ವನಿತಾ ಟಿ20 ವಿಶ್ವಕಪ್: ಮೊದಲ ಪ್ರಶಸ್ತಿಗೆ ಮುತ್ತಿಕ್ಕಲಿ ಭಾರತ
ಭಾರತ ಕಪ್ ಗೆದ್ದೇ ಗೆಲ್ಲುತ್ತದೆ ಎನ್ನುವುದು ಅಭಿಮಾನಿಗಳ ನಿರೀಕ್ಷೆಯಾಗಿತ್ತು.
Team Udayavani, Oct 12, 2024, 2:00 PM IST
ಅದು ಸಿಹಿ ದ್ರಾಕ್ಷಿ. ಅದಕ್ಕಾಗಿ ಒಂದೊಂದೇ ಮೆಟ್ಟಿಲೇರುತ್ತ ಕೈ ಚಾಚುತ್ತೇವೆ. ಇನ್ನೇನು ಒಂದು ಹೆಜ್ಜೆ ಮೇಲೇರಿದರೆ ಆ ಸಿಹಿ ನಮ್ಮದಾಗುತ್ತದೆ ಎನ್ನುವಾಗಲೇ ಕಾಲು ಜಾರಿ ಬಿಡುತ್ತೇವೆ. ಸಿಹಿ ಬಯಸಿದ ನಾಲಿಗೆಗೆ ಕಹಿ ಅನುಭವ. ಇದು ನಮ್ಮ ಭಾರತೀಯ ವನಿತಾ ಕ್ರಿಕೆಟ್ ತಂಡದ ಪರಿಸ್ಥಿತಿ.
ನಮ್ಮ ವನಿತಾ ಕ್ರಿಕೆಟ್ ತಂಡದಲ್ಲಿ ಪ್ರತಿಭೆಗಳಿಗೇನೂ ಕೊರತೆ ಇಲ್ಲ. ಆದರೆ ಕೆಲವೊಮ್ಮೆ ಅದೃಷ್ಟದ ಕೊರತೆ ಇದೆಯೇನೋ ಎಂದೆನಿಸದೇ ಇರದು. 50 ವರ್ಷಗಳಿಗೂ ಹೆಚ್ಚಿನ ಇತಿಹಾಸ ಇರುವ ಭಾರತದ ವನಿತಾ ಕ್ರಿಕೆಟ್ ತಂಡ ಇಲ್ಲಿಯವರೆಗೂ ಒಂದೇ ಒಂದು ಐಸಿಸಿ ಪ್ರಶಸ್ತಿಯನ್ನೂ ಗೆದಿಲ್ಲ ಎನ್ನುವುದು ನಿಜಕ್ಕೂ ಕ್ರೀಡಾಭಿಮಾನಿಗಳ ಪಾಲಿಗೆ ಬೇಸರದ ಸಂಗತಿ.
1978ರಿಂದ ಇಲ್ಲಿಯವರೆಗೂ ಭಾರತ ಏಕದಿನ ಹಾಗೂ ಟಿ20 ವಿಶ್ವಕಪ್‌ನ ಎಲ್ಲ ಆವೃತ್ತಿಗಳಲ್ಲಿಯೂ ಭಾಗವಹಿಸಿದೆ.
ಮೊಟ್ಟಮೊದಲ ಬಾರಿಗೆ ಭಾರತದ ವನಿತೆಯರು ತಿರುಗಿ ನೋಡುವಂತಹ ಸಾಧನೆ ಮಾಡಿದ್ದು 2005ರ ಏಕದಿನ ವಿಶ್ವಕಪ್‌ನಲ್ಲಿ. ಆ ಕೂಟದುದ್ದಕ್ಕೂ ಅದ್ಭುತ ಪ್ರದರ್ಶನ ತೋರಿದ ನಮ್ಮ ವನಿತೆಯರು ಮೊಟ್ಟಮೊದಲ ಬಾರಿಗೆ ಫೈನಲ್‌ಗೆ ದಾಪುಗಾಲಿಟ್ಟಿದ್ದರು. ಆದರೆ ಫೈನಲ್‌ನಲ್ಲಿ ಆಸ್ಟ್ರೇಲಿಯದ ವಿರುದ್ಧ 98 ರನ್‌ಗಳ ಬೃಹತ್ ಅಂತರದಿಂದ ಸೋತು ನಿರಾಸೆ ಅನುಭವಿಸಿದರು. ತದನಂತರ ಏಕದಿನ ವಿಶ್ವಕಪ್‌ನಲ್ಲಿ ಭಾರತದ ವನಿತೆಯರಿಂದ ಹೇಳಿಕೊಳ್ಳುವ ಮಟ್ಟದ ಪ್ರದರ್ಶನ ಬಂದಿರಲಿಲ್ಲ. ಮತ್ತೆ ತಮ್ಮ ಪ್ರದರ್ಶನದ ಮೂಲಕ ವಿಶ್ವಕಪ್ ಫೈನಲ್ ತಲುಪಲು ಭಾರತಕ್ಕೆ ತಗುಲಿದ್ದು ಬರೋಬ್ಬರಿ 12 ವರ್ಷ.
