ತಡೆಯಲಾಗದ ಅನಿಯಂತ್ರಿತ ಮೂತ್ರ ವಿಸರ್ಜನೆ ಮತ್ತು ಮೂತ್ರಶಂಕೆಯ ಅವಸರ
ಗಡ್ಡೆ ಅಥವಾ ಕಲ್ಲು ಇದ್ದಾಗ ಸಿಸ್ಟೊಸ್ಕೋಪಿಕ್ ಪರೀಕ್ಷೆಯನ್ನು ನಡೆಸಲಾಗುತ್ತದೆ
Team Udayavani, Feb 16, 2023, 6:15 PM IST
ಹೀಗೊಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ. ನೀವು ಬಹಳ ಇಷ್ಟಪಡುವ ಟಿವಿ ಧಾರಾವಾಹಿ ನೋಡುತ್ತಿದ್ದೀರಿ. ಆಗ ನಿಮಗೆ ಮೂತ್ರಶಂಕೆ ಉಂಟಾಗುತ್ತದೆ. ಮೂತ್ರ ವಿಸರ್ಜಿಸಬೇಕು ಎಂಬ ಬಲವಾದ ಒತ್ತಡ. ಆದರೂ ನೀವು ಕಟ್ಟಿಕೊಳ್ಳಬಹುದು, ಕಮರ್ಶಿಯಲ್ ಬ್ರೇಕ್‌ವರೆಗೆ ಕಾಯಬಹುದು – ಇದು ಸಹಜ ಸ್ಥಿತಿ.
ಇನ್ನೊಂದು ತೀರಾ ಹದಗೆಟ್ಟ ಸ್ಥಿತಿ ಗಮನಿಸಿ: ಮೂತ್ರ ಕಟ್ಟಿಕೊಳ್ಳಲಾಗದೆ ಸೀರಿಯಲ್ ಬಿಟ್ಟು ಶೌಚಾಲಯಕ್ಕೆ ಧಾವಿಸಲೇಬೇಕಾಗುತ್ತದೆ; ಹಾಗೆ ಮಾಡದೆ ಇದ್ದರೆ ಮೂತ್ರ ಸೋರಿ ಒಳಚಡ್ಡಿ ಒದ್ದೆಯಾಗಿಬಿಡುತ್ತದೆ – ಇದು ಒಂದು ಸಮಸ್ಯೆ ಅಥವಾ ಅನಾರೋಗ್ಯ. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ತಡೆಯಲಾಗದ ಮೂತ್ರಶಂಕೆ ಅಥವಾ ಅನಿಯಂತ್ರಿತ ಮೂತ್ರಶಂಕೆ (ಅರ್ಜ್ ಇನ್‌ಕನ್ಸಿಸ್ಟೆನ್ಸ್) ಎನ್ನಲಾಗುತ್ತದೆ. ತಡೆಯಲಾಗದ ಮೂತ್ರಶಂಕೆಯು ಒಂದು ಅನಾರೋಗ್ಯ ಲಕ್ಷಣವಾಗಿದ್ದು, ಮೂತ್ರ ವಿಸರ್ಜಿಸಬೇಕು ಎಂಬ ಒತ್ತಡ ತಡೆಯಲಾಗದಷ್ಟು ಬಲವಾಗಿರುತ್ತದೆಯಲ್ಲದೆ ಶೌಚಾಲಯಕ್ಕೆ ಹೋಗುವುದಕ್ಕೂ ಮುನ್ನವೇ ಮೂತ್ರ ಸೋರಿಬಿಡುತ್ತದೆ. ಮೂತ್ರಕೋಶವು ಹಠಾತ್ತಾಗಿ ಸಂಕುಚನಗೊಳ್ಳುತ್ತದೆ ಅಥವಾ ಮುದುಡುತ್ತದೆ ಮತ್ತು ಮೂತ್ರಕೋಶದಲ್ಲಿ ಶೇಖರಣೆಯಾಗಿದ್ದ ಮೂತ್ರವು ಹೊರಬರುತ್ತದೆ. ಆಯಾ ಸಂದರ್ಭದಲ್ಲಿ ಮೂತ್ರಕೋಶದಲ್ಲಿ ಎಷ್ಟು ಮೂತ್ರ ಶೇಖರವಾಗಿರುತ್ತದೆ ಮತ್ತು ಸಂಕುಚನ ಎಷ್ಟು ಬಲಶಾಲಿಯಾಗಿರುತ್ತದೆ ಎಂಬುದನ್ನು ಅವಲಂಬಿಸಿ ಹೊರಬರುವ ಮೂತ್ರದ ಪ್ರಮಾಣ ಹೆಚ್ಚು ಕಮ್ಮಿಯಾಗಬಹುದು. ತಡೆಯಲಾಗದ ಮೂತ್ರಶಂಕೆಗೆ ಮುನ್ನ ಮೂತ್ರಶಂಕೆಯ ಅವಸರ ಕಾಣಿಸಿಕೊಳ್ಳುತ್ತದೆ. ಕೆಲವು ರೋಗಿಗಳಲ್ಲಿ ಅವಸರ ಅಥವಾ ಶೌಚಾಲಯಕ್ಕೆ ಹೋಗಬೇಕು ಎಂಬ ಒತ್ತಡವಷ್ಟೇ ಕಾಣಿಸಿಕೊಂಡು ಮೂತ್ರ ಸೋರುವುದನ್ನು ತಡೆಯುವುದು ಅವರಿಗೆ ಸಾಧ್ಯವಾಗಬಹುದು. ಆದರೆ ಈ ಒತ್ತಡ, ಅವಸರದ ಬಗ್ಗೆ ನಿಗಾ ವಹಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ ಅಂತಿಮವಾಗಿ ಅದು ಮೂತ್ರ ಸೋರುವ ಹಂತಕ್ಕೆ ಉಲ್ಬಣಿಸಬಹುದು.
ಈ ಅನಾರೋಗ್ಯ ಸ್ಥಿತಿಯು ಮೂತ್ರಕೋಶದ ಸ್ನಾಯುಗಳ ಅನಿರೀಕ್ಷಿತ ಸಂಕುಚನದಿಂದ ಉಂಟಾಗುವ ಕಾರಣ ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ಅತಿ ಕ್ರಿಯಾಶೀಲ ಮೂತ್ರಕೋಶ (ಓವರ್‌ಆ್ಯಕ್ಟಿವ್ ಬ್ಲಾಡರ್) ಎಂದೂ ಗುರುತಿಸುತ್ತಾರೆ. ಮೂತ್ರಶಂಕೆಯ ಅವಸರವು ನೀವು ಶೌಚಾಲಯ ಮುಟ್ಟುವುದಕ್ಕೂ ಮುನ್ನವೇ ಮೂತ್ರ ಸೋರಿಹೋಗುವಷ್ಟು ಬಲವಾಗಿದ್ದರೆ ಅದನ್ನು ಆದ್ರ- ಅತಿಕ್ರಿಯಾಶೀಲ ಮೂತ್ರಕೋಶ ಎನ್ನುತ್ತಾರೆ. ಮೂತ್ರ ವಿಸರ್ಜಿಸಬೇಕು ಎಂಬ ಒತ್ತಡ ಮಾತ್ರವೇ ಇದ್ದು, ಆತ ಅಥವಾ ಆಕೆ ಮೂತ್ರ ವಿಸರ್ಜಿಸಲು ಸೂಕ್ತ ಸ್ಥಳ ಹುಡುಕಿ ವಿಸರ್ಜಿಸುವಷ್ಟು ಕಾಲ ನಿಯಂತ್ರಿಸಲು ಶಕ್ತನಾ/ಳಾಗಿದ್ದರೆ ಮತ್ತು ಮೂತ್ರ ಸೋರಿಕೆ ಇಲ್ಲದೆ ಇದ್ದರೆ ಅದನ್ನು ಶುಷ್ಕ- ಅತಿಕ್ರಿಯಾಶೀಲ ಮೂತ್ರಕೋಶ ಎನ್ನುತ್ತಾರೆ.
