ಜಗತ್ತಿನ ಯಶಸ್ವೀ ಸಂಶೋಧಕರೆಂದರೆ ಭಾರತೀಯ ವೈದ್ಯರು !
Team Udayavani, Jul 1, 2021, 6:35 AM IST
ಸ್ವಾತಂತ್ರ್ಯ ಹೋರಾಟಗಾರ, ಸ್ವಾತಂತ್ರ್ಯೋತ್ತರ ಭಾರತದ ಏಳಿಗೆಗೆ ಶ್ರಮಿಸಿದ ಮಹಾ ಮಾನವತಾವಾದಿ, ಅಪ್ರತಿಮ ವೈದ್ಯ, ಪಶ್ಚಿಮ ಬಂಗಾಲದ ಮಾಜಿ ಮುಖ್ಯಮಂತ್ರಿ ಡಾ| ಬಿ.ಸಿ.ರಾಯ್ ಅವರ ಜನ್ಮದಿನವಾದ ಜುಲೈ 1ರಂದು
ಪ್ರತೀ ವರ್ಷ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ವೈದ್ಯಕೀಯ ಕ್ಷೇತ್ರದ ಬೆಳವಣಿಗೆ, ವೈದ್ಯರ ಮಹತ್ವ, ಹೊಣೆಗಾರಿಕೆ ಹಾಗೂ ಇಂದಿನ ವೈದ್ಯಕೀಯ ರಂಗದ ಸ್ಥಿತಿಗತಿಯ ಕುರಿತಂತೆ ಈ ವಿಶೇಷ ಲೇಖನ.
ಇಂದು ಯುವಜನತೆ ವೈದ್ಯಕೀಯ ಶಿಕ್ಷಣ ಮತ್ತು ವೃತ್ತಿಯಲ್ಲಿ ಆಸಕ್ತಿ ವಹಿಸಿ ವಿಶ್ವದ ವೃತ್ತಿ ನಿರತ ವೈದ್ಯರೊಂದಿಗೆ ಸ್ಪರ್ಧಾತ್ಮಕವಾಗಿ ಬೆಳೆಯಬೇಕಿದೆ. ವಿಶ್ವದ ಅತೀ ಹೆಚ್ಚು ಯಶಸ್ವೀ ಸಂಶೋಧಕರು ಮತ್ತು ವೈದ್ಯರು ಅಂದರೆ ಭಾರತೀಯರು ಎಂಬುದು ನಾವೆಲ್ಲರೂ ಹೆಮ್ಮೆ ಪಡುವ ವಿಚಾರ.
“ವೈದ್ಯೋ ನಾರಾಯಣೋ ಹರಿ’ ಎಂದು ನಮ್ಮ ಸಂಪ್ರದಾಯದಲ್ಲಿ ಹೇಳಿರುವಂತೆ ವೈದ್ಯರಲ್ಲಿ ಸಾಕ್ಷಾತ್ ಭಗವಂತನನ್ನೇ ನಾವು ಕಾಣುತ್ತೇವೆ. ಯಾಕೆಂದರೆ ಬದುಕು ಬಹಳ ಅಮೂಲ್ಯವಾದುದು, ಜೀವ ಇದ್ದರೆ ಮಾತ್ರ ಈ ದೇಹವನ್ನು ಬಳಸಿಕೊಳ್ಳಬಹುದು. ಅದಕ್ಕೆ ದೇಹದ ಆರೋಗ್ಯ ಚೈತನ್ಯವಾಗಿರಬೇಕು. ಅನಾರೋಗ್ಯಕರವಾದ ಚೈತನ್ಯ ಅಥವಾ ಆನಾರೋಗ್ಯಕರ ದೇಹ ವ್ಯರ್ಥ. ಆದ್ದರಿಂದ ಸದೃಢವಾದ ಮತ್ತು ಎಲ್ಲ ರೋಗಗಳಿಂದ ಮುಕ್ತವಾಗಿರುವ ದೇಹ ಇರಬೇಕೆಂಬುದೇ ಎಲ್ಲರ ಅಪೇಕ್ಷೆ. ಹಾಗಾಗಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಮೊದಲು ನಾವೇ ವೈದ್ಯರು. ಆದರೆ ಕೊರೊನಾದಂತಹ ರೋಗಗಳು ಆಕಸ್ಮಿಕವಾಗಿ ಎದುರಾದಾಗ ವೈದ್ಯರು ಮಾತ್ರ ಪರಿಹಾರ ಸೂಚಿಸಬಲ್ಲರು.
