Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್ ಸಿಂಗ್
ದೇಶವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಮಹತ್ವದ ನಿರ್ಧಾರ ಕೈಗೊಂಡ ಆರ್ಥಿಕ ತಜ್ಞ
Team Udayavani, Dec 27, 2024, 7:40 AM IST
ಡಾ.ಮನಮೋಹನ್ ಸಿಂಗ್ ಅಂದರೆ ಸಾಕು ಕಣ್ಣ ಮುಂದೆ ಬರುವುದು ಪೇಟದ ವ್ಯಕ್ತಿಯ ನಿಶ್ಯಬ್ದ ಮುಖದ ಚಿತ್ರ. ಜವಾಹರಲಾಲ್ ನೆಹರು ಅವರ ಅನಂತರ ಸುದೀರ್ಘ ಕಾಲ ಪ್ರಧಾನಿಯಾದ ಹೆಗ್ಗಳಿಕೆ ಇವರದು. ಆದರೆ, ರಾಜಕೀಯ ಅನ್ನುವುದು ಇವರ ಆಯ್ಕೆಯಲ್ಲ. ಪಕ್ಷದ ಅನಿರ್ವಾಯವಾಗಿತ್ತು. ರಾಜಕೀಯಕ್ಕೆ ಬರಬೇಕು ಅಂತಲೂ, ಬಂದ ಮೇಲೆ ರಾಜಕೀಯ ವ್ಯಕ್ತಿಯಾಗ ಬೇಕು ಅನ್ನುವ ಗುರಿ ಇರಲಿಲ್ಲ. ಹೀಗಾಗಿ, ಜನರಿಗಾಗಿ ನೀತಿ ರೂಪಿಸಿದರೇ ಹೊರತು, ರಾಜಕೀಯದಲ್ಲಿ ಭದ್ರ ನೆಲೆಕಾಣುವ ಯೋಚನೆ ಹೊಂದಿರಲಿಲ್ಲ.
“ದೇಶವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ನಾವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ಮುಂದಾಗಿದ್ದೇವೆ. ಅದನ್ನು ತಡೆಯಲು ಈ ಭೂಮಿಯ ಯಾವುದೇ ಶಕ್ತಿಗೆ ಸಾಧ್ಯವಿಲ್ಲ. ಮುಂದೊಂದು ದಿನ ವಿಶ್ವದ ಪ್ರಮುಖ ಆರ್ಥಿಕತೆಯ ದೇಶಗಳಲ್ಲಿ ಭಾರತವೂ ಗುರುತಿಸುವಂತಾಗಲು ಇಂದು ನಾವು ಅಡಿಪಾಯ ಹಾಕುತ್ತಿದ್ದೇವೆ. ಇದರ ಫಲವನ್ನು ಕೇವಲ ಸರ್ಕಾರಗಳು ಮಾತ್ರವಲ್ಲ ಜನಸಾಮಾನ್ಯರೂ ಉಣ್ಣಲಿದ್ದಾರೆ. ನಾವು ಈ ಸದನದಲ್ಲಿ ನೀಡುತ್ತಿರುವ ಈ ಘೋಷಣೆಗಳನ್ನು ಇಡೀ ವಿಶ್ವವೇ ಕೇಳಿಸಿಕೊಳ್ಳಲಿ. ಭಾರತವು ಇನ್ನು ಮುಕ್ತವಾಗಲಿದೆ. ತನ್ನ ದಾರಿದ್ರ್ಯದಿಂದ ಮೇಲೇಳಲಿದೆ”
– 1991ರ ಜುಲೈ 24ರಂದು ಅಂದಿನ ವಿತ್ತ ಸಚಿವರು ಅವರು ತಮ್ಮ ಚೊಚ್ಚಲ ಬಜೆಟ್ ಮಂಡನೆಯ ವೇಳೆ ಸಂಸತ್ತಿನಲ್ಲಿ ಮಾಡಿದ ಐತಿಹಾಸಿಕ ಭಾಷಣವಿದು. ಈ ಮಾತುಗಳನ್ನಾಡಿದ ಸಚಿವರು, ದೇಶದ ಭವಿಷ್ಯವನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಬದಲಾಯಿಸಲಿದ್ದಾರೆ ಎಂದು ಯಾರೂ ಊಹೆ ಮಾಡಿರಲಿಲ್ಲ. ಅವರ ಆ ನಿರ್ಧಾರ ದೇಶವನ್ನು ಸಾಮಾಜಿಕವಾಗಿಯೂ, ರಾಜಕೀಯವಾಗಿಯೂ ಬದಲಾಯಿಸಬಲ್ಲದು ಎಂದು ಬಹುತೇಕರು ಎಣಿಸಿರಲಿಲ್ಲ.
