Desi Swara: ಆಮಂತ್ರಣವನ್ನು ಮೆಸೇಜ್ ಮಾಡಿದ್ದೇವೆ …ಬಂದುಬಿಡಿ…..!
ಆಧುನಿಕ ಯುಗದ ಹೊಸ ಔಪಚಾರಿಕೆ
Team Udayavani, Aug 3, 2024, 1:50 PM IST
ಯಾವುದೇ ಶುಭಕಾರ್ಯಗಳಿಗೆ ಆಮಂತ್ರಣ ಕೊಡುವ ಸಂದರ್ಭ ನಮ್ಮ ಸನಾತನ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನ ಪಡೆದಿದೆ. ಅದು ಒಂದು ಸಂಭ್ರಮ. ಮನೆಮನೆಗೂ ಹೋಗಿ ಆಮಂತ್ರಣ ಕೊಡುವ ಪದ್ಧತಿ ನಮ್ಮಲ್ಲಿ ವಿಶೇಷ. ಹಿಂದೆ ಎಲ್ಲ ಬಂಧು ವರ್ಗಗಳು ಒಂದೇ ಗ್ರಾಮದಲ್ಲಿ ಇರುವ ಸಂದರ್ಭದಲ್ಲಿ, ಆಮಂತ್ರಣ ಕೊಡಲು ಓಲಗ, ವಾದ್ಯದೊಂದಿಗೆ ಹೋಗುತ್ತಿದ್ದರು ಎಂಬುದಾಗಿ ಕೇಳಿದ್ದೇನೆ. ಕಾಲ ಕಳೆದಂತೆ, ವಿದ್ಯಾರ್ಜನೆ, ವೃತ್ತಿಯನ್ನು ಹುಡುಕುತ್ತ ಅವಿಭಕ್ತ ಕುಟುಂಬಗಳು ಬೇರೆಬೇರೆಯಾಗಿ, ಗ್ರಾಮವನ್ನು ಬಿಟ್ಟು ಪಟ್ಟಣ, ವಿದೇಶಗಳಲ್ಲಿ ನೆಲಸಿದವು.
ಕಾಲಘಟ್ಟಕ್ಕೆ ಸಹಜವಾದ ಬದಲಾವಣೆಗಳಾಗಿ, ಸಂಪ್ರದಾಯಗಳು ವಿಭಿನ್ನ ಶೈಲಿಗೆ ಹೊಂದಿಕೊಳ್ಳುವುದು ಅವಶ್ಯವಾದವು.
ಪ್ರಿ-ಡಿಜಿಟಲ್ ಕಾಲದಲ್ಲಿ, ಆಮಂತ್ರಣ ಕೊಡಲು ಒಂದು ಊರಿನಿಂದ ಮತ್ತೂಂದು ಊರಿಗೆ ಹೋಗುವ ವಾಡಿಕೆ ಇತ್ತು. ನನ್ನ ಚಿಕ್ಕ ವಯಸ್ಸಿನಲ್ಲಿ, ಮನೆಗೆ ಬರುವ ಯಾವುದೇ ಅತಿಥಿಗಳು ಹೇಳಿ ಬರುವ ರೂಢಿ ಇರಲಿಲ್ಲ. ಬೆಳಗ್ಗೆ ರಂಗೋಲಿ ಇಡುವಾಗ ತೆರೆದ ಬಾಗಿಲು ಮತ್ತೆ ರಾತ್ರಿ ಮಲಗುವ ಸಮಯಕ್ಕೆ ಮುಚ್ಚುವ ಕಾಲವದು! ಮನೆ, ಮನಸ್ಸು ಎಲ್ಲರನ್ನು ಆಹ್ವಾನಿಸುವ ಕಾಲವದು. ಶುಭಕಾರ್ಯವಾಗಲಿ, ಅಶುಭವಾರ್ತೆಯಾಗಲಿ ಮನೆಗೆ ಬಂದೇ ತಿಳಿಸುವ ಪದ್ಧತಿಯನ್ನು ನಾನು ಕಂಡಿದ್ದೇನೆ ಮತ್ತು ನಾನು ಸಹ ಅದರಲ್ಲಿ ಭಾಗಿಯಾಗಿದ್ದೇನೆ.