ಐದು ಸಾವಿರ ವರ್ಷಗಳಲ್ಲಿ ಎಲ್ಲ ಧರ್ಮಗಳಲ್ಲೂ ವೈದ್ಯವೃತ್ತಿಯನ್ನು ಪೋಷಿಸಲಾಗಿದೆ. ಹಿಂದೂ, ಜೈನ, ಬೌದ್ಧ, ಇಸ್ಲಾಂ, ಕ್ರೈಸ್ತ ಧರ್ಮಗಳಲ್ಲಿ ವೈದ್ಯಕೀಯ ವಿಚಾರವಾಗಿ ಪ್ರತ್ಯೇಕ ಅಧ್ಯಯನ ನಡೆದಿದೆ. ಹಿಂದೂ ಧರ್ಮಗಳಲ್ಲಿ ವೇದಕ್ಕೆ ಸಮಾನವಾಗಿರತಕ್ಕಂಥ ಆಯುರ್ವೇದವನ್ನು ಗೌರವಿಸಲಾಗಿದೆ. ಅದರ ಅರ್ಥ ಋಷಿಮುನಿಗಳಿಂದ ಹಿಡಿದು ಸಾಮಾನ್ಯ ಗೃಹಸ್ಥನವರೆಗಿನ ಆರೋಗ್ಯ ರಕ್ಷಣೆಯೇ ಬಹುದೊಡ್ಡ ಸವಾಲಾಗಿತ್ತು. ಇದನ್ನು ಎದುರಿಸಲು ಸಂಶೋಧನೆಗಳನ್ನು ಮಾಡಿದ್ದಾರೆ. ರೋಗನಿರೋಧಕ ಶಕ್ತಿ, ರೋಗಕ್ಕೆ ಪರಿಹಾರ ಕೇವಲ ಔಷಧದಿಂದ ಮಾತ್ರವಲ್ಲ ಅದರ ಜತೆಗೆ ಜೋತಿಷ ಶಾಸ್ತ್ರ, ಜಾತಕ ಶಾಸ್ತ್ರವೂ ಸೇರಿದಂತೆ ಎಲ್ಲ ಶಾಸ್ತ್ರಗಳನ್ನು ಪರಿಗಣಿಸಿ ಎಲ್ಲವೂ ಮನುಷ್ಯ ಹಾಗೂ ಪ್ರಾಣಿಗಳ ಮೇಲೆ ಪರಿಣಾಮಕಾರಿ ಪ್ರಭಾವ ಬೀರುತ್ತದೆ ಎಂದು ಅರಿತಿದ್ದಾರೆ. ಆದ ಕಾರಣ ಇಂದಿಗೂ ವೈದ್ಯರಿಗೆ ವಿಶೇಷವಾದ ಗೌರವವನ್ನು ನಮ್ಮ ಶಾಸ್ತ್ರಗಳು ನೀಡಿವೆ.
