ಡೇವಿಡ್ ಫ್ರಿತ್ ತಮ್ಮ ಬರಹ ತಾವೇ ತಿಂದಾಗ;ಇದು ಭಾರತ ಕ್ರಿಕೆಟ್‌ನ ಬಾಟಂ ಟು ಟಾಪ್ ಕಹಾನಿ…
ಧೋನಿ ಕ್ರಿಕೆಟ್ ಜಗತ್ತಿನ ಇತಿಹಾಸವನ್ನೇ ಬದಲಾಯಿಸಿಬಿಟ್ಟರು.
Team Udayavani, Aug 7, 2023, 1:45 PM IST
ಭಾರತ ಕ್ರಿಕೆಟ್ ಲೋಕದಲ್ಲಿ ಯಾವ ಸ್ಥಾನದಲ್ಲಿ ಇದೆ ಎಂಬ ವಿಷಯದ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಭಾರತ ಮಾಡದಿರುವ ದಾಖಲೆ ಇಲ್ಲ ಗೆದ್ದಿರದ ಟ್ರೋಫಿ ಇಲ್ಲ. ಆದರೆ ಕ್ರಿಕೆಟ್ ಲೋಕದಲ್ಲಿ ಭಾರತ ಮುಳ್ಳಿನ ಹಾದಿಯಿಂದ ಸಾಧನೆಯ ಬೆಟ್ಟ ಏರುವ ವರೆಗಿನ ಕತೆ ಭಾರತ ಹಾಗೂ ಪಾಕಿಸ್ಥಾನ ಪಂದ್ಯದಂತೆ ರೋಚಕವಾಗಿದೆ. 2011ರ ಏಕದಿನ ವಿಶ್ವಕಪ್ ಗೆದ್ದ ಮೇಲೆ ಭಾರತಕ್ಕೆ ಅದೆಲ್ಲಿಲ್ಲದ ಗೌರವ ಸಿಕ್ಕಿತು. ಆದರೆ ಅದೇ 1983ರ ಪೂರ್ವದಲ್ಲಿ ಭಾರತಕ್ಕೆ ಕ್ರಿಕೆಟ್‌ನಲ್ಲಿ ಆಗಿರುವ ಅವಮಾನ ಎಲ್ಲರೂ ಮರೆತ ಹಾಗಿದೆ. 83ರ ವಿಶ್ವಕಪ್ ಭಾರತಕ್ಕೆ ಬರೀ ವಿಶ್ವಕಪ್ ಆಗಿರಲಿಲ್ಲ ಅದು ಸೋಲಿನ ಸುಳಿಯಲ್ಲಿ ಸಿಲುಕಿ ಅವಮಾನ ತಿಂದಿರುವ ಕ್ರಿಕೆಟ್ ತಂಡಕ್ಕೆ ತಲೆ ಎತ್ತಿ ನಿಲ್ಲುವಂತೆ ಮಾಡಿದ ಪಂದ್ಯವಾಗಿತ್ತು. ವಿಶ್ವಕಪ್‌ನಲ್ಲಿ ಭಾರತಕ್ಕೆ ಜಯ ಸಿಕ್ಕಿತ್ತು. ಆದರೆ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಮಹಾರಾಜಾ ಪಟಿಯಾಲಾ ಅವರ ಹೆಸರು ಬರಲೇ ಬೇಕು.