ಅಂದಿನ ಬಹುಪಾಲು ಮಂದಿಯ ತಲೆಯಲ್ಲಿ ಇದ್ದಿದ್ದು ಒಂದೇ ಒಂದು ಪ್ರಶ್ನೆ… ಅದೇನೆಂದರೆ, ವಿದೇಶಿ ಕಂಪನಿಗಳನ್ನು ಪುಂಖಾನುಪುಂಖವಾಗಿ ಭಾರತಕ್ಕೆ ಬಿಟ್ಟುಕೊಳ್ಳುವುದೇ? ಅದರಿಂದ ಭಾರತದ ಸ್ಥಳೀಯ ಮಾರುಕಟ್ಟೆಯ ಮೇಲೆ ದುಷ್ಪರಿಣಾಮ ಬೀರುವುದಿಲ್ಲವೇ? ದೇಶೀಯ ಕಂಪನಿಗಳು ನೆಲಕಚ್ಚುವುದಿಲ್ಲವೇ? ಮುಂದೊಂದು ದಿನ ವಿದೇಶಿ ಕಂಪನಿಗಳದ್ದೇ ಇಲ್ಲಿ ಕಾರುಬಾರು ಎಂಬಂತಾಗುವುದಿಲ್ಲವೇ… ಎಂಬಿತ್ಯಾದಿ ಕಳವಳ.
ಶತಮಾನಗಳ ಹಿಂದೆ ಈಸ್ಟ್ ಇಂಡಿಯಾ ಕಂಪನಿಯನ್ನು ಭಾರತದಲ್ಲಿ ಬಿಟ್ಟುಕೊಂಡಿದ್ದಕ್ಕೆ ಏನೆಲ್ಲಾ ಆಯಿತು. ಈಗ ಸಹಸ್ರಾರು ಕಂಪನಿಗಳನ್ನು ಬಿಟ್ಟುಕೊಂಡರೆ ಗತಿಯೇನು ಎಂಬಿತ್ಯಾದಿ ಭೀತಿ. ಅದರಿಂದಲೇ ವಿಶ್ವ ವ್ಯಾಪಾರ ಒಕ್ಕೂಟದ (ಡಬ್ಲ್ಯು ಟಿಒ) ಜನನಕ್ಕೆ ಕಾರಣವಾದ ಡಂಕೆಲ್ ಪ್ರಸ್ತಾವನೆಗಳ ವಿರುದ್ಧ ದೇಶದ ಉದ್ದಗಲಕ್ಕೂ ಪ್ರತಿಭಟನೆಗಳು ನಡೆದಿದ್ದು.
ಆದರೆ, ಸಂಸತ್ತಿನಲ್ಲಿ ಕುಳಿತಿದ್ದ ವಿತ್ತ ಸಚಿವರಿಗೆ ಮಾತ್ರ ದೇಶದ ಅಂದಿನ ಚಿತ್ರಣಕ್ಕಿಂತ ದಶಕಗಳ ನಂತರದ ಚಿತ್ರಣ ಕಣ್ಣಮುಂದೆ ನಿಚ್ಚಳವಾಗಿ ಕಾಣುತ್ತಿತ್ತು. ಈ ಆತಂಕಗಳು, ಭೀತಿಗಳು ಕೇವಲ ತಾತ್ಕಾಲಿಕ ಎಂಬುದನ್ನು ಅವರು ಮನಗಂಡಿದ್ದರು. ದೇಶದ ದಾರಿದ್ರéವನ್ನು ತೊಡೆದು ಹಾಕಿ ಸುಭಿಕ್ಷತೆಯನ್ನು ತರುವುದು ಭೀತಿ, ಭಾತಿಗಳಿಗೂ ಮೀರಿದ ಒಂದು ಮಹಾ ವ್ರತ, ಆದ್ಯ ಕರ್ತವ್ಯ ಎಂದು ಅವರು ನಂಬಿದ್ದರು. ಅವರ ಹೆಸರು ಡಾ. ಮನಮೋಹನ್ ಸಿಂಗ್. ಅದು 1991ರ ಕಾಲಘಟ್ಟ. ಅದೇ ವರ್ಷ ಜೂನ್‌ನಲ್ಲಿ, ಕೇಂದ್ರದಲ್ಲಿ ಆಗ ತಾನೇ ಪಿ.ವಿ. ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಆದರೆ, ದೇಶ ನಡೆಸುವುದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ರಾಷ್ಟ್ರದ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿತ್ತು.
ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ ಆತಂಕಕಾರಿ ಮಟ್ಟಕ್ಕೆ ಕುಸಿದಿತ್ತು. ನೆಹರೂ ಕಾಲದ ಸೋಷಿಲಿಸ್ಟ್ ಮಾದರಿಯ ನೀತಿಗಳನ್ನೇ ಹಲವಾರು ಸರ್ಕಾರಗಳು ಪಾಲಿಸುತ್ತಾ ಬಂದಿದ್ದರಿಂದಾಗಿ ಭಾರತೀಯ ಆರ್ಥಿಕ ಪರಿಸ್ಥಿತಿ ನೆಲಕಚ್ಚಿತ್ತು. ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಶೇ. 2ರ ಆಜುಬಾಜು ಇತ್ತು. ವಿದೇಶಿ ಸಾಲ ಹೊರೆ ಈ ಜಿಡಿಪಿಯ 23 ಪಟ್ಟು ಹೆಚ್ಚಾಗಿತ್ತು.