2017ರಲ್ಲಿ ಮಿಥಾಲಿ ರಾಜ್ ಪಡೆ ಮತ್ತೊಮ್ಮೆ ಫೈನಲ್‌ಗೆ ನೆಗೆದಿತ್ತು. ಸೆಮಿಫೈನಲ್‌ನಲ್ಲಿ ಬಿರುಸಿನ ಆಟವಾಡಿದ ಹರ್ಮನ್‌ಪ್ರೀತ್ ಕೌರ್ ಬಲಿಷ್ಠ ಆಸ್ಟ್ರೇಲಿಯದ ವಿರುದ್ಧ 115 ಎಸೆತಗಳಲ್ಲಿ 171 ರನ್ ಸಿಡಿಸಿ ಭಾರತ ಫೈನಲ್‌ಗೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಫೈನಲ್‌ನಲ್ಲಿ ಉತ್ತಮ ಪ್ರದರ್ಶನದ ಹೊರತಾಗಿಯೂ ಎಡವಿದ ನಮ್ಮವರು ಇಂಗ್ಲೆಂಡ್ ವಿರುದ್ಧ ಕೇವಲ ಒಂಬತ್ತು ರನ್‌ಗಳಿಂದ ಸೋತು ನೋವನುಭವಿಸಿದ್ದರು. ಈ ಕೂಟದ ಅನಂತರ ಭಾರತದಲ್ಲಿ ವನಿತಾ ಕ್ರಿಕೆಟ್ ಬಗ್ಗೆ ಇದ್ದ ಕ್ರೇಜ್ ದಿನೇ ದಿನೇ ಹೆಚ್ಚಾಗತೊಡಗಿತ್ತು. ಕಳೆದ ವಿಶ್ವಕಪ್‌ನಲ್ಲಿಯೂ ಉತ್ತಮವಾಗಿ ಆಡಿದ ಭಾರತ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯದ ವಿರುದ್ಧ ಮುಗ್ಗರಿಸಿತ್ತು.
ಇದು ಏಕದಿನ ವಿಶ್ವಕಪ್‌ನ ಕತೆಯಾದರೆ, ಟಿ20 ವಿಶ್ವಕಪ್‌ನಲ್ಲಿಯೂ ಭಾರತದ ಕತೆ ಒಂದು ರೀತಿಯಲ್ಲಿ ಹೀಗೆಯೇ ಇದೆ. 2009ರಲ್ಲಿ ಟಿ20 ವಿಶ್ವಕಪ್ ಆರಂಭವಾದಾಗಿನಿಂದಲೂ ಆಡುತ್ತಿರುವ ಭಾರತ ಒಮ್ಮೆಯೂ ಕಪ್ ಗೆದ್ದಿಲ್ಲ. 2020ರ ವಿಶ್ವಕಪ್‌ನಲ್ಲಿ ಫೈನಲ್ ತಲುಪಿದ್ದೇ ಭಾರತದ ಇಲ್ಲಿಯವರೆಗಿನ ಶ್ರೇಷ್ಠ ಸಾಧನೆ. 2017ರ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಅನುಭವಿಸಿದ ಸೋಲಿನಿಂದ ಪಾಠ ಕಲಿತ ಭಾರತ ಗೆಲ್ಲುವ ಉತ್ಸಾಹದೊಂದಿಗೆ 2020ರ ಟಿ20 ವಿಶ್ವಕಪ್‌ನಲ್ಲಿ ಆಡಲಿಳಿದಿತ್ತು. ಗ್ರೂಪ್ ಹಂತದಲ್ಲಿ ಸೋಲೇ ಕಾಣದ ಭಾರತ ಆಡಿದ ನಾಲ್ಕು ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ತಲುಪಿತ್ತು.
