Valimiki Nigama Scam: ನಂಗೇನೂ ಗೊತ್ತಿಲ್ಲ: ನಾಗೇಂದ್ರ ಬಾಯಿಪಾಠಕ್ಕೆ ಇ.ಡಿ. ಸುಸ್ತು!
ಇನ್ನೂ ಹಲವು ಪ್ರಭಾವಿ ರಾಜಕಾರಣಿಗಳ ಕೈವಾಡವಿರುವ ಶಂಕೆ ವ್ಯಕ್ತ
Team Udayavani, Jul 15, 2024, 7:32 AM IST
ಬೆಂಗಳೂರು: ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ (Ex Minister Nagendra) ಅವರಿಗೆ ಜಾರಿ ನಿರ್ದೇಶನಾಲಯದ (ಇ.ಡಿ.) ತನಿಖೆ ಮುಂದುವರಿದಿದೆ. ಪ್ರಕರಣದ ಬಗ್ಗೆ ನನಗೆ ಗೊತ್ತಿಲ್ಲ, ನಾನು ಯಾವುದೇ ಸಭೆ ನಡೆಸಿಲ್ಲ. ವಕೀಲರ ಬಳಿ ಚರ್ಚಿಸಬೇಕು, ನನಗೆ ಮಾಹಿತಿಯೇ ಇಲ್ಲ…. ಎನ್ನುವ ಮಾಜಿ ಸಚಿವರಿಂದ ಸತ್ಯ ಬಾಯ್ಬಿಡಿಸಲು ಇಡಿ ಅಧಿಕಾರಿಗಳು ಹೆಣಗಾಡುತ್ತಿದ್ದಾರೆ.
ಅಕ್ರಮ ಹಣ ವರ್ಗಾವಣೆಯ ದಾಖಲೆಗಳನ್ನು ಮುಂದಿಟ್ಟು ರವಿವಾರ ಇಡೀ ದಿನ ನಾಗೇಂದ್ರ ಅವರಿಂದ ಅಧಿಕಾರಿಗಳು ಹೇಳಿಕೆ ಪಡೆದಿದ್ದಾರೆ. ದುಡ್ಡು ವರ್ಗಾವಣೆ ಮಾಡಲು ಒತ್ತಡ ಹಾಕಿದ್ದೀರಲ್ಲವೇ ಎಂದು ಕೇಳಿದಾಗ, ನಾನು ಯಾರಿಗೂ ಒತ್ತಡ ಹಾಕಿಲ್ಲ ಎಂದಿದ್ದಾರೆ. ನಿಮ್ಮ ಆಪ್ತರಾದ ನೆಕ್ಕುಂಟಿ ನಾಗರಾಜ್, ನಾಗೇಶ್ವರ್ ರಾವ್, ನಿಗಮದ ಎಂಡಿ ಪದ್ಮನಾಭ್ ಜತೆ ಐಷಾರಾಮಿ ಹೊಟೇಲ್‌ನಲ್ಲಿ ಸಭೆ ನಡೆಸಿರುವುದು ಏಕೆ ಎಂಬ ಪ್ರಶ್ನೆಗೆ, ಊಟಕ್ಕೆ ಸೇರಿದ್ದೆವು ಎಂದಿದ್ದಾರೆ.
ಗೊತ್ತಿಲ್ಲವೆಂದ ನಾಗೇಂದ್ರ; ಬಾಯ್ಬಿಟ್ಟ ಹರೀಶ್ !
ಇನ್ನು ನಿಗಮದ ಎಂ.ಡಿ. ಪದ್ಮನಾಭ ವಿಚಾರಣೆ ವೇಳೆ ನಾಗೇಂದ್ರ ಪಾತ್ರವಿರುವ ಕುರಿತು ಕೊಟ್ಟಿರುವ ಹೇಳಿಕೆ ಬಗ್ಗೆ ವಿಚಾರಿಸಿದಾಗ, ನನಗೆ ಗೊತ್ತಿಲ್ಲ ಸರ್, ಅವರನ್ನೇ ಕೇಳಿ ಎಂದು ನಾಗೇಂದ್ರ ಹೇಳಿದ್ದಾರೆನ್ನಲಾಗಿದೆ. ಈ ಮಧ್ಯೆ ನಾಗೇಂದ್ರ ಅವರ ಆಪ್ತ ಸಹಾಯಕ ಹರೀಶ್ ಪ್ರಕರಣದ ಇಂಚಿಂಚೂ ಮಾಹಿತಿ ಒದಗಿಸಿದ್ದಾನೆ ಎನ್ನಲಾಗಿದೆ. ನಾಗೇಂದ್ರ ಹಾಗೂ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳಲ್ಲಿನ ವಹಿವಾಟಿನ ವಿವರಗಳನ್ನು ಅಧಿಕಾರಿಗಳು ಪಡೆದಿದ್ದಾರೆ.
