ಸರಳ ವಿವಾಹಕ್ಕೆ ಸೈ: ಆಡಂಬರದ ಪ್ರದರ್ಶನಕ್ಕೆ ಬಿತ್ತು ಕಡಿವಾಣ
ಗೂಗಲ್ ಮೀಟ್‌ನಲ್ಲಿ ನಡೆದ ʼಫೈರ್‌ವುಡ್ʼ ಸಂವಾದದಲ್ಲಿ ರಾಜ್ಯದ ವಿದ್ಯಾರ್ಥಿಗಳು ಹೇಳಿರುವುದೇನು?
Team Udayavani, Jul 26, 2020, 4:40 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕೊರೊನಾ ಲಾಕ್‌ಡೌನ್ ಕಾರಣದಿಂದ ಸರಕಾರ ಸಾರ್ವಜನಿಕ ಕಾರ್ಯಕ್ರಮಗಳಿಗೆ ತಡೆ ನೀಡಿದೆ.
ತುಂಬ ಜನರು ಗುಂಪುಗೂಡದೆ ಸಮಾರಂಭ ಮಾಡುವಂತೆ ಸೂಚಿಸಿದೆ. ಇದರ ನೇರ ಪರಿಣಾಮ ಬೀರಿರುವುದು ಮದುವೆಯ ಮೇಲೆ. ಈ ಹಿಂದೆಲ್ಲ ಅದ್ದೂರಿಯಾಗಿ ನೆರವೇರುತ್ತಿದ್ದ ಮದುವೆ ಸರಳವಾಗಿ ಆಚರಿಸಲಾಗುತ್ತಿದೆ.
50ಕ್ಕಿಂತ ಅಧಿಕ ಜನ ಸೇರಿರಬಾರದು ಎನ್ನುವ ಷರತ್ತಿನ ಹಿನ್ನೆಲೆಯಲ್ಲಿ ಬಡವ-ಬಲ್ಲಿದ ಎನ್ನದೆ ಎಲ್ಲರೂ ಸರಳ ಮದುವೆಯ ಮೊರೆ ಹೋಗಿದ್ದಾರೆ.
ಈ ಕುರಿತು ವಿವಿಧ ರಾಜ್ಯಗಳ ವಿವಿಧ ವಿಶ್ವವಿದ್ಯಾನಿಲಯ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳು ಉದಯವಾಣಿ ಫ್ಯೂಷನ್ ಜತೆಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಈ ಸಂವಾದವನ್ನು ಗೂಗಲ್ ಮೀಟ್‌ನಲ್ಲಿ ನಡೆಸಲಾಗಿತ್ತು.
ವೈಭವದ ಪ್ರದರ್ಶನಕ್ಕಂತೂ ತೆರೆ
ಅದ್ದೂರಿ, ಸರಳ ಮದುವೆ ಎನ್ನುವುದು ಅವರವರ ಇಚ್ಛೆಗೆ ಬಿಟ್ಟದ್ದು. ಆದರೆ ಈಗ ಅನಿವಾರ್ಯವಾಗಿ ಎಲ್ಲರೂ ಸರಳವಾಗಿ ಮದುವೆಯನ್ನು ಆಚರಿಸುವಂತಾಗಿದೆ. ಇದರಿಂದ ವೈಭವದ ಪ್ರದರ್ಶನಕ್ಕಂತೂ ತೆರೆ ಬಿದ್ದಿದೆ. ಇನ್ನು ಮದುವೆಗೆ ಕೆಲವೇ ಅತಿಥಿಗಳಿಗೆ ಅವಕಾಶವಿರುವುದರಿಂದ ತೀರಾ ಆತ್ಮೀಯರಿಗೆ ಮಾತ್ರ ಆಹ್ವಾನವಿರುವ ಕಾರಣ ನಮ್ಮವರು ಯಾರು ಎನ್ನುವುದು ಗೊತ್ತಾಗುತ್ತದೆ. ಒಂದರ್ಥದಲ್ಲಿ ನಿಜಜೀವನವನ್ನು ತೆರೆದಿಟ್ಟಿದೆ. ಕಡಿಮೆ ಜನ ಇರುವ ಕಾರಣ ಕಾರ್ಯಕ್ರಮದ ಉಸ್ತುವಾರಿಯನ್ನು ಕಾಂಟ್ರ್ಯಾಕ್ಟ್ ಕೊಡದೆ ಸಂಬಂಧಿಕರೇ ನಿರ್ವಹಿಸುವುದರಿಂದ ಸಂಬಂಧವೂ ಗಟ್ಟಿಯಾಗುತ್ತದೆ. ಲಾಕ್‌ಡೌನ್ ಬಳಿಕವೂ ಸರಳ ಮದುವೆಯೇ ಮುಂದುವರಿಯುತ್ತದೆ ಎನ್ನಲು ಸಾಧ್ಯವಿಲ್ಲ. ಅದ್ದೂರಿ ಮದುವೆಯ ಟ್ರೆಂಡ್ ಮರಳಲೂಬಹುದು.
