Transport: ತತ್‌ಕ್ಷಣಕ್ಕೆ ಬಸ್ ಯಾನ ದರ ಹೆಚ್ಚಳವಿಲ್ಲ: ಸಚಿವ ರಾಮಲಿಂಗಾರೆಡ್ಡಿ
1,349 ಖಾಲಿ ಹುದ್ದೆಗಳ ಭರ್ತಿ ಶೀಘ್ರ, ನಿರೀಕ್ಷಕರ ಹುದ್ದೆಗಳಿಗೆ ಶೀಘ್ರ ನೇರ ನೇಮಕ
Team Udayavani, Jul 7, 2024, 7:30 AM IST
ಬೆಂಗಳೂರು: ಬಸ್ ಪ್ರಯಾಣ ದರ ಹೆಚ್ಚಳ ಸಂಬಂಧ ಯಾವುದೇ ಸಾರಿಗೆ ನಿಗಮಗಳು ಪ್ರಸ್ತಾವನೆ ಸಲ್ಲಿಸಿಲ್ಲವಾದ್ದರಿಂದ ತತ್‌ಕ್ಷಣದಲ್ಲಿ ಯಾನ ದರ ಹೆಚ್ಚಳ ಮಾಡುವ ವಿಚಾರ ಸಾರಿಗೆ ಇಲಾಖೆಯ ಮುಂದೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ರಾಜ್ಯದಲ್ಲಿ ಒಟ್ಟು 6,04,863 ಸಾರ್ವಜನಿಕ ಸೇವಾ ವಾಹನಗಳಿದ್ದು ಈವರೆಗೆ 1,979 ವಾಹನಗಳಿಗೆ ಪ್ಯಾನಿಕ್ ಬಟನ್ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಬಾಕಿಯಿರುವ ವಾಹನಗಳಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಈವರೆಗೂ ರಾಜ್ಯದಲ್ಲಿ ಒಟ್ಟು 47,64,293 ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ)ಗಳನ್ನು ಅಳವಡಿಸಲಾಗಿದೆ. ನೋಂದಣಿಗೆ ಸೆ. 15ರ ವರೆಗೆ ಅಂತಿಮ ಗಡುವು ನೀಡಲಾಗಿದೆ ಎಂದರು.
1,349 ಹುದ್ದೆ ಖಾಲಿ
ಸಾರಿಗೆ ಇಲಾಖೆಯಲ್ಲಿ ಒಟ್ಟು 2,587 ಹುದ್ದೆಗಳು ಮೀಸಲಿದ್ದು 1,238 ಸಿಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. 1,349 ಹುದ್ದೆಗಳು ಖಾಲಿ ಇವೆ. ಮೋಟಾರು ವಾಹನಗಳ ನಿರೀಕ್ಷಕರ ಹುದ್ದೆಗಳಿಗೆ ಶೀಘ್ರ ನೇರ ನೇಮಕ ಮಾಡಿಕೊಳ್ಳಲಾಗುವುದು ಎಂದರು.
ಆಟೋ ಮತ್ತು ಟ್ಯಾಕ್ಸಿ ಕ್ಯಾಬ್ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ 26 ಬೇಡಿಕೆಗಳನ್ನು ಈಡೇರಿಸಲಾಗಿದೆ. ಕೆಲವು ಬೇಡಿಕೆ ಕೇಂದ್ರ ಸರಕಾರದ ಅಡಿಯ ಎನ್‌ಐಸಿ ವ್ಯಾಪ್ತಿಗೆ ಬರಲಿವೆ. ಸ್ಕೂಲ್ ಕ್ಯಾಬ್ ಎನ್ನುವಂತಹ ವ್ಯವಸ್ಥೆ ಕರ್ನಾಟಕ ಬಿಟ್ಟರೆ ಬೇರೆ ರಾಜ್ಯಗಳಲ್ಲಿ ಇಲ್ಲ. ಆ ಹಿನ್ನೆಲೆಯಲ್ಲಿ ಎನ್‌ಐಸಿ ಸಾಫ್ಟ್ವೇರ್ ವ್ಯಾಪ್ತಿಗೆ ತರುವ ಪ್ರಕ್ರಿಯೆ ನಡೆಯುತ್ತಿದೆ. ಅಷ್ಟರಲ್ಲಿ ಕ್ಯಾಬ್ ಮತ್ತು ಆಟೋ ಚಾಲಕರು ಪ್ರತಿಭಟನೆ ನಡೆಸಿದ್ದಾರೆ. ನಮ್ಮ ಸರಕಾರ ಅವರ ಬೇಡಿಕೆಗಳಿಗೆ ಸ್ಪಂದಿಸಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.