ಈಗ ಸಮಕಾಲೀನವಾಗಿ ವೈದ್ಯ ವೃತ್ತಿ ಬದಲಾಗಿದೆ. ಹಿಂದೆ ವೈದ್ಯ ವೃತ್ತಿ ಪರಂಪರಾನುಗತವಾಗಿ ಅಜ್ಜಿಯಿಂದ, ತಂದೆಯಿಂದ ಮಕ್ಕಳಿಗೆ ಬರುತ್ತಿತ್ತು. ಅದಲ್ಲದೆ ನಾಟಿ ವೈದ್ಯ ಪದ್ಧತಿ ಎಂಬ ವಿಶೇಷ ವಿಭಾಗ ಹಳ್ಳಿಗಳಲ್ಲಿತ್ತು. ಜನರು ಎಲ್ಲ ವೃಕ್ಷಗಳನ್ನು ಗುರುತಿಸುತ್ತಿದ್ದರು. ಬಹಳ ದೊಡ್ಡ ಆಶ್ಚರ್ಯದ ವಿಚಾರವೆಂದರೆ ವನದಲ್ಲಿರುವ ಕೋಟ್ಯಂತರ ವೃಕ್ಷಗಳನ್ನು ಗಮನಿಸಿದರೆ ಪ್ರತೀ ವೃಕ್ಷದ ಬೇರಿನಿಂದ ಹಿಡಿದು, ಕಾಂಡ, ಎಲೆ, ಹಣ್ಣು, ಹೂವಿನ ಸ್ವಭಾವವೇನು? ಮನುಷ್ಯ ಅಥವಾ ಪ್ರಾಣಿಗಳ ಮೇಲೆ ಹೇಗೆ ಪರಿಣಾಮಕಾರಿ ಎಂಬುದನ್ನು ಯಾವುದೇ ವೈದ್ಯಕೀಯ ಪರಿಕರ ಇಲ್ಲದೆ ಅಂದಿನ ಜನ ಸಂಶೋಧಿಸಿದ್ದರು. ಜತೆಗೆ ನಾಟಿ ವೈದ್ಯರು ನಾಡಿ ಮಿಡಿತ ನೋಡಿ ಪರಿಣಾಮಕಾರಿ ಚಿಕಿತ್ಸೆ ನೀಡುತ್ತಿದ್ದರು. ಜತೆಗೆ ಸಮಾಜದ ವೈದ್ಯರೂ ಈ ಕೆಲಸ ಮಾಡುತ್ತಿದ್ದರು.
ಈಗಿನ ಹಾಗೆ ರೋಗ ಪರೀಕ್ಷಾ ವಿಧಾನಗಳಿರಲಿಲ್ಲ. ನಾಡಿ ವೈದ್ಯ, ಪ್ರಯೋಗ ಪರಿಹಾರ(ರೋಗಿಯ ಲಕ್ಷಣಗಳನ್ನ ಕೇಳಿ ಯಾವ ಕಾಯಿಲೆ ಎಂಬುದನ್ನು ಪತ್ತೆಹಚ್ಚುವುದು)ದಿಂದ ಔಷಧ ನೀಡುತ್ತಿದ್ದರು. ಇಂದು ರೋಗ ಮೂಲ ಪತ್ತೆ ಹಚ್ಚುವ ವಿಧಾನ, ಲ್ಯಾಬೋರೆಟರಿಗಳು, ವೈದ್ಯಕೀಯ ಉಪಕರಣಗಳು ಬಂದಿರುವುದರಿಂದ ನಿಖರವಾಗಿ ಚಿಕಿತ್ಸೆ ನೀಡುವ ಜತೆಗೆ ಫಲಿತಾಂಶ ಕಾಣಲು ಸಾಧ್ಯವಾಗಿದೆ. ಪರಿಣಾಮ ನಾಟಿ ವೈದ್ಯರು ತೆರೆಗೆ ಸರಿದಿದ್ದಾರೆ, ಆಯುರ್ವೇದವೂ ಪ್ರಶ್ನಾರ್ಥಕವಾಗಿದೆ. ಹೀಗಾಗಿ ನಮ್ಮ ಮುಂದಿರುವ ಆಯ್ಕೆ ಎಂದರೆ ಪ್ರಕೃತಿ ಚಿಕಿತ್ಸೆ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೀವನ ವಿಧಾನ ರೂಢಿಸಿಕೊಂಡು ರೋಗವನ್ನು ದೂರವಿಡಬೇಕು.