ವಿಶ್ವಸಂಸ್ಥೆ ಹಾಗೂ ಐಎಂಎಫ್ನಂಥ ದೊಡ್ಡ ಹಣಕಾಸು ಸಂಸ್ಥೆಗಳು ಭಾರತಕ್ಕೆ ಇನ್ನು ಸಾಲ ಕೊಡುವುದಿಲ್ಲ ಎಂದು ಘೋಷಿಸಿಬಿಟ್ಟಿದ್ದವು. ಇನ್ನು, ದೇಶದ ಆಂತರಿಕ ಸಾಲದ ಮೊತ್ತವೇ ಜಿಡಿಪಿಯ ಶೇ. 55ರಷ್ಟು ಏರಿಕೆಯಾಗಿತ್ತು. ಯುವಜನರ ಉದ್ಯೋಗಾವಕಾಶದ ಪ್ರಮಾಣ ನಕಾರಾತ್ಮಕ ಅಂಕಿಗಳಲ್ಲಿತ್ತು. ಉತ್ಪಾದನಾ ರಂಗವಂತೂ ಶೋಚನೀಯ ಸ್ಥಿತಿಗೆ ತಲುಪಿತ್ತು. ಅದಕ್ಕೆ ಕಾರಣ ಹೊಸ ಉದ್ಯಮಗಳಿಗೆ ಪೂರಕವಾದ ವಾತಾವರಣ ಇಲ್ಲದಿರುವುದು.
1947ರಿಂದ 1997ರವರೆಗೆ ಭಾರತದಲ್ಲಿದ್ದ ಲೈಸನ್ಸ್-ಪರ್ಮಿಟ್‌ಗಳಂಥ ಬಿಗಿ ನೀತಿಗಳು, ದೈತ್ಯರೂಪದ ತೆರಿಗೆ, ಉಸಿರುಗಟ್ಟಿಸುವಂಥ ನಿಯಮಗಳಿಂದಾಗಿ ಉತ್ಪಾದನಾ ರಂಗದಲ್ಲಿ ಹೊಸಬರ ಪ್ರವೇಶ ದುರ್ಲಭ ಎನ್ನುವಂತಾಗಿತ್ತು. ಅದರ ಪರಿಣಾಮವೇ ಉತ್ಪಾದನಾ ರಂಗ ನೆಲಕಚ್ಚಿತ್ತು. ಇಷ್ಟು ಮಾತ್ರವಲ್ಲ, ಹಣದುಬ್ಬರ ಹೆಚ್ಚಾಗಿ, ವಿದೇಶಿ ವಿನಿಮಯ ನಿಧಿ ಪಾತಾಳಕ್ಕಿಳಿದಿದ್ದವು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ದೇಶ ದಿವಾಳಿಯ ಅಂಚು ತಲುಪಿತ್ತು.
ಇಂಥ ಸಂದರ್ಭದಲ್ಲಿ, ಭಾರತದ ನೆರವಿಗೆ ಬಂದಿದ್ದು ಡಾ. ಮನಮೋಹನ್ ಸಿಂಗ್. ಆರ್ಥಿಕ ಸಲಹೆಗಾರಾಗಿ, ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ದೇಶ ನಡೆದು ಬಂದ ದಾರಿ ಹಾಗೂ ಅದರಿಂದ ಆಗಿರುವ ಅಲ್ಲೋಲ ಕಲ್ಲೋಲಗಳನ್ನು ಮನಗಂಡಿದ್ದ ಅವರು, ಪರಿಸ್ಥಿತಿ ಹೀಗೇ ಮುಂದುವರಿದರೆ ದೇಶ ತಲುಪಬಹುದಾದ ವಿನಾಶವನ್ನೂ ಮೊದಲೇ ಊಹಿಸಿದರು. ಆಗಲೇ ಅವರು ನೆಹರೂ ಕಾಲದ ಸೋಷಿಯಲಿಸ್ಟ್ ನೀತಿಗಳನ್ನು ಬದಿಗೊತ್ತಿ ಭಾರತವನ್ನು ಮುಕ್ತ ಮಾರುಕಟ್ಟೆಯ ರಾಷ್ಟ್ರವನ್ನಾಗಿಸಲು ಮನಸ್ಸು ಮಾಡಿದ್ದು. ಮನಸ್ಸು ಅನ್ನುವುದಕ್ಕಿಂತ ಧೈರ್ಯ ಎಂದರೆ ಹೆಚ್ಚು ಸೂಕ್ತವೇನೋ! ಒಬ್ಬ ದೂರದೃಷ್ಟಿತ್ವ ಹೊಂದಿರುವ ವ್ಯಕ್ತಿಯು, ಆಡಳಿತವನ್ನು ನಡೆಸುವ ಸ್ಥಾನದಲ್ಲಿದ್ದರೆ ಆ ಮನುಷ್ಯ ಆ ದೇಶದ ಭವಿಷ್ಯವನ್ನು ಹೇಗೆ ಬದಲಿಸಬಲ್ಲ ಎನ್ನುವುದಕ್ಕೆ ಸಿಂಗ್ ಅವರೇ ಸೂಕ್ತ ಉದಾಹರಣೆ.
