Unity lesson: ರಾಜ್ಯ ಸರ್ಕಾರ ಫೇಲಾಗ್ಬಾರ್ದು, ಒಗ್ಗಟ್ಟಾಗಿರಿ: ಎಐಸಿಸಿ ಅಧ್ಯಕ್ಷ ಖರ್ಗೆ ಪಾಠ
ರಾಜ್ಯ ಕಾಂಗ್ರೆಸ್ ನಾಯಕರಿಗೆ ಖರ್ಗೆ ಸ್ಪಷ್ಟ ಕಿವಿಮಾತು, ಸಿಎಂ, ಡಿಸಿಎಂ ನಡುವೆ ಒಡಕು ಬೇಡ ಎಂದೂ ಸೂಚನೆ
Team Udayavani, Nov 1, 2024, 7:45 AM IST
ಬೆಂಗಳೂರು: “ಈ ಸರಕಾರ ವಿಫಲವಾದರೆ ಮುಂದಿನ ತಲೆಮಾರಿಗೆ ಏನೂ ಸಿಗುವುದಿಲ್ಲ. ಕೆಟ್ಟ ಹೆಸರೇ ಬಿಟ್ಟುಹೋಗುತ್ತೀರಿ. ಮತ್ತೆ ನಾವು ಮುಂದಿನ 10 ವರ್ಷ ವನವಾಸದಲ್ಲಿ ಇರಬೇಕಾಗುತ್ತದೆ. ಅದಕ್ಕಾಗಿ ದಯವಿಟ್ಟು ಒಳ್ಳೆಯ ಹೆಸರು ಬರುವಂತೆ ನೋಡಿಕೊಳ್ಳಿ. ನಿಮ್ಮನ್ನು, ಅಂದರೆ ಕರ್ನಾಟಕದ ಗ್ಯಾರಂಟಿಗಳನ್ನು ನೋಡಿ ಎಂದು ನಾವು ಅಲ್ಲಿ, ಮಹಾರಾಷ್ಟ್ರದಲ್ಲಿ ಹೇಳುತ್ತಿದ್ದೇವೆ. ನಮ್ಮ ಒಡಕನ್ನು ಬೇರೆಯವರ ಮುಂದೆ ಪ್ರದರ್ಶಿಸಬೇಡಿ. ಒಗ್ಗಟ್ಟು ಇಲ್ಲ ಎಂದಾದರೆ ಒಬ್ಬೊಬ್ಬರನ್ನು ಕರೆದು ಮಾತನಾಡಿಸುತ್ತಾರೆ. ಬೆಲ್ಲ ಇದ್ದಲ್ಲಿ ನೊಣ ಬರುತ್ತದೆ, ನೆನಪಿರಲಿ…’ ಇದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯ ನಾಯಕರಿಗೆ ಮಾಡಿದ ನೀತಿ ಪಾಠ.
ದಿನದ ಹಿಂದಷ್ಟೇ ಸರಕಾರದ 5 ಗ್ಯಾರಂಟಿಗಳಲ್ಲಿ ಒಂದಾದ “ಶಕ್ತಿ’ ಯೋಜನೆಯ ಮರುಚಿಂತನೆ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉಲ್ಲೇಖಿಸಿದ್ದರು. ಅದರ ಮರುದಿನವೇ ಪಕ್ಷದ ವರಿಷ್ಠರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಮಾಜಿ ಉಪಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಹುಟ್ಟುಹಬ್ಬ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಖರ್ಗೆ ಮಾತನಾಡಿದರು.
“ಮಹಾರಾಷ್ಟ್ರದಲ್ಲಿ ನಾವು ಕರ್ನಾಟಕದ ಮಾದರಿಯನ್ನು ಅನುಕರಣೆ ಮಾಡುತ್ತಿದ್ದೇವೆ. ಇಲ್ಲಿಯ ಗ್ಯಾರಂಟಿಗಳನ್ನು ನೋಡಿಕೊಂಡು ಅಲ್ಲಿ ಹೇಳುತ್ತಿದ್ದೇವೆ. ಬಜೆಟ್ ಮೀರಿ ಹೇಳಿದರೆ ರಸ್ತೆಗೆ ಬುಟ್ಟಿ ಮಣ್ಣುಹಾಕಲಿಕ್ಕೂ ದುಡ್ಡು ಇರುವುದಿಲ್ಲ. ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಕೂಡ ಬಜೆಟ್‌ಗೆ ತಕ್ಕಂತೆ ಗ್ಯಾರಂಟಿಗಳನ್ನು ಘೋಷಿಸುವಂತೆ ಸೂಚಿಸಿದ್ದಾರೆ.
ಅದರಂತೆ ಈಗ ಗ್ಯಾರಂಟಿಗಳನ್ನು ಸಿದ್ಧಪಡಿಸಿ, ಅಲ್ಲಿ ಘೋಷಣೆ ಮಾಡಲಿದ್ದೇವೆ. ಈ ಮಧ್ಯೆ ಒಂದು ಯೋಜನೆಯನ್ನು ಕೈಬಿಡುವ ಬಗ್ಗೆ ಇಲ್ಲಿ ಮಾತನಾಡಿದ್ದೀರಿ’ ಎಂದು ಖರ್ಗೆಯವರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಉದ್ದೇಶಿಸಿ ಹೇಳಿದರು. ಆಗ ಮಧ್ಯಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ ಅವರು, “ಡಿಸಿಎಂ ಪರಿಷ್ಕರಣೆ ಬಗ್ಗೆ ಹೇಳಿದ್ದಾರಷ್ಟೇ’ ಎಂದು ಸಮಜಾಯಿಷಿ ನೀಡಿದರು.
