World Hepatitis Day: ದೀರ್ಘಕಾಲೀನ ಹೆಪಟೈಟಿಸ್: ಸದ್ದಿಲ್ಲದೆ ಕೊಲ್ಲುವ ಕಾಯಿಲೆ
ಹೆಪಟೈಟಿಸ್ ಸಿಯು ರಕ್ತದಿಂದ ರಕ್ತದ ಸಂಪರ್ಕದಿಂದ ಪ್ರಸಾರವಾಗುತ್ತದೆ.
Team Udayavani, Jul 28, 2023, 4:23 PM IST
ಹೆಪಟೈಟಿಸ್ ಎಂದರೆ ಯಕೃತ್ ಅಥವಾ ಪಿತ್ತಜನಕಾಂಗದ ಉರಿಯೂತ ಅಥವಾ ಬಾವು. ಸಾಮಾನ್ಯವಾಗಿ ಇದು ವೈರಾಣು ಸೋಂಕಿನಿಂದ ಉಂಟಾಗುತ್ತಿದ್ದು, ದೀರ್ಘಕಾಲಿಕ ಮತ್ತು ಅಲ್ಪ ಕಾಲಿಕವಾದ ಪಿತ್ತಕೋಶದ ಕಾಯಿಲೆಗೆ ಕಾರಣ ವಾಗುತ್ತದೆ. ಐದು ಪ್ರಧಾನವಾದ ಹೆಪಟೈಟಿಸ್ ವೈರಸ್ ವಿಧಗಳಿವೆ; ಎ, ಬಿ, ಸಿ, ಡಿ ಮತ್ತು ಇ. ಇತರ ವೈರಸ್ ಅಂದರೆ, ಸಾರ್ಸ್ ಕೋವಿಡ್-19, ಇಬಿವಿಯಂತಹವೂ ಹೆಪ ಟೈಟಿಸ್‌ಗೆ ಕಾರಣವಾಗಬಹುದು. ಔಷಧ, ಮದ್ಯಪಾನ ಹವ್ಯಾಸ ಅಥವಾ ವಿಷಾಂಶಗಳು ಹೆಪಟೈಟಿಸ್‌ಗೆ ಸೋಂಕೇತರವಾದ ಇತರ ಕಾರಣಗಳು. “ನ್ಯಾಶ್’ (ನಾನ್ ಅಲ್ಕೊ ಹಾಲಿಕ್ ಸ್ಟೇಟೊ ಹೆಪಟೈಟಿಸ್) ಎಂದು ಕರೆಯ ಲ್ಪಡುವ, ಪಿತ್ತಕೋಶದಲ್ಲಿ ಕೊಬ್ಬು ಸಂಗ್ರಹ ವಾಗುವ ಸಮಸ್ಯೆ ಕೂಡ ಹೆಪಟೈಟಿಸ್‌ಗೆ ಕಾರಣವಾಗಬಹುದು.
ಹೆಪಟೈಟಿಸ್ ಎ ಮತ್ತು ಇ ವೈರಸ್‌ಗಳಿಂದ ಸ್ವಯಂ ನಿಯಂತ್ರಣಗೊಳ್ಳುವ ಅಲ್ಪಾವಧಿಯ ಹೆಪಟೈಟಿಸ್ ಉಂಟಾಗುತ್ತಿದ್ದು, ಇದು ಯಕೃತ್ ವೈಫಲ್ಯವಾಗಿ ಉಲ್ಬಣಗೊಳ್ಳುವುದು ಅಪರೂಪ. ಈ ಎರಡೂ ವೈರಾಣುಗಳು ಕಶ್ಮಲಯುಕ್ತ ನೀರು ಮತ್ತು ಆಹಾರದಿಂದ ಹರಡುತ್ತವೆ. ವೈಯಕ್ತಿಕ ನೈರ್ಮಲ್ಯವನ್ನು ಹೆಚ್ಚಿಸಿಕೊಳ್ಳುವುದು ಹಾಗೂ ಕುದಿಸಿ ತಣಿಸಿದ ನೀರು, ಸರಿಯಾಗಿ ಬೇಯಿಸಿದ ಆಹಾರವನ್ನು ಸೇವಿಸುವ ಮೂಲಕ ಈ ವೈರಾಣುಗಳ ಸೋಂಕಿಗೆ ತುತ್ತಾಗುವುದನ್ನು ತಡೆಯಬಹುದು. ಹೆಪಟೈಟಿಸ್ ಎ ವಿರುದ್ಧ ಈಗ ಪರಿಣಾಮಕಾರಿ ಲಸಿಕೆಗಳು ಲಭ್ಯವಿವೆ.
