ಚಳ್ಳಕೆರೆಯೇ ಸಮರ ಪ್ರಯೋಗತಾಣ
2023ಕ್ಕೆ ಮಾನವ ರಹಿತ ಯುದ್ಧ ವಿಮಾನ ಸಿದ್ಧ
Team Udayavani, Sep 5, 2019, 5:35 AM IST
ಬೆಂಗಳೂರು: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮಾನವರಹಿತ ಯುದ್ಧ ವಿಮಾನವನ್ನು ಅಭಿವೃದ್ಧಿಪಡಿಸಲು ಸಿದ್ಧತೆ ನಡೆಸಿದ್ದು, ಇದಕ್ಕೆ ಕರ್ನಾಟಕವೇ ಪ್ರಯೋಗತಾಣವಾಗಲಿದೆ.
ಡಿಆರ್‌ಡಿಒ ಮಹತ್ವಾಕಾಂಕ್ಷಿ ಯೋಜನೆ ಮಾನವ ರಹಿತ ಏರ್‌ಕ್ರಾಫ್ಟ್ ‘ರುಸ್ತುಮ್-2’ ಬೆನ್ನಲ್ಲೇ, ಅದೇ ಮಾದರಿಯಲ್ಲಿ ಮತ್ತೂಂದು ಮಾನವ ರಹಿತ ಯುದ್ಧವಿಮಾನ ಅಭಿವೃದ್ಧಿ ಪಡಿಸಲು ಸಿದ್ಧತೆ ನಡೆಸಿದೆ. ಅಂದುಕೊಂಡರೆ ಎಲ್ಲವೂ ನಡೆದರೆ 2020ರಿಂದ ಇದರ ನಿರ್ಮಾಣ ಕಾರ್ಯ ಆರಂಭವಾಗಲಿದ್ದು, 2023ಕ್ಕೆ ಪರೀಕ್ಷಾ ಪ್ರಯೋಗ ನಡೆಸುವ ಗುರಿ ಹೊಂದಿದೆ.
ಉದ್ದೇಶಿತ ಈ ಯುದ್ಧ ವಿಮಾನದ ಪ್ರಯೋಗ ಚಿತ್ರದುರ್ಗದ ಚಳ್ಳಕೆರೆಯಲ್ಲಿ ನಡೆದರೆ, ನಿಯಂತ್ರಣವನ್ನು ಬೆಂಗಳೂರಿನ ಡಿಆರ್‌ಡಿಒ ಕೇಂದ್ರ ನಿರ್ವಹಿಸಲಿದೆ.
ಸುಮಾರು 1,500 ಕೋಟಿ ರೂ. ವೆಚ್ಚದ ಈ ಯೋಜನೆಯನ್ನು ಕಾಲಮಿತಿಯಲ್ಲಿ ನಿರ್ಮಿಸಿ, ಹಾರಾಟ ನಡೆಸಲು ಡಿಆರ್‌ಡಿಒ ಉತ್ಸಾಹದಲ್ಲಿದ್ದು, ಯುದ್ಧ ವಿಮಾನವನ್ನು ಯಾವ ರೀತಿ ವಿನ್ಯಾಸಗೊಳಿಸಬೇಕೆಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ.
ನೆರೆ ರಾಷ್ಟ್ರಗಳ ಡ್ರೋನ್, ಜೆಟ್ ಸೇರಿ ಇತರೆ ವಿಮಾನಗಳು ಗಡಿ ದಾಟಿ ದೇಶದೊಳಗೆ ನುಗ್ಗಿದರೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ಕಣ್ಗಾವಲಿಗಾಗಿ ಡಿಆರ್‌ಡಿಒ ಮಾನವ ರಹಿತ ಏರ್‌ಕ್ರಾಫ್ಟ್ ‘ರುಸ್ತುಮ್-2’ ಅಭಿವೃದ್ಧಿಪಡಿಸಿದ್ದು, ಇದೀಗ ಮಾನವ ರಹಿತ ಯುದ್ಧ ವಿಮಾನ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿದೆ. ನಿಗಾ ವ್ಯವಸ್ಥೆಯ ಯಂತ್ರೋಪಕರಣಗಳ ಜತೆಗೆ ಕ್ಷಿಪಣಿ, ಬಾಂಬ್ ದಾಳಿ ನಡೆಸುವಂತಹ ಸಾಮರ್ಥ್ಯ ಈ ಯುದ್ಧ ವಿಮಾನ ಹೊಂದಿರಲಿದೆ.
