Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
ಜೆಪಿಸಿ ಅಧ್ಯಕ್ಷರ ಭೇಟಿ ರಾಜಕೀಯ ಪ್ರೇರಿತ: ಸಿಎಂ ಸಿದ್ದರಾಮಯ್ಯ, ದೇಶದ ಯಾವುದೇ ಭಾಗಕ್ಕೂ ನಾನು ಹೋಗಬಹುದು: ಪಾಲ್
Team Udayavani, Nov 8, 2024, 7:40 AM IST
ಹುಬ್ಬಳ್ಳಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೈತರ ಜಮೀನು, ಮನೆ, ಶಾಲೆಗಳಿಗೆ “ವಕ್ಫ್ ನೋಟಿಸ್’ ವಿವಾದ ತಾರಕಕ್ಕೇರಿರುವ ನಡುವೆಯೇ ವಕ್ಫ್ ತಿದ್ದುಪಡಿ ಮಸೂದೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷ ಜಗದಾಂಬಿಕಾ ಪಾಲ್ ಗುರುವಾರ ರಾಜ್ಯದ ಹುಬ್ಬಳ್ಳಿ, ವಿಜಯಪುರ ಜಿಲ್ಲೆಗಳಿಗೆ ಭೇಟಿ ನೀಡಿದ್ದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಭೇಟಿ ರಾಜಕೀಯ ಪ್ರೇರಿತ ಎಂದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ವಕ್ಫ್ ಸಚಿವ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಪ್ರತಿಕ್ರಿಯಿಸಿ, ನನ್ನ ಪ್ರವಾಸದ ಬಗ್ಗೆ ಕಾನೂನಾತ್ಮಕ ಪ್ರಶ್ನೆಯನ್ನು ಕರ್ನಾಟಕದ ಸಚಿವರು ಎತ್ತಿದ್ದಾರೆ. ನಾನು ಒಬ್ಬ ಸಂಸದನಾಗಿಯೂ ದೇಶದ ಯಾವುದೇ ಭಾಗಕ್ಕೂ ಹೋಗಬಹುದು ಎಂದು ತಿರುಗೇಟು ನೀಡಿದ್ದಾರೆ.
ಜೆಪಿಸಿ ನಾಟಕದ ಕಂಪೆನಿ: ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್ ಸುದ್ದಿಗಾರರ ಜತೆ ಮಾತನಾಡಿ, ಜೆಪಿಸಿ ಎಂಬುದೊಂದು ನಾಟಕದ ಕಂಪೆನಿ. ಸಮಿತಿಗೊಂದು ಲೆಕ್ಕವಿದೆ. ಸರಕಾರ ಮತ್ತು ಅಧಿಕಾರಿಗಳಿಗೆ ಯಾವ ಮಾಹಿತಿ ನೀಡದೆ ಅದರ ಅಧ್ಯಕ್ಷರು ಪಕ್ಷದ ಕೆಲಸಕ್ಕೆ ಬಂದಿದ್ದಾರೆ ಎಂದು ಕಿಡಿಕಾರಿದ್ದಾರೆ. ಜೆಪಿಸಿಗೆ ರಾಜ್ಯದ ವಿಚಾರಕ್ಕೆ ಭೇಟಿ ನೀಡುವ ಅಧಿಕಾರವಿಲ್ಲ. ಅದು ರಾಜ್ಯಕ್ಕೆ ಭೇಟಿ ನೀಡುವುದಾದರೆ ಸರಕಾರ ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಇಡೀ ಸಮಿತಿಯ ತಂಡ ಭೇಟಿ ಕೊಡಬೇಕು. ಕೇವಲ ಅಧ್ಯಕ್ಷರು ಓರ್ವ ಸಂಸದನನ್ನು ಕರೆದುಕೊಂಡು ಬಂದಿದ್ದಾರೆ ಎಂದರೆ ಪಕ್ಷದ ಕೆಲಸಕ್ಕಾಗಿ ಬಂದಿದ್ದಾರೆ.
ಜೆಪಿಸಿಯಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸದಸ್ಯರಾಗಿದ್ದಾರೆಯೇ? ಇದರಲ್ಲಿ ಸಚಿವರು ಇರಲು ಆಗುವುದಿಲ್ಲ. ಜನರಿಂದ ಅರ್ಜಿ ಪಡೆದಂತೆ ಮಾಡಿ ರಾಜಕೀಯ ಪ್ರಚಾರ ಮಾಡಲು ಆಗಮಿಸಿದ್ದಾರೆ ಎಂದರು. ಬುಧವಾರವೇ ರಾಜ್ಯದ ವಕ್ಫ್ ಸಚಿವ ಜಮೀರ್ ಅಹಮದ್, ಜೆಪಿಸಿ ಅಧ್ಯಕ್ಷ ರಾಜ್ಯ ಭೇಟಿ ಅನಧಿಕೃತ ಎಂದು ಗುಡುಗಿದ್ದರು.
