ಜೂ.14 ವಿಶ್ವ ರಕ್ತದಾನಿಗಳ ದಿನ; ಜೀವ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಲಿ
ಪ್ರತೀ ವರ್ಷ ಜೂನ್ 14ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ.
Team Udayavani, Jun 14, 2022, 1:24 PM IST
ಮಾನವ ಆರೋಗ್ಯದಿಂದಿದ್ದರೆ ಏನನ್ನೂ ಸಾಧಿಸಬಲ್ಲ. ಆದರೆ ಇಂದಿನ ಧಾವಂತದ ಬದುಕಿನಲ್ಲಿ ಆರೋಗ್ಯದತ್ತ ಗಮನಕೊಡುವುದನ್ನೇ ಆತ ಮರೆಯುತ್ತಿ ದ್ದಾನೆ. ಇದರ ಪರಿಣಾಮವಾಗಿ ಹಲವಾರು ಕಾಯಿಲೆ, ವೈಕಲ್ಯಗಳು ನಮ್ಮನ್ನು ಕಾಡತೊಡಗಿವೆ. ಆದರೆ ಕೊರೊನಾ ಸಾಂಕ್ರಾಮಿಕ ಇಡೀ ವಿಶ್ವವನ್ನು ಬಾಧಿಸಿದ ಬಳಿಕ ಪ್ರತಿಯೊಬ್ಬರಿಗೂ ಆರೋಗ್ಯದ ಮಹತ್ವ ಅರಿವಿಗೆ ಬರತೊಡಗಿದೆ. ಮನುಷ್ಯನ ಪಾಲಿಗೆ ರಕ್ತ ಜೀವದ್ರವ್ಯ. ಸರಿಯಾದ ಪ್ರಮಾಣದಲ್ಲಿ ಉತ್ತಮ ರಕ್ತ ಹೊಂದಿರುವುದು ವ್ಯಕ್ತಿಯೋರ್ವ ಆರೋಗ್ಯದಿಂದಿರಲು ಆವಶ್ಯಕ. ಯಾವುದಾದರೂ ಕಾಯಿಲೆ, ಶಸ್ತ್ರಚಿಕಿತ್ಸೆ, ಅಪಘಾತ ಅಥವಾ ಇನ್ನಾವುದೇ ದುರ್ಘಟನೆಗಳು ಸಂಭವಿಸಿದ ವೇಳೆ ವ್ಯಕ್ತಿಯೋರ್ವ ತನ್ನ ದೇಹದಲ್ಲಿನ ರಕ್ತವನ್ನು ಕಳೆದುಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ಆತನಿಗೆ ರಕ್ತವನ್ನು ನೀಡುವ ಅನಿವಾರ್ಯ ಪರಿಸ್ಥಿತಿ ಎದುರಾಗುತ್ತದೆ. ಈ ವೇಳೆ ಆರೋಗ್ಯವಂತ ಮನುಷ್ಯನಿಂದ ಪಡೆದ ರಕ್ತವನ್ನು ಆ ವ್ಯಕ್ತಿಗೆ ನೀಡುವ ಮೂಲಕ ಆತನ ಜೀವವನ್ನು ರಕ್ಷಿಸಲಾಗುತ್ತದೆ.
ರಕ್ತದಾನದ ಮಹತ್ವದ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸುವ, ರಕ್ತದಾನಕ್ಕೆ ಪ್ರೇರಣೆ ನೀಡುವ ಮತ್ತು ರಕ್ತದಾನಿಗಳಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪ್ರತೀ ವರ್ಷ ಜೂನ್ 14ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ.