ಮಾನವ ರಹಿತ ಯುದ್ಧ ವಿಮಾನ ತಯಾರಿಕೆ ಕಾರ್ಯದಲ್ಲಿ 200 ವಿಜ್ಞಾನಿಗಳು ಮತ್ತು ತಂತ್ರಜ್ಞರು ತೊಡಗಿಸಿಕೊಳ್ಳಲಿದ್ದು, ಅಮೆರಿಕ ಸೇರಿ ಇತರೆ ರಾಷ್ಟ್ರಗಳು ನಿರ್ಮಿಸಿರುವ ಮಾನವ ರಹಿತ ಯುದ್ಧ ವಿಮಾನಗಳಿಗಿಂತ ವಿಭಿನ್ನ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಯುದ್ಧ ವಿಮಾನ ನಿರ್ಮಾಣಕ್ಕೆ ಸಜ್ಜಾಗಿದ್ದಾರೆ. ಇದು 24 ಗಂಟೆಗಳ ಕಾಲ ನಭದಲ್ಲಿ ತಿರುಗಾಟ ನಡೆಸಲಿದ್ದು, ಕಂಟ್ರೋಲ್ ರೂಮ್ ಮೂಲಕ ಯುದ್ಧ ವಿಮಾನ ನಿರ್ವಹಣೆ ನಡೆಯಲಿದೆ.
ಎಚ್ಎಎಲ್, ಬಿಇಎಲ್ ಸಹಕಾರ: ಮಾನವ ರಹಿತ ಯುದ್ಧ ವಿಮಾನವನ್ನು ತಯಾರಿಸಲು ಡಿಆರ್‌ಡಿಒ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್(ಎಚ್ಎಎಲ್), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್)ನ ಸಹಕಾರ ಪಡೆಯಲಿದ್ದು, ಯುದ್ಧ ವಿಮಾನ ತಯಾರಿಕೆಗೆ ಬೇಕಾದ ಅಗತ್ಯ ಮೂಲ ಸೌಕರ್ಯ ಸಂಗ್ರಹಣೆಯಲ್ಲಿ ಡಿಆರ್‌ಡಿಒ ನಿರತವಾಗಿದೆ. ಆರಂಭಿಕವಾಗಿ ನಾಲ್ಕು ಮಾನವ ರಹಿತ ಯುದ್ಧ ವಿಮಾನ ಅಭಿವೃದ್ಧಿ ಪಡಿಸಲು ನಿರ್ಧರಿಸಿದೆ.
