ಉಡುಪಿ ಜಿಲ್ಲೆ: ಮಾವು ಇಳುವರಿ ಹೆಚ್ಚಾಗುವ ನಿರೀಕ್ಷೆ
ಈ ಬಾರಿ ಬಿಟ್ಟಿದೆ ಉತ್ತಮ ಹೂವು ; ಜಿಲ್ಲೆಯಲ್ಲಿ 440 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ; ನಿರಂತರ ಮಳೆಯಿಂದ ಸೀಸನ್ ವಿಳಂಬ
Team Udayavani, Feb 7, 2022, 5:55 AM IST
ಕುಂದಾಪುರ: ಈ ಬಾರಿ ಮಾವಿನ ಮರಗಳು ಹೂವು ಚೆನ್ನಾಗಿ ಬಿಟ್ಟಿದ್ದು, ಬೆಳೆಗಾರರಲ್ಲಿ ಮಾವು ಇಳುವರಿ ಹೆಚ್ಚಾಗುವ ಆಶಾದಾಯಕ ಭಾವನೆ ಮೂಡಿಸಿದೆ. ಪ್ರಸಕ್ತ ಸಾಲಿನಲ್ಲಿ ಕುಂದಾಪುರ, ಬೈಂದೂರು ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 440 ಹೆಕ್ಟೇರ್ ಪ್ರದೇಶದಲ್ಲಿ ರೈತರು ಮಾವು ಬೆಳೆದಿದ್ದು, ಸಾಮಾನ್ಯವಾಗಿ ಎಲ್ಲ ಕಡೆ ಮಾವಿನ ಗಿಡಗಳು ಹೂವು ಬಿಟ್ಟು ಕಂಗೊಳಿಸುತ್ತಿವೆ.
ಮಾವಿನ ಹೂವುಗಳಿಗೆ ಪೂರಕವಾದ ವಾತಾವರಣವಿದ್ದು, ಕಳೆದ ಕೆಲವು ದಿನಗಳಿಂದ ಇಬ್ಬನಿ ಕವಿದ ವಾತಾವರಣವಿದೆ. ಉಡುಪಿ ಜಿಲ್ಲೆಯಲ್ಲಿ ರತ್ನಗಿರಿ, ನೀಲಂ, ಆಪೂಸ್ ತಳಿಯ ಮಾವು ಹೆಚ್ಚಾಗಿ ಬೆಳೆಯುತ್ತಿದ್ದು, ಕೆಲವರು ಮಲ್ಲಿಕಾ, ಮುಂಡಪ್ಪ ತಳಿಯನ್ನು ಬೆಳೆಯುತ್ತಾರೆ.
ಮಳೆಯಿಂದ ವಿಳಂಬ
ಈ ಸಾಲಿನಲ್ಲಿ ಕಳೆದ ಡಿಸೆಂಬರ್‌ವರೆಗೂ ಮಳೆ ಇದ್ದುದರಿಂದ, ಹೂವು ಬಿಡುವ ಪ್ರಕ್ರಿಯೆ ವಿಳಂಬವಾಗಿದೆ. ಮಳೆ ಕಡಿಮೆಯಾಗುವವರೆಗೂ ಚಿಗುರು ಬಿಡುವ ಪ್ರಕ್ರಿಯೆ ಇದ್ದುದರಿಂದ ಹೂವು ಬಿಡುವ ಪ್ರಕ್ರಿಯೆ ತಡವಾಗಿ ಆರಂಭವಾಗಿದೆ. ಇದರಿಂದಾಗಿ ಉಪ್ಪಿನಕಾಯಿ ಇನ್ನಿತರ ಬಳಕೆಗೆ ತೊಂದರೆಯಿಲ್ಲದಿದ್ದರೂ, ಹಣ್ಣು ಮಾರಾಟ ಮಾಡುವವರಿಗೆ ವಿಳಂಬದಿಂದಾಗಿ ನಷ್ಟವಾಗುವ ಸಂಭವವೂ ಇದೆ. ಕೆಲವೆಡೆಗಳಲ್ಲಿ ಮಾವಿನ ಸೀಸನ್ ವಿಳಂಬದಿಂದಾಗಿ ಮಾವಿನ ತೋಟಗಳು 2 ಲಕ್ಷ ರೂ. ವರೆಗೆ ಏಲಂ ಆಗುತ್ತಿದ್ದುದು, ಈ ಬಾರಿ 45 ಸಾವಿರ ರೂ.ಗೆ ಸೀಮಿತವಾಗಿದೆ.
ಕಳೆದ ವರ್ಷ ಮಾವಿನ ಇಳುವರಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಇದರಿಂದಾಗಿ ಸ್ಥಳೀಯ ಮಾವಿನ ಮಿಡಿ ಹಾಗೂ ಹಣ್ಣುಗಳು ಅಷ್ಟೊಂದು ಪ್ರಮಾಣದಲ್ಲಿ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಜಿಲ್ಲೆಯ ಬಹುತೇಕ ಎಲ್ಲ ಕಡೆಗಳಲ್ಲಿ ಉತ್ತಮ ಪ್ರಮಾಣದಲ್ಲಿ ಹೂವು ಬಿಟ್ಟಿದ್ದು, ಈ ಬಾರಿಯ ಮಾವಿನ ಸೀಸನ್ ಉತ್ತಮವಾಗಿರಬಹುದು ಎನ್ನುವ ನಿರೀಕ್ಷೆ ಮಾವಿನ ಬೆಳೆಗಾರರದ್ದಾಗಿದೆ.
ಎಲ್ಲೆಲ್ಲಿ ಎಷ್ಟು ಹೆಕ್ಟೇರ್?
ಉಡುಪಿ ಜಿಲ್ಲೆಯಲ್ಲಿ ವಾರ್ಷಿಕ ಒಟ್ಟಾರೆ 440.49 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಈ ಪೈಕಿ ಕಾರ್ಕಳ ತಾಲೂಕಿನಲ್ಲಿ ಗರಿಷ್ಠ 164 ಹೆಕ್ಟೇರ್, ಬೈಂದೂರು ತಾಲೂಕಿನಲ್ಲಿ ಕನಿಷ್ಠ 8 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಇನ್ನು ಕುಂದಾಪುರದಲ್ಲಿ 109 ಹೆಕ್ಟೇರ್, ಬ್ರಹ್ಮಾವರದಲ್ಲಿ 74 ಹೆಕ್ಟೇರ್, ಕಾಪುವಿನಲ್ಲಿ 33, ಹೆಬ್ರಿಯಲ್ಲಿ 30 ಹಾಗೂ ಉಡುಪಿ ತಾಲೂಕಿನಲ್ಲಿ 20 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ.
ಉತ್ತಮ ಹವಾಗುಣ
ಸಾಮಾನ್ಯವಾಗಿ ಡಿಸೆಂಬರ್ ವೇಳೆಗೆ ಮಾವಿನ ಹೂ ಬಿಡುತ್ತದೆ. ಆದರೆ ಈ ಬಾರಿ ಡಿಸೆಂಬರ್‌ವರೆಗೂ ಮಳೆ ಇದ್ದುದರಿಂದ ಹೂವು ಬಿಡುವ ಪ್ರಕ್ರಿಯೆ ತಡವಾಗಿ ಆರಂಭಗೊಂಡಿದೆ. ಆದರೆ ಈ ಬಾರಿ ಎಲ್ಲ ಕಡೆಗಳಲ್ಲಿ ಉತ್ತಮ ಹೂ ಬಿಟ್ಟಿದೆ. ಹವಾಮಾನ ಸಹ ಉತ್ತಮವಾಗಿರುವುದರಿಂದ ಈ ಬಾರಿ ಹೆಚ್ಚಿನ ಮಾವು ಇಳುವರಿ ಬರುವ ನಿರೀಕ್ಷೆಯಿದೆ.
– ಡಾ| ಧನಂಜಯ ಬಿ.,
ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು,
ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ
-ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.