ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ : ಕರ್ನಾಟಕಕ್ಕೆ ಆರಂಭದಲ್ಲೇ ಸೋಲು
Team Udayavani, Feb 20, 2021, 11:58 PM IST
ಬೆಂಗಳೂರು: ಉತ್ತರಪ್ರದೇಶ ಸವಾಲಿಗೆ ಉತ್ತರ ನೀಡುವಲ್ಲಿ ವಿಫಲವಾದ ಹಾಲಿ ಚಾಂಪಿಯನ್ ಕರ್ನಾಟಕ, ವಿಜಯ್ ಹಜಾರೆ ಟ್ರೋಫಿ ಏಕದಿನ ಕೂಟದ ಮೊದಲ ಪಂದ್ಯದಲ್ಲೇ ಮುಗ್ಗರಿಸಿದೆ. ಕೊನೆಯಲ್ಲಿ ಮಳೆ ಹೊಡೆತಕ್ಕೆ ಸಿಲುಕಿದ ಪಂದ್ಯವನ್ನು ಆತಿಥೇಯ ತಂಡ ವಿಜೆಡಿ ನಿಯಮದಂತೆ 9 ರನ್ನುಗಳಿಂದ ಕಳೆದುಕೊಂಡಿದೆ.
“ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ 8 ವಿಕೆಟಿಗೆ 246 ರನ್ ಗಳಿಸಿತು. ಯುಪಿ 45.2 ಓವರ್‌ಗಳಲ್ಲಿ 4ಕ್ಕೆ 215 ರನ್ ಮಾಡಿದ ವೇಳೆ ಸುರಿದ ಪರಿಣಾಮ ಪಂದ್ಯ ಇಲ್ಲಿಗೇ ಕೊನೆಗೊಂಡಿತು. ಆಗ ವಿಜೆಡಿ ನಿಯಮದಂತೆ ಭುವನೇಶ್ವರ್ ಕುಮಾರ್ ಬಳಗ 9 ರನ್ ಮುನ್ನಡೆಯಲ್ಲಿತ್ತು.
ಕರ್ನಾಟಕ ಪರ ದೇವದತ್ತ ಪಡಿಕ್ಕಲ್ 52 ರನ್ (84 ಎಸೆತ, 7 ಬೌಂಡರಿ), ಅನಿರುದ್ಧ ಜೋಶಿ ಆಕ್ರಮಣಕಾರಿಯಾಗಿ ಆಡಿ ಸರ್ವಾಧಿಕ 68 ರನ್ (48 ಎಸೆತ, 4 ಬೌಂಡರಿ, 4 ಸಿಕ್ಸರ್) ಹೊಡೆದರು. ಜೋಶಿ ಸಾಹಸದಿಂದ ಕೊನೆಯ 6 ಓವರ್‌ಗಳಲ್ಲಿ 61 ರನ್ ಹರಿದು ಬಂತು. ಮಿಥುನ್ 6 ಎಸೆತಗಳಿಂದ ಅಜೇಯ 17 ರನ್ ಮಾಡಿದರು (1 ಬೌಂಡರಿ, 2 ಸಿಕ್ಸರ್).
ಶತಕದ ಜತೆಯಾಟ
ಆರಂಭಿಕರಾದ ಅಭಿಷೇಕ್ ಗೋಸ್ವಾಮಿ (54)-ಕರಣ್ ಶರ್ಮ (40) ಅವರ 102 ರನ್ ಜತೆಯಾಟದಿಂದ ಉತ್ತರ ಪ್ರದೇಶ ಹಿಡಿತ ಸಾಧಿಸಿತು. 150 ರನ್ನಿಗೆ 4 ವಿಕೆಟ್ ಬಿದ್ದ ಬಳಿಕ ರಿಂಕು ಸಿಂಗ್ ಬಿರುಸಿನ ಆಟಕ್ಕಿಳಿದು ಅಜೇಯ 62 ರನ್ ಬಾರಿಸಿದರು (61 ಎಸೆತ, 7 ಬೌಂಡರಿ, 1 ಸಿಕ್ಸರ್). ಹೀಗಾಗಿ ಯುಪಿಗೆ ರನ್‌ರೇಟ್ ಹೆಚ್ಚಿಸಲು ಸಾಧ್ಯವಾಯಿತು.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ-8 ವಿಕೆಟಿಗೆ 246 (ಜೋಶಿ 68, ಪಡಿಕ್ಕಲ್ 52, ಸಿದ್ಧಾರ್ಥ್ 38, ನಾಯರ್ 33, ಶಿವಂ ಶರ್ಮ 40ಕ್ಕೆ 3, ಮೊಹ್ಸಿನ್ ಖಾನ್ 61ಕ್ಕೆ 2). ಉತ್ತರಪ್ರದೇಶ-45.2 ಓವರ್‌ಗಳಲ್ಲಿ 4 ವಿಕೆಟಿಗೆ 215 (ರಿಂಕು ಸಿಂಗ್ ಔಟಾಗದೆ 62, ಗೋಸ್ವಾಮಿ 54, ಕರಣ್ 40, ನಾಯರ್ 20ಕ್ಕೆ 1, ಸುಚಿತ್ 40ಕ್ಕೆ 1).
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.