ಹಾಗೆ ದಿಟ್ಟತನದಿಂದ ಮುಂದಡಿಯಿಟ್ಟ ಸಿಂಗ್, ಅದನ್ನೇ 1991ರ ತಮ್ಮ ಚೊಚ್ಚಲ ಬಜೆಟ್‌ನಲ್ಲಿಯೂ ಘೋಷಣೆ ಮಾಡಿದರು. 1948ರ ಜು. 8ರಿಂದಲೇ ಗ್ಯಾಟ್ ಸಂಘಟನೆಯ (ಜನರಲ್ ಅಗ್ರಿಮೆಂಟ್ ಆನ್ ಟ್ರೇಡ್ ಆ್ಯಂಡ್ ರಿಫಾರ್ಮ್Õ) ಸದಸ್ಯ ರಾಷ್ಟ್ರವಾಗಿದ್ದರೂ ಭಾರತ, ಅದರ ಲಾಭಗಳನ್ನು ಪಡೆದುಕೊಂಡಿರಲಿಲ್ಲ. ಆ ಲಾಭಗಳನ್ನು ಈಗ ಪಡೆಯಲು ಮುಂದಾದರು ಡಾ. ಸಿಂಗ್. ಅದರ ಫಲವಾಗಿಯೇ ಅವರು ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣ ಎಂಬ ಮೂರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದು. ಅದನ್ನು ಹಂತಹಂತವಾಗಿ ಜಾರಿಗೆ ತರಲಾಯಿತು. ಆದರೆ, ಪೂರ್ವಭಾವಿಯಾಗಿ, ಅವರ ಇಟ್ಟ ಹೆಜ್ಜೆಗಳ ಅವಲೋಕನ ಇಲ್ಲಿದೆ.
1. ಅಪಮೌಲ್ಯೀಕರಣ
ಆರ್ಥಿಕ ಸುಧಾರಣೆ ನಿಟ್ಟಿನಲ್ಲಿ ಸಿಂಗ್ ಮೊದಲು ಮಾಡಿದ ಕೆಲಸವೆಂದರೆ ಅದು, ರೂಪಾಯಿಯ ಮೌಲ್ಯವನ್ನು ಅಪಮೌಲ್ಯಗೊಳಿಸಿದ್ದು. ಇದನ್ನು ಎರಡು ಹಂತದಲ್ಲಿ ಕೈಗೊಳ್ಳಲಾಯಿತು. ಮೊದಲಿಗೆ, ವಿಶ್ವದ ದೈತ್ಯ ಕರೆನ್ಸಿಯ ವಿರುದ್ಧ ರೂಪಾಯಿ ಮೌಲ್ಯವನ್ನು ಶೇ. 9ಕ್ಕೆ ಇಳಿಸಿ, ಎರಡು ದಿನಗಳ ನಂತರ ಅದನ್ನು ಶೇ. 11ಕ್ಕೆ ಇಳಿಸಲಾಯಿತು. ಇದರಿಂದ, ಅಂತಾರಾಷ್ಟ್ರೀಯ ಮಾರುಕಟ್ಟೆಯ ಕಡೆಗೆ ಗಮನ ಭಾರತದ ಕಡೆಗೆ ಹರಿಯಿತು.
2. ಚಿನ್ನದ ಮಾರಾಟ
ಇನ್ನು ಎರಡನೇ ಹೆಜ್ಜೆಯಾಗಿ, ದೇಶದಲ್ಲಿನ ಚಿನ್ನವನ್ನು ವಿದೇಶಿ ಬ್ಯಾಂಕುಗಳಲ್ಲಿ ಅಡವಿಟ್ಟು ಹಣ ತರುವ ಯೋಜನೆ ರೂಪಿಸಿದರು. ಅದರಂತೆ, ಭಾರತದ ಚಿನ್ನದ ನಿಧಿಯಿಂದ 20 ಟನ್‌ಚಿನ್ನವನ್ನು ತೆಗೆದುಕೊಂಡು ಹೋಗಿ ಸ್ವಿಜರ್ಲೆಂಡ್ ಬ್ಯಾಂಕಿನಲ್ಲಿ ಅಡವಿಡಲಾಯಿತು. ಅದರಿಂದ ಬಂದ 200 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತವನ್ನು ಐಎಂಎಫ್ ಸಾಲ ತೀರಿಸಲು ಬಳಸಿಕೊಳ್ಳಲಾಯಿತು. ಆನಂತರ, ಮತ್ತಷ್ಟು ಚಿನ್ನವನ್ನು ಲಂಡನ್‌ನ ಬ್ಯಾಂಕುಗಳಿಗೆ ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ತರಲಾಯಿತು.