ಅನಿಯಂತ್ರಿತ ಮೂತ್ರ ವಿಸರ್ಜನೆ ಅಥವಾ ತಡೆಹಿಡಿಯಲಾಗದ ಮೂತ್ರ ಶಂಕೆಯು ತನ್ನ ಅನಿರೀಕ್ಷಿತ ಸ್ವಭಾವದಿಂದಾಗಿ ಬಹಳ ಮುಜುಗರವನ್ನು ಉಂಟು ಮಾಡುವಂಥದ್ದು. ಈ ಸಮಸ್ಯೆ ಇರುವ ಗೀತಾ ಎಂಬ 40 ವರ್ಷ ವಯಸ್ಸಿನ ಮಹಿಳೆಯೊಬ್ಬರು ಅದರ ಅಡ್ಡಿ ಅಡಚಣೆಗಳನ್ನು ವಿವರಿಸುತ್ತಾರೆ – ಕೆಲವೊಮ್ಮೆ ನೀರು ಹರಿಯುವಂತಹ ಸದ್ದಿನೊಂದಿಗೆ ಮೂತ್ರ ಸೋರುವುದು, ಯೋಚಿಸದೇ ಇದ್ದಾಗಲೂ ಮೂತ್ರ ಒಳಚಡ್ಡಿಯನ್ನು ಒದ್ದೆ ಮಾಡುವುದು – ಹೀಗೆ. ಇದು ಆಕೆಯದ್ದು ಮಾತ್ರ ಅಲ್ಲ, ಇನ್ನೂ ಹಲವಾರು ಮಹಿಳೆಯರು ಇಂತಹ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಕೆಲವರಿಗೆ ಈ ತುರ್ತು ರಾತ್ರಿ ಮಾತ್ರ ಉಂಟಾಗುತ್ತದೆ, ಇನ್ನು ಕೆಲವರಿಗೆ ಮೂತ್ರಕೋಶ ಖಾಲಿ ಮಾಡಿಕೊಳ್ಳಲು ಸರಿಯಾದ ಸ್ಥಳ ಸಿಗದಂಥ ಜಾಗಗಳಲ್ಲಿಯೇ ಈ ತುರ್ತು ಉದ್ಭವಿಸುತ್ತದೆ. ಕೆಲವರಿಗೆ ಈ ಸಮಸ್ಯೆ ಎಂತಹ ಮುಜುಗರ ಮತ್ತು ಅಡ್ಡಿಯನ್ನು ಸೃಷ್ಟಿಸುತ್ತದೆ ಎಂದರೆ, ಈ ಅನಾರೋಗ್ಯದಿಂದ ಬಳಲುತ್ತಿರುವ ಕೆಲವರು ಸಾಮಾಜಿಕ ಚಟುವಟಿಕೆ, ಸಾಮುದಾಯಿಕ ಚಟುವಟಿಕೆಗಳನ್ನೇ ಕಡಿಮೆ ಮಾಡಿಕೊಂಡುಬಿಡುತ್ತಾರೆ. ಇದು ಜೀವನ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಏಕಾಕಿತನ ಮತ್ತು ಹತಾಶ ಭಾವನೆಗೂ ಕಾರಣವಾಗಬಹುದು.
ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳೋಣ
ಅನಿಯಂತ್ರಿತ ಮೂತ್ರಶಂಕೆ ಎಂಬ ಸಮಸ್ಯೆ ಯಾವ ಕಾರಣದಿಂದ ಉಂಟಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ. ದೇಹದಿಂದ ತ್ಯಾಜ್ಯಗಳನ್ನು ಹೊರಹಾಕಲು ದೇಹವೇ ಕಂಡುಕೊಂಡಿರುವ ಒಂದು ವ್ಯವಸ್ಥೆಯೇ ಮೂತ್ರ ವಿಸರ್ಜನೆ. ಮೂತ್ರಪಿಂಡಗಳು ಮೂತ್ರವನ್ನು ಉತ್ಪಾದಿಸುತ್ತವೆ, ಅದು ಮೂತ್ರನಾಳಗಳ ಮುಖಾಂತರ ಮೂತ್ರಪಿಂಡದಲ್ಲಿ ಶೇಖರವಾಗುತ್ತದೆ. ಮೂತ್ರ ವಿಸರ್ಜಿಸಲು ಸರಿಯಾದ ಜಾಗವನ್ನು ನೀವು ಕಂಡುಕೊಳ್ಳುವವರೆಗೆ ಮೂತ್ರವನ್ನು ಹಿಡಿದಿಟ್ಟುಕೊಳ್ಳುವ ಒಂದು ಪ್ರಾಮುಖ್ಯ ಅಂಗ ಮೂತ್ರಕೋಶ. ಮೂತ್ರ ವಿಸರ್ಜಿಸಲು ಸರಿಯಾದ ಜಾಗ ಸಿಕ್ಕಿದೊಡನೆ ಪೂರ್ಣವಾಗಿ ತುಂಬಿದ ಮೂತ್ರಕೋಶದ ಸ್ನಾಯುಗಳು ಸಂಕುಚನಗೊಳ್ಳುವ ಮೂಲಕ ಯುರೆತ್ರಾ ಎಂಬ ಸಪೂರವಾದ ಕೊಳವೆಯ ಮೂಲಕ ತುಂಬಿರುವ ಮೂತ್ರವನ್ನು ಹೊರಹಾಕುತ್ತದೆ.
ಕಾರಣಗಳೇನು?
ಮೂತ್ರಕೋಶದ ಅಕಾಲಿಕವಾದ ಈ ಸಂಕುಚನವು ಮೂತ್ರಕೋಶದ ಸೋಂಕು/ ಉರಿಯೂತದಿಂದ ಉಂಟಾಗಬಹುದಾಗಿದೆ. ಮೂತ್ರಕೋಶವು ಕಲ್ಲುಗಳನ್ನು ಹೊಂದಿದ್ದಾಗ ಅಥವಾ ಕ್ಯಾನ್ಸರ್ ಸ್ವರೂಪದ ಬೆಳವಣಿಗೆಯನ್ನು ಹೊಂದಿದ್ದಾಗ ಈ ತೊಂದರೆ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ನರಸಂಬಂಧಿ ಕಾರಣವೂ ಇರಬಹುದು. ಅನೇಕ ಬಾರಿ ಕಾರಣವನ್ನೇ ತಿಳಿಯಲಾಗದೆ ನಿಗೂಢವಾಗಿರಬಹುದು.
ತಪಾಸಣೆ – ರೋಗಪತ್ತೆ
ಸಾಮಾನ್ಯವಾಗಿ ರೋಗಿಯ ಆರೋಗ್ಯ- ಅನಾರೋಗ್ಯ ಚರಿತ್ರೆಯನ್ನು ಆಧರಿಸಿಯೇ ಅತಿಕ್ರಿಯಾಶೀಲ ಮೂತ್ರಕೋಶ ಸಮಸ್ಯೆಯನ್ನು ಪತ್ತೆ ಮಾಡಲಾಗುತ್ತದೆ. ಮೂರು ದಿನಗಳ ಮೂತ್ರವಿಸರ್ಜನೆಯ ದಿನಚರಿಯು ಈ ಅನಾರೋಗ್ಯವನ್ನು ಪತ್ತೆ ಹಚ್ಚುವುದಕ್ಕೆ ಮತ್ತು ನಿರ್ವಹಣೆ ಮಾಡುವುದಕ್ಕೆ ಮುಖ್ಯ ಮಾಹಿತಿ ಮೂಲವಾಗುತ್ತದೆ. ಪೆಲ್ವಿಕ್ ಭಾಗದ ತಪಾಸಣೆಯಿಂದ ಪೆಲ್ವಿಕ್ ಫ್ಲೋರ್ ರಿಲ್ಯಾಕ್ಸೇಶನ್ ಸಾಮರ್ಥ್ಯ ಹೇಗಿದೆ ಎಂಬುದು ತಿಳಿಯುತ್ತದೆ – ಇಲ್ಲಿ ಅನಿಯಂತ್ರಿತ ಮೂತ್ರಶಂಕೆಯ ಪೂರ್ವಭಾವಿ ಕಾರಣಗಳು ಪತ್ತೆಯಾಗಬಹುದು. ಭಾಗಶಃ ತುಂಬಿರುವ ಮೂತ್ರಕೋಶದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ನಡೆಸಿದಾಗ ಸೋಂಕು, ಗಡ್ಡೆ ಅಥವಾ ಕಲ್ಲುಗಳಿದ್ದರೆ ಪತ್ತೆಯಾಗುತ್ತವೆ. ಕೊನೆಯ ಎರಡು, ಅಂದರೆ ಗಡ್ಡೆ ಅಥವಾ ಕಲ್ಲು ಇದ್ದಾಗ ಸಿಸ್ಟೊಸ್ಕೋಪಿಕ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಒಂದು ಸೂಕ್ಷ್ಮ ಕೆಮರಾವನ್ನು ಯುರೆತ್ರಾದ ಮೂಲಕ ಒಳಕ್ಕೆ ಕಳುಹಿಸಿ ಕಲ್ಲನ್ನು ನಿವಾರಿಸಲು ಅಥವಾ ಶಂಕಿತ ಗಡ್ಡೆಯ ಭಾಗದಿಂದ ಬಯಾಪ್ಸಿ ನಡೆಸಲಾಗುತ್ತದೆ. ಅತಿಕ್ರಿಯಾಶೀಲ ಮೂತ್ರಕೋಶ ಅಥವಾ ಅನಿಯಂತ್ರಿತ ಮೂತ್ರ ವಿಸರ್ಜನೆಯ ಎಲ್ಲ ಪ್ರಕರಣಗಳಲ್ಲೂ ಮೂತ್ರ ಪರೀಕ್ಷೆ ನಡೆಸುವುದು ಕಡ್ಡಾಯವಾಗಿದೆ.
ಚಿಕಿತ್ಸೆ
ಮೊದಲ ಹಂತದ ಚಿಕಿತ್ಸೆ ಎಂದರೆ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಮತ್ತು ಮೂತ್ರಕೋಶ ನಿಯಂತ್ರಣದ ತರಬೇತಿ. ಮೂತ್ರಕೋಶ ಸೋಂಕು ಪತ್ತೆಯಾಗಿದ್ದರೆ ಆ್ಯಂಟಿಬಯಾಟಿಕ್ ಔಷಧಗಳನ್ನು ಉಪಯೋಗಿಸಬೇಕಾಗುತ್ತದೆ.
ರೋಗಿಗೆ ಮಧುಮೇಹ ಮತ್ತು ಈಸ್ಟ್ರೊಜೆನ್ ಕೊರತೆ ಇರುವುದೇ ಆದಲ್ಲಿ ಅವುಗಳನ್ನು ಸೂಕ್ತವಾಗಿ ನಿಭಾಯಿಸಬೇಕಾಗುತ್ತದೆ. ಪೆಲ್ವಿಕ್ ಫ್ಲೋರ್ ರಿಲ್ಯಾಕ್ಸೇಶನ್ ಪ್ರಕರಣಗಳಲ್ಲಿ ಪೆಲ್ವಿಕ್ ಫ್ಲೋರ್ ವ್ಯಾಯಾಮಗಳು ಪ್ರಯೋಜನಕಾರಿಯಾಗಿರುತ್ತವೆ. ಅತಿಕ್ರಿಯಾಶೀಲ ಮೂತ್ರಕೋಶವನ್ನು ಚಿಕಿತ್ಸೆಗೊಳಪಡಿಸಲು ಬಾಯಿಯ ಮೂಲಕ ಸೇವಿಸಬಹುದಾದ ಔಷಧಗಳು ಲಭ್ಯವಿವೆ. ಈ ಔಷಧಗಳು ತುರ್ತುಮೂತ್ರಶಂಕೆಯ ಒತ್ತಡದ ಲಕ್ಷಣಗಳನ್ನು ಉಪಶಮನಗೊಳಿಸುತ್ತವೆ, ತೀವ್ರ ಮೂತ್ರಶಂಕೆ ಮತ್ತು ಸಂಬಂಧಿ ಲಕ್ಷಣಗಳನ್ನು ನಿವಾರಿಸುತ್ತವೆ. ಅತಿಕ್ರಿಯಾಶೀಲ ಮೂತ್ರಕೋಶ ಸಮಸ್ಯೆಯ ನಿವಾರಣೆಯಲ್ಲಿ ನರ ಪ್ರಚೋದನೆಯ ಪಾತ್ರವೂ ಇದೆ. ಮೂತ್ರಕೋಶಕ್ಕೆ ಸಂಕೇತಗಳನ್ನು ರವಾನಿಸುವ ನರಗಳನ್ನು ಕೆಳಬೆನ್ನು ಭಾಗದಲ್ಲಿ ಅಥವಾ ಕಾಲಿನ ಕೆಳಭಾಗದ ಚರ್ಮಕ್ಕೆ ಕಿರು ವೈರ್ ಅಳವಡಿಸಿ ವಿದ್ಯುತ್ ಚೋದನೆಯ ಮೂಲಕ ಸಚೇತನಗೊಳಿಸಲಾಗುತ್ತದೆ.