ವೈದ್ಯರೂ ಎಂದರೆ ನಾಟಿ, ಆಯುರ್ವೆàದ, ಅಲೋಪತಿ, ಪ್ರಾಕೃತಿಕ ಚಿಕಿತ್ಸೆ ನೀಡುವವರೂ ವೈದ್ಯರೇ. ಆದರೆ ಈಗ ಹೆಚ್ಚು ಮಹತ್ವ, ಚರ್ಚೆಗೆ ಒಳಪಡುವವರು ಅಲೋಪತಿ ವೈದ್ಯರು. ಅವರು ತಮ್ಮ ಅಪಾರವಾದ ಜ್ಞಾನದಿಂದ ಅಂದರೆ ಯಾವ ಸಂಶೋಧನೆ ಮಾಡಿದರೂ ಅದನ್ನು ಖಾಸಗಿಯಾಗಿರಿಸದೆ ಸಮಾಜಕ್ಕೆ ಅರ್ಪಿಸುತ್ತಾರೆ. ಅದರ ಉಪಯೋಗ ವಿಶ್ವಕ್ಕೆ ದೊರಕುತ್ತದೆ. ರೋಗ ನಿರೋಧಕ ಶಕ್ತಿ ಬೆಳೆಸುವುದು, ರೋಗ ಪರಿಹಾರ ಮಾಡುವುದು ಒಂದೆಡೆಯಾದರೆ, ಶಸ್ತ್ರ ಚಿಕಿತ್ಸೆ ಮೂಲಕ ರೋಗ ಇರುವ ಭಾಗ ತೆಗೆದು ಅಂಗಾಂಗ ಕಸಿವರೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಗತಿ ಕಂಡಿದ್ದೇವೆ. ಇದರಿಂದ ಅಲೋಪತಿ ಮುಖ್ಯವಾದ ಭಾಗವಾಗಿದೆ.
ಜಗತ್ತಿನ ದೊಡ್ಡ ಸವಾಲು ಎಂದರೆ ವ್ಯಕ್ತಿ ಹೇಗೆ ತನ್ನನ್ನು ತಾನು ನಿರ್ವಹಿಸಿಕೊಳ್ಳುತ್ತಾನೆ ಎಂಬುದು. ವೈದ್ಯಕೀಯ ಪದ್ಧತಿ ಇದೆ ಎಂದು ಸ್ವೇಚ್ಛೆಯಿಂದ ಬದುಕುವುದಲ್ಲ. ಆದರೆ ಇಂದು ಆಗುತ್ತಿರುವುದು ಅದೇ. ವೈಯಕ್ತಿಕವಾಗಿ ಎಲ್ಲರೂ ತಮ್ಮ ತಮ್ಮ ವ್ಯಕ್ತಿತ್ವವನ್ನು ನಿಯಂತ್ರಣದಲ್ಲಿರಿಸಿಕೊಳ್ಳಬೇಕಿದೆ.
ಹಿಂದೆ ರೋಗದ ಕುರಿತು ರೋಗಿಗಳಿಗೆ ತಿಳಿಸದೆ ಗುಟ್ಟಾಗಿ ಕಾಪಾಡುತ್ತಿದ್ದರು. ಆದರೆ ಇಂದು ಹಾಗಿಲ್ಲ. ರೋಗಿಗೆ ರೋಗದ ಮಾಹಿತಿ ನೀಡಲಾಗುತ್ತದೆ. ಇದು ಸಕಾರಾತ್ಮಕ ಬೆಳವಣಿಗೆ. ನಮಗೆ ನಾವೇ ಚಿಕಿತ್ಸಕರಾಗದೆ ಸೂಕ್ತ ಕಾಲಕ್ಕೆ ಸೂಕ್ತ ವೈದ್ಯರನ್ನು ಸಂಪರ್ಕಿಸಿದರೆ ರೋಗ ಮುಕ್ತ ಜೀವನ ನಮ್ಮದಾಗಲಿದೆ.