3. ವಿದೇಶಿ ನೇರ ಬಂಡವಾಳ
ವಿತ್ತ ಸಚಿವ ಸಿಂಗ್ ಇಟ್ಟ ಮೂರನೇ ಹಾಗೂ ಅತಿ ಮುಖ್ಯವಾದ ಹೆಜ್ಜೆಯೆಂದರೆ ಅದು ವಿದೇಶಿ ನೇರ ಬಂಡವಾಳದ (ಎಫ್ಡಿಐ) ನಿಯಮಗಳ ಸಡಿಲಿಕೆ. ಇದರಿಂದ ವಿದೇಶಿ ಕಂಪನಿಗಳು ಭಾರತದಲ್ಲಿ ತಮ್ಮ ಉತ್ಪಾದನಾ ಅಥವಾ ಸೇವಾ ಘಟಕಗಳನ್ನು ತೆರೆಯುವಂತೆ ಮಾಡಿ, ಆ ಮೂಲಕ ಸರ್ಕಾರಕ್ಕೆ ಅಪಾರ ಆದಾಯವನ್ನು ಸೃಷ್ಟಿಸಲಾಯಿತು. ಅದರ ಜೊತೆಗೆ, ಅಪಾರ ಪ್ರಮಾಣದಲ್ಲಿ ಉದ್ಯೋಗಾವಕಾಶ ಸೃಷ್ಟಿಸಲಾಯಿತು.
4. ಫೆಮಾ ಅಸಿತ್ವಕ್ಕೆ ತಂದಿದ್ದು
ಉದ್ಯಮಶೀಲತೆಗೆ ತೊಡಕಾಗಿದ್ದ ಲೈಸನ್ಸ್ ಕಡ್ಡಾಯ ಎಂಬ ತಡೆಯನ್ನು ನಿವಾರಿಸಿದ ಸಿಂಗ್, ವಿದೇಶಿ ಬಂಡವಾಳಕ್ಕೆ ಹೆಚ್ಚು ಉತ್ತೇಜನ ನೀಡುವ ಸಲುವಾಗಿಯೇ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯನ್ನು (ಫೆಮಾ) ಜಾರಿಗೆ ತಂದರು. ಇದರಿಂದ, ಭಾರತದ ಅನೇಕ ಕೈಗಾರಿಕಾ ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳಕ್ಕೆ ಬಹುಬೇಗನೇ ಒಪ್ಪಿಗೆ ಸಿಗುವಂತಾಯಿತು. ಕೆಲವು ಕ್ಷೇತ್ರಗಳ ಆಮದು ಸಾಮಗ್ರಿಗಳ ಮೇಲೆ ವಿಧಿಸಲಾಗುತ್ತಿದ್ದ ಸುಂಕವನ್ನು ಶೇ. 120ರಿಂದ ಶೇ. 20ಕ್ಕೆ ಇಳಿಸಲಾಯಿತು. ಇದರಿಂದ ಭಾರತಕ್ಕೆ ಹೇರಳವಾದ ವಿದೇಶಿ ಬಂಡವಾಳ ಹರಿದುಬಂತು. ಫೆಮಾದಿಂದ ಆದ ಇನ್ನೊಂದು ಅನುಕೂಲವೆಂದರೆ, ಹೇರಳವಾಗಿ ಬಂದ ವಿದೇಶಿ ಆದಾಯವನ್ನು ಹಿಂದೆ ಚಿನ್ನ ಅಡವಿಟ್ಟು ತಂದಿದ್ದ ಸಾಲವನ್ನು ತೀರಿಸಲು ಸಿಂಗ್ ಸರ್ಕಾರ ಬಳಸಿಕೊಂಡಿತು. ಸಾಲ ತೀರಿಸಿ ಚಿನ್ನವನ್ನು ಭಾರತಕ್ಕೆ ವಾಪಸ್ ತಂದರು ಸಿಂಗ್.