ಚಿಕಿತ್ಸೆಯ ಇತರ ಆಯ್ಕೆಗಳು ವಿಫಲಗೊಂಡ ಸಂದರ್ಭದಲ್ಲಿ ಬೊಟೊಕ್ಸ್ (ಬೊಟುಲಿನಮ್ ಎ ಟಾಕ್ಸಿನ್) ಇಂಜೆಕ್ಷನ್ ಅಂತಿಮ ಆಯ್ಕೆಯಾಗಿರುತ್ತದೆ.
ಸಣ್ಣ ಡೋಸ್‌ಗಳಲ್ಲಿ ಬೊಟೊಕ್ಸ್ ಅನ್ನು ಮೂತ್ರಕೋಶಕ್ಕೆ ನೇರವಾಗಿ ಇಂಜೆಕ್ಷನ್ ಮೂಲಕ ನೀಡಿದಾಗ ಅದು ಮೂತ್ರಕೋಶದ ಸ್ನಾಯುಗಳನ್ನು ತಾತ್ಕಾಲಿಕವಾಗಿ ದುರ್ಬಲಗೊಳಿಸುತ್ತದೆ ಅಥವಾ ನಿಷ್ಕ್ರಿಯಗೊಳಿಸುತ್ತದೆ. ಇದರಿಂದ ಅವು ಪದೇಪದೇ ಸಂಕುಚನಗೊಳ್ಳುವುದು ತಪ್ಪುತ್ತದೆ ಮತ್ತು ಅತಿ ಕ್ರಿಯಾಶೀಲ ಮೂತ್ರಕೋಶದ ಲಕ್ಷಣಗಳು ಕಡಿಮೆಯಾಗುತ್ತವೆ. ಈ ಇಂಜೆಕ್ಷನ್‌ನ ಪರಿಣಾಮವು ಸುಮಾರು ಆರರಿಂದ ಎಂಟು ತಿಂಗಳುಗಳ ಕಾಲ ಇರುತ್ತದೆ. ಹಾಗಾಗಿ ಮತ್ತೆ ಮತ್ತೆ ಇಂಜೆಕ್ಷನ್ ಪಡೆಯಬೇಕಾಗುತ್ತದೆ. ಆದರೆ ಇದರ ಜತೆಗೆ ಮೂತ್ರಕೋಶ ನಿಯಂತ್ರಣ ತರಬೇತಿಯನ್ನೂ ಪರಿಣಾಮಕಾರಿಯಾಗಿ ಪಡೆದು ಅನುಸರಿಸಿದರೆ ದೀರ್ಘಕಾಲಿಕ ನಿಯಂತ್ರಣ ಸಾಧ್ಯವಾಗುತ್ತದೆಯಲ್ಲದೆ ಎರಡು ಇಂಜೆಕ್ಷನ್‌ಗಳ ಅಗತ್ಯ ಕಡಿಮೆಯಾಗುತ್ತದೆ.