ಬ್ರಿಟಿಷರ ಆಳ್ವಿಕೆಯಲ್ಲಿ ಭಾರತಕ್ಕೆ ತನ್ನದೇ ಕ್ರಿಕೆಟ್ ತಂಡವನ್ನು ಕಟ್ಟುವಷ್ಟು ಆಟಗಾರರಿದ್ದರೂ ಆರ್ಥಿಕ ಶಕ್ತಿ ಇರಲಿಲ್ಲ ಎನ್ನಬಹುದು. ಆದರೆ ಮಹಾರಾಜಾ ಪಟಿಯಾಲಾ ಅವರು ಪಟಿಯಾಲಾ 11 ಎಂಬ ತಂಡವನ್ನು ನಿರ್ಮಿಸಿ ಸ್ವಂತ ಖರ್ಚಿನಿಂದ ತಂಡವನ್ನು ಹಲವಾರು ಪ್ರವಾಸಕ್ಕೆ ಕರೆದುಕೊಂಡು ಹೋಗಿ ಆಡಿದರು. 1911ರ ಇಂಗ್ಲೆಂಡ್ ಪ್ರವಾಸದಲ್ಲಿ ಇವರೇ ಭಾರತ ತಂಡದ ನಾಯಕರಾಗಿದ್ದರು. ಮುಂದೆ ಮಹಾರಾಜಾ ಪಟಿಯಾಲಾ 1915ರಿಂದ 1937ರ ವರೆಗೆ 27 ಟೆಸ್ಟ್ ಪಂದ್ಯವನ್ನು ಆಡಿದರು. ಇಂತಹ ಇತಿಹಾಸವಿದ್ದರೂ ಭಾರತ ತಂಡ ಪ್ರಥಮ ಅಧಿಕೃತ ಟೆಸ್ಟ್ ಪಂದ್ಯವನ್ನು ಆಡಲು 1932ರ ತನಕ ಕಾಯಬೇಕಾಯಿತು. 1932ರ ಇಂಗ್ಲೆಂಡ್ ಪ್ರವಾಸದಲ್ಲಿ ಕುಮಾರ್ ರಂಜಿತ್ ಸಿಂಹಜಿ ನಾಯಕರಾಗಿದ್ದರು. ಆದರೆ ಭಾರತ ತನ್ನ ಪ್ರಥಮ ಪಂದ್ಯ ಗೆಲ್ಲಲು 1952 ರವರೆಗೂ ಕಾಯಬೇಕಾಯಿತು. ಸ್ವತಂತ್ರ ಭಾರತದ ಮೊದಲ ಕ್ರಿಕೆಟ್ ಪ್ರವಾಸ 1948ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಿತು. ಆ ಪ್ರವಾಸದಲ್ಲಿ ಲಾಲಾ ಅಮರನಾಥ್ ತಂಡದ ನಾಯಕರಾಗಿದ್ದರು.
ಅಲ್ಲಿಂದ ಭಾರತದ ಕ್ರಿಕೆಟ್ ಇತಿಹಾಸ ಪುನರಾರಂಭವಾಗಿತ್ತು. ಆದರೆ ಭಾರತ ಸೋಲಿನ ಸುಳಿಯಿಂದ ಹೊರಗೆ ಬಂದಿರಲಿಲ್ಲ. ಭಾರತ ಕ್ರಿಕೆಟ್ ತಂಡವನ್ನು ಮುಂದೆ ಕಪಿಲ್ ದೇವ್, ಸುನಿಲ್ ಗವಾಸ್ಕರ್ ಹಾಗೂ ಇನ್ನಿತರ ಆಟಗಾರರು ಬಲಿಷ್ಠಗೊಳಿಸಿದರು. ಆದರೂ ಭಾರತ ಒಂದೇ ಒಂದು ವಿಶ್ವಕಪ್ ಪಂದ್ಯವು ಕೂಡ ಗೆದ್ದಿರಲಿಲ್ಲ.
1983ರ ವಿಜಯ
1983ರ ವಿಶ್ವಕಪ್ ಸಂದರ್ಭದಲ್ಲಿ ಭಾರತ ಕ್ರಿಕೆಟ್‌ನಲ್ಲಿ ಗುರುತಿಸಿಕೊಂಡಿರಲಿಲ್ಲ. ಸೋಲಿನ ಸುಳಿಯಲ್ಲಿ ಸಿಲುಕಿದ್ದ ಕ್ರಿಕೆಟ್ ತಂಡಕ್ಕೆ ಅಪಹಾಸ್ಯ ಮಾಡಲಾಗುತ್ತಿತ್ತು. 1983ರ ವಿಶ್ವಕಪ್ ಸಂದರ್ಭದಲ್ಲಿ ತಂಡದ ನಾಯಕ ಕಪಿಲ್ ದೇವ್ ಅವರಿಗೆ ಬಹಳ ದೊಡ್ಡ ಸವಾಲು ಇತ್ತು. ಭಾರತದ ಬಳಿ ಬಲಿಷ್ಠ ಆಟಗಾರರು ಇದ್ದರೂ ಸಹ ವೆಸ್ಟ್ ಇಂಡೀಸ್‌ನಂತಹ ವಿಶ್ವ ಚಾಂಪಿಯನ್ ವಿರುದ್ಧ ಆಡುವ ಸಾಮರ್ಥ್ಯ ಇಲ್ಲವೆಂಬ ವದಂತಿ ಇತ್ತು. ಅದರಲ್ಲೂ ವಿಶ್ವಕಪ್‌ನಲ್ಲಿ ಒಂದೂ ಪಂದ್ಯ ಗೆದ್ದಿರದ ಭಾರತದ ನಾಯಕ ಕಪಿಲ್ ದೇವ್ ಲಾರ್ಡ್ಸ್‌ನಲ್ಲಿ we are here to win ಎಂದುಬಿಟ್ಟರು. ಇದನ್ನು ಕೇಳಿದ ಅಲ್ಲಿದ್ದ ಪತ್ರಕರ್ತರು ನಕ್ಕುಬಿಟ್ಟಿದ್ದರು. ಅದಲ್ಲದೆ ಖ್ಯಾತ ಕ್ರಿಕೆಟ್ ಪತ್ರಕರ್ತ ಡೇವಿಡ್ ಫ್ರೀಥ್ ಒಂದು ವೇಳೆ ಭಾರತ ವಿಶ್ವಕಪ್ ಗೆದ್ದರೆ ನಾನು ಬರೆದ ಲೇಖನ ತಿನ್ನುತ್ತೇನೆ ಎಂದು ಬರೆದುಕೊಂಡಿದ್ದರು.