ನಿಗಮದ 20 ಕೋಟಿ ರೂ. ಚುನಾವಣೆಗೆ?
ನಿಗಮದ 20.19 ಕೋಟಿ ರೂ. ಹಣವನ್ನು ತಾವು ಉಸ್ತುವಾರಿ ಹೊತ್ತಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾಗೇಂದ್ರ ಬಳಕೆ ಮಾಡಿಕೊಂಡಿದ್ದಾರೆ ಎಂದು ನ್ಯಾಯಾಲಯಕ್ಕೆ ಇ.ಡಿ. ಮಾಹಿತಿ ಕೊಟ್ಟಿದೆ. ಇದರ ಹಿಂದೆ ಇನ್ನೂ ಹಲವು ಪ್ರಭಾವಿ ರಾಜಕಾರಣಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಇ.ಡಿ. ಅಧಿಕಾರಿಗಳು ಪ್ರಭಾವಿ ರಾಜಕಾರಣಿಗಳ ವ್ಯವಹಾರದ ಮೇಲೂ ನಿಗಾ ಇರಿಸಿದೆ.
ರಾಜ್ಯ ಖಜಾನೆ-2ರಿಂದ ಕಳೆದ ಮಾ. 4ರಂದು ಹಾಗೂ ಮಾ. 21ರಂದು 44 ಕೋಟಿ ರೂ., ಮಾ. 22ರಂದು 33 ಕೋಟಿ ರೂ. ಹಾಗೂ ಮೇ 21ರಂದು 50 ಕೋಟಿ ರೂ. ಸೇರಿದಂತೆ ಒಟ್ಟು 187.33 ಕೋಟಿ ರೂ. ವಾಲ್ಮೀಕಿ ನಿಗಮದ ಬ್ಯಾಂಕ್ ಖಾತೆಗಳಿಗೆ ಜಮೆಯಾಗಿದೆ. ಇದರಲ್ಲಿ 94.73 ಕೋಟಿ ರೂ. ದುಡ್ಡು ಎಂ.ಜಿ. ರಸ್ತೆಯ ಯೂನಿಯನ್ ಬ್ಯಾಂಕ್ ಖಾತೆಯಿಂದ ಹೈದರಾಬಾದ್‌ನ ಫಸ್ಟ್‌ಫೈನಾನ್ಸ್ ಕೋ-ಆಪರೇಟಿವ್ ಬ್ಯಾಂಕ್‌ನ 18 ನಕಲಿ ಖಾತೆಗಳಿಗೆ ರವಾನೆಯಾಗಿದೆ. ಅಕ್ರಮ ಬೆಳಕಿಗೆ ಬರುತ್ತಿದ್ದಂತೆ 5 ಕೋಟಿ ರೂ. ನಿಗಮದ ಖಾತೆಗೆ ವಾಪಸಾಗಿದೆ.
ಇನ್ನುಳಿದ 89.73 ಕೋಟಿ ರೂ. ಅನ್ನು ಹೈದರಾಬಾದ್ ಗ್ಯಾಂಗ್ ದೋಚಿದೆ. ಹೈದರಾಬಾದ್ ಫಸ್ಟ್ ಬ್ಯಾಂಕ್‌ನಲ್ಲಿ ಕಳೆದ ಜನವರಿ ಮತ್ತು ಫೆಬ್ರವರಿಯಲ್ಲಿ 18 ನಕಲಿ ಖಾತೆಗಳನ್ನು ತೆರೆಯುವ ಮೂಲಕ ಈ ಖಾತೆಗಳಿಗೆ ಮಾರ್ಚ್, ಎಪ್ರಿಲ್, ಮೇಯಲ್ಲಿ 89 ಕೋಟಿ ರೂ. ವರ್ಗಾಯಿಸಲಾಗಿದೆ. ಮೇ 7ರಂದು ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆದಿತ್ತು. ಚುನಾವಣೆಗೂ ಮುನ್ನ ನಿಗಮದ ದುಡ್ಡನ್ನು ಬಂಧಿತರು ಪಡೆದುಕೊಂಡಿದ್ದರು. 89 ಕೋಟಿ ರೂ. ಪೈಕಿ 20.19 ಕೋಟಿ ರೂ. ಹಣವನ್ನು ನಾಗೇಂದ್ರ ಚುನಾವಣೆಗೆ ಬಳಕೆ ಮಾಡಿದ್ದಾರೆ ಎಂದು ಇ.ಡಿ. ಆರೋಪ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.