ಹೆಪಟೈಟಿಸ್ ಬಿ ಮತ್ತು ಸಿ ವೈರಸ್ ಸೋಂಕುಗಳು ದೀರ್ಘಕಾಲಿಕ ಹೆಪಟೈಟಿಸ್ (ಆರು ತಿಂಗಳುಗಳಿಗಿಂತ ಅಧಿಕ ಅವಧಿ) ಆಗಿ ಬೆಳವಣಿಗೆಯಾಗಬಹುದಾಗಿದ್ದು, ಇಂತಹ ಸಂದರ್ಭದಲ್ಲಿ ಯಕೃತ್ ದಶಕಗಳ ಕಾಲ ಉರಿಯೂತದ ಸ್ಥಿತಿಯಲ್ಲಿಯೇ ಇರುತ್ತದೆ. ಇದರಿಂದಾಗಿ ಯಕೃತ್‌ಗೆ ಭಾರೀ ಪ್ರಮಾಣದಲ್ಲಿ ಹಾನಿ (ಸಿರೋಸಿಸ್), ಯಕೃತ್ ಕ್ಯಾನ್ಸರ್ ಮತ್ತು ಇವುಗಳಿಂದಾಗಿ ಅವಧಿಪೂರ್ವ ಮರಣ ಸಂಭವಿಸಬಹುದಾಗಿದೆ. ಹೀಗಾಗಿ ಇದೊಂದು ಪ್ರಾಣಾಪಾಯ ಉಂಟುಮಾಡಬಹುದಾದ ಕಾಯಿಲೆಯಾಗಿದೆ. ಜಾಗತಿಕವಾಗಿ 325 ದಶಲಕ್ಷ ಮಂದಿ ಹೆಪಟೈಟಿಸ್ ಬಿ ಅಥವಾ ಹೆಪಟೈಟಿಸ್ ಸಿ ವೈರಾಣು ಸೋಂಕಿಗೊಳಗಾಗಿ ಬದುಕುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಹೆಪಟೈಟಿಸ್ ಬಿ ಮತ್ತು ಹೆಪಟೈಟಿಸ್ ಸಿ ವೈರಾಣು ಸೋಂಕುಗಳು ಜಾಗತಿಕವಾಗಿ ಪ್ರತೀ ವರ್ಷ 1.4 ದಶಲಕ್ಷ ಮಂದಿಯ ಸಾವಿಗೆ ಕಾರಣವಾಗುತ್ತಿವೆ – ಇದು ಎಚ್‌ಐವಿ/ಏಡ್ಸ್ ಮತ್ತು ಮಲೇರಿಯಾಗಳಿಂದ ಒಟ್ಟಾಗಿ ಪ್ರತೀ ವರ್ಷ ಸಂಭವಿಸುವ ಸಾವಿಗಿಂತ ಹೆಚ್ಚು. ಜಾಗತಿಕವಾಗಿ ಪ್ರತೀ 30 ಸೆಕೆಂಡುಗಳಿಗೆ ಒಬ್ಬರು ಹೆಪಟೈಟಿಸ್‌ನಿಂದಾಗಿ ಸಾಯುತ್ತಿದ್ದಾರೆ. ಪ್ರತೀ ಮೂರರಲ್ಲಿ ಎರಡು ಯಕೃತ್ ಕ್ಯಾನ್ಸರ್ ಪ್ರಕರಣಗಳಿಗೆ ಹೆಪಟೈಟಿಸ್ ಬಿ ಮತ್ತು ಸಿ ವೈರಸ್ ಸೋಂಕುಗಳು ಕಾರಣವಾಗಿರುತ್ತವೆ. ಹೆಪಟೈಟಿಸ್ ಬಿ ಅಥವಾ ಸಿ ಸೋಂಕಿಗೆ ಒಳಗಾಗಿರುವ ಪ್ರತೀ ಹತ್ತು ಮಂದಿಯಲ್ಲಿ ಒಂಬತ್ತು ಮಂದಿಗೆ ತಮಗೆ ಸೋಂಕು ತಗಲಿರುವುದೇ ತಿಳಿದಿರುವುದಿಲ್ಲ.