ಶುಭಕಾರ್ಯಗಳಿಗೆ ಆಮಂತ್ರಣ ಕೊಡುವಾಗ ದಂಪತಿ ಸಮೇತ ಬರುವುದು ವಾಡಿಕೆ. ಮನೆಗೆ ಬಂದ ತತ್‌ಕ್ಷಣ ಮುಂಬಾಗಿಲಿನ ಹೊಸ್ತಿಲಿಗೆ ಅಕ್ಷತೆಯನ್ನು ಹಾಕಿ ಮನೆಯ ಒಳಗೆ ಕಾಲಿಡುವುದರಲ್ಲೇ, ನಮಗೆ ಒಂದು ಶುಭ ಸೂಚನೆ. ಕಾಫಿ, ತಿಂಡಿ, ಭೋಜನ ಎಲ್ಲವೂ ಈ ಆಹ್ವಾನ ಸಂಚಾರದಲ್ಲೇ ನಡೆಯುತ್ತಿತ್ತು. ಯಾವುದನ್ನೂ ಹೇಳಿ, ಕೇಳಿ ಮಾಡುವ ಕಾಲವಲ್ಲ. ಆ ಸಮಯದಲ್ಲಿ ಮನೆಗೆ ಬಂದರೆ ತಿಂಡಿಯೋ, ಭೋಜನಕ್ಕೋ ವ್ಯವಸ್ಥೆ ಆಗುತ್ತಿತ್ತು.
ಭೋಜನ ಸಮಯಕ್ಕೆ ಯಾರ ಮನೆಗೆ ಆಮಂತ್ರಣವನ್ನು ಕೊಡುವುದು ಎಂಬುದು ಮೊದಲೇ ನಿರ್ಧರಿಸಿ ಬರುತ್ತಿದ್ದರು, ಕಾರಣ ಅವರಿಗೆ ಭಾರವಾಗಬಾರದು ಎಂಬ ವಿಶಾಲ ಚಿಂತನೆ. ಅತಿಥಿಗಳು ಬಂದಮೇಲೆ ಅಡುಗೆ ಮಾಡುವುದಾಗಲಿ, ಅಂಗಡಿಗೆ ಹೋಗಿ ತರಕಾರಿ ತರುವುದಾಗಲಿ ಇರಲಿಲ್ಲ. ಎಲ್ಲರ ಮನೆಯಲ್ಲೂ 3 – 4 ಜನಗಳಿಗೆ ಹೆಚ್ಚಾಗಿ ಒದಗುವಂತೆ ಅಡುಗೆ ಮಾಡುವ ಪದ್ಧತಿ. ಯಾರಾದರೂ ಮನೆಗೆ ಬಂದೇ ಬರುತ್ತಾರೆ ಅನ್ನೋ ಉದಾತ್ತ ಮನಸ್ಸು ಇದ್ದ ಕಾಲ. ಆಹಾ ಎಂತಹ ಸುವರ್ಣಯುಗ ಅದು ಅಲ್ವಾ ?
ಇನ್ನು ಮದುವೆ, ಉಪನಯನ, ನಾಮಕರಣ, ಚೌಲ, ಸೀಮಂತ, ಶಾಂತಿ ಹೀಗೆ ಹತ್ತು ಹಲವು ಶುಭಕಾರ್ಯಗಳಿಗೆ ಮನೆಯಲ್ಲಿ ಹಿರಿಯರಿಗೆ ಆಮಂತ್ರಣ ಕೊಟ್ಟರೆ ಸಾಕು, ಅದು ಆ ಮನೆಯವರನ್ನೆಲ್ಲ ಆಹ್ವಾನಿಸಿದಂತೆ ಎಂಬ ಮನೋಭಾವ. ಮಕ್ಕಳು ಎಷ್ಟೇ ದೊಡ್ಡವರಾಗಲಿ ಅವರಿಗೆ ಮತ್ತೂಂದು ಆಮಂತ್ರಣ ಅನ್ನೋ ನಿರೀಕ್ಷಣೆಯೂ ಇರಲಿಲ್ಲ. ಅಷ್ಟೇ ಅಲ್ಲ, ಆಮಂತ್ರಿಸಿದವರು ಬರುತ್ತೀರಾ ಅನ್ನೋ ಪ್ರಶ್ನೆಯೇ ಇಲ್ಲ. ಎಷ್ಟೇ ಅಸಮಾಧಾನ ಇದ್ದರೂ, ಮನೆಗೆ ಬಂದು ಆಹ್ವಾನ ಕೊಟ್ಟಾಗ ಆ ಶುಭಕಾರ್ಯಕ್ಕೆ ಹೋಗದೆ ಇರುತ್ತಿರಲಿಲ್ಲ.