ಸುರಭಿ ಶರ್ಮ, ಮಾನಸಗಂಗೋತ್ರಿ, ಮೈಸೂರು ವಿಶ್ವ ವಿದ್ಯಾನಿಲಯ
ಸಂಪ್ರದಾಯದಲ್ಲಿ ಬದಲಾವಣೆಗಳಾಗಿವೆ
ಹೆಣ್ಣು-ಗಂಡಿನ ನಡುವಿನ ಸಂಬಂಧ ಮದುವೆಯ ಮೂಲಕ ಅಧಿಕೃತವಾಗುತ್ತದೆ. ಮದುವೆ ಎನ್ನುವುದು ಕೆಲವರಿಗೆ ತಮ್ಮ ಹೆಚ್ಚುಗಾರಿಕೆ ತೋರಿಸುವ ಅವಕಾಶವಾಗಿತ್ತು. ವೈಭವದ ಕಲ್ಯಾಣದ ಮೂಲಕ ಗಮನಸೆಳೆಯುತ್ತಿದ್ದರು. ಇನ್ನು ಕೆಲವರಿಗೆ ಹೀಗೆ ಮದುವೆಯಾಗಬೇಕೆಂಬ ಕನಸು ಇರುತ್ತದೆ. ಆದರೆ ಅದಕ್ಕೆಲ್ಲ ಈಗ ವಿರಾಮ ಬಿದ್ದಿದೆ. ಗಮನಿಸಬೇಕಾದ ಅಂಶ ಎಂದರೆ ಈಗ ಸಂಪ್ರದಾಯದಲ್ಲಿ ಕೆಲವೊಂದು ಬದಲಾವಣೆಗಳಾಗಿವೆ. ಹಿಂದೆ ಕಾಣುತ್ತಿದ್ದ ಅನೇಕ ಆಚಾರ, ಸಂಪ್ರದಾಯ, ಪದ್ಧತಿಗಳೆಲ್ಲ ಕಡಿಮೆಯಾಗಿವೆ. ಇನ್ನು ಮದುವೆ ಎಂದರೆ ಚಿನ್ನದ ಖರೀದಿ ಮುಖ್ಯವಾಗಿರುತ್ತದೆ. ಅದಕ್ಕೇನೂ ಕೊರತೆಯಾಗಿಲ್ಲ. ಅಲಂಕಾರ, ಮದುವೆಯ ಇತರ ಖರ್ಚಿಗೆಂದು ಎತ್ತಿಟ್ಟ ಹಣವನ್ನು ಚಿನ್ನ ಖರೀದಿಗೆ ಉಪಯೋಗಿಸುತ್ತಿದ್ದಾರೆ.
ಬಸವರಾಜ ಸಿದ್ದಣ್ಣವರ್, ಧಾರವಾಡ ವಿಶ್ವವಿದ್ಯಾನಿಲಯ
ನಿರುದ್ಯೋಗದ ಭೀತಿ ಎದುರಾಗಿದೆ
ನಮ್ಮ ದೇಶ ವೈವಿಧ್ಯ ಆಚರಣೆ, ಸಂಪ್ರದಾಯಕ್ಕೆ ಹೆಸರುವಾಸಿ. ಇದೇ ಕಾರಣಕ್ಕೆ ವಿದೇಶೀಯರೂ ಭಾರತದತ್ತ ಆಕರ್ಷಿತರಾಗುತ್ತಾರೆ. ನಮ್ಮಲ್ಲಿ ಯಾವುದೇ ಕಾರ್ಯಕ್ರಮವಾದರೂ ಬಂಧು-ಬಳಗ, ನೆರೆಹೊರೆಯವರನ್ನು ಸೇರಿಸಿ ಮಾಡಬೇಕು ಎನ್ನುವ ಮನಸ್ಥಿತಿ ಇದೆ. ಈ ಕಾರಣಕ್ಕೆ ವೈಭವದ ಮದುವೆ ಆಯೋಜಿಸಲಾಗುತ್ತದೆ. ಆದರೆ ಬದಲಾದ ಸನ್ನಿವೇಶದಲ್ಲಿ ಅದಕ್ಕೆಲ್ಲ ಅವಕಾಶವಿಲ್ಲ. ಇದರಿಂದ ಹೆಚ್ಚಿನ ಹೊಡೆತ ಬಿದ್ದಿರುವುದು ಮದುವೆಗೆ ಸಂಬಂಧಿಸಿ ಉದ್ಯಮ ನಡೆಸುವವರ ಮೇಲೆ. ಅಡುಗೆ ಮಾಡುವವರು, ಪುರೋಹಿತರು, ಅಲಂಕಾರದ ವೃತ್ತಿಯವರು ಮುಂತಾದವರಿಗೆ ನಿರುದ್ಯೋಗದ ಭೀತಿ ಎದುರಾಗಿದ್ದು, ಪರ್ಯಾಯ ಉದ್ಯೋಗ ಹುಡುಕುವುದು ಅನಿವಾರ್ಯವಾಗಿದೆ. ಇನ್ನೊಂದು ಮುಖ್ಯ ವಿಚಾರವೆಂದರೆ ಹಣ ಹಂಚಿ ಹೋಗುವುದು ನಿಂತಿದೆ.