ಭಾರತದ ತಂಡದವರಿಗೂ ತಮ್ಮ ಗೆಲುವಿನ ಬಗ್ಗೆ ವಿಶ್ವಾಸವಿರಲಿಲ್ಲ. ಇದನ್ನು ಅವರೇ ಒಪ್ಪಿಕೊಂಡಿದ್ದರು. ಲಾರ್ಡ್ಸ್ ಅಂಗಳದಲ್ಲಿ ಭಾರತ ಕ್ರಿಕೆಟ್ ತಂಡ ಹೆಡೆ ಎತ್ತಿ ನಿಲ್ಲುತ್ತದೆ ಎಂಬ ವಿಷಯ ಇಡೀ ಜಗತ್ತು ನಂಬದ ವಿಷಯವಾಗಿತ್ತು. ಆದರೆ ಚಾಣಾಕ್ಷ, ಚತುರ ಆಟದಿಂದ ಭಾರತ ಪ್ಲೇ ಆಫ್ ತಲುಪಿಬಿಟ್ಟಿತು. ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದ ವೆಸ್ಟ್ ಇಂಡೀಸ್ ವಿರುದ್ಧ ಫೈನಲ್‌ನಲ್ಲಿ ಅತೀ ಕಡಿಮೆ ರನ್ ಡಿಫೆಂಡ್ ಮಾಡಿಕೊಂಡು ಗೆದ್ದು ಬೀಗಿತ್ತು. ಅದು ಸಾಮಾನ್ಯ ಗೆಲುವು ಅಲ್ಲ, ಯಾರೂ ಊಹಿಸದ ಗೆಲುವು. ಕ್ರಿಕೆಟ್ ಲೋಕದಲ್ಲಿ ಭಾರತದ ಹೊಸ ಅಧ್ಯಾಯ ಸೃಷ್ಟಿಯಾಯಿತು.
ಸೋಲಿನ ಸುಳಿಯಿಂದ ಹೊರ ಬಂದ ಭಾರತಕ್ಕೆ ಎಲ್ಲಿಲ್ಲದ ಗೌರವ ಸಿಕ್ಕಿತು. ಅದಾದ ಮೇಲೆ ಭಾರತ ಕ್ರಿಕೆಟ್ ಲೋಕದಲ್ಲಿ ಅಚ್ಚಳಿಯದ ಇತಿಹಾಸಗಳನ್ನು ಸೃಷ್ಟಿ ಮಾಡುತ್ತಲೇ ಬಂದಿದೆ. 83ರ ವಿಶ್ವಕಪ್ ಅನಂತರ ನಾಯಕ ಸೌರವ್ ಗಂಗೂಲಿ ಅವರು ಭಾರತ ತಂಡವನ್ನು ಬಲಿಷ್ಠವಾಗಿ ಕಟ್ಟಿ, ಸೋಲಿನ ಸುಳಿಯಲ್ಲಿ ಸಿಲುಕಿದ ಭಾರತ ತಂಡವನ್ನು ಸೋಲಿಸುವುದೇ ವಿಶ್ವ ಚಾಂಪಿಯನ್ ತಂಡಗಳಿಗೆ ಸವಾಲಾಗುವಂತೆ ಮಾಡಿದರು. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಆಟ ಇಡೀ ವಿಶ್ವವನ್ನೇ ಭಾರತದತ್ತ ಸೆಳೆದಿತ್ತು. ಇನ್ನು 2004ರಲ್ಲಿ ಪದಾರ್ಪಣೆ ಮಾಡಿದ್ದ ಪ್ರಭಾವಿ ಆಟಗಾರ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರ ಕೈಗೆ ಸೌರವ್ ಗಂಗೂಲಿ ನಾಯಕತ್ವ ಒಪ್ಪಿಸಿಬಿಟ್ಟರು. ಧೋನಿ ಕ್ರಿಕೆಟ್ ಜಗತ್ತಿನ ಇತಿಹಾಸವನ್ನೇ ಬದಲಾಯಿಸಿಬಿಟ್ಟರು.