ಹೀಗಾಗಿ ಬರುವವರ ಒಂದು ಅಂದಾಜು ಸಿಗುತ್ತಿತ್ತು ಅಷ್ಟೇ ಅಲ್ಲದೆ ಸಂಬಂಧಗಳು ಗಟ್ಟಿಯಾಗಿ ಬೆಳೆಯುವುದಲ್ಲದೆ, ಅಸಮಾಧಾನಗಳು ನೀರಾಗಿ ಕೊಚ್ಚು ಹೋಗುತ್ತಿದ್ದವು. ಮುಖ್ಯವಾಗಿ ಯಾವುದೇ ಶುಭಕಾರ್ಯದಲ್ಲಿ ಮಾಡಿಸಿದ ಅಡುಗೆ ಪದಾರ್ಥಗಳು ವ್ಯರ್ಥವಾಗುವ ಸನ್ನಿವೇಶವೇ ಬರುತ್ತಿರಲಿಲ್ಲ ಮತ್ತು ಅದರ ಯೋಚನೆಯೂ ಇರುತ್ತಿರಲಿಲ್ಲ. ಕೆಲವೊಮ್ಮೆ, ವಿಷಯ ತಿಳಿದರೆ ಸಾಕು ಅಂತಹ ಶುಭಕಾರ್ಯಗಳಿಗೆ ಬರುವ ಒಂದು ಉದಾತ್ತ ಮನಸ್ಸು ಕೂಡಾ ಇತ್ತು. ಎಷ್ಟೇ ಅಸಮಾಧಾನವಿದ್ದರೂ, ಮನೆಗೆ ಬಂದು ಆಮಂತ್ರಣ ಕೊಟ್ಟರೆ ಆ ಕಾರ್ಯಕ್ಕೆ ಹೋಗದೆ ಇರುತ್ತಿರಲಿಲ್ಲ. ಇನ್ನು ಹೊರರಾಜ್ಯದಲ್ಲಿ ಸಂಬಂಧ ಬೆಳೆಸಿದ ಮನೆಯವರಿಗೆ, ಅಲ್ಲಿಯವರೆಗೂ ಪ್ರಯಾಣ ಬಳಸಿ ಆಮಂತ್ರಿಸಲು ಕಷ್ಟಸಾಧ್ಯವಾಗುತಿತ್ತು. ಪ್ರಯಾಣದ ಖರ್ಚು ಹೊರಲು ಸಾಧ್ಯವಾಗುತ್ತಿರಲಿಲ್ಲ, ದೂರವಾಣಿಯ ಸೌಕರ್ಯ ಕೂಡಾ ಇರುತ್ತಿರಲಿಲ್ಲ ಹಾಗಾಗಿ 15ps ಪೋಸ್ಟ್‌ಕಾರ್ಡ್‌ನಲ್ಲಿ ಆಮಂತ್ರಣವನ್ನು ಕಳಿಸುತ್ತಿದ್ದರು. ಪೋಸ್ಟ್‌ಕಾರ್ಡ್‌ನ ನಾಲ್ಕು ಅಂಚಿನಲ್ಲಿ ಅರಿಶಿನವನ್ನು ಹಚ್ಚಿದರೆ ಸಾಕು, ಅದು ಶುಭಸೂಚನೆಯ ಪತ್ರ ಎಂಬ ಸಂಕೇತ. ಅದೇ ಕಪ್ಪುಬಣ್ಣವಿದ್ದರೆ, ಅಂಚೆಪೇದೆ (postman) ಮನೆಯ ವಾತಾವರಣವನ್ನು ನೋಡಿ ಅದನ್ನು ತಲುಪಿಸುತ್ತಿದ್ದ ಎಂಬುದಾಗಿ ಕೇಳಿದ್ದೇನೆ.
ಅಂದರೆ ಎಲ್ಲರಿಗೂ ಎಲ್ಲರ ಬಗ್ಗೆಯೂ ಒಂದು ಕಾಳಜಿ. ವಿಷಯ ತಿಳಿದ ತತ್‌ಕ್ಷಣ ಮತ್ತೆ ಅದಕ್ಕೆ ಉತ್ತರವನ್ನು ಬರೆಯುತ್ತಿದ್ದರು. ಹೀಗಾಗಿ ಆಮಂತ್ರಣದ ಒಂದು ಕಾರ್ಯ ಮೂರೂ ನಾಲ್ಕು ತಿಂಗಳಿಂದಲೇ ಪ್ರಾರಂಭವಾಗುತ್ತಿತ್ತು. ಆಮಂತ್ರಣ ಅನ್ನುವ ಪದದ ಅರ್ಥ ಯಾವುದಾದರು ಕಾರ್ಯದಲ್ಲಿ ಎಲ್ಲರೂ ಒಟ್ಟುಕೂಡುವುದಕ್ಕಾಗಿ ಯಾರನ್ನಾದರೂ ಅದರ ಪೂರ್ವಕವಾಗಿ ಹೇಳುವುದು ಅಥವಾ ಕರೆಯುವ ಕ್ರಿಯೆ ಎಂದು. ನಮ್ಮ ಭಾರತೀಯ ಸನಾತನ ಸಂಸ್ಕೃತಿ ಎಷ್ಟು ಅರ್ಥಗರ್ಭಿತವಾಗಿದೆ ಅಲ್ವಾ?
ಇನ್ನು ನೇರ ಈ ಡಿಜಿಟಲ್ ಯುಗಕ್ಕೆ ಬರೋಣ.
ಗ್ರಾಮದಿಂದ, ಪಟ್ಟಣಕ್ಕೆ, ಪಟ್ಟಣದಿಂದ ನಗರಕ್ಕೆ, ನಗರದಿಂದ ಹೊರದೇಶಕ್ಕೆ ಅನೇಕರು ವಲಸೆ ಹೋಗಿ ಕುಟುಂಬಗಳು ಚದರಿಹೋದದ್ದು ಒಂದು ಸಹಜ ಕ್ರಿಯೆ. ಈ ನಿಟ್ಟಿನಲ್ಲಿ ಮನೆ ಮನೆಗೂ ದೂರವಾಣಿ ಬಂದು ಈಗ ಎಲ್ಲರ ಕೈಯಲ್ಲೂ ಮೊಬೈಲ್. ಆಡು ಮುಟ್ಟದ ಸೊಪ್ಪಿಲ್ಲ – ಮೊಬೈಲ್ ಇಲ್ಲದ ಮನುಷ್ಯನಿಲ್ಲ ಎಂಬುದು ವಾಸ್ತವ. ಕುಟುಂಬದ ಜನರು ಬೇರೆ ಬೇರೆ ಕಡೆ ಇರುವ ಪರಿಸ್ಥಿತಿಯಲ್ಲಿ ಈ ಅಭಿವೃದ್ಧಿ ಸ್ವಾಗತಾರ್ಹ. ಲಗ್ನ ಪತ್ರಿಕೆ, ಸೀಮಂತ, ನಾಮಕರಣ, ಮುಂಜಿ ಆಗಿ ಆಮಂತ್ರಣ ಒಂದು ಓಪಚಾರಿಕತೆ ಆಯಿತು. ಪೋಸ್ಟ್‌ಕಾರ್ಡ್ – ವಾಟ್ಸ್‌ಆ್ಯಪ್ ಆದರೆ ಸನಾತನ ಭಾರತೀಯ ಸಂಸ್ಕೃತಿಯ ಭಾಗವಾಗಿ ಪರಿವರ್ತನೆಗೊಂಡಿತು.