ಇದರಿಂದಾಗಿ ಯಕೃತ್‌ನ ಗಂಭೀರ ಕಾಯಿಲೆ ಉಂಟಾಗುತ್ತದೆಯಲ್ಲದೆ, ಅವರಿಗೆ ಅರಿವಿಲ್ಲದೆಯೇ ಇತರರಿಗೆ ಸೋಂಕು ಪ್ರಸಾರವೂ ಆಗುತ್ತದೆ. ಲಸಿಕೆ ಹಾಕಿಸಿಕೊಳ್ಳುವುದು, ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಪಡೆದುಕೊಳ್ಳುವುದು ಮಾತ್ರ ಈ ಕಾಯಿಲೆಯನ್ನು ನಿಯಂತ್ರಿಸಲು ಇರುವ ಮಾರ್ಗೋಪಾಯಗಳಾಗಿವೆ. ಏಕೆಂದರೆ, ಸೋಂಕಿಗೆ ಒಳಗಾಗಿರುವುದು ತಿಳಿಯದೇ ಇರುವುದರಿಂದ ಯಕೃತ್‌ನ ಹಾನಿ ಉಲ್ಬಣಿಸುತ್ತ ಹೋಗುತ್ತಿರುತ್ತದೆ, ಅದರ ಲಕ್ಷಣಗಳು ಕಂಡುಬರುವುದು ಕೊನೆಯ, ಉಲ್ಬಣಾವಸ್ಥೆಯಲ್ಲಿ ಮಾತ್ರ. ಹೆಪಟೈಟಿಸ್ ಬಿ ಮತ್ತು ಸಿಯ ದೀರ್ಘಕಾಲಿಕ ಸೋಂಕಿನಿಂದ ಯಕೃತ್‌ನ ಕ್ಯಾನ್ಸರ್ ಉಂಟಾಗುವ ಅಪಾಯ ಇರುವುದರಿಂದ ಗ್ಯಾಸ್ಟ್ರೊ ಎಂಟರಾಲಜಿ ತಜ್ಞರ ಬಳಿ ನಿಯಮಿತವಾಗಿ ತಪಾಸಣೆ ಮಾಡಿಸಿಕೊಂಡು ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಉಂಟಾಗುವ ಅಪಾಯವೇನಾದರೂ ಇದೆಯೇ ಎಂದು ಪರೀಕ್ಷಿಸಿಕೊಳ್ಳುವುದು ಕಡ್ಡಾಯ.
ಹೆಪಟೈಟಿಸ್ ಬಿಯು ಸೋಂಕುಪೀಡಿತ ವ್ಯಕ್ತಿಯ ರಕ್ತ, ವೀರ್ಯ ಮತ್ತು ಇತರ ದೇಹದ್ರವಗಳ ಮೂಲಕ ಪ್ರಸಾರವಾಗುತ್ತದೆ. ಹೀಗಾಗಿ ಇದು ಲೈಂಗಿಕ ಸಂಪರ್ಕ, ಚುಚ್ಚುಮದ್ದಿನ ಸೂಜಿಗಳನ್ನು ಹಂಚಿಕೊಳ್ಳುವುದು ಅಥವಾ ಹೆರಿಗೆಯ ವೇಳೆ ತಾಯಿಯಿಂದ ಮಗುವಿಗೆ ಹರಡಬಹುದಾಗಿದೆ. ಹೆಪಟೈಟಿಸ್ ಬಿ ಸೋಂಕಿಗೆ ಒಳಗಾಗುವುದನ್ನು ತಡೆಯಲು ಅತ್ಯುತ್ತಮ ಮಾರ್ಗ ಎಂದರೆ ಲಸಿಕೆ ಹಾಕಿಸಿಕೊಳ್ಳುವುದು. ಲಸಿಕೆ ಹಾಕಿಸಿಕೊಳ್ಳದವರು ಒಬ್ಬರೇ ಸಂಗಾತಿಯ ಜತೆಗೆ ಲೈಂಗಿಕ ಜೀವನ ನಡೆಸುವುದು, ಕಾಂಡೋಮ್‌ಗಳ ಬಳಕೆಯಂತಹ ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಅನುಸರಿಸಬೇಕು. ಜತೆಗೆ, ಚುಚ್ಚುಮದ್ದಿನ ಸೂಜಿಗಳನ್ನು, ಗಡ್ಡ ತೆಗೆಯುವ ರೇಜರ್, ಹಲ್ಲುಜ್ಜುವ ಬ್ರಶ್ ಇತ್ಯಾದಿ ವೈಯಕ್ತಿಕ ಬಳಕೆಯ ವಸ್ತುಗಳನ್ನು ಇತರರ ಜತೆಗೆ ಹಂಚಿಕೊಳ್ಳಬಾರದು. ತಾಯಿಯಿಂದ ಮಗುವಿಗೆ ಈ ಸೋಂಕು ಹರಡದಂತೆ ತಡೆಯುವುದು ಕೂಡ ಮುಖ್ಯ.