ಒಬ್ಬೊಬ್ಬರನ್ನೇ ಕರೆದು ಮಾತನಾಡಿಸುತ್ತಾರೆ, ಎಚ್ಚರ
ಇದೇ ವೇಳೆ ರಾಜ್ಯದ ನಾಯಕರಿಗೆ ತುಸು ಖಾರವಾಗಿಯೇ ಒಗ್ಗಟ್ಟಿನ ಪಾಠ ಮಾಡಿದ ಎಐಸಿಸಿ ಅಧ್ಯಕ್ಷ ಖರ್ಗೆ, “ಸಿದ್ದರಾಮಯ್ಯ ಅವರಿಗೆ ಏನಾದರೂ ಆದರೆ ಮತ್ತೂಬ್ಬರು ಖುಷಿಪಡುವುದು. ಶಿವಕುಮಾರ್ ಒಳಗೆ ಹೋದರೆ ಇನ್ನೊಬ್ಬರು ಖುಷಿಪಡುವುದು ಆಗಬಾರದು. ಈ ಖುಷಿ ಶಾಶ್ವತವಾಗಿರುವುದಿಲ್ಲ. ನಿಮ್ಮನ್ನು ಹಾಳು ಮಾಡಲು ಈ ಮನಃಸ್ಥಿತಿಯೇ ಸಾಕು, ಬೇರೆಯವರು ಬೇಕಿಲ್ಲ. ನಿಮ್ಮಲ್ಲಿ ಒಗ್ಗಟ್ಟಿಲ್ಲ ಎಂದಾದರೆ ಒಬ್ಬೊಬ್ಬರನ್ನೇ ಕರೆದು ಮಾತನಾಡಿಸುತ್ತಾರೆ. ನಿಮ್ಮನ್ನು ಹುರಿದುಂಬಿಸುತ್ತಾರೆ. ಹಾಗೆಂದು ಅವರೇನೂ ನಿಮ್ಮ ಒಳ್ಳೆಯದನ್ನು ಬಯಸುವುದಿಲ್ಲ. ಬೆಲ್ಲ ಇದ್ದಲ್ಲಿ ನೊಣ ಇರುತ್ತದೆ. ಇದು ನಿಮಗೆ ನೆನಪಿರಲಿ’ ಎಂದು ಎಚ್ಚರಿಸಿದರು.
“ಬಫೆ ಸಿಸ್ಟಂ’ ಆಗಬಾರದು. ಮುಂದೆ ಬಂದವನಿಗೆ ಬಿರಿಯಾನಿ, ಹಿಂದಿನವನಿಗೆ ಏನೂ ಇಲ್ಲ ಎಂಬಂತೆ ಆಗಬಾರದು. ನೀವು ಒಟ್ಟಾಗಿದ್ದರೆ, ಯಾರೂ ನಿಮಗೆ ಕೈಹಚ್ಚುವುದಿಲ್ಲ. ಹಿಂದೆ ದೇವರಾಜ ಅರಸು ನಿರಂತರ 8 ವರ್ಷ ರಾಜ್ಯವನ್ನು ಮುನ್ನಡೆಸಿದರು. ಇಂದಿರಾ ಗಾಂಧಿ ಜತೆ ಇದ್ದಿದ್ದರೆ ಮತ್ತೆ 5 ವರ್ಷ ಮುಂದುವರಿಯುತ್ತಿದ್ದರು. ಪಕ್ಷದ ಹಿತದೃಷ್ಟಿಯಿಂದ, ಅನುಭವದಿಂದ ಹೇಳುತ್ತಿದ್ದೇನೆ ಎಂದು ಸೂಚ್ಯವಾಗಿ ಹೇಳಿದರು.
ಇಲ್ಲಿಗೆ ಕೈ ಹಾಕಲ್ಲ!
ನಾನು ಯಾವತ್ತೂ ರಾಜ್ಯ ರಾಜಕಾರಣದಲ್ಲಿ ಕೈಹಾಕುವುದಿಲ್ಲ. ಸಚಿವ ಮುನಿಯಪ್ಪ ಸೇರಿದಂತೆ ಕೆಲವರು ಬಂದು ಭೇಟಿಯೂ ಆಗುತ್ತಾರೆ. ಕೆಲವರು ಪತ್ರ ಕೂಡ ಬರೆಯುತ್ತಾರೆ. ಆದರೆ, ನನ್ನ ಕೆಲಸ ಅದಲ್ಲ. ನನಗೆ ವಹಿಸಿದ ಜವಾಬ್ದಾರಿಯೇ ಬೇರೆ. ಅದನ್ನು ನಿರ್ವಹಿಸುತ್ತಿದ್ದೇನೆ. – ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Property: ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಮುಸ್ಲಿಮರಿಗೂ ವಕ್ಫ್ ನೋಟಿಸ್ ಬಿಸಿ!
Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್ ರದ್ದು
Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್.ಡಿ.ರೇವಣ್ಣ ಕಿಡಿ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
Waqf Issue: ಐದು ವರ್ಷ ಹಿಂದೆ ವಕ್ಫ್ ಆಸ್ತಿ ವಿರುದ್ಧ ಹೋರಾಡಿ ಗೆದ್ದಿದ್ದ 315 ರೈತರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.