ಕೋವಿಡ್ ಹೊರತುಪಡಿಸಿದ ರೋಗಿಗಳು ವೆನ್ಲಾಕ್ ನಿಂದ ಶೀಘ್ರ ಸ್ಥಳಾಂತರ
Team Udayavani, May 9, 2021, 6:00 AM IST
ಮಹಾನಗರ: ದ.ಕ. ಜಿಲ್ಲೆಯ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯನ್ನು ಈ ಬಾರಿಯೂ ಪೂರ್ಣವಾಗಿ ಕೊರೊನಾ ರೋಗಿಗಳ ಆರೈಕೆಗೆ ಮಾತ್ರ ಮೀಸಲಿಡುವ ಬಗ್ಗೆ ದ.ಕ. ಜಿಲ್ಲಾಡಳಿತ ಚಿಂತನೆ ನಡೆಸಿದೆ.
ಹೀಗಾಗಿ, ವೆನ್ಲಾಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇತರ ಕಾಯಿಲೆಗಳ ರೋಗಿಗಳನ್ನು ತಾಲೂಕು ಆಸ್ಪತ್ರೆ ಅಥವಾ ಖಾಸಗಿ ಮೆಡಿಕಲ್ ಆಸ್ಪತ್ರೆಗಳಿಗೆ ದಾಖಲಿಸುವ ಸಂಬಂಧ ಚರ್ಚೆ ಆರಂಭವಾಗಿದ್ದು, ಶೀಘ್ರದಲ್ಲಿ ಈ ಕುರಿತಂತೆ ಅಂತಿಮ ತೀರ್ಮಾನವಾಗುವ ಸಾಧ್ಯತೆಯಿದೆ.
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಐಸಿಯು, ವೆಂಟಿಲೇಟರ್, ಸಾಮಾನ್ಯ ಬೆಡ್ ಸಹಿತ ಒಟ್ಟು 905 ಬೆಡ್‌ಗಳು ಲಭ್ಯವಿವೆ. ಈ ಪೈಕಿ ಕೊರೊನಾ ಸೋಂಕಿತರಿಗಾಗಿ ಸದ್ಯ 310 ಬೆಡ್‌ಗಳನ್ನು ಮೀಸಲಿಡಲಾಗಿದೆ. ಉಳಿದಂತೆ ಸುಮಾರು 400 ಬೆಡ್‌ಗಳಲ್ಲಿ ಕೊರೊನಾ ಅಲ್ಲದ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ವರ್ಷ ಮಾರ್ಚ್‌ನಲ್ಲಿ ಕೊರೊನಾ ಸಂದರ್ಭ ದ.ಕ. ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೊರೊನಾ ಚಿಕಿತ್ಸೆಯ ಆಸ್ಪತ್ರೆಯಾಗಿ ಪರಿವರ್ತನೆ ಮಾಡಲಾಗಿತ್ತು. ಆಗ ಆಸ್ಪತ್ರೆಯಲ್ಲಿ ಬೇರೆ ಬೇರೆ ಕಾಯಿಲೆಗಳ ಚಿಕಿತ್ಸೆಗಾಗಿ ಒಳರೋಗಿಗಳಾಗಿ ದಾಖಲಾಗಿರುವ ಸುಮಾರು 218 ರೋಗಿಗಳನ್ನು ಹಂತ ಹಂತವಾಗಿ ಸಮೀಪದ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ವರ್ಗಾಯಿಸಲಾಗಿತ್ತು. ಹೊರರೋಗಿ ಚಿಕಿತ್ಸೆಗೆ ಬರುವವರನ್ನು ಸಮೀಪದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿಯೂ ಇದೇ ರೀತಿ ನಿರ್ಧಾರ ಕೈಗೊಳ್ಳಬೇಕಾದ ಆವಶ್ಯಕತೆ ಎದುರಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
“ಸದ್ಯಕ್ಕೆ ತೀರ್ಮಾನವಾಗಿಲ್ಲ’
ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ| ಸದಾಶಿವ ಶ್ಯಾನ್‌ಬೋಗ್ ಅವರು “ಉದಯವಾಣಿ’ ಜತೆಗೆ ಮಾತನಾಡಿ, “ಕಳೆದ ವರ್ಷ ವೆನ್ಲಾಕ್ ಆಸ್ಪತ್ರೆಯಲ್ಲಿ ಕೊರೊನಾ ಅಲ್ಲದೆ ಚಿಕಿತ್ಸೆ ಪಡೆ ಯುತ್ತಿದ್ದ ರೋಗಿಗಳನ್ನು ಇತರ ಆಸ್ಪತ್ರೆ ಗಳಿಗೆ ಸ್ಥಳಾಂತರಿಸಲಾಗಿತ್ತು. ಆದರೆ, ಈ ಬಾರಿ ಈ ಬಗ್ಗೆ ನಿರ್ಧಾರ ಆಗಿಲ್ಲ. ಸದ್ಯ ವೆನ್ಲಾಕ್ ನಲ್ಲಿ ಕೊರೊನಾ ಅಲ್ಲದ ಇತರ ತುರ್ತು ಹಾಗೂ ಗಂಭೀರ ಸಮಸ್ಯೆಗಳಿಗೆ ಮಾತ್ರ ದಾಖಲಾತಿ ಮಾಡಲಾಗುತ್ತಿದೆ ಎಂದರು.
