Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
ಲೋಕಸಭೆ ಚುನಾವಣೆಯಲ್ಲಿ ಇತಿಹಾಸ ಮತ್ತೆ ಮರುಕಳಿಸುವುದೇ ಎಂಬ ಕುತೂಹಲ ಕೆರಳಿಸಿದೆ.
Team Udayavani, Apr 24, 2024, 10:26 AM IST
ಉದಯವಾಣಿ ಸಮಾಚಾರ
ಚಿಕ್ಕಮಗಳೂರು: ಕಾಫಿನಾಡು ಪ್ರಾಕೃತಿಕವಾಗಿ ವೈಶಿಷ್ಟ್ಯ ಹೊಂದಿರುವಂತೆ ರಾಜಕೀಯವಾಗಿಯೂ ಇಡೀ ದೇಶದಲ್ಲಿ ಛಾಪು ಮೂಡಿಸಿದೆ. ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರಿಗೆ ರಾಜಕೀಯ ಮರುಜನ್ಮ ನೀಡಿದ ನೆಲ ಇದಾಗಿದ್ದು, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಇತಿಹಾಸ ಮತ್ತೆ ಮರುಕಳಿಸುವುದೇ ಎಂಬ ಕುತೂಹಲ ಕೆರಳಿಸಿದೆ.
ಲೋಕಸಭೆ ಚುನಾವಣೆ ಮತದಾನ ಪ್ರಕ್ರಿಯೆ ಏ.26ರಂದು ನಡೆಯಲಿದ್ದು, ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕೋಟಾ ಶ್ರೀನಿವಾಸ್ ಪೂಜಾರಿ ಕಣದಲ್ಲಿದ್ದರೆ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ. ಜಯಪ್ರಕಾಶ್ ಹೆಗ್ಡೆ ಸ್ಪರ್ಧೆಯಲ್ಲಿದ್ದಾರೆ. ಇಬ್ಬರು ಅಭ್ಯರ್ಥಿಗಳು ಈಗಾಗಲೇ ಜಿಲ್ಲೆಯಲ್ಲಿ ಸುತ್ತು ಹೊಡೆಯುತ್ತಿದ್ದು ಮತದಾರರನ್ನು ಸೆಳೆಯಲು ಭಾರೀ ಕಸರತ್ತು ನಡೆಸುತ್ತಿದ್ದಾರೆ.
ರಾಜಕೀಯವಾಗಿ ಚಿಕ್ಕಮಗಳೂರು ಜಿಲ್ಲೆಯನ್ನು ನೋಡಿದಾಗ ಅನೇಕ ಏಳುಬೀಳುಗಳಿಗೆ ಕರ್ತೃವಾಗಿದೆ. ಇತಿಹಾಸವನ್ನೇ ಸೃಷ್ಟಿಸಿದೆ. ಈ ಹಿಂದೆ ಕಾಫಿನಾಡು ಕಾಂಗ್ರೆಸ್ ಭದ್ರಕೋಟೆಯಾಗಿ ಮಾರ್ಪಟ್ಟಿತ್ತು. ಆದರೆ ಕಾಲ ಸರಿದಂತೆ ಬಿಜೆಪಿ ಪ್ರಾಬಲ್ಯ ಬೆಳೆಸಿಕೊಂಡಿತು. ಕೈ ಕಳಚಿದರೆ, ಕಮಲ ಅರಳಿತು.
ಕಾಂಗ್ರೆಸ್ ತನ್ನ ಪ್ರಾಬಲ್ಯ ಕಳೆದುಕೊಳ್ಳಲು ಅನೇಕ ಕಾರಣಗಳಿವೆ. ಉತ್ತುಂಗದಲ್ಲಿದ್ದಾಗ ಪ್ರಧಾನಿ ದಿ.ಇಂದಿರಾ ಗಾಂಧಿ ಅವರಿಗೆ
ರಾಜಕೀಯ ಮರುಜನ್ಮ ನೀಡಿದ ಬಳಿಕ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ನಮ್ಮನ್ನು ಮಣಿಸುವವರು ಯಾರಿಲ್ಲ ಎಂಬ ಭಾವನೆ ಬೆಳೆಯಿತು.
