World Liver Day 2023:ಯಕೃತ್ ಕಸಿ ಚಿಕಿತ್ಸೆ ಸುರಕ್ಷಿತವೇ? ಲಿವರ್ ವೈಫಲ್ಯ ಎಂದರೇನು
ಜೀವ ಉಳಿಸುವ ಕೊಡುಗೆಯಾಗಿ ಯಕೃತ್ ಕಸಿ ಶಸ್ತ್ರಚಿಕಿತ್ಸೆ ಮಾನ್ಯತೆ ಹೊಂದಿದೆ.
Team Udayavani, Apr 18, 2023, 12:50 PM IST
ಯಕೃತ್ ನಮ್ಮ ದೇಹದಲ್ಲಿ ಇರುವ ಅತೀ ದೊಡ್ಡದಾದ ಅಂಗ. ನಮ್ಮ ಹೊಟ್ಟೆಯ ಬಲಪಾರ್ಶ್ವದಲ್ಲಿ, ಎದೆಗೂಡಿನ ಕೆಳಗೆ ಇದು ಇರುತ್ತದೆ. ದೇಹದಲ್ಲಿ ಉತ್ಪತ್ತಿಯಾಗುವ ವಿಷಾಂಶಗಳು, ಔಷಧಗಳನ್ನು ದೇಹದಿಂದ ಹೊರಹಾಕುವುದು, ಆಹಾರವು ಜೀರ್ಣವಾಗುವುದಕ್ಕೆ ನೆರವಾಗುವ ಪಿತ್ಥರಸ ಸಂಶ್ಲೇಷಣೆ, ದೇಹಕ್ಕೆ ಶಕ್ತಿಯಾಗಿ ಬಳಕೆಯಾಗುವ ಸಕ್ಕರೆಯ ದಾಸ್ತಾನು, ಹೊಸ ಪ್ರೊಟೀನ್‌ಗಳ ಸಂಶ್ಲೇಷಣೆ – ಹೀಗೆ ಹಲವಾರು ಪ್ರಮುಖ ಕಾರ್ಯಗಳನ್ನು ಯಕೃತ್ ನಿಭಾಯಿಸುತ್ತದೆ.
ಯಕೃತ್ ತನ್ನೆಲ್ಲ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳುವ ಸಾಮರ್ಥ್ಯವನ್ನು ಕಳೆದುಕೊಂಡಾಗ ಅಥವಾ ಕಳೆದುಕೊಳ್ಳುತ್ತಿರುವಾಗ ಅದನ್ನು ಯಕೃತ್ ವೈಫಲ್ಯ ಎನ್ನುತ್ತಾರೆ. ಇದು ತತ್‌ಕ್ಷಣ ವೈದ್ಯಕೀಯ ಆರೈಕೆ ಅಗತ್ಯವಾದ, ಪ್ರಾಣಾಂತಿಕ ಸ್ಥಿತಿಯಾಗಿದೆ.
ಯಕೃತ್ ವೈಫಲ್ಯವು ದೀರ್ಘಕಾಲೀನವಾಗಿರಬಹುದು ಅಥವಾ ಅಲ್ಪಕಾಲೀನವಾಗಿರಬಹುದು. ದೀರ್ಘಕಾಲೀನ ಯಕೃತ್ ವೈಫಲ್ಯಕ್ಕೆ ಈಡಾಗಿರುವವರಲ್ಲಿ ಯಕೃತ್ ಸುದೀರ್ಘ ಅವಧಿಯಲ್ಲಿ ತನ್ನ ಕಾರ್ಯಸಾಮರ್ಥ್ಯಗಳನ್ನು ನಿಧಾನವಾಗಿ ಕಳೆದುಕೊಳ್ಳುತ್ತ ಬರುತ್ತದೆ. ಯಕೃತ್ ಕಾಯಿಲೆಗಳು ಮತ್ತು ಯಕೃತ್ ವೈಫಲ್ಯಗಳ ನಡುವಣ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಯಕೃತ್ತಿಗೆ ಹಾನಿ ಉಂಟು ಮಾಡಬಲ್ಲ ಮತ್ತು ಅದರ ಕಾರ್ಯಚಟುವಟಿಕೆಗಳನ್ನು ಬಾಧಿಸಬಲ್ಲ ಯಾವುದೇ ಅನಾರೋಗ್ಯವನ್ನು ಯಕೃತ್ ಕಾಯಿಲೆ ಎನ್ನುತ್ತಾರೆ. ಯಕೃತ್ ತನ್ನ ಕೆಲವು ಅಥವಾ ಎಲ್ಲ ಕಾರ್ಯಸಾಮರ್ಥ್ಯಗಳನ್ನು ಕಳೆದುಕೊಳ್ಳುವ ಸ್ಥಿತಿಯನ್ನು ಯಕೃತ್ ವೈಫಲ್ಯ ಎನ್ನುತ್ತಾರೆ. ಯಕೃತ್ ಕಾಯಿಲೆಗಳು ಕೆಲವು ಸಂದರ್ಭಗಳಲ್ಲಿ ಯಕೃತ್ ವೈಫಲ್ಯಕ್ಕೆ ಕಾರಣವಾಗಬಹುದು.