ವೈದ್ಯರು ಯಾಕೆ ಭಗವಂತನ ಸ್ವರೂಪ ಎಂದರೆ, ದೇವರು ಕೊಟ್ಟ ದೇಹದ ಅಂಗಾಂಗಗಳನ್ನು ವೈದ್ಯರ ಮೂಲಕ ಜೋಡಿಸಬಹುದು. ಹೀಗಾಗಿ ಅಂಗಾಂಗ ದಾನ ಅತೀ ಪ್ರಾಶಸ್ತ್ಯ ಪಡೆದಿದೆ. ಅಂಗ ಪಡೆಯುವವರ ಆಯುಷ್ಯ ವೃದ್ಧಿಯಾಗುತ್ತದೆ. ಆದ್ದರಿಂದ ವೈದ್ಯರು ತಾವು ಕಲಿತ ವಿದ್ಯೆ, ಪಡೆದಂತಹ ಶಿಕ್ಷಣವನ್ನು ಚೆನ್ನಾಗಿ ಅಭ್ಯಾಸ ಮಾಡಿಕೊಳ್ಳಬೇಕು. ಹೀಗೊಂದು ಮಾತಿದೆ, ಜೋತಿಷ ಶಾಸ್ತ್ರ ಕಲಿತವರು ತಪಸ್ಸು ಮಾಡಿ, ಧ್ಯಾನ ಮಾಡಿ ವಾಕ್‌ಶಕ್ತಿ ಪಡೆಯಬೇಕು…ಅದೇ ರೀತಿ ವೈದ್ಯರು ಕಾಲೇಜಿನಿಂದ ಪದವಿ ಪಡೆದ ಕೂಡಲೇ ಸರ್ವಜ್ಞರಾಗುವುದಿಲ್ಲ. ಪ್ರಾಪಂಚಿಕ ಅನುಭವವನ್ನು ಬೆಳೆಸಿಕೊಂಡು, ಸಾಕಷ್ಟು ಅಭ್ಯಾಸ ಮಾಡಿ ಪಕ್ವತೆ ಪಡೆಯಬೇಕು.
ಒಂದೆಡೆ ವೈದ್ಯಕೀಯ ಸೇವಾ ಕ್ಷೇತ್ರ ಉದ್ಯಮವಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ವೈದ್ಯಕೀಯ ಕ್ಷೇತ್ರದಲ್ಲಿ ಎಲ್ಲ ರೋಗಿಗಳಿಗೆ ಒಂದೇ ರೀತಿ ವೈದ್ಯಕೀಯ ವೆಚ್ಚದ ಬಿಲ್ ಭರಿಸಲಾಗದು. ರೋಗದ ಗುಣಲಕ್ಷಣ, ಅದಕ್ಕೆ ನೀಡುವ ಔಷಧದ ವೆಚ್ಚದಲ್ಲಿ ವ್ಯತ್ಯಾಸ ಸಹಜ. ಆದರೆ ಕೆಲವೊಮ್ಮೆ ಕನಿಷ್ಠ ಔಷಧಗಳ ಮೂಲಕ ರೋಗ ವಾಸಿ ಮಾಡಲು ಸಾಧ್ಯವೇ ಎಂಬುದನ್ನು ವೈದ್ಯರು ಅರಿತು ಪಾಲಿಸಿ ವೃತ್ತಿ ಧರ್ಮ ಕಾಪಾಡಬೇಕು. ಸರಕಾರ ಈ ದಿಸೆಯಲ್ಲಿ ಮಾರ್ಗದರ್ಶನ ನೀಡಬೇಕು.