ಕಳೆದ ಬಾರಿ ರೋಗಿಗಳು ಕಂಗಾಲು!
ಕಳೆದ ವರ್ಷ ವೆನ್ಲಾಕ್ ನಲ್ಲಿದ್ದ ರೋಗಿಗಳನ್ನು ಖಾಸಗಿ ಆಸ್ಪತ್ರೆ/ಇತರ ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ ಪರಿಣಾಮ ಹಲವು ಮಂದಿಗೆ ಸೂಕ್ತ ಚಿಕಿತ್ಸೆ ದೊರೆಯದೆ ಸಮಸ್ಯೆಯಾಗಿತ್ತು. ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಡವರು, ನಿರಾಶ್ರಿತರನ್ನು ವಿವಿಧ ಕಡೆಯಲ್ಲಿ ದಾಖಲಿಸಿದ ಪರಿಣಾಮ ಅಲ್ಲಿ ತಜ್ಞ ವೈದ್ಯರು ಸಿಗದೆ-ಆರ್ಥಿಕವಾಗಿ ಸಮಸ್ಯೆಯನ್ನೂ ಎದುರಿಸಿ ಹಲವರು ಕಂಗಾಲಾಗಿದ್ದರು. ಜತೆಗೆ ಬಡವರಿಗೆ ವೆನ್ಲಾಕ್ ನಲ್ಲಿ ಇತರ ರೋಗಗಳಿಗೆ ಚಿಕಿತ್ಸೆಯೂ ದೊರಕಿರಲಿಲ್ಲ ಎಂಬ ಅಪವಾದವೂ ಕೇಳಿಬಂದಿತ್ತು.
ಚರ್ಚಿಸಿ ಸೂಕ್ತ ತೀರ್ಮಾನ’
ದ.ಕ. ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ವೆನ್ಲಾಕ್ ಆಸ್ಪತ್ರೆಯನ್ನು ಪೂರ್ಣ ಮಟ್ಟದಲ್ಲಿ ಕೊರೊನಾ ಚಿಕಿತ್ಸೆಗಾಗಿಯೇ ಮೀಸಲಿಡುವ ಬಗ್ಗೆ ಚರ್ಚೆ ಇದೆ. ಇದಕ್ಕಾಗಿ ಕೊರೊನಾ ಅಲ್ಲದೆ ಚಿಕಿತ್ಸೆ ಪಡೆಯುತ್ತಿರುವವರನ್ನು ತಾಲೂಕು ಆಸ್ಪತ್ರೆ ಅಥವಾ ಹತ್ತಿರದ ಖಾಸಗಿ ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಿ ಅಲ್ಲಿ ಸೂಕ್ತ ಚಿಕಿತ್ಸೆ ದೊರಕುವಂತೆ ಮಾಡಲಾಗುವುದು. ಬಡವರಿಗೆ ಕಳೆದ ಬಾರಿ ಆಗಿರುವ ಸಮಸ್ಯೆ ಮುಂದೆ ಯಾವುದೇ ಕಾರಣಕ್ಕೂ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು. ಈ ಬಗ್ಗೆ ಅಂತಿಮ ತೀರ್ಮಾನ ಇನ್ನಷ್ಟೇ ಕೈಗೊಳ್ಳಬೇಕಿದೆ.
-ಕೋಟ ಶ್ರೀನಿವಾಸ ಪೂಜಾರಿ,ದ.ಕ. ಜಿಲ್ಲಾ ಉಸ್ತುವಾರಿ ಸಚಿವರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.