ಯಕೃತ್ತಿನ ಆರೋಗ್ಯವಂತ ಅಂಗಾಂಶಗಳ ಸ್ಥಾನವನ್ನು ಹಾನಿಗೊಂಡ ಅಂಗಾಂಶಗಳು ಆಕ್ರಮಿಸಿಕೊಳ್ಳುವುದು ದೀರ್ಘಕಾಲೀನ ಯಕೃತ್ ರೋಗ. ಮದ್ಯಪಾನ ಸಂಬಂಧಿ ಯಕೃತ್ ರೋಗಗಳು ದೀರ್ಘಕಾಲೀನ ಯಕೃತ್ ವೈಫಲ್ಯಕ್ಕೆ ಒಂದು ಸಾಮಾನ್ಯ ಕಾರಣವಾಗಿದೆ. ವ್ಯಕ್ತಿಯೊಬ್ಬ ದೀರ್ಘಾವಧಿಯಲ್ಲಿ ಅತಿಯಾದ ಮದ್ಯ ಸೇವನೆ ನಡೆಸಿದರೆ ಈ ಸ್ಥಿತಿ ಉಂಟಾಗುತ್ತದೆ. ಮದ್ಯಪಾನೇತರ ಫ್ಯಾಟಿ ಲಿವರ್ ಡಿಸೀಸ್ (ಎನ್‌ಎಎಫ್ಎಲ್‌ಡಿ) ಇನ್ನೊಂದು ಕಾರಣ.
ಮುಂದುವರಿದ ಸ್ಥಿತಿಯಲ್ಲಿರುವ ದೀರ್ಘಕಾಲೀನ ಯಕೃತ್‌ಕಾಯಿಲೆಯಿಂದ ಬಳಲುತ್ತಿರುವವರು ಮತ್ತು ಅಲ್ಪಕಾಲೀನ ಯಕೃತ್ ವೈಫಲ್ಯಕ್ಕೆ ಈಡಾಗಿರುವವರಲ್ಲಿ (ಬಹಳ ಸಾಮಾನ್ಯವಾಗಿ ಪ್ಯಾರಾಸಿಟಮಾಲ್ ಓವರ್ ಡೋಸ್ ಅಥವಾ ವೈರಾಣು ಸೋಂಕು ಕಾರಣ) ಗುಣಮಟ್ಟದ ಚಿಕಿತ್ಸೆಯ ಆಯ್ಕೆಗಳಲ್ಲಿ ಒಂದು ಯಕೃತ್ ಕಸಿ. ರೋಗಪೀಡಿತ ಯಕೃತ್ತನ್ನು ತೆಗೆದುಹಾಕಿ ಅದರ ಸ್ಥಾನದಲ್ಲಿ ಆರೋಗ್ಯಯುತ ಯಕೃತ್ತನ್ನು ಕಸಿ ಮಾಡುವ ಶಸ್ತ್ರಚಿಕಿತ್ಸೆಯೇ ