Udupi: ʼನ್ಯಾಯಾಂಗದಲ್ಲಿ ತಂತ್ರಜ್ಞಾನ ಬಳಕೆಯಿಂದ ಪಾರದರ್ಶಕತೆ, ಸಮಯ, ಹಣವೂ ಉಳಿತಾಯʼ
ಉಡುಪಿ ನ್ಯಾಯಾಲಯ, ವಕೀಲರ ಸಂಘದ ಶತಮಾನೋತ್ತರ ರಜತ ಮಹೋತ್ಸವದಲ್ಲಿ ನ್ಯಾ| ಅರವಿಂದ್ ಕುಮಾರ್
Team Udayavani, Nov 17, 2024, 11:40 PM IST
ಉಡುಪಿ: ನ್ಯಾಯಾಂಗದಲ್ಲಿ ತಂತ್ರಜ್ಞಾನ ಬಳಕೆ ಇಂದಿನ ಅಗತ್ಯವಾಗಿದೆ. ನ್ಯಾಯಾಂಗದ ಪ್ರಕ್ರಿಯೆಗಳು ವರ್ಚುವಲ್ ಮೂಲಕ ನಡೆಸುವುದರಿಂದ ಕಕ್ಷಿದಾರರಿಗೆ ಪಾರದರ್ಶಕತೆ ತೋರ್ಪಡಿಸುವುದರ ಜತೆಗೆ ನ್ಯಾಯಾಧೀಕರಣದ ಬಗ್ಗೆ ಹೆಚ್ಚು ವಿಶ್ವಾಸ ಮೂಡಿಸಲು ಪೂರಕವಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಹೇಳಿದರು.
ಉಡುಪಿ ನ್ಯಾಯಾಲಯ ಮತ್ತು ವಕೀಲರ ಸಂಘದ ಶತಮಾನೋತ್ತರ ರಜತ ಮಹೋತ್ಸವ ಕಾರ್ಯಕ್ರಮವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡಿ ತಂತ್ರಜ್ಞಾನದ ಬಳಕೆಯಿಂದ ಕಕ್ಷಿದಾರರಿಗೆ ಸಮಯ ಮತ್ತು ಹಣದ ಉಳಿತಾಯವೂ ಸಾಧ್ಯವಾಗಲಿದೆ. ವಿಳಂಬ ನ್ಯಾಯದಾನದ ಹಿನ್ನೆಲೆಯಲ್ಲಿ ನ್ಯಾಯಾಲಯಗಳಲ್ಲಿ ವ್ಯಾಜ್ಯಗಳ ವಿಲೇವಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮಧ್ಯಸ್ಥಿಕೆಯ ತೀರ್ಮಾನ ಮತ್ತು ಲೋಕ ಅದಾಲತ್ ಮೂಲಕ ಸಾಧ್ಯವಾದಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು. ಕೋರ್ಟ್ ಕಲಾಪಗಳನ್ನು ಲೈವ್ ನೋಡುವಂತಾಗಬೇಕು ಎಂದರು.
ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ನ್ಯಾ. ಎನ್.ವಿ ಅಂಜಾರಿಯಾ ಅಧ್ಯಕ್ಷತೆ ವಹಿಸಿ, ನ್ಯಾಯಾಂಗ ಮತ್ತು ಸಾರ್ವಜನಿಕರ ನಡುವೆ ಅವಿನಾಭಾವ ಸಂಬಂಧ ಇದೆ. ಹೊಸ ಹೊಸ ನ್ಯಾಯಾಲಯಗಳ ಸ್ಥಾಪನೆಯೊಂದಿಗೆ ಪೂರಕ ಮೂಲ ಸೌಕರ್ಯ ವ್ಯವಸ್ಥೆ ಕಲ್ಪಿಸಬೇಕು ಎಂದರು. ಹೈಕೋರ್ಟ್ ನ್ಯಾಯಾಧೀಶ ಮತ್ತು ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ನ್ಯಾ| ಇ.ಎಸ್. ಇಂದಿರೇಶ್, 125ರ ಸ್ಮರಣ ಸಂಚಿಕೆಯನ್ನು ಅನಾವರಣಗೊಳಿಸಿದರು.
