್ಲಿ ಪ್ರತಿ ಬಳ್ಳಿಗಳಲ್ಲಿ ಮೂರರಿಂದ ಆರು ಹೂ ಗೊಂಚಲು ಗಳಿದ್ದು, ಪ್ರತಿ ಗೊಂಚಲಲ್ಲಿ ಹತ್ತರಿಂದ ಮೂವತ್ತು ಹೂವುಗಳು ಇರುತ್ತದೆ. ಪ್ರತಿನಿತ್ಯ 2 ರಿಂದ ಮೂರು ಹೂಗಳು ಪರಾಗ ಸ್ಪರ್ಶಕ್ಕೆ ಸಿಗುತ್ತದೆ. ಈ ಹೂಗಳು ನೈಸರ್ಗಿಕವಾದ ಪರಾಗಸ್ಪರ್ಶ ಕ್ರಿಯೆಗೆ ಒಳಪಡದ ಕಾರಣ ನಾವೇ ಕಡ್ಡಿಗಳನ್ನು ಬಳಸಿ ಹೂವಿನ ಸುತ್ತ ಇರುವ ಪೊರೆಯನ್ನು ತೆಗೆದು ಬೆರಳಿನ ಸಹಾಯದಿಂದ ಪರಾಗದ ಅಂಶವನ್ನು ಶಲಾಕಾಗ್ರದ ಮೇಲೆ ಒತ್ತಬೇಕು. ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ ಸುಮಾರು 11ಗಂಟೆಯವರೆಗೆ ಪರಾಗಸ್ಪರ್ಶ ಕ್ರಿಯೆ ನಡೆಸಲು ಯೋಗ್ಯವಾದ ಸಮಯ. ಆದರೆ ಹೂವು ಅರಳಿದ ದಿನವೇ ಪರಾಗಸ್ಪರ್ಶವನ್ನು ಮಾಡಬೇಕು ಒಂದು ವೇಳೆ ಹೂವು ಅರಳಿದಾಗ ಪರಾಗಸ್ಪರ್ಶ ಮಾಡದಿದ್ದರೆ ಮರುದಿನವೇ ಹೂವು ಉದುರಿ ಹೋಗುತ್ತದೆ. ಪರಾಗ ಸ್ಪರ್ಶ ಮಾಡುವಾಗ ಹೂವಿನ ತೊಟ್ಟಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು.
ವೆನಿಲಾ ಕೋಡು ಬೆಳವಣಿಗೆ
ಪರಾಗ ಸ್ಪರ್ಶ ನಂತರ ಸುಮಾರು 3 ತಿಂಗಳ ಅವಧಿಯಲ್ಲಿ ಕೋಡು ಬೆಳವಣಿಗೆ ಹೊಂದುತ್ತದೆ. ಈ ಅವಧಿಯಲ್ಲಿ ನೀರು-ಗೊಬ್ಬರ ಸಿಂಪಡನೆ ಉತ್ತಮವಾಗಿ ಇರುವಂತೆ ನೋಡಿಕೊಳ್ಳಬೇಕು. ಕೊಡುಗಳು ಸಂಪೂರ್ಣವಾಗಿ ಬೆಳವಣಿಗೆ ಹೊಂದಲು ಎಂಟರಿಂದ ಒಂಬತ್ತು ತಿಂಗಳುಗಳು ಬೇಕು.
ಕಾಯಿಲೆಗಳು
ವೆನಿಲ್ಲಾ ಕೃಷಿಯಲ್ಲಿ ಕೀಟಭಾದೆ ಗಳು ಕಡಿಮೆ ಇದ್ದರೂ ಸಹಾ ಕೊಳೆರೋಗದ ಜಾತಿಗೆ ಸೇರಿದ ಶಿಲೀಂದ್ರಗಳಿಂದ ಉಂಟಾಗಬಹುದಾದ ಕೆಲವೊಂದು ರೋಗಗಳು ಬರುವ ಸಾಧ್ಯತೆಗಳು ಇರುತ್ತದೆ. ಹೀಗಾಗಿ ಆರಂಭದಿಂದಲೇ ಜಾಗ್ರತೆ ವಹಿಸುವುದರಿಂದ ಬೆಳೆಯನ್ನು ಉಳಿಸಿಕೊಳ್ಳಬಹುದಾಗಿದೆ. ಬೇರು ಕೊಲೆಯಂತಹ ರೋಗಗಳು ಅಥವಾ ಸೊರಗು ರೋಗ ಕಾಣಿಸಿಕೊಂಡಾಗ ಬೇರುಗಳಲ್ಲಿ ಕಂಡುಬರುವ ಸತ್ತ ಬೇರುಗಳನ್ನು ತಕ್ಷಣವೇ ಕತ್ತರಿಸಿ ತೆಗೆಯಬೇಕು. ಇಲ್ಲದಿದ್ದರೆ ಈ ಕಾಯಿಲೆ ಇತರ ಬಳ್ಳಿಗಳಿಗೆ ಹರಡಿ ಸಂಪೂರ್ಣ ವೆನಿಲ್ಲಾ ಕೃಷಿ ನಾಶವಾಗುವ ಸಾಧ್ಯತೆಗಳಿವೆ. ಇದನ್ನು ಹೊರತು ಪಡಿಸಿ ಹೂಗಳು ಉದುರುವಿಕೆ , ಬಳ್ಳಿ ಸಾಯುವಿಕೆ ಮುಂತಾದ ಕಾಯಿಲೆಗಳು ವೆನಿಲಾದಲ್ಲಿ ಕಂಡುಬರುತ್ತದೆ.