ಮಳೆಯ ಕಾರಣ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯ ರದ್ದಾಗಿ, ಅಂಕಪಟ್ಟಿಯ ಅಗ್ರಸ್ಥಾನ ಪಡೆದಿದ್ದ ಭಾರತ ಫೈನಲ್‌ಗೆ ನೆಗೆದಿತ್ತು. ಅಲ್ಲಿ ಭಾರತದ ಎದುರಾಳಿ ಆಸ್ಟ್ರೇಲಿಯ. ಗ್ರೂಪ್ ಸ್ಟೇಜ್‌ನಲ್ಲಿ ಆಸ್ಟ್ರೇಲಿಯಕ್ಕೆ ಸೋಲಿನ ರುಚಿಯುಣಿಸಿದ್ದ ಭಾರತ ಕಪ್ ಗೆದ್ದೇ ಗೆಲ್ಲುತ್ತದೆ ಎನ್ನುವುದು ಅಭಿಮಾನಿಗಳ ನಿರೀಕ್ಷೆಯಾಗಿತ್ತು. ಆದರೆ ಫೈನಲ್‌ನಲ್ಲಿ ಭಾರತದ ಅದೃಷ್ಟ ಮತ್ತೆ ಕೈಕೊಟ್ಟಿತು. ಭಾರತದ್ದು 85 ರನ್‌ಗಳ ಅಂತರದ ಸೋಲು. 2023ರ ವಿಶ್ವಕಪ್‌ನಲ್ಲಿ ಭಾರತದ ಅಭಿಯಾನ ಸೆಮಿಫೈನಲ್‌ಗೆ ಅಂತ್ಯಗೊಂಡಿತು.
ಈಗ ಮತ್ತೆ ಟಿ20 ವಿಶ್ವಕಪ್ ಬಂದಿದೆ. ಅಕ್ಟೋಬರ್ 6ರಿಂದ ಯುಎಇಯಲ್ಲಿ, ಬಾಂಗ್ಲಾದೇಶದ ಅತಿಥ್ಯದಲ್ಲಿ ನಡೆಯುತ್ತಿರುವ 2024ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತದ ವನಿತೆಯರು ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತಿದ್ದಾರೆ.
ಭಾರತದ್ದು ಸಂತುಲಿತ ತಂಡ. ಅನುಭವದ ಜತೆ ಬಿಸಿರಕ್ತದ ಹುರುಪು ತಂಡದಲ್ಲಿದೆ. ಜತೆಗೆ 2009ರಿಂದಲೂ ವಿಶ್ವಕಪ್ ಆಡುತ್ತಿರುವ ಅನುಭವಿ ಹರ್ಮನ್ ಪ್ರೀತ್ ಕೌರ್ ಅವರ ಸಮರ್ಥ ನಾಯಕತ್ವವೂ ತಂಡಕ್ಕಿದೆ. ಸ್ಮತಿ ಮಂಧನಾ, ಶಫಾಲಿ ವರ್ಮ, ಜಮೀಮಾ ರೋಡ್ರಿಗಸ್ ಟಾಪ್ ಆರ್ಡರ್‌ಗೆ ಬಲ ತುಂಬಿದರೆ, ಹರ್ಮನ್‌ಪ್ರೀತ್ ಕೌರ್, ರಿಚಾ ಘೋಷ್ ಮಿಡಲ್ ಆರ್ಡರ್‌ನ ಶಕ್ತಿಯಾಗಿದ್ದಾರೆ. ದೀಪ್ತಿ ಶರ್ಮ, ಪೂಜಾ ವಸ್ತ್ರಾಕರ್ ಆಲ್‌ರೌಂಡರ್‌ಗಳಾಗಿದ್ದು, ರೇಣುಕಾ ಠಾಕೂರ್ ಸಿಂಗ್, ಅರುಂಧತಿ ರೆಡ್ಡಿ ತಮ್ಮ ವೇಗದ ಮೂಲಕ; ರಾಧಾ ಯಾದವ್, ಆಶಾ ಶೋಭನಾ, ಶ್ರೇಯಾಂಕಾ ಪಾಟೀಲ್ ತಮ್ಮ ಸ್ಪಿನ್ ಮೂಲಕ ಎದುರಾಳಿಯನ್ನು ಕಟ್ಟಿ ಹಾಕಬಲ್ಲವರಾಗಿದ್ದಾರೆ. ಯಾವ ದಿಕ್ಕಿನಿಂದ ನೋಡಿದರೂ ಭಾರತದ್ದು ಅತ್ಯಂತ ಪ್ರಬಲ ತಂಡ. ಅನುಭವ, ಉತ್ಸಾಹ, ಹುರುಪು ಎಲ್ಲವೂ ತುಂಬಿರುವ ತಂಡ ಈ ಬಾರಿಯಾದರೂ ಗೆದ್ದು ಪ್ರಶಸ್ತಿಯ ಬರ ನೀಗಿಸಲಿ ಎನ್ನುವುದೇ ಕ್ರೀಡಾಭಿಮಾನಿಗಳ ಆಶಯ.