ಏನೆಲ್ಲ ವಿಶೇಷತೆ ಒಳಗೊಂಡಿದೆ ಮಾನವ ರಹಿತ ಯುದ್ಧ ವಿಮಾನ?: ಡಿಆರ್‌ಡಿಒ ನಿರ್ಮಿಸಲು ಉದ್ದೇಶಿಸಿರುವ ಮಾನವ ರಹಿತ ಯುದ್ಧ ವಿಮಾನದಲ್ಲಿ ಅತ್ಯಾಧುನಿಕ ಎಲೆಕ್ಟ್ರೋ ಆಪ್ಟಿಕ್ ಕ್ಯಾಮೆರಾ ಅಳವಡಿಸಲಿದ್ದು, ಇದು 5 ಕಿ.ಮೀ. ಎತ್ತರ ಮತ್ತು 40 ಕಿ.ಮೀ. ದೂರದ ವಸ್ತುವನ್ನು ಕಂಡು ಹಿಡಿಯುವ ಸಾಮರ್ಥ್ಯ ಹೊಂದಿದೆ. ನೆರೆ ರಾಷ್ಟ್ರಗಳ ಅನುಮಾನಾಸ್ಪದ ಡ್ರೋನ್, ವಿಮಾನಗಳು ಗಡಿ ದಾಟಿ ಬಂದರೆ, ತಕ್ಷಣವೇ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡಲಿದೆ ಹಾಗೂ ನಭದಲ್ಲಿಯೇ ಹೊಡೆದುರುಳಿಸುವ ಶಕ್ತಿ ಹೊಂದಿರಲಿದೆ. ವಿಮಾನದಲ್ಲಿ ರೆಡಾರ್ ಅಳವಡಿಸಲಿದ್ದು, ಪ್ರತಿಕ್ಷಣವೂ ಮಿಷನ್ ಕಮಾಂಡರ್‌ಗೆ ಮಾಹಿತಿ ನೀಡಲಿದೆ. ಕ್ಷಿಪಣಿ, ಶಸ್ತ್ರಾಸ್ತ್ರಗಳು, ಬಾಂಬ್‌ಗಳನ್ನು ಸರಾಗವಾಗಿ ಹೊತ್ತೂಯ್ಯಬಲ್ಲ ಸಾಮರ್ಥ್ಯ ಹೊಂದಿದ್ದು, ಯುದ್ಧದ ಸಂದರ್ಭದಲ್ಲಿ ಶತ್ರುಗಳ ಮೇಲೆ ದಾಳಿ ಮಾಡಲಿದೆ. ಈ ಮಾನವ ರಹಿತ ಯುದ್ಧ ವಿಮಾನ 12 ಟನ್ ತೂಕ ಹೊಂದಿರಲಿದ್ದು, ಗಂಟೆಗೆ 400 ಕಿ.ಮೀ ವೇಗದಲ್ಲಿ ಸಂಚರಿಸಲಿದೆ.
ಕಂಟ್ರೋಲ್ ಸ್ಟೇಷನ್ ನಿರ್ಮಾಣ: ಮಾನವ ರಹಿತ ಯುದ್ಧ ವಿಮಾನ ನಿರ್ವಹಣೆಗೆ ಬೆಂಗಳೂರಿನ ಡಿಆರ್‌ಡಿಒನಲ್ಲಿ ಕಂಟ್ರೋಲ್ ಸ್ಟೇಷನ್ ನಿರ್ಮಾಣವಾಗಲಿದೆ. ಈ ಸ್ಟೇಷನ್‌ನಲ್ಲಿ ಒಬ್ಬ ಪೈಲೆಟ್, ಮಿಷನ್ ಕಮಾಂಡರ್, ಪೇಲೋಡ್ ಆಪರೇಟರ್, ಇಮೇಜ್ ಅನಾಲಿಸ್ಟ್ ಕೆಲಸ ನಿರ್ವಹಿಸಲಿದ್ದಾರೆ. ವಿಮಾನ ಟೇಕ್‌ಆಫ್ ವೇಳೆ ಹೆಚ್ಚುವರಿ ಪೈಲೆಟ್ ನೇಮಿಸಲಾಗಿರುತ್ತದೆ. ಯುದ್ಧದ ಸಂದರ್ಭದಲ್ಲಿ ಕಂಟ್ರೋಲ್ ಸ್ಟೇಷನ್ ಅನ್ನು ಬೇರೆಡೆಗೆ ವರ್ಗಾಹಿಸಬಹುದು ಎಂದು ಡಿಆರ್‌ಡಿಒ ವಿಜ್ಞಾನಿ ಸಿದ್ದಪ್ಪಾಜಿ ಬಸವರಾಜು ಉದಯವಾಣಿಗೆ ತಿಳಿಸಿದ್ದಾರೆ.
-ಸಿದ್ದಪ್ಪಾಜಿ ಬಸವರಾಜು, ಡಿಆರ್‌ಡಿಒ ವಿಜ್ಞಾನಿ
-ಮಂಜುನಾಥ ಗಂಗಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.