ಇದಕ್ಕಾಗಿ ತಾಯಿಗೆ ಚಿಕಿತ್ಸೆ, ಶಿಶು ಜನನದ ಬಳಿಕ ಶಿಶುವಿಗೆ ಐವಿ ಇಮ್ಯುನೊಗ್ಲಾಬ್ಯುಲಿನ್ಸ್ ಮತ್ತು ಲಸಿಕೆ ಒದಗಿಸಬೇಕು. ಹೆಪಟೈಟಿಸ್ ಬಿ ಸೋಂಕನ್ನು ಗುಣಪಡಿಸುವುದಕ್ಕೆ ಔಷಧಗಳು ಸದ್ಯ ಲಭ್ಯವಿಲ್ಲವಾದರೂ ವೈರಾಣುಗಳ
ವೃದ್ಧಿಯನ್ನು ಪರಿಣಾಮಕಾರಿಯಾಗಿ ನಿಧಾನಗೊಳಿಸುವ ಔಷಧಗಳು ಲಭ್ಯವಿದ್ದು, ಇವುಗಳ ಬಳಕೆಯ ಮೂಲಕ ಯಕೃತ್‌ನ ಸಿರೋಸಿಸ್ ಮತ್ತು ಕ್ಯಾನ್ಸರ್ ಉಂಟಾಗುವ ಅಪಾಯವನ್ನು ತಗ್ಗಿಸಬಹುದಾಗಿದೆ.
ಹೆಪಟೈಟಿಸ್ ಸಿಯು ರಕ್ತದಿಂದ ರಕ್ತದ ಸಂಪರ್ಕದಿಂದ ಪ್ರಸಾರವಾಗುತ್ತದೆ. ಇದು ಮಾದಕ ದ್ರವ್ಯ ವ್ಯಸನಿಗಳಲ್ಲಿ ಹೆಚ್ಚಾಗಿ ಕಂಡುಬರುವ ಇಂಜೆಕ್ಷನ್ ಸೂಜಿಗಳ ಹಂಚಿಕೊಳ್ಳುವಿಕೆ, ವೈದ್ಯಕೀಯ ಸಲಕರಣೆಗಳನ್ನು ಸರಿಯಾಗಿ ಶುದ್ಧೀಕರಿಸದಿರುವುದು ಹಾಗೂ ರಕ್ತ ಮತ್ತು ರಕ್ತದ ಉಪಾಂಗಗಳನ್ನು ಪರೀಕ್ಷಿಸದೆಯೇ ಮರುಪೂರಣಗೊಳಿಸುವಂತಹ ಕ್ರಮಗಳಿಂದ ಹರಡುತ್ತದೆ. ಅಪರೂಪಕ್ಕೆ ರಕ್ತವೂ ಒಳಗೊಳ್ಳುವ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದಲೂ ಇದು ಪ್ರಸಾರವಾಗಬಹುದಾಗಿದೆ. ಸದ್ಯ
ಹೆಪಟೈಟಿಸ್ ಸಿ ಸೋಂಕಿಗೆ ಲಸಿಕೆಗಳು ಲಭ್ಯವಿಲ್ಲ. ಚುಚ್ಚುಮದ್ದಿನ ಸೂಜಿಗಳು, ರೇಜರ್ ಇತ್ಯಾದಿಗಳನ್ನು ಹಂಚಿಕೊಳ್ಳದೆ ಇರುವುದು, ಸರಿಯಾದ ಸ್ಟೆರಿಲೈಸೇಶನ್ ತಂತ್ರಗಳನ್ನು ಅನುಸರಿಸುವ ಮೂಲಕ ಇದು ಹರಡದಂತೆ ತಡೆಯಬಹುದಾಗಿದೆ. ಈಗ ಹೆಪಟೈಟಿಸ್ ಸಿ ಸೋಂಕನ್ನು 12 ವಾರಗಳಲ್ಲಿ ಶೇ. 98ರಷ್ಟು ಜನರಲ್ಲಿ ಗುಣಪಡಿಸಬಹುದಾದ ಬಾಯಿಯ ಮೂಲಕ ತೆಗೆದುಕೊಳ್ಳುವ ಪರಿಣಾಮಕಾರಿ ಔಷಧಗಳಿವೆ.