ಯಾರೂ ಬೇಕಾದರೂ ಮನವಿ ಸಲ್ಲಿಸಲು ಅವಕಾಶ: ಪಾಲ್
ವಿಜಯಪುರ: ನನ್ನ ಪ್ರವಾಸದ ಬಗ್ಗೆ ಕಾನೂನಾತ್ಮಕ ಪ್ರಶ್ನೆಯನ್ನು ಕರ್ನಾಟಕದ ಸಚಿವರು ಎತ್ತಿದ್ದಾರೆ. ನಾನು ಒಬ್ಬ ಸಂಸದನಾಗಿಯೂ ದೇಶದ ಯಾವುದೇ ಭಾಗಕ್ಕೂ ಹೋಗಬಹುದು. ಅಲ್ಲದೆ ಮಸೂದೆಯ ಕುರಿತಂತೆ ಯಾರೂ ಬೇಕಾದರೂ ಮನವಿ ಸಲ್ಲಿಸಲು ಸಮಿತಿ ಅವಕಾಶ ನೀಡಿದೆ ಎಂದು ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಪೋರ್ಟಲ್‌ನಲ್ಲೂ ಸಾರ್ವಜನಿಕರು ತಮ್ಮ ಅಹವಾಲು ಸಲ್ಲಿಸಬಹುದು. ಇದುವರೆಗೆ ಒಂದು ಕೋಟಿ ಅಹವಾಲು ಸಲ್ಲಿಕೆಯಾಗಿವೆ. ನಾನು ಸಹ ಪ್ರತಿಯೊಬ್ಬರ ಸಮಸ್ಯೆ ಆಲಿಸುತ್ತೇನೆ. ಇದನ್ನು 21 ಸದಸ್ಯರ ಸಮಿತಿ ಮುಂದೆ ಮಂಡಿಸಲಾಗುತ್ತಿದೆ. ಈಗ ನಾನು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಲ್ಲ. ಅಗತ್ಯವಾದರೆ ಸಮಿತಿ ಮುಂದೆಯೇ ಜಿಲ್ಲಾಧಿಕಾರಿಯನ್ನೇ ಕರೆಸಿಕೊಳ್ಳುತ್ತೇವೆ ಎಂದರು.
“ಲೋಕಸಭೆ ಸ್ಪೀಕರ್ ಅವರು ವಕ್ಫ್ ತಿದ್ದುಪಡಿ ಮಸೂದೆ ಸಂಬಂಧ ಜಂಟಿ ಸಂಸದೀಯ ಸಮಿತಿ ರಚಿಸಿ ಕೇವಲ 2 ತಿಂಗಳು ಕಳೆದಿದೆ. ಕರ್ನಾಟಕ ಮಾತ್ರವೇ ಅನೇಕ ದಶಕಗಳಿಂದ ತಮ್ಮ ಹಕ್ಕು ಹೊಂದಿರುವ ಜನರಿಗೆ ತರಾತುರಿಯಲ್ಲಿ ವಕ್ಫ್ ನೋಟಿಸ್‌ಗಳನ್ನು ನೀಡುತ್ತಿದೆ. ಈ 2 ತಿಂಗಳಲ್ಲಿ ವಕ್ಫ್ ನೋಟಿಸ್‌ಗಳ ಸಂಖ್ಯೆ ಶೇ. 38ರಷ್ಟು ಹೆಚ್ಚಳವಾಗಿದೆ. ಒಂದು ಸಮಿತಿ ರಚನೆಯಾದ ಬಳಿಕ ನೋಟಿಸ್‌ಗಳನ್ನು ನೀಡುವ ಅವಸರವೇನಿತ್ತು?” – ಜಗದಾಂಬಿಕಾ ಪಾಲ್, ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ
“ವಕ್ಫ್ ಕುರಿತು ದಾಖಲೆಗಳ ತಿದ್ದುಪಡಿ ಸರಿಪಡಿಸುವಂತೆ ಹೇಳಿದ್ದೇನೆ. ಆದರೂ ಜೆಪಿಸಿ ಅಧ್ಯಕ್ಷರು ರಾಜಕೀಯ ಪ್ರೇರಿತವಾಗಿ ವಿಜಯಪುರಕ್ಕೆ ಭೇಟಿ ನೀಡಿದ್ದಾರೆ.”
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uniform Civil Code: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಅಸಾಧ್ಯ: ಡಿ.ಕೆ.ಶಿವಕುಮಾರ್
ಗುರಿ ಸಾಧಿಸದಿದ್ರೆ ಅಧಿಕಾರಿಗಳೇ ಹೊಣೆ: ಚಲುವರಾಯಸ್ವಾಮಿ
KAS ಹುದ್ದೆ ಭರ್ತಿಯಲ್ಲಿ ಲೋಪ: ಕೆಪಿಎಸ್‌ಸಿಗೆ ಕೆಎಟಿಯಿಂದ ನೋಟಿಸ್
Mallikarjun Kharge: ಕಲ್ಯಾಣ ಕರ್ನಾಟಕಕ್ಕೆ ಕೇಂದ್ರ ಬಜೆಟ್‌ನಲ್ಲಿ 5 ಸಾವಿರ ನೀಡಿ
SSLC ಪ್ರವೇಶ ಪತ್ರ ತಿದ್ದುಪಡಿಗೆ ಫೆ.10ರವರೆಗೆ ಅವಕಾಶ