ಅಭಿಷೇಕ್ ಅಡೂರು, ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ
ಮಧ್ಯಮ ಮತ್ತು ಕೆಳ ವರ್ಗಕ್ಕೆ ಅನುಕೂಲ ಆಗಿದೆ
ಹಿಂದೆಲ್ಲ ಉದ್ಯಮಿಗಳು, ಸೆಲೆಬ್ರಿಟಿಗಳು ವೈಭವದ ವಿವಾಹವಾಗುತ್ತಿದ್ದರು. ಆಗೆಲ್ಲ ಸರಳ ಮದುವೆ ಜಾರಿಗೆ ಬರಬೇಕು ಎನ್ನುವ ಆಗ್ರಹ ಕೇಳಿಬರುತ್ತಿತ್ತು. ಈಗಿನ ಸರಳ ವಿವಾಹದಿಂದ ಮಧ್ಯಮ ಮತ್ತು ಕೆಳ ವರ್ಗಕ್ಕೆ ಅನುಕೂಲವೇ ಆಗಿದೆ. ಆದರೆ ಋಣಾತ್ಮಕ ಪರಿಣಾಮ ಎಂದರೆ ಮೊದಲೇ ಹೇಳಿದ ಹಾಗೆ ವಿವಾಹ ಸಂಬಂಧಿಸಿದ ಉದ್ಯಮ ನಷ್ಟದಲ್ಲಿದೆ. ಚಿನ್ನ ಖರೀದಿಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರುತ್ತಿಲ್ಲ. ಬಟ್ಟೆಯ ವಿಚಾರಕ್ಕೆ ಬರುವುದಾದರೆ ಹೊಸ ಹೊಸ ಡಿಸೈನ್ ಬರುತ್ತಿಲ್ಲ. ಆಡಂಬರಕ್ಕಾಗಿ ತೆಗೆದಿರಿಸಿದ ಹಣವನ್ನು ಸಮಾಜಮುಖೀ ಕಾರ್ಯಗಳಿಗೆ ವಿನಿಯೋಗಿಸಿ ಮಧುರ ಕ್ಷಣಗಳನ್ನು ಸ್ಮರಣೀಯಗೊಳಿಸಬಹುದು.
ಕಾವ್ಯಾ ಎನ್. ತುಮಕೂರು ವಿಶ್ವವಿದ್ಯಾನಿಲಯ
ವರದಕ್ಷಿಣೆಯ ಪ್ರಸ್ತಾವವೂ ಕಡಿಮೆಯಾಗಿದೆ
ಜೀವನದ ಅಪರೂಪದ ಕ್ಷಣಗಳಲ್ಲಿ ಒಂದಾಗಿರುವ ವಿವಾಹ ವೈಭವದಿಂದ ಕೂಡಿರಬೇಕು ಎಂದು ಅನೇಕರು ಬಯಸುತ್ತಾರೆ. ಈಗ ಅಂತಹ ಅವಕಾಶವಿಲ್ಲ. ವಿವಾಹಕ್ಕೆ ಸಂಬಂಧಿಸಿದ ಇತರ ಆಚರಣೆಗಳಿಗೂ ನಿರ್ಬಂಧವಿರುವುದರಿಂದ ಪಾರ್ಟಿ ಹೆಸರಿನಲ್ಲಿ ನಡೆಸುವ ದುಂದುವೆಚ್ಚಗಳಿಗೂ ಕಡಿವಾಣ ಬಿದ್ದಿದೆ. ಸರಳವಾಗಿ ವಿವಾಹ ನಡೆಯುವುದರಿಂದ ಬಾಂಧವ್ಯವೂ ವೃದ್ಧಿಯಾಗುತ್ತದೆ. ವೈಭವದ ವಿವಾಹದಲ್ಲಿ ಬಹಳಷ್ಟು ಆಹಾರ ಹಾಳಾಗುತ್ತಿದ್ದವು. ಅದಕ್ಕೆಲ್ಲ ಬ್ರೇಕ್ ಬಿದ್ದಿದೆ. ಇನ್ನು ವರದಕ್ಷಿಣೆಯ ಪ್ರಸ್ತಾವವೂ ಕಡಿಮೆಯಾಗಿದೆ. ಬಡವರು ಶ್ರೀಮಂತರ ಅದ್ದೂರಿ ವಿವಾಹ ನೋಡಿ ಕೊರಗುವುದು ಕಡಿಮೆಯಾಗಿದೆ. ಹಣ ಇಂದು ಬಂದು ನಾಳೆ ಹೋಗುತ್ತದೆ ಎನ್ನುವ ದೊಡ್ಡ ಪಾಠವನ್ನು ಕೊರೊನಾ ಕಲಿಸಿದೆ.
ಅರ್ಪಿತಾ ಕೆ. ಕುಂದರ್, ಎಂಸಿಜೆ ವಿದ್ಯಾರ್ಥಿನಿ, ವಿವೇಕಾನಂದ ಕಾಲೇಜು, ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.