ಹಿನ್ನೆಲೆ
ರಕ್ತದ ಗುಂಪುಗಳ ವರ್ಗೀಕರಣ ಮತ್ತು ಅದನ್ನು ವಿಂಗಡಿಸುವ ಬಗೆಯನ್ನು ಕಂಡುಹಿಡಿದ ಕಾರ್ಲ್ ಲ್ಯಾಂಡ್‌ಸ್ಟೈನರ್‌ಅವರ ಜನ್ಮದಿನವಾದ ಜೂನ್ 14ರಂದು ವಿಶ್ವ ರಕ್ತದಾನಿಗಳ ದಿನ ಆಚರಿಸಲಾಗುತ್ತದೆ. ಈ ದಿನವನ್ನು ಮೊದಲ ಬಾರಿಗೆ 2004ರ ಜೂನ್ 14ರಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತದರ ಸಹಸಂಸ್ಥೆಗಳು ಆರಂಭಿಸಿದವು. ಆ ಬಳಿಕ ನಿರಂತರವಾಗಿ ಪ್ರತೀ ವರ್ಷ ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸುತ್ತ ಬರಲಾಗಿದೆ. ಆರೋಗ್ಯವಂತ ವ್ಯಕ್ತಿಯು ಸ್ವಯಂ ಪ್ರೇರಣೆಯಿಂದ ಮತ್ತು ಉದಾರವಾಗಿ ಸುರಕ್ಷಿತ ರಕ್ತದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಅಂತಾರಾಷ್ಟ್ರೀಯ ರೆಡ್‌ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿಗಳ ಒಕ್ಕೂಟವು ಹೊಂದಿದೆ.
ಈ ವರ್ಷದ ಧ್ಯೇಯ “ರಕ್ತದಾನ ಮಾಡಿ;
ಲೋಕದ ಹೃದಯ ಮಿಡಿಯು ತ್ತಿರಲಿ’-ಇದು ಈ ವರ್ಷದ ಧ್ಯೇಯವಾಕ್ಯ.
– ಭಾರತದಲ್ಲಿ ಪ್ರತೀ 2 ಸೆಕೆಂಡ್‌ಗೆ ಒಬ್ಬರಿಗೆ ರಕ್ತದ ಅಗತ್ಯ ಉಂಟಾಗುತ್ತದೆ.
– ಪ್ರತೀ ವರ್ಷ ಸರಾಸರಿ 5 ಕೋ. ಯುನಿಟ್ ರಕ್ತ ಬೇಕಾಗುತ್ತದೆ. ಆದರೆ ಸಂಗ್ರಹವಾಗುವುದು 2.5 ಕೋ. ಯುನಿಟ್ ಮಾತ್ರ.
– ನಮ್ಮಲ್ಲಿ ಹೆಚ್ಚಾಗಿ ಬೇಡಿಕೆ ಇರುವುದು ಒ ಗುಂಪಿನ ರಕ್ತಕ್ಕೆ.
– ರಕ್ತದಲ್ಲಿ 4 ಘಟಕಗಳು. ಅವು ಕೆಂಪು ರಕ್ತಕಣ, ಪ್ಲೇಟ್‌ಲೆಟ್ಸ್, ಪ್ಲಾಸ್ಮಾ ಮತ್ತು ಕ್ರಯೋ ಪ್ರಸಿಪಿಟೆಟ್. ರಕ್ತವನ್ನು ದಾನ ಮಾಡಬಹುದು ಇಲ್ಲವೇ ಯಾವುದಾದರೂ ಘಟಕಗಳನ್ನು ಕೂಡ ನೀಡಬಹುದು.
– ದಾನವಾಗಿ ಪಡೆದ ರಕ್ತದ ಬಾಳಿಕೆ ಅವಧಿ 35ರಿಂದ 42ದಿನಗಳು.
ಏನು ಪ್ರಯೋಜನ?
– ದಾನಿಗಳು ಒಮ್ಮೆ ರಕ್ತದಾನ ಮಾಡಿದರೆ ಮುಂದಿನ ಮೂರು ತಿಂಗಳುಗಳವರೆಗೆ ದಾನ ಮಾಡಬಾರದು.
– ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಅಲ್ಲದೆ ಉತ್ತಮ ಆರೋಗ್ಯ ಹೊಂದಬಹುದು ಹಾಗೆಯೇ ಕಾರ್ಯತತ್ಪರತೆ ಮತ್ತು ಜ್ಞಾಪಕಶಕ್ತಿ ಹೆಚ್ಚುತ್ತದೆ.
– ಇದರಿಂದ ರಕ್ತದ ಒತ್ತಡ, ಮಧುಮೇಹದಂತಹ ರೋಗಗಳನ್ನು ತಡೆಯಬಹುದಲ್ಲದೆ ಇದು ಕೊಬ್ಬಿನ ಅಂಶ ಕಡಿಮೆ ಮಾಡಿ ಹೃದಯಾಘಾತವನ್ನು ತಡೆಯಲು ನೆರವಾಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.