ವೆನಿಲ್ಲಾ ಕೊಯ್ಲು
ವೆನಿಲ್ಲಾ ಕೊಯ್ಲು ಮಾಡುವಾಗ ಚೆನ್ನಾಗಿ ಮಾಗಿರುವ ಕೋಡುಗಳನ್ನು ಮಾತ್ರ ಕೊಯ್ಯುಬೇಕು. ಸಾಮಾನ್ಯವಾಗಿ ಗೊಂಚಲುಗಳಲ್ಲಿ ಆರಂಭದಿಂದ ತುದಿಯವರೆಗೆ ಕೋಡುಗಳು ಬೆಳವಣಿಗೆ ಹೊಂದಲು ಒಂದರಿಂದ ಒಂದುವರೆ ತಿಂಗಳುಗಳ ಅಂತರವಿರುತ್ತದೆ. ಹೀಗಾಗಿ ಐದರಿಂದ ಆರು ಕೊಯ್ಲುಗಳ ಮೂಲಕ ವೆನಿಲ್ಲಾ ಕೋಯ್ಲು ನಡೆಸಬೇಕು. ಉತ್ತಮವಾಗಿ ಬೆಳೆದ ಪ್ರತಿ ಬಳ್ಳಿಯಿಂದ ಎರಡರಿಂದ ಮೂರು ಕಿಲೋ ಗ್ರಾಂ ಹಸಿ ಕೊಡು ಪಡೆಯಬಹುದು. ಹಾಗೆಯೇ ಪ್ರತಿ ಎಕರೆಗೆ 8 ರಿಂದ 10 ಕ್ವಿಂಟಾಲ್ ನಷ್ಟು ಹಸಿ ಕೋಡುಗಳನ್ನು ಪಡೆಯಬಹುದಾಗಿದೆ.
ಶ್ರೇಣಿಗಳು
ವೆನಿಲಾ ಕೋಡುಗಳನ್ನು ‘ಎ’, ‘ಬಿ’ ಮತ್ತು ‘ಸಿ’ ಎಂದು ಮೂರು ವಿಭಾಗ ಶ್ರೇಣಿಗಳಾಗಿ ವಿಭಾಗಿಸಲಾಗುತ್ತದೆ.6 ಇಂಚು ಮತ್ತು ಅದಕ್ಕಿಂತ ಉದ್ದದ ಕೊಡು ‘ಎ’ ಶ್ರೇಣಿ ಎಂದು ನಾಲ್ಕರಿಂದ ಆರು ಇಂಚುಗಳ ಕೊಡು ‘ಬಿ’ ಶ್ರೇಣಿ, ನಾಲ್ಕು ಇಂಚಿಗಿಂತ ಕಡಿಮೆ ಇರುವ ಕೋಡುಗಳು ‘ಸಿ’ ಶ್ರೇಣಿ ಗಳಾಗಿರುತ್ತದೆ. ವ್ಯವಸ್ಥಿತ ವಿಧಾನದಲ್ಲಿ ಉತ್ತಮ ನೀರು ಗೊಬ್ಬರವನ್ನು ನೀಡುವುದರಿಂದ ಹೆಚ್ಚು ‘ಎ’ ಶ್ರೇಣಿಯ ವೆನಿಲ್ಲಾ ಕೋಡುಗಳನ್ನು ಪಡೆಯಬಹುದು. 5 ಕಿಲೋ.ಗ್ರಾಂ ಹಸಿ ವೆನಿಲ್ಲಾ ಕೋಡುಗಳಿಂದ ಒಂದು ಕಿಲೋಗ್ರಾಂ ಸಂಸ್ಕರಿಸಿದ ಕೋಡನ್ನು ಪಡೆಯಬಹುದಾಗಿದೆ. ಹಸಿ ಕೊಡು ಯಾವುದೇ ವಿಧವಾದ ಪರಿಮಳವನ್ನು ಹೊಂದಿರುವುದಿಲ್ಲ. ಸಂಸ್ಕರಣೆಯ ಹಂತದಲ್ಲಿ ಕಿಣ್ವ ಗಳ ಜೈವಿಕ ಕ್ರಿಯೆ ನಡೆಯುವ ಮೂಲಕ ವೆನಿಲ್ಲಾ ಪರಿಮಳವನ್ನು ಹೊಂದುತ್ತದೆ.
ಬೆಲೆ
ಕಳೆದ ಡಿಸೆಂಬರ್ ತಿಂಗಳಿನ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಹಸಿ ವೆನಿಲ್ಲಾ ಕಾಯಿಗೆ 1250 ರೂ. ಗಳಿದ್ದು, ಸಂಸ್ಕರಿಸಿದ ವೆನಿಲ್ಲಾ ಕಾಯಿ ಪ್ರತಿ ಕೆ.ಜಿಗೆ 14 ರಿಂದ 15 ಸಾವಿರ ರೂ. ಬೆಲೆ ದೊರೆತಿದೆ.
*ಆದರ್ಶ ಕೆ.ಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.