Union Budget; ರಾಜ್ಯದ ಹಿತ ಕಾಪಾಡುವಲ್ಲಿ ಕೇಂದ್ರ ಸಚಿವರು ವಿಫಲ: ಸಿಎಂ ಸಿದ್ದರಾಮಯ್ಯ
ರೈತರಿಗೆ ಕೇಂದ್ರ ಸರ್ಕಾರ ಪಂಗನಾಮ ಹಾಕಿದೆ, ಇದು ನಿರಾಸದಾಯಕ, ಜನವಿರೋಧಿ ಬಜೆಟ್
Team Udayavani, Jul 23, 2024, 7:47 PM IST
ಬೆಂಗಳೂರು : ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ಒಂದು ರೀತಿ ಚೊಂಬು ಕೊಟ್ಟಿದ್ದಾರೆ. ಬಿಹಾರ, ಆಂಧ್ರಪ್ರದೇಶ ಬಿಟ್ಟರೆ ದೇಶದ ಬೇರೆ ರಾಜ್ಯಗಳಿಗೆ ಬಜೆಟ್ನಲ್ಲಿ ಅನುದಾನ ನೀಡಿಲ್ಲ. ಹಣಕಾಸು ಸಚಿವೆ ನಿರ್ಮಲಾ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ್ದರಿಂದ ವಿಶೇಷ ಅನುದಾನ ನೀಡುತ್ತಾರೆಂಬ ನಿರೀಕ್ಷೆಯಿತ್ತು. ಆದ್ರೆ, ಕರ್ನಾಟಕಕ್ಕೆ ಯಾವುದೇ ಅನುದಾನ ನೀಡದೆ ನಿರ್ಲಕ್ಷಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ಕೇಂದ್ರದ ಬಜೆಟ್ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರದಲ್ಲಿ ರಾಜ್ಯದ ಐವರು ಸಚಿವರಿದ್ದರೂ ಏನನ್ನೂ ಕೊಟ್ಟಿಲ್ಲ. ಎಚ್.ಡಿ.ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶೋಭಾ ಸಚಿವರಾಗಿದ್ದಾರೆ. ಕೈಗಾರಿಕಾ ಕ್ಷೇತ್ರ, ರೈಲ್ವೆ ಇಲಾಖೆಗೂ ಏನನ್ನೂ ಕೊಡಲಿಲ್ಲ. ಬಜೆಟ್ ಮೂಲಕ ರೈತರಿಗೆ ಕೇಂದ್ರ ಸರ್ಕಾರ ಪಂಗನಾಮ ಹಾಕಿದೆ. ಒಟ್ಟಾರೆಯಾಗಿ ಇದು ನಿರಾಸದಾಯಕ, ಜನವಿರೋಧಿ ಬಜೆಟ್. ರೈತರು, ಬಡವರು, ಮಹಿಳೆಯರಿಗೆ ಬಹಳ ಅನ್ಯಾಯವಾಗಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ 5 ಮಂದಿ ಸಂಸದರು ಕೇಂದ್ರದಲ್ಲಿ ಸಚಿವರಾಗಿದ್ದರೂ ನಾಡಿನ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ಕನ್ನಡಿಗರು ಈ ಬಾರಿ ಕೇಂದ್ರ ಬಜೆಟ್ ನಿಂದು ಭ್ರಮನಿರಸನಗೊಂಡಿದ್ದಾರೆ.
ಈ ಬಾರಿ ಆಂಧ್ರ ಪ್ರದೇಶ ಹಾಗೂ ಬಿಹಾರ ಭರಪೂರ ಅನುದಾನ ಬಾಚಿದರೆ, ಭಾರತದ ಉಳಿದ ರಾಜ್ಯಗಳಿಗೆ ದೊಡ್ಡ ಚೊಂಬು… pic.twitter.com/Lsjpf4QsaJ— CM of Karnataka (@CMofKarnataka) July 23, 2024
ನಿರ್ಮಲಾರಿಂದ ರಾಜ್ಯಕ್ಕೆ ಅನ್ಯಾಯ:
ಮೋದಿ ಪ್ರಧಾನಿಯಾಗಿ ಉಳಿಯಬೇಕಾದರೆ ಆಂಧ್ರ ಮತ್ತು ಬಿಹಾರದ ಬೆಂಬಲ ಬೇಕು. ಹೀಗಾಗಿ ಅವರಿಗೆ ವಿಶೇಷ ಅನುದಾನ ನೀಡಿದ್ದಾರೆ. ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಆದ್ದರಿಂದ ಕರ್ನಾಟಕದ ಪರ ಇರುತ್ತಾರೆ, ನ್ಯಾಯ ಒದಗಿಸುತ್ತಾರೆಂಬ ನಿರೀಕ್ಷೆ ಇತ್ತು. ಅದೆಲ್ಲ ನಿರಾಸೆ ಮಾಡಿ ಅನ್ಯಾಯ ಮಾಡಿದ್ದಾರೆ. ಫೆರಿಫರಲ್ ರಿಂಗ್ ರಸ್ತೆಗೆ 6 ಸಾವಿರ ಕೋಟಿ ಕೊಡ್ತೀವಿ ಅಂದಿದ್ರು ಕೊಟ್ಟಿಲ್ಲ. ಅಪ್ಪರ್ ಭದ್ರಕ್ಕೆ 5,300 ಕೋಟಿ ಕೊಡಲಿಲ್ಲ, ಕೊಡ್ತೀವಿ ಅಂದಿದ್ರು ಕೊಡಲಿಲ್ಲ. ನಗರ ವಸತಿ ಯೋಜನೆಗಳಿಗೆ 1.2 ರಿಂದ 3 ಲಕ್ಷ ಮಾಡುತ್ತೀವಿ ಅಂದ್ರು ಕೊಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೋದಿ ಸರ್ಕಾರದ ಮೇಲೆ ಭರವಸೆ ಇಟ್ಟಿಕೊಳ್ಳಲು ಆಗುವುದಿಲ್ಲ. 15ನೇ ಹಣಕಾಸು ಹೇಳಿದ್ದನ್ನೇ ಕೊಟ್ಟಿಲ್ಲ. ಇವರದ್ದು ಬರೀ ನಿರೀಕ್ಷೆ ಅಷ್ಟೆ. ಭದ್ರ ಮೇಲ್ದಂಡೆ ಯೋಜನೆಗೆ ಟೆಕ್ನಿಕಲ್ ಸಮಸ್ಯೆ ಎಂಬ ಜೋಶಿ ಹೇಳಿದ್ದಾರೆ. ಹಾಗಾದ್ರೆ 5300 ಕೋಟಿ ಕೊಡ್ತೀವಿ ಅಂದೋರು ಯಾರು? ಕಾರಿಡಾರ್ ನಿಂದ ಕರ್ನಾಟಕಕ್ಕೆ ಏನೂ ಅನುಕೂಲ ಆಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.