ಶಸ್ತ್ರಚಿಕಿತ್ಸೆ ಅಪರೂಪ
ಅತ್ಯಪೂರ್ವ ಪ್ರಕರಣಗಳಲ್ಲಿ ಮೂತ್ರಕೋಶವನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆಯು ಅಗತ್ಯವಾಗಿರುತ್ತದೆ. ಮೂತ್ರ ಹಿಡಿದಿಟ್ಟುಕೊಳ್ಳುವುದು ಕಷ್ಟವಾಗುವುದು ಮತ್ತು ರಾತ್ರಿ ಅಥವಾ ಹಗಲಿನಲ್ಲಿ ಮೂತ್ರ ವಿಸರ್ಜನೆಗೆ ಅವಸರ ಉಂಟಾಗುವುದು ಒಂದು ಸಹಜ ವಿದ್ಯಮಾನ. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ಮೂತ್ರವಿಸರ್ಜನೆಯ ತುರ್ತು ಅಥವಾ ಅತಿಕ್ರಿಯಾಶೀಲ ಮೂತ್ರಕೋಶ ಎನ್ನುತ್ತಾರೆ. ಕೆಲವು ಸಂದರ್ಭಗಳಲ್ಲಿ ಮೂತ್ರವಿಸರ್ಜನೆಯ ಈ ತುರ್ತನ್ನು ನಿಯಂತ್ರಿಸುವುದಕ್ಕೆ ಸಾಧ್ಯವಾಗದೆ ಮೂತ್ರವು ಸೋರಿಕೆಯಾಗಿಬಿಡುತ್ತದೆ. ಇದನ್ನು ಅನಿಯಂತ್ರಿತ ಮೂತ್ರವಿಸರ್ಜನೆ ಎನ್ನಲಾಗುತ್ತದೆ. ಅನೇಕ ಮಂದಿ ಮಹಿಳೆಯರಲ್ಲಿ ಈ ಸಮಸ್ಯೆಯಿರುತ್ತದೆ. ಇಂತಹ ಸಮಸ್ಯೆ ನಿಮಗಿದೆ ಎಂದಾದರೆ ನೀವು ತಡ ಮಾಡದೆ ಯುರೋಗೈನೆಕಾಲಜಿಸ್ಟ್ ಅವರನ್ನು ಸಂಪರ್ಕಿಸಿ ಸಮಗ್ರವಾದ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು. ಅನೇಕ ಬಾರಿ ಈ ಸಮಸ್ಯೆಗೆ ಕಾರಣಗಳಿದ್ದು, ಅವುಗಳಿಗೆ ಚಿಕಿತ್ಸೆ ನೀಡಬೇಕಿರುತ್ತದೆ. ಆದರೆ ಕೆಲವು ಬಾರಿ ಯಾವುದೇ ಕಾರಣಗಳು ಪತ್ತೆಯಾಗದೆ ವಯಸ್ಸು, ರೋಗ ಲಕ್ಷಣಗಳು, ಋತುಚಕ್ರ ಬಂಧ ಸ್ಥಿತಿಗತಿ, ಸಹ ಅನಾರೋಗ್ಯಗಳು ಮತ್ತು ರೋಗಿಯ ಹವ್ಯಾಸಗಳನ್ನು ಆಧರಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ಚಿಕಿತ್ಸೆ ನೀಡಿ ಉಪಶಮನಗೊಳಿಸಬಹುದಾದ ಅನಾರೋಗ್ಯ ಇದಾಗಿದ್ದು, ತಡಮಾಡದೆ, ಅಂಜದೆ, ಮುಜುಗರಕ್ಕೆ ಒಳಗಾಗದೆ ವೈದ್ಯರನ್ನು ಭೇಟಿಯಾಗಬೇಕು.