ಹೆಪಟೈಟಿಸ್ ಬಿಗೆ ಪರಿಣಾಮಕಾರಿ ಲಸಿಕೆ, ಚಿಕಿತ್ಸೆ ಲಭ್ಯವಿದ್ದು, ಹೆಪಟೈಟಿಸ್ ಸಿಯನ್ನು ಗುಣಪಡಿಸಬಹುದಾದ್ದರಿಂದ ಹೆಪಟೈಟಿಸ್ ಸಂಪೂರ್ಣ ನಿರ್ಮೂಲನ ಸಾಧ್ಯವಿದೆ. ಆದರೆ, ಈ ಕಾಯಿಲೆಯ ಬಗ್ಗೆ ಅರಿವನ್ನು ಹೆಚ್ಚಿಸಬೇಕಿದೆ, ರೋಗಪತ್ತೆ ಸೌಲಭ್ಯಗಳು ಮತ್ತು ಚಿಕಿತ್ಸೆ ಕಡಿಮೆ ದರದಲ್ಲಿ ಎಲ್ಲರಿಗೂ ಸುಲಭವಾಗಿ ಸಿಗುವಂತೆ ಆಗಬೇಕಾಗಿದೆ. ಪ್ರತೀ ವರ್ಷ ಜುಲೈ 28ರಂದು ವಿಶ್ವ ಹೆಪಟೈಟಿಸ್ ದಿನವನ್ನು ಆಚರಿಸಲಾಗುತ್ತಿದ್ದು, ಈ ವರ್ಷದ ದಿನಾಚರಣೆ ಈಚೆಗಷ್ಟೇ ನಡೆದಿದೆ. ಬೇಗನೆ ರೋಗಪತ್ತೆ ಮಾಡುವುದು ಮತ್ತು ಚಿಕಿತ್ಸೆ ಒದಗಿಸುವ ಮೂಲಕ 2030ನೇ ಇಸವಿಯ ಒಳಗೆ ಜಗತ್ತನ್ನು ಹೆಪಟೈಟಿಸ್ ಕಾಯಿಲೆಯಿಂದ ಮುಕ್ತಗೊಳಿಸುವ ಗುರಿಯ ಸಾಧನೆಗಾಗಿ ಈ ಕಾಯಿಲೆಯ ಬಗ್ಗೆ ಅರಿವನ್ನು ಹೆಚ್ಚಿಸಲು ಜಗತ್ತನ್ನು ಒಗ್ಗೂಡಿಸುವುದು ಈ ದಿನಾಚರಣೆಯ ಮೂಲ ಉದ್ದೇಶವಾಗಿದೆ. ಇತರ ಪರಿಸ್ಥಿತಿ ಗಳು ಏನೇ ಇದ್ದರೂ “ಹೆಪಟೈಟಿಸ್‌ನ್ನು ತಡೆಯಬಹುದು’; ಹೀಗಾಗಿ ಈ ಕೋವಿಡ್-19 ಕಾಲಘಟ್ಟದಲ್ಲಿಯೂ ನಾವು ಹೆಪಟೈಟಿಸ್ ನಿರ್ಮೂಲಗೊಳಿಸುವ ಪ್ರಯತ್ನಗಳನ್ನು ತೀವ್ರಗೊಳಿಸಬೇಕಾಗಿದೆ ಮತ್ತು ದೀರ್ಘಕಾಲಿಕ ಹೆಪಟೈಟಿಸ್ ಬಿ ಮತ್ತು ಸಿಗಳಿಗೆ ಚಿಕಿತ್ಸೆಯನ್ನು ಆದ್ಯತೆಯ ಮೇಲೆ ನೀಡಬೇಕಾಗಿದೆ.
ಡಾ| ಅನುರಾಗ್ ಶೆಟ್ಟಿ
ಗ್ಯಾಸ್ಟ್ರೊಎಂಟರಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.