5.ಐಎಂಎಫ್‌ನಿಂದ ಸಾಲ ತಂದಿದ್ದು
ಐಎಂಎಫ್ನ ಬಾಕಿಯನ್ನು ತೀರಿಸಿ ಅಲ್ಲಿಂದ ಮತ್ತೆ 220 ಮಿಲಿಯನ್ ಡಾಲರ್‌ನಷ್ಟು ಹಣವನ್ನು ತುರ್ತು ಸಾಲದ ರೂಪದಲ್ಲಿ ತರಲಾಯಿತು. ಆರ್ಥಿಕ ಸಂಪನ್ಮೂಲಗಳನ್ನು ಒಗ್ಗೂಡಿಸುವ ತಂತ್ರಗಾರಿಕೆಯಲ್ಲಿ ಇದೂ ಸಹ ಒಂದು ಉತ್ತಮ ನಿರ್ಧಾರವಾಗಿತ್ತು. ಈ ತುರ್ತು ಸಾಲಕ್ಕಾಗಿ ಚಿನ್ನವನ್ನು ಅಡವಿಟ್ಟು ತಂದು ಹಳೆಯ ಬಾಕಿಯನ್ನು ತೀರಿಸಿದ್ದರಿಂದಾಗಿ, ಐಎಂಎಫ್ನಲ್ಲಿ ಭಾರತದ ಮೇಲಿದ್ದ ಉದ್ದೇಶಪೂರ್ವಕ ಸುಸ್ತಿದಾರ ಎಂಬ ಹಣೆಪಟ್ಟಿ ಕಳಚಿತು. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಭಾರತದ ಬಗ್ಗೆ ಇದ್ದ ತಪ್ಪುಕಲ್ಪನೆ ಮಾಯವಾಯಿತು. ಅದು ಪರೋಕ್ಷವಾಗಿ ವಿದೇಶಿ ನೇರ ಬಂಡವಾಳಕ್ಕೂ ನೆರವಾಯಿತು.
6.ಕಾರ್ಪೊರೇಟ್ ತೆರಿಗೆ
ವಿದೇಶಿ ಕಂಪನಿಗಳು ಅಪಾರ ಸಂಖ್ಯೆಯಲ್ಲಿ ಬಂದು ಭಾರತದಲ್ಲಿ ಹೂಡಿಕೆ ಮಾಡಲು ಅನುವು ಮಾಡಿಕೊಟ್ಟಿದ್ದು ಆ ವರ್ಷದಲ್ಲಿ ಭಾರತದ ಆರ್ಥಿಕತೆಯನ್ನು ಮೇಲೆತ್ತಲು ಕೈಗೊಂಡಿದ್ದ ಸೂಕ್ತ ನಿರ್ಧಾರವೇನೋ ಸರಿ. ಆದರೆ, ಸಿಂಗ್ ಅಷ್ಟಕ್ಕೇ ಸುಮ್ಮನಾಗಲಿಲ್ಲ. ಕಾರ್ಪೊರೇಟ್ ವಲಯಕ್ಕೆ ಶೇ. 40ರಷ್ಟು ತೆರಿಗೆ ವಿಧಿಸಿದರು. ಆನಂತರ ಅದನ್ನು ಶೇ. 45ಕ್ಕೆ ಹೆಚ್ಚಿಸಿದರು. ಈ ಮೂಲಕ ಆರ್ಥಿಕತೆಯ ಪುನಶ್ಚೇತನಕ್ಕೆ ಶಾಶ್ವತ ದಾರಿಯನ್ನು ತೋರಿಸಿಕೊಟ್ಟರು ಸಿಂಗ್.
ವ್ಯಾಟ್ ಜಾರಿಗೆ ತಂದಿದ್ದು
ಭಾರತೀಯ ತೆರಿಗೆ ಪದ್ಧತಿಯಲ್ಲಿ ಮೊದಲ ಬಾರಿಗೆ ವ್ಯಾಲ್ಯೂ ಆ್ಯಡೆಡ್ ಟ್ಯಾಕ್ಸ್ (ವ್ಯಾಟ್) ಅನ್ನು 2005ರ ಏ. 1ರಿಂದ ಜಾರಿಗೆ ತರಲಾಯಿತು. ಸೇವೆಗಳು ಹಾಗೂ ಸರಕುಗಳನ್ನು ಶೆಡ್ನೂಲ್ 1, 2, 3 ಎಂಬ ವಿಭಾಗಗಳನ್ನಾಗಿ ವಿಂಗಡಿಸಲಾಗಿತ್ತು. ರಾಜ್ಯ ಸರ್ಕಾರಗಳು ಈ ಶೆಡ್ನೂಲ್‌ಗಳನ್ನು ಹೆಚ್ಚಿಸಿ ತಮ್ಮ ವಿವೇಚನಾಧಾರದಲ್ಲಿ ತೆರಿಗೆ ವಿಧಿಸಬಹುದಾಗಿತ್ತು. – ಇರಬಹುದು… 2009ರಿಂದ 2014ರವರೆಗೆ ಯುಪಿಎ-2ನೇ ಅವಧಿಯ ಸರ್ಕಾರದಲ್ಲಿ ಸಿಂಗ್ ಅವರು ಅನೇಕ ಆರೋಪಗಳಿಗೆ ಗುರಿಯಾಗಬೇಕಾಯಿತು.
ಅವರ ಸಂಪುಟ ಸಹೋದ್ಯೋಗಿಗಳು ಮಾಡಿದ ಹಗರಣಗಳಿಂದಾಗಿ ಅವರು ತಲೆ ತಗ್ಗಿಸಬೇಕಾಯಿತು. ಅವರ ನೆರವಿಗೆ ಅವರ ಪಕ್ಷವೂ ಬರಲಿಲ್ಲ. ಜಾಗತಿಕ ರಾಜಕೀಯ ರಂಗದಲ್ಲಿ ಅವರ ಇಮೇಜ್ ತಕ್ಕಮಟ್ಟಿಗೆ ಹಾಳಾಯಿತು. ಆದರೆ, ಒಬ್ಬ ಆರ್ಥಿಕ ಶಾಸ್ತ್ರಜ್ಞರಾಗಿ ಅವರು ದಿವಾಳಿಯೇಳಬಹುದಾಗಿದ್ದ ಒಂದು ದೇಶದ ಆರ್ಥಿಕತೆಯನ್ನು ಸುಸ್ಥಿತಿಗೆ ತಂದಿದ್ದನ್ನು ಅವರ ವಿರೋಧಿಗಳೂ ಮನಸ್ಸಿನಲ್ಲೇ ಶ್ಲಾ ಸುತ್ತಾರೆ. ಭಾರತದ ಈಗಿನ ಹಾಗೂ ಮುಂದಿನ ತಲೆಮಾರುಗಳು ಸದಾ ಸ್ಮರಿಸಲೇಬೇಕಾದ ಕೆಲಸವನ್ನು ಅವರು ಮಾಡಿದ್ದಾರೆ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಇದೇ ಕಾರಣಕ್ಕಾಗಿಯೇ, ಇಡೀ ವಿಶ್ವ ಅವರನ್ನು ಇಂದಿಗೂ ಗೌರವಿಸುತ್ತದೆ.
ಸಿಂಗ್ ಹೆಜ್ಜೆ ಗುರುತು
ಹುಟ್ಟಿದ್ದು- ಸೆ.26, 1932ರಲ್ಲಿ ಪಾಕಿಸ್ಥಾನದ ಪಂಜಾಬ್‌ನ ಗಾಹ್ ಎಂಬ ಹಳ್ಳಿಯಲ್ಲಿ.
ತಂದೆ- ಗುರುಮುಖ್ ಸಿಂಗ್ , ಅಮೃತ್ ಕೌರ್
ಪ್ರಾಥಮಿಕ ವಿದ್ಯಾಭ್ಯಾಸ ಹಿಂದೂ ಶಾಲೆಯಲ್ಲಿ, ಪದವಿ ಪಂಜಾಬ್ ವಿವಿಯಲ್ಲಿ,
ಹೋಶಿಪುರದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ
ಕೇಂಬ್ರಿಡ್ಜ್ ವಿವಿಯಲ್ಲಿ ಡಾಕ್ಟರೇಟ್ ಆಫ್ ಫಿಲಾಸಫಿ
1957ರಲ್ಲಿ ಅಲ್ಲಿ ಸೇಂಟ್ ಜಾನ್ ಕಾಲೇಜಿನ ಸದಸ್ಯ.
ವಾಣಿಜ್ಯ ಶಾಸ್ತ್ರದಲ್ಲಿ ಆಕ್ಸ್‌ಫರ್ಡ್ ವಿವಿಯಲ್ಲಿ ಡಾಕ್ಟರೇಟ್.
1966ರಿಂದ 69 ತನಕ ಅಮೆರಿಕದಲ್ಲಿ ಉದ್ಯೋಗ.