ಶುಭಕಾರ್ಯಗಳಿಗೆ ಆಹ್ವಾನವೂ ಡಿಜಿಟಲ್ ಮೂಲಕ ಸಂಚರಿಸಿಲು (ಮೊಬೈಲ್) ಶುರು ಆಯ್ತು. ವಾಟ್ಸ್‌ಆ್ಯಪ್ ಮೂಲಕ ಈ-ಇನ್ವಿಟೇಶನ್ ಕಳಿಸಿ ಒಂದು ಕರೆ ಮಾಡಿದರೆ ಸಾಕು ಅಂತ ಆಹ್ವಾನ ಕೊಡುವರ ಮನಸ್ಸಾದರೆ, ಆ ಕಡೆ ನಮಗೆ ಕರೆ ಮಾಡಿ ತಿಳಿಸಿ ಸಾಕು ಅನ್ನುವ ಕಾಲ ಬಂದಿದೆ. ಅನೇಕ ಕಾರಣಗಳು, ಯಾರಪ್ಪ ಈ ಬೆಂಗಳೂರು ಟ್ರಾಫಿಕ್‌ನಲ್ಲಿ ಹೋಗಿ ಕರೆಯುವುದು ಅಂದರೆ, ಸದ್ಯ ಮನೆಗೆ ಬಂದರೆ ನಾವು ನೋಡುವ ಸೀರಿಯಲ್ ಎಲ್ಲಿ ಮಿಸ್ ಆಗುತ್ತೋ, ಮಕ್ಕಳ ಓದಿಗೆ ತೊಂದರೆ ಯಾಗುತ್ತೋ ಅನ್ನೋ ಮನೋಭಾವ.
ಮೊಬೈಲ್‌ನಲ್ಲಿ ಕಾಲ್ ಮಾಡಿದರೆ, ಯಾರೋ spam ಕಾಲ್ ಅಂತ ಉತ್ತರವನ್ನು ಕೊಡೋಲ್ಲ. ಮೆಸೇಜ್ ಹಾಕಿದರೆ ಆಗಲಾದರೂ ನೋಡಿ, ಒಂದು ಪ್ರತ್ಯುತ್ತರ ಕೊಡುವ ರೂಢಿಯೂ ಇಲ್ಲವಾದಂತಾಗಿದೆ. ಮನೆಗೆ ಬಂದು ಕರೆಯೋಲೆ ಕೊಡೋದು ಬಿಟ್ಟೆ ಹೋಗಿದೆ, ಮೊಬೈಲ್‌ನಲ್ಲಿ ಮಾತಾಡೋ ವಾಗ್ಮಿಗಳು ಮುಖತಃ ಬಂದಾಗ ಮಾತೆ ಬರದಂತೆ ಆಗಿದೆ. ಇದಕ್ಕೆ ಕಾರಣ, ನಮಗೆ ಜನರ ಸಂಪರ್ಕದ ಕಡಿತವಾದ ಕಾರಣವೇ ಅನ್ನೋ ನನ್ನ ಭಾವನೆ. ಅಷ್ಟೇ ಅಲ್ಲ, ಮನೆಯ ಹಿರಿಯರನ್ನು ಕರೆದರೆ ಸಾಲದು, ಆಗತಾನೆ ಹುಟ್ಟಿದ ಮಗು, ಮನೆಯ ಶ್ವಾನ ಮತ್ತು ಮನೆಯವರಿಗೆಲ್ಲ ವೈಯಕ್ತಿಕವಾಗಿ ಹೇಳಬೇಕೆಂಬ ನಿರೀಕ್ಷಣೆ. ಇಷ್ಟೆಲ್ಲ ಮಾಡಿದರು, ಏನೋಪಾ ಅವರು ಸರಿಯಾಗಿ ಕರೆಯಲೇ ಇಲ್ಲ ಹಾಗಾಗಿ ನಾವು ಹೋಗುವುದೋ ಇಲ್ಲವೋ ಅನ್ನೋ ಯೋಚನೆ, ನಾವು ಒಬ್ಬರು ಹೋಗದಿದ್ದರೆ ಏನಂತೆ ಮಹಾ ಅನ್ನೋ ಮಂದಿ ಎಷ್ಟೋ.
ಆಗಲಿ ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು ಅಂತ ಅಣ್ಣಾವರು ಹೇಳಿದಂತೆ ಮುಂದುವರೆಸೋಣ ಅಂದರೆ, ಒಂದು ಶುಭಕಾರ್ಯದಲ್ಲಿ ಎಷ್ಟು ಜನ ಬರ್ತಾರೆ ? ಎಷ್ಟು ಅಡಿಗೆ ಮಾಡಿಸೋದು ಅನ್ನೋ ಲೆಕ್ಕಾನೇ ಸಿಗಲ್ಲ. ನಮಗೆ ಬಂದ ಅತಿಥಿಗಳನ್ನು ಉಣಬಡಿಸಿ ಸಂತೋಷ ಪಡಿಸದಿದ್ದರೆ ಸಮಾಧಾನವಿಲ್ಲ.