ವನಿತಾ ಕ್ರಿಕೆಟ್‌ನಂತೆ ಇತರ ಕ್ರೀಡಾ ತಂಡಗಳಿಗೂ ಸಿಗಲಿ ಪ್ರೋತ್ಸಾಹ:
ಇತ್ತೀಚಿನ ದಿನಗಳಲ್ಲಿ ಭಾರತ ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುತ್ತಿದೆ ಎನ್ನುವುದೇನೋ ನಿಜ. ಆದರೆ ಈ ಸಾಧನೆ ಭಾರತದಂತಹ ದೇಶಕ್ಕೆ ಸಾಕಾ ಎನ್ನುವುದು ಯೋಚಿಸಲೇಬೇಕಾದ ವಿಷಯ. ಕ್ರಿಕೆಟ್‌ನಲ್ಲಿ ನಮ್ಮ ವನಿತಾ ತಂಡ ದಿನೇ ದಿನೆ ಸಾಧನೆಯ ಶಿಖರ ಏರುವತ್ತ ಸಾಗುತ್ತಿದೆ. ಆದರೆ ಉಳಿದ ಕ್ರೀಡೆಯ ವಿಷಯಕ್ಕೆ ಬಂದರೆ ಭಾರತ ಸಾಕಷ್ಟು ಹಿಂದಿದೆ. 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದು ಕಂಚಿನ ಪದಕ ವಂಚಿತರಾಗಿದ್ದ ಭಾರತದ ವನಿತಾ ಹಾಕಿ ತಂಡ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿಯೂ ವಿಫಲವಾಗಿತ್ತು.
ಇದಕ್ಕೆ ಕಾರಣ ಏನು? ಫಿಫಾ ರ್‍ಯಾಂಕಿಂಗ್‌ನಲ್ಲಿ ನಮ್ಮ ವನಿತಾ ಫುಟ್‌ಬಾಲ್ ತಂಡ ಎಷ್ಟನೇ ಸ್ಥಾನದಲ್ಲಿದೆ ಅನ್ನುವುದು ನಮ್ಮಲ್ಲಿ ಎಷ್ಟು ಜನಕ್ಕೆ ಗೊತ್ತು? ನಮ್ಮ ವನಿತಾ ಕಬಡ್ಡಿ ತಂಡದ ನಾಯಕಿ ಯಾರು? ಇನ್ನು ರಾಷ್ಟ್ರೀಯ ವಾಲಿಬಾಲ್, ಬಾಸ್ಕೆಟ್ ಬಾಲ್ ಇತ್ಯಾದಿ ತಂಡಗಳ ಕುರಿತಂತೂ ಕೇಳುವುದೇ ಬೇಡ. ಕ್ರೀಡೆ ಅಂದರೆ ಬರಿ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು, ಐಸಿಸಿ ಟ್ರೋಫಿ ಗೆಲ್ಲುವುದು ಮಾತ್ರವಲ್ಲ ಅದನ್ನು ಹೊರತು ಪಡಿಸಿಯೂ ಸಾಕಷ್ಟು ಸ್ಪರ್ಧೆಗಳಿವೆ. ಅವೆಲ್ಲದರಲೂ ಭಾರತ ಎಷ್ಟು ಸಾಧನೆ ಮಾಡಿದೆ ಎನ್ನುವುದನ್ನು ಮೊದಲು ಯೋಚಿಸಬೇಕು.
ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆ ಖಂಡಿತ ಇಲ್ಲ. ಕೊರತೆ ಇರುವುದು ಅಗತ್ಯ ಪ್ರೋತ್ಸಾಹಕ್ಕೆ. ಗುಂಪು ಕ್ರೀಡೆ ಎಂದರೆ ಕ್ರಿಕೆಟ್ ಎನ್ನುವ ಅಭಿಪ್ರಾಯ ಮೊದಲು ಬದಲಾಗಬೇಕು. ಕ್ರಿಕೆಟ್‌ನಂತೆ ಇತರ ಕ್ರೀಡೆಗಳಿಗೂ ಪ್ರೋತ್ಸಾಹ, ಸೂಕ್ತ ತರಬೇತಿ ದೊರೆಯುವಂತೆ ಆಗಬೇಕು. ಮಹಿಳೆಯರು ಹೆಚ್ಚು ಹೆಚ್ಚು ಕ್ರೀಡೆಯಲ್ಲಿ ಭಾಗವಹಿಸಬೇಕು. ಹೆಣ್ಣು ಮಕ್ಕಳಿಗೆ ಕ್ರೀಡೆಯಲ್ಲಿ ಭಾಗವಹಿಸಲು ಉತ್ತೇಜಿಸುವ ವಾತಾವರಣ ಮನೆಯಲ್ಲಿಯೇ ಸೃಷ್ಠಿಯಾಗಬೇಕು. ಹಾಗಾದಲ್ಲಿ ಮಾತ್ರ ಭಾರತ ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಮೇಲಕ್ಕೇರಲು ಸಾಧ್ಯ. ಸರಕಾರ ಇದನ್ನು ಅರಿತು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಇತ್ತೀಚೆಗೆ ಕೆಲವು ವರ್ಷಗಳಿಂದ ಖೇಲೋ ಇಂಡಿಯಾದ ಮೂಲಕ ಸರಕಾರ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ. ಈ ರೀತಿಯ ಚಟುವಟಿಕೆಗಳು ಇನ್ನು ಹೆಚ್ಚಾಗಿ ಭಾರತ ಎಲ್ಲ ರೀತಿಯ ಕ್ರೀಡೆಯಲ್ಲಿಯೂ ಮುನ್ನುಗ್ಗಲಿ ಎಂಬುವುದೇ ಕ್ರೀಡಾಭಿಮಾನಿಗಳ ಕೋರಿಕೆ.
* ಸುಶ್ಮಿತಾ ನೇರಳಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್ ಹಸೀನಾ ಆಶ್ರಯ ಪಡೆದು 100 ದಿನ!
Priyank ಆಕ್ರೋಶ: ರಜಾಕಾರರ ದಾಳಿ & ಖರ್ಗೆ ಕುಟುಂಬದ ದುರಂತ, ಸಿಎಂ ಯೋಗಿ ಮಾತಿನ ಮರ್ಮವೇನು?
Explainer: M4 ರೈಫಲ್ಸ್ ಜಮ್ಮು-ಕಾಶ್ಮೀರ ಉಗ್ರರಿಗೆ ಹೇಗೆ ತಲುಪುತ್ತಿದೆ, M4 ಎಷ್ಟು ಮಾರಕ?
ಜಗತ್ತಿನ ಐದು ನಿಷೇಧಿತ ಸ್ಥಳಗಳು…ಸಾರ್ವಜನಿಕರಿಂದ ದೂರ ಇರುವ ಈ ಪ್ರದೇಶಗಳ ವಿಶೇಷತೆ ಏನು?
MUST WATCH
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು
ಹೊಸ ಸೇರ್ಪಡೆ
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
BBK11: ಬಿಗ್ ಬಾಸ್ ಮನೆಯಲ್ಲಿ ದುಡ್ಡು ಕದ್ದು ಓಡಿದ ಚೈತ್ರಾ.! ಮನೆಮಂದಿ ಶಾಕ್
Hockey: ವನಿತಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ.. ಹಾಕಿ ಕಿರೀಟ ಉಳಿಸಿಕೊಂಡ ಭಾರತ
By Election: ರಾಜ್ಯದ ಮೂರು ಕ್ಷೇತ್ರಗಳ ಪೈಕಿ ಎನ್‌ಡಿಎಗೆ ಯಾವುದು? ಕಾಂಗ್ರೆಸ್‌ಗೆ ಎಷ್ಟು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.