ಭಾರತ ತಂಡವನ್ನು ಅಪಹಾಸ್ಯ ಮಾಡುತ್ತಿದ್ದವರು ಬಾಯಿಯಲ್ಲಿ ಬೆರಳಿಟ್ಟು ನೋಡುವಂತೆ ಗಗನದೆತ್ತರಕ್ಕೆ ಭಾರತ ತಂಡವನ್ನು ಬೆಳೆಸಿಬಿಟ್ಟರು. ಐಸಿಸಿ ರ್ಯಾಕಿಂಗ್ 1ಕ್ಕೆ ತರುವ ತನಕ ಇತಿಹಾಸ ಬದಲಿಸಿದರು. ಅಷ್ಟೇ ಅಲ್ಲದೆ ಐಸಿಸಿಯ ಎಲ್ಲ ಮಾದರಿಯ ಕಪ್ ಗೆದ್ದು, ಭಾರತವನ್ನು ಯಾರೂ ಸೋಲಿಸಲಾಗದ ಮಟ್ಟಿಗೆ ತಂದರು. ಬಳಿಕ ಕಿಂಗ್ ಕೊಹ್ಲಿ ಅವರಿಗೆ ನಾಯಕತ್ವ ಒಪ್ಪಿಸಿದರು. ವಿಶ್ವ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಕೊಹ್ಲಿ ಎತ್ತರಕ್ಕೇರಿಸಿ ಗೆಲ್ಲಿಸಿದರು. ತಂಡದ ಶ್ರಮದಿಂದ ಹೆಚ್ಚಿನ ಮಟ್ಟದ ಸಾಧನೆ ಭಾರತ ಮಾಡಿದೆ.
ಎಲ್ಲೆಲ್ಲೂ ನಮ್ದೆ ಹವಾ….
ಐಸಿಸಿ ರ್ಯಾಕಿಂಗ್‌ನಲ್ಲಿ ಭಾರತ ಕ್ರಿಕೆಟ್ ತಂಡ ಅಷ್ಟೇ ಅಲ್ಲದೆ ವೈಯಕ್ತಿಕ ದಾಖಲೆಗಳನ್ನು ಮಾಡುವಲ್ಲಿಯೂ ಬ್ಲೂ ಬಾಯ್ಸ್ ಮುಂದಿದ್ದಾ ರೆ. ಕ್ರಿಕೆಟ್ ದೇವರೆಂದೇ ಖ್ಯಾತರಾದ ಸಚಿನ್ ತೆಂಡೂಲ್ಕರ್ ಅವರ ಜೀವಮಾನದ ಸಾಧನೆ ಭಾರತದ ಕ್ರಿಕೆಟ್ ಇತಿಹಾಸಕ್ಕೆ ಕಿರೀಟವಾಗಿದೆ. ಅವರು ಬಾರಿಸಿದ 100 ಶತಕದ ದಾಖಲೆ ಇದುವರೆಗೂ ಯಾರೂ ಸರಿ ಗಟ್ಟಿಲ್ಲ.
ಎಂ.ಸ್.ಧೋನಿ ಅವರ ನಾಯಕತ್ವದ ಫ್ಯಾನ್ಸ್ ಎಲ್ಲೆಲ್ಲೂ ಇದ್ದಾರೆ. ಎಲ್ಲ ಮಾದರಿಯ ಟ್ರೋಫಿ ಗೆದ್ದಿರುವ ಏಕೈಕ ನಾಯಕ ಎನಿಸಿಕೊಂಡಿದ್ದಾರೆ. ಇನ್ನು ಕಿಂಗ್ ಕೊಹ್ಲಿ ಅವರ ವೈಖರಿಯ ಬಗ್ಗೆ ಹೇಳೋದೇ ಬೇಡ. ಇಡೀ ಜಗತ್ತಿನ ನಂಬರ್ ವನ್ ಬ್ಯಾಟ್ಸ್‌ಮನ್ ಎಂದರೆ ತಪ್ಪಾಗಲಿಕ್ಕಿಲ್ಲ. ಅವರಿಗೆ ಸರಿಸಾಟಿ ಆಟಗಾರ ಇನ್ನೊಬ್ಬರಿಲ್ಲ. ಕಿಂಗ್ ಎಂದೇ ಖ್ಯಾತಿ ಹೊಂದಿರುವ ವಿರಾಟ್ ಕೊಹ್ಲಿ ಸದ್ಯ 76 ಶತಕ ಸಿಡಿಸಿದ್ದಾರೆ. ಬೇಗನೆ 100 ಶತಕ ಬಾರಿಸಿ ದಾಖಲೆ ಸೃಷ್ಟಿಸಬೇಕು ಎಂಬುದು ಜಗತ್ತಿನ ಆಶಯ. ಇನ್ನು ರೋಹಿತ್ ಶರ್ಮಾ ಅವರು ಪ್ರಸ್ತುತ ಭಾರತದ ನಾಯಕರಾಗಿದ್ದಾರೆ. ಅವರ ವಿಶೇಷ ಸಾಧನೆ ಏಕದಿನ ಕ್ರಿಕೆಟ್‌ನಲ್ಲಿ. ಒಂದೇ ಪಂದ್ಯದಲ್ಲಿ ಅತೀ ಹೆಚ್ಚು ರನ್ ಭಾರಿಸಿದ ಆಟಗಾರರಾಗಿದ್ದಾರೆ. ಇನ್ನು ಈಗ ಬಂದ ಯಂಗ್‌ಸ್ಟಾರ್ ಸಾಧನೆ ಹಾದಿ ಹಿಡಿದಿದ್ದಾರೆ.