ಇಷ್ಟೆಲ್ಲ ಪರಿವರ್ತನೆಗೊಂಡ ನಾವು, ಒಂದು ಕರೆಗೆ ಅಥವಾ ಆಹ್ವಾನಕ್ಕೆ ಬರ್ತೀವಾ ಇಲ್ಲವಾ ಅನ್ನೋ ಉತ್ತರ ಕೊಡೋದಕ್ಕೆ ನಮಗೆ ಹಿಂಜರಿಕೆ. ಕರೆದಿದ್ದವರೆಲ್ಲ ಬರ್ತಾರೆ, ಅದರಲ್ಲಿ ಒಂದು ಭಾಗಶಃ ಶೇ.10 ಬರೋಲ್ಲ ಅಂತ ಅಂದಾಜಿಸಿ ಭೋಜನ ಸಿದ್ಧಪಡಿಸಿಕೊಂಡರೆ, ಎಷ್ಟೋ ವ್ಯರ್ಥವಾಗುವುದು ಆಹಾರ. ಇಲ್ಲಿ ಹಣದ ವ್ಯರ್ಥ ಅಷ್ಟೇ ಅಲ್ಲ, ಆಹಾರ ಪದಾರ್ಥಗಳು ಎಸೆಯಬೇಕಾಗುವ ಅನೇಕ ಸಮಾರಂಭಗಳನ್ನು ನೋಡಿಯೂ ಆಗಿದೆ. ಈ ದುಂದುವೆಚ್ಚವನ್ನು ನೋಡಿ ಮನಸ್ಸಿಗೆ ತುಂಬಾ ಬೇಸರವಾಗುತ್ತದೆ.
ಚೀನ ಸಂಪ್ರದಾಯದಲ್ಲಿ, ಆಹ್ವಾನ ಪತ್ರಿಕೆ ಕೊಟ್ಟ ಸಂಖ್ಯೆಯನ್ನು ಪರಿಗಣಿಸಿ ಅದಕ್ಕೆ ಬೇಕಾದ ಟೇಬಲ್ ಕಾದಿರಿಸುವ ಒಂದು ರೂಢಿ ಮತ್ತು ಬರುವರೋ-ಇಲ್ಲವೋ ಅನ್ನೋದನ್ನ ಕಾತರಿಪಡಿಸಿಕೊಳ್ಳುವುದು ಹೌದು.ಪಾಶ್ಚಾತ್ಯರಲ್ಲಿ RSVP ಅನ್ನೋ ಒಂದು ರೂಢಿ ತುಂಬಾ ಚೆನ್ನಾಗಿದೆ. RSVP ಅಂದರೆ Respond, if it pleases you ಅಂತ. ಇದರ ತರ್ಜುಮೆ ಅಂದರೆ ದಯವಿಟ್ಟು ನಿಮ್ಮ ಬರುವಿಕೆಯನ್ನು ತಿಳಿಸಿ ಅನ್ನೋ ಲೌಕಿಕ ಚಾಣಾಕ್ಷತನ ಮತ್ತು ಈಗಿನ ಪರಿಸ್ಥಿತಿಯಲ್ಲಿ ಅತ್ಯಂತ ಆವಶ್ಯಕ. ಇನ್ನು ಮುಂದೆ ನಾವು ಯಾವುದೇ ಆಹ್ವಾನಕ್ಕೆ, ನಮ್ಮ ಉತ್ತರವನ್ನು ಕೊಟ್ಟು ಸಹಕರಿಸೋಣವೇ ? ಇದನ್ನು ನಾವು ರೂಢಿಸಿಕೊಂಡಲ್ಲಿ, ನಮ್ಮ ಮಕ್ಕಳು ಅದನ್ನು ಮುಂದುವರೆಸಿ ಕನಿಷ್ಠ ಪಕ್ಷ ಮುಂದಿನ ಹಲವು ವರ್ಷಗಳಲ್ಲಿ ಸರಿಯಾಗಬಹುದೇನೋ ಎಂಬುದು ನನ್ನ ಆಶಯ. ಇದು ನಮ್ಮೆಲ್ಲರ ಮುಖ್ಯವಾದ ಜವಾಬ್ದಾರಿ ಅಲ್ವಾ? ಏನಂತೀರಿ?
*ವಿಜಯ ರಂಗಪ್ರಸಾದ್, ಸಿಂಗಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.