ವೈದ್ಯರು ದೇವರಂತೆ ಎಂದು ಹೇಳಿದರೂ ಅವರೂ ಮನುಷ್ಯರೇ. ಅವರಿಂದಲೂ ತಪ್ಪು ಆಗಬಹುದು, ವೈದ್ಯರಿಗೆ ತಾವು ಕೊಡುವ ಚಿಕಿತ್ಸೆ ಬಗ್ಗೆ ಭಯ ಉಂಟಾಗಿದೆ. ಯಾಕೆಂದರೆ ಎಲ್ಲಾದರೂ ಸ್ವಲ್ಪ ತಪ್ಪಿದಲ್ಲಿ ನಮ್ಮ ಮೇಲೆ ಆಘಾತವಾಗಬಹುದು, ರೋಗಿಗಳ ಕುಟುಂಬದವರು ಆಕ್ರಮಣ ಮಾಡಬಹುದೆಂಬ ಭಯ ಆವರಿಸಿದೆ. ವೈದ್ಯಕೀಯ ವೃತ್ತಿ ಅನ್ನುವುದು ವಯೋಧರ್ಮದನುಸಾರ ವಯಸ್ಸು, ಅನುಭವ ಹೆಚ್ಚಾದಂತೆ ಚಿಕಿತ್ಸಾ ಪದ್ಧತಿಯ ಆತ್ಮವಿಶ್ವಾಸ ಹೆಚ್ಚುತ್ತದೆ. ಆದ್ದರಿಂದ ನನ್ನ ಸಂದೇಶವೇನೆಂದರೆ ವೈದ್ಯರು ಭಗವಂತರಲ್ಲ ಅವರೂ ಮನುಷ್ಯರೇ.. ವೈದ್ಯರನ್ನು ಗೌರವಿಸೋಣ. ಅವರಿಂದ ತಪ್ಪುಗಳಾದಲ್ಲಿ ಸಾವಧಾನ ವಾಗಿ ವಿಮರ್ಶೆಗೆ ಆಸ್ಪದ ನೀಡೋಣ. ವೈದ್ಯರು ಮತ್ತು ಸಮಾಜದ ನಡುವಿನ ಬಾಂಧವ್ಯ ವೃದ್ಧಿಸೋಣ.
ಸಮರ್ಪಣ ಮನೋಭಾವ
ವೈದ್ಯ ವೃತ್ತಿ ಅತ್ಯಂತ ಪವಿತ್ರವಾದುದು. ಪ್ರೀತಿ, ತ್ಯಾಗ ಮತ್ತು ಸೇವಾ ಮನೋಭಾವದಿಂದ ಚಿಕಿತ್ಸೆ ನೀಡಿ ರೋಗಿಗಳು ಆದಷ್ಟು ಶೀಘ್ರ ಗುಣಮುಖರಾಗಿ ಪೂರ್ಣ ಆರೋಗ್ಯ ಭಾಗ್ಯವನ್ನು ಹೊಂದುವಂತೆ ಮಾಡುವುದೇ ವೈದ್ಯರ ಗುರಿ. ವೈದ್ಯ ವೃತ್ತಿಯೆಂಬುದು ಸಮರ್ಪಣ ಮನೋಭಾವದ ಮಗದೊಂದು ಸ್ವರೂಪ. ಕೊರೊನಾ ಸಂಕಷ್ಟದ ದಿನಗಳಲ್ಲಂತೂ ಎಲ್ಲ ವೈದ್ಯರು ತಮ್ಮ ಮನೆ ಹಾಗೂ ಕುಟುಂಬದ ಸಂಪರ್ಕವೂ ಇಲ್ಲದೆ, ಆಹಾರ, ವಿಶ್ರಾಂತಿ ಮತ್ತು ಕಾಲದ ಮಿತಿಯನ್ನೂ ಮರೆತು ಮಾನವೀಯತೆಯಿಂದ ರೋಗಿಗಳ ಸೇವೆ ಮಾಡಿದ್ದಾರೆ. ಅಂತಹ ಎಲ್ಲ ವೈದ್ಯರಿಗೆ ಅಭಿನಂದನೆಗಳು.
– ಡಾ| ಡಿ. ವೀರೇಂದ್ರ ಹೆಗ್ಗಡೆ , ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್ ಬಿಹಾರಿ ವಾಜಪೇಯಿ ಭದ್ರ ಬುನಾದಿ
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.