ಮೂತ್ರಪಿಂಡವು ಉತ್ಪಾದಿಸುವ ಮೂತ್ರ ಹರಿದುಬರುತ್ತಿದ್ದಂತೆ ಅದನ್ನು ಹಿಡಿದಿರಿಸಿಕೊಳ್ಳಲು ಮೂತ್ರಕೋಶವು ವಿಸ್ತಾರಗೊಳ್ಳುತ್ತದೆ. ನಮ್ಮ ಮೂತ್ರಕೋಶದಲ್ಲಿ ಸುಮಾರು 100ರಿಂದ 150 ಮಿ.ಲೀ.ಯಷ್ಟು ಮೂತ್ರವು ತುಂಬಿಕೊಂಡಾಗ ಮೂತ್ರ ವಿಸರ್ಜಿಸಬೇಕು ಎನ್ನುವ ಬಯಕೆ ಮೊದಲ ಬಾರಿಗೆ ಉಂಟಾಗುತ್ತದೆ. ಸಾಮಾನ್ಯವಾಗಿ ಇದು ಬಲವಾಗಿರುವುದಿಲ್ಲ ಮತ್ತು ಅದನ್ನು ನಿಯಂತ್ರಿಸಬಹುದು, ಮರೆತುಬಿಡಬಹುದು. ಮೂತ್ರಪಿಂಡಗಳಿಂದ ಹೆಚ್ಚು ಹೆಚ್ಚು ಮೂತ್ರವು ಹರಿದುಬಂದು ತುಂಬಿಕೊಳ್ಳುತ್ತಿದ್ದಂತೆ ಮೂತ್ರಕೋಶವು ಇನ್ನಷ್ಟು ಹಿಗ್ಗಿಕೊಳ್ಳುತ್ತದೆ. ಸುಮಾರು 400ರಿಂದ 600 ಮಿ.ಲೀ.ಗಳಷ್ಟು ಮೂತ್ರ ತುಂಬಿದ ಬಳಿಕ ಇನ್ನಷ್ಟು ಮೂತ್ರವನ್ನು ಹಿಡಿದಿರಿಸಿಕೊಳ್ಳುವುದು ಮೂತ್ರಕೋಶಕ್ಕೆ ಸಾಧ್ಯವಾಗುವುದಿಲ್ಲ ಮತ್ತು ಆಗ ಮೂತ್ರವನ್ನು ವಿಸರ್ಜಿಸಬೇಕು ಎಂಬ ಬಲವಾದ ಬಯಕೆ ನಮ್ಮಲ್ಲಿ ಉಂಟಾಗುತ್ತದೆ. ಆದರೆ ಸಹಜವಾಗಿ ಹೀಗೆ ನಡೆಯಬೇಕಾದ ಈ ಪ್ರಕ್ರಿಯೆಯು ಬದಲಾವಣೆಗೊಂಡಾಗ ಮತ್ತು ಮೂತ್ರಕೋಶದ ಸ್ನಾಯುಗಳು ಹೊತ್ತಲ್ಲದ ಹೊತ್ತಿನಲ್ಲಿ ಸಂಕುಚನಗೊಳ್ಳುವುದನ್ನು ಆರಂಭಿಸಿದಾಗ – ಅಂದರೆ, ಸ್ವಲ್ಪವೇ ಮೂತ್ರ ಶೇಖರವಾಗಿದ್ದಾಗ ಅಥವಾ ಮೂತ್ರ ವಿಸರ್ಜಿಸುವುದು ಸಾಮಾಜಿಕವಾಗಿ ಒಪ್ಪಿತವಲ್ಲದ ಜಾಗ ಯಾ ಸನ್ನಿವೇಶದಲ್ಲಿದ್ದಾಗ – ಅದನ್ನು ಅನಿಯಂತ್ರಿತ ಮೂತ್ರ ವಿಸರ್ಜನೆ/ ಅರ್ಜ್ ಇನ್‌ಕನ್ಸಿಸ್ಟೆನ್ಸ್/ ಅತಿ ಕ್ರಿಯಾಶೀಲ ಮೂತ್ರಕೋಶ ಎನ್ನಲಾಗುತ್ತದೆ.
ಡಾ| ದೀಕ್ಷಾ ಪಾಂಡೆ
ಡಾ| ಸ್ವಾತಿ ಕಾಂಚನ್
ಡಾ| ರಿಚಾ ಚೋಕ್ಸಿ
ಡಾ| ಶ್ರೀಪಾದ್ ಹೆಬ್ಟಾರ್
ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗ, ಕೆಎಂಸಿ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ
Mother: ತಾಯಂದಿರ ಮಾನಸಿಕ ಆರೋಗ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.