ಕಾನೂನು ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ನ್ಯಾಯಾಲಯಗಳು ಮತ್ತು ನ್ಯಾಯವಾದಿಗಳು ವಾಹನದ ಚಕ್ರಗಳಿದ್ದಂತೆ. ಕಕ್ಷಿದಾರರಿಗೆ ನ್ಯಾಯ ನೀಡುವಲ್ಲಿ ಇಬ್ಬರ ಪಾತ್ರವೂ ಮಹತ್ತರವಾದುದು. ಕಾರ್ಯಾಂಗ ಮತ್ತು ಶಾಸಕಾಂಗಗಳಿಗಿಂತ ಜನತೆ ನ್ಯಾಯಾಂಗದಲ್ಲಿ ಹೆಚ್ಚಿನ ವಿಶ್ವಾಸ ಇರಿಸಿಕೊಂಡಿದ್ದಾರೆ. ಸಮರ್ಪಕ ನ್ಯಾಯದಾನ ನ್ಯಾಯಾಂಗದ ಆಶಯವಾಗಿದೆ ಎಂದರು. ಹೈಕೋರ್ಟ್ ನ್ಯಾಯಾಧೀಶರಾದ ನ್ಯಾ| ಎಂ.ಜಿ. ಉಮಾ, ನ್ಯಾ| ರಾಮಚಂದ್ರ ಡಿ. ಹುದ್ದಾರ್ ಮತ್ತು ನ್ಯಾ| ಟಿ. ವೆಂಕಟೇಶ್ ನಾಯ್ಕ ಅವರನ್ನು ಸಮ್ಮಾನಿಸಲಾಯಿತು.
ಆರೋಗ್ಯ ಕಾರ್ಡ್ ಬಿಡುಗಡೆ
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಿಂದ ಉಡುಪಿ ವಕೀಲರ ಸಂಘದ ಸದಸ್ಯರಿಗೆ ನೀಡಲಾಗುವ ವಿಶಿಷ್ಟ ಆರೋಗ್ಯ ಕಾರ್ಡ್ ಅನ್ನು ಮಾಹೆ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಸಮ್ಮುಖದಲ್ಲಿ ನ್ಯಾ| ಎಸ್.ವಿ. ಅಂಜಾರಿಯಾ ಬಿಡುಗಡೆ ಮಾಡಿದರು. ಅಡ್ವೊಕೇಟ್ ಜನರಲ್ ಶಶಿಕಿರಣ್ ಎಸ್. ಶೆಟ್ಟಿ, ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತ್ ಕುಮಾರ್, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣನವರ್, ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಉಪಸ್ಥಿತರಿದ್ದರು. ವಿವಿಧ ವಿಚಾರಗಳಲ್ಲಿ ವಿಚಾರ ಮಂಡನೆ ನಡೆಯಿತು.
ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನಾಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್. ವಂದಿಸಿದರು. ಶತಮಾನೋತ್ತರ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಪ್ರಸ್ತಾವನೆಗೈದರು. ಹಿರಿಯ ವಕೀಲೆ ಮೇರಿ ಶ್ರೇಷ್ಠ ನಿರೂಪಿಸಿದರು.
ಬಾಕಿ ಪ್ರಕರಣಗಳಿಂದ ಜನರಲ್ಲಿ ಅಶಾಂತಿ: ನ್ಯಾ| ನಝೀರ್
ಆಂಧ್ರಪ್ರದೇಶದ ರಾಜ್ಯಪಾಲ, ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ನ್ಯಾ| ಎಸ್. ಅಬ್ದುಲ್ ನಝೀರ್ ಅವರು ನ್ಯಾಯಾಧೀಕರಣ ಪ್ರಕ್ರಿಯೆಯಲ್ಲಿ ವ್ಯಾಜ್ಯಗಳ ಮುಂದೂಡಿಕೆ ಅನಿವಾರ್ಯ ಎಂದರು. ಸುಪ್ರೀಂ ಕೋರ್ಟ್‌ವೊಂದರಲ್ಲಿಯೇ ಪ್ರಸ್ತುತ ಸುಮಾರು 5 ಕೋಟಿ ಪ್ರಕರಣಗಳು ವಿಚಾರಣೆಗೆ ಬಾಕಿ ಇದೆ. ಅದರಿಂದ ಸುಮಾರು 25 ಕೋಟಿ ಮಂದಿ ಅಶಾಂತಿಗೆ ಒಳಗಾಗುತ್ತಿದ್ದಾರೆ. ನ್ಯಾಯದಾನ ವಿಳಂಬವನ್ನು ಗಂಭೀರವಾಗಿ ಪರಿಗಣಿಸಿ, ಕ್ಷಿಪ್ರ ನ್ಯಾಯದಾನ ಪ್ರಕ್ರಿಯೆ ಬಗ್ಗೆ ಕಾನೂನು ಸಚಿವರ ಸಹಿತ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳು ಪರಿಹಾರೋಪಾಯ ಮಾರ್ಗ ಕಂಡುಕೊಳ್ಳುವ ಅನಿವಾರ್ಯತೆಯಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.