ಐಪಿಎಲ್ ಎಂಬ ಹುಚ್ಚು…
ಬಿಸಿಸಿಐ ಸಾರಥ್ಯದಲ್ಲಿ ಪ್ರತೀ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುತ್ತದೆ. ಯಾವ ದೇಶ ಒಂದು ಕಾಲದಲ್ಲಿ ಭಾರತ ತಂಡವನ್ನು ನೋಡಿ ನಗುತ್ತಿತ್ತೋ ಅದೇ ದೇಶದ ಆಟಗಾರರು ಐಪಿಎಲ್ ಆಡಲು ದೌಡಾಯಿಸಿ ಬರುತ್ತಾರೆ. ಇನ್ನು ಭಾರತದಲ್ಲಿ ನಡೆಯುವ ಈ ಟೂರ್ನಿಯನ್ನು ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಕ್ರೇಜ್ ಹೊಂದಿರುವ ರಾಷ್ಟ್ರಮಟ್ಟದ ಟೂರ್ನಿ ಎನ್ನುತ್ತಾರೆ.
ಅಲ್ಲಿಂದ ಇಲ್ಲಿಯವರೆಗೆ….
ಯಾವ ಭಾರತ ತಂಡವನ್ನು ನೋಡಿ ಅಪಹಾಸ್ಯ ಮಾಡಿದ್ದಾರೋ ಅದೇ ಭಾರತ ತಂಡ ಇವತ್ತು ಯಾವ ಮಟ್ಟಿಗೆ ತಲುಪಿದೆ ಎಂದರೆ ಭಾರತವನ್ನು ಸೋಲಿಸುವುದು ಸಾಮಾನ್ಯ ಮಾತಲ್ಲ ಬಿಡಿ ಎನ್ನುವಷ್ಟರಮಟ್ಟಿಗೆ. ಇಷ್ಟು ಸಾಧನೆ ಮಾಡಿದ ಭಾರತ ತಂಡದ ಅಭಿಮಾನಿಗಳು ಜಗತ್ತಿನಾದ್ಯಂತ ಇದ್ದಾರೆ. ಕ್ರಿಕೆಟ್ ಆಡಲು ನಿರಾಕರಿಸುತ್ತಿದ್ದ ಜನರು ಇದೀಗ ಭಾರತದ ಪ್ರತಿಯೊಂದು ಗಲ್ಲಿ ಹಿಡಿದು ಪ್ರತಿಯೊಂದು ಹಳ್ಳಿಯ ವರೆಗೂ ಗಲ್ಲಿ ಕ್ರಿಕೆಟ್ ಆಡುತ್ತಾರೆ. ಬರಲಿರುವ ವಿಶ್ವಕಪ್‌ಗಾಗಿ ಇಡೀ ವಿಶ್ವವೇ ಕಾಯುತ್ತಿದೆ. ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಭಾರತ ಮತ್ತೆ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ಅದರಂತೆ ಭಾರತ ಮತ್ತೆ ವಿಶ್ವಕಪ್ ಗೆಲ್ಲಬೇಕೆಂಬ ಆಸೆ ನಮ್ಮದು.
*ಪೃಥ್ವಿರಾಜ್ ಕುಲ್ಕರ್ಣಿ, ಬಿಎಲ್‌ಡಿಈ ಕಾಲೇಜು, ವಿಜಯಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.