ನೆಹರು ವಿವಿಯಲ್ಲಿ ಗೌರವ ಪ್ರಾಧ್ಯಾಪಕ
ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯದ ಸಲಹೆಗಾರ
ಆರ್‌ಬಿಐ ನಿರ್ದೇಶಕ
1970ರಿಂದ 80ರ ತನಕ ಮುಖ್ಯ ಆರ್ಥಿಕ ಸಲಹೆಗಾರ
ಐಡಿಬಿಐನ ನಿರ್ದೇಶಕ
ರಿಸರ್ವ್ ಬ್ಯಾಂಕ್ ಗವರ್ನರ್
ಪ್ಲಾನಿಂಗ್ ಕಮೀಷನ್ ಮುಖ್ಯಸ್ಥರು
ವಿತ್ತ ಸಚಿವ
2004ರಿಂದ 2014ರ ತನಕ ಮೊದಲ ಸಿಖ್ ಪ್ರಧಾನಿ ಹಾಗೂ ನೆಹರು ನಂತರದ ದೀರ್ಘಾವಧಿ ಪ್ರಧಾನಿ
ಪೂರ್ತಿ ಐದು ವರ್ಷ ಅಧಿಕಾರ ನಿರ್ವಹಿಸಿದ ದೇಶದ ಮೊದಲ ವಿತ್ತ ಸಚಿವ
“ಇಂಡಿಯಾಸ್ ಎಕ್ಸ್‌ಪೋರ್ಟ್ ಟ್ರೆಂಡ್ಸ್ ಆ್ಯಂಡ್ ಪ್ರಾಸ್ಪೆಕ್ಟ್ ಫಾರ್ ಸೆಲ್ಫ್-ಸಸ್ಟೇನ್x ಗ್ರೋತ್’ ಎಂಬ ಪುಸ್ತಕವನ್ನು 1964ರಲ್ಲೇ ಅವರು ಬರೆದಿದ್ದರು
ಗೊತ್ತಿರದ ಕೆಲವು ವಿಚಾರ
– ಮನಮೋಹನ್ ಸಿಂಗರಿಗೆ ಹಿಂದಿ ಭಾಷೆಯ ಮೇಲೆ ಪ್ರಭುತ್ವ ಇರಲಿಲ್ಲ. ಉರ್ದು ಮಾತೃಭಾಷೆಯಾ ಗಿತ್ತು. ನಿರರ್ಗಳವಾಗಿ ಹಿಂದಿ ಬರದ ಕಾರಣ ಅವರು ತಮ್ಮ ಭಾಷಣವನ್ನು ಉರ್ದುವಿನಲ್ಲೇ ಬರೆದು ಕೊಳ್ಳುತ್ತಿದ್ದರಂತೆ. ಅವರ ಮೊದಲ ಟಿ.ವಿ. ಸಂದರ್ಶ ನದಲ್ಲಿ ಮಾತನಾಡಲು 3 ದಿನಗಳಿಂದ ತಯಾರು ಮಾಡಿಕೊಂಡದ್ದು ಕುತೂಹಲದ ವಿಚಾರ.
– ಪ್ರಧಾನಿಯಾಗಿದ್ದಾಗ ಹೆಂಡತಿ ಗುರುಶರಣ್ ಕೌರ್, ಕಚೇರಿಯಲ್ಲಿ ಕೊಡುತ್ತಿದ್ದ ತಿನಿಸುಗಳಾದ ಡೊಕ್ಲಾ ಜತೆಗೆ ಸಮೊಸಾ ಸೇವಿಸುತ್ತಿದ್ದರು. ಟೀ ಮತ್ತು ಮಾರಿ ಬಿಸ್ಕೇಟ್ ಸಿಂಗ್ ಅವರ ಎನರ್ಜಿ.
– ಮೊದಲ ಸಲ ಹೀಗಾಯ್ತು- ಸಿಂಗ್ ಅವರು ಪ್ರಧಾನಿಯಾದಾಗ ಮೊದಲ ದಿನ ಅಧಿವೇಶನದಲ್ಲಿ ಎನ್ ಡಿಎ ನಾಯಕರು ಇವರಿಗೆ ಮಾತನಾಡಲು ಅವಕಾಶವೇ ನೀಡಲಿಲ್ಲ. ಆನಂತರ, ಎನ್ ಡಿಎ ನಾಯಕರ ದಂಡು ಪ್ರಧಾನಿ ಕಚೇರಿಗೆ ಬಂದು ಯಾವುದೋ ವಿಚಾರಕ್ಕೆ ಮನವಿ ಸಲ್ಲಿಸಿದರು. ಸಿಂಗ್ ಅವರು ಅವರಿಗೆ ಕುಳಿತುಕೊಳ್ಳಿ ಅಂತಲೂ ಹೇಳದೇ, ಕೊಟ್ಟ ಮನವಿಯನ್ನು ಓದದೇ ಪಕ್ಕಕ್ಕೆ ಎತ್ತಿಟ್ಟರು.
ಸಿಂಗ್ ಯಾವುದೇ ತೀರ್ಮಾನ ತೆಗೆದು ಕೊಳ್ಳುವ ಮೊದಲು ಸಂಬಂಧ ಪಟ್ಟ ಕ್ಷೇತ್ರ ತಜ್ಞರು, ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸುತ್ತಿದ್ದರು. ಸಿಂಗ್ ಅವರ ಸಂಕಷ್ಟ ಸಮಯ ದಲ್ಲಿ- ತಂತ್ರಗಾರಿಕೆಯ ನೈಪುಣ್ಯ ಹೊಂದಿದ್ದ ಗೆಳೆಯ ದಿ. ಕೆ. ಸುಬ್ರಮಣ್ಯಂ, ವಿಪಿಆರ್ ವಿಠಲ್ ಜೊತೆ ಮಾತುಕತೆ ನಡೆಸುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Dr. Manmohan Singh; ನಾಳೆ ನಿಗಮಬೋಧ್ ಘಾಟ್ ಚಿತಾಗಾರದಲ್ಲಿ ಮಾಜಿ ಪ್ರಧಾನಿ ಅಂತ್ಯಕ್ರಿಯೆ
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.