ಸಂದರ್ಭವನ್ನು ಬಳಸಿಕೊಂಡ ಬಿಜೆಪಿ ತನ್ನ ಪ್ರಾಬಲ್ಯ ಬೆಳೆಸಿಕೊಳ್ಳಲು ಸಾಧ್ಯವಾಯಿತು. ಕಾಲ ಸರಿದಂತೆ ಬಿಜೆಪಿ ಪ್ರಾಬಲ್ಯ
ಬೆಳೆಸಿಕೊಂಡಿತು. ಬಿಜೆಪಿ ಭದ್ರಕೋಟೆಯಾಗಿ ಮಾರ್ಪಟ್ಟಿತು. ಕಾಂಗ್ರೆಸ್ ಕಳೆಗುಂದಿ ಪ್ರತಿ ಚುನಾವಣೆಯಲ್ಲಿ ಸೋಲಿನ ಕಹಿ ಅನುಭವ ಪಡೆದರೆ, ಪ್ರತೀ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿತು. ಆದರೆ, 2023ರ ವಿಧಾನಸಭೆ ಚುನಾವಣೆ ಜಿಲ್ಲೆಯಲ್ಲಿ ಮತ್ತೊಂ ದು ಮೈಲಿಗಲ್ಲು ಸೃಷ್ಟಿಸಿತು. ಕಮಲ ಸಂಪೂರ್ಣವಾಗಿ ಸೋಲುಣ್ಣಬೇಕಾಯಿತು. ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವ ಮೂಲಕ ಕೈ ಬಲಪಡಿಸಿಕೊಂಡಿತು.
ಈ ಹಿನ್ನೆಲೆಯಲ್ಲಿ 2024ರ ಲೋಕಸಭಾ ಚುನಾವಣೆ ಕುತೂಹಲ ಹೆಚ್ಚಿಸಿದೆ. ಕಳೆದ ಎರಡು ಬಾರಿಯೂ ಬಿಜೆಪಿ ಜಯಭೇರಿ ಬಾರಿಸಿದೆ. ಶೋಭಾ ಕರಂದ್ಲಾಜೆ ಎರಡು ಬಾರಿ ಸಂಸದರಾಗಿ ಜಿಲ್ಲೆಯನ್ನು ಪ್ರತಿನಿಧಿಸಿದ್ದಾರೆ. ಶೋಭಾ ಕರಂದ್ಲಾಜೆ ಕ್ಷೇತ್ರ ಬದಲಿಸಿದ್ದು, ಕರಾವಳಿಯ ಕೋಟಾ ಶ್ರೀನಿವಾಸ್ ಪೂಜಾರಿ ಸ್ಪರ್ಧಿಸಿದ್ದಾರೆ. ಎರಡು ಬಾರಿಯೂ ಸೋಲುಂಡಿರುವ ಕಾಂಗ್ರೆಸ್
ಎದುರಾಳಿಯಾಗಿ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ನಿಲ್ಲಿಸಿದೆ. ಇಬ್ಬರ ನಡುವೆ ಭಾರೀ ಪೈಪೋಟಿ ಎದುರಾಗಿದ್ದು ಜಿಲ್ಲೆಯಲ್ಲಿ ಮತ್ತೊ ಮ್ಮೆ ಕಾಂಗ್ರೆಸ್ ಇತಿಹಾಸ ಸೃಷ್ಟಿಸಲಿದೆಯೇ ಅಥವಾ ಕಮಲ ಮತ್ತೂಮ್ಮೆ ತನ್ನ ಪ್ರಾಬಲ್ಯ ತೋರ್ಪಡಿಸುವುದೇ ಎಂಬ ಕೌತುಕ ಮೂಡಿಸಿದೆ.
ಇಂದಿರಾ ಗಾಂಧಿಗೆ ರಾಜಕೀಯ ಪುರ್ನಜನ್ಮ ನೀಡಿದ್ದ ಕ್ಷೇತ್ರ!
ಇಂದಿರಾ ಗಾಂಧಿ ಆಯ್ಕೆ ವಿರುದ್ಧ ಮೊಕದ್ದಮೆಯಲ್ಲಿ ಬಂದ ತೀರ್ಪು ವಿಪಕ್ಷಗಳಿಗೆ ಪ್ರತಿಭಟಿಸುವ ಅವಕಾಶ ಮಾಡಿಕೊಟ್ಟಿತು. 1975 ಜೂ.25 ರಂದು ಮಧ್ಯರಾತ್ರಿ ದಿಢೀರ್ ತುರ್ತು ಪರಿಸ್ಥಿತಿ ಘೋಷಿಸಲಾಯಿತು. 1977ರಲ್ಲಿ ನಡೆದ ಚುನಾವಣೆಯಲ್ಲಿ ಇಂದಿರಾ ಗಾಂಧಿ ಅವರು ಸೋಲು ಅನುಭವಿಸಬೇಕಾಯಿತು. ಈ ಸೋಲಿನಿಂದ ಕಾಂಗ್ರೆಸ್‌ನಲ್ಲಿ ಮಂಕು ಆವರಿಸಿದ್ದು, ಇಂದಿರಾ ಗಾಂಧಿ ಅವರು ಮತ್ತೆ ಸ್ಪರ್ಧಿಸಬೇಕೆಂಬ ಕೂಗು ಮೊಳಗಿತು. ಅಂದು ಲೋಕಸಭಾ ಸದಸ್ಯರಾಗಿದ್ದ ಡಿ.ಬಿ.ಚಂದ್ರೇಗೌಡರು ತಮ್ಮ ಸ್ಥಾನ ತೆರವು ಮಾಡಲು ಮುಂದಾದರು.
ಇದು ಜಿಲ್ಲೆಯ ರಾಜಕೀಯದಲ್ಲಿ ಹೊಸ ತಿರುವು ನೀಡಿತು. ಡಿ.ಬಿ.ಚಂದ್ರೇಗೌಡರ ರಾಜೀನಾಮೆ ಬಳಿಕ 30-9-1978ರಲ್ಲಿ ಕೊಪ್ಪದಲ್ಲಿ ಐತಿಹಾಸಿಕ ಕಾಂಗ್ರೆಸ್ ಸಮ್ಮೇಳನ ಜರುಗಿತು. ಇಂದಿರಾ ಗಾಂಧಿ ಅವರು ಇಲ್ಲಿಂದ ಸ್ಪರ್ಧಿಸುವ ನಿರ್ಣಯ ಕೈಗೊಳ್ಳಲಾಯಿತು. 6-10-1978ರಲ್ಲಿ ಇಂದಿರಾ ಗಾಂಧಿ ಅವರು ನಾಮಪತ್ರ ಸಲ್ಲಿಸಿದರು. ಚಿಕ್ಕಮಗಳೂರು ಜಿಲ್ಲೆ ಇಡೀ ದೇಶದ ಗಮನ ಸೆಳೆದಿತ್ತು. ಇಂದಿರಾ ಗಾಂಧಿ ಅವರ ವಿರುದ್ಧ ಜನತಾ ಪಕ್ಷದ ವೀರೇಂದ್ರ ಪಾಟೀಲ್ ಅವರನ್ನು ಪ್ರತಿಸ್ಪರ್ಧಿಯಾಗಿ ನಿಲ್ಲಿಸಲಾಗಿತ್ತು. ಜತೆಗೆ 26ಕ್ಕೂ ಹೆಚ್ಚು ಪಕ್ಷೇತರರ ಅಭ್ಯರ್ಥಿಗಳು ಕಣದಲ್ಲಿದ್ದು ಇದು ಕೂಡ ದಾಖಲೆಯಾಗಿತ್ತು. ಫಲಿತಾಂಶ ಹೊರ ಬಂದ ದಿನ ಇಂದಿರಾ ಗಾಂಧಿ ಅವರು 77,333 ಮತಗಳ ಅಂತರದಲ್ಲಿ ಗೆಲುವು ಸಾಧಿ ಸಿದ್ದರು. ಈ ಮೂಲಕ ಇಂದಿರಾ ಗಾಂಧಿ ಯವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಹೆಗ್ಗಳಿಕೆ ಕಾಫಿನಾಡಿನದ್ದಾಯಿತು.
■ ಸಂದೀಪ ಜಿ.ಎನ್.ಶೇಡ್ಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Baba Budan Dargah: ಗೋರಿಗಳ ಮೇಲೆ ಕುಂಕುಮ ಹಚ್ಚಿರುವ ಆರೋಪ
Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು
Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್ ಪತ್ನಿ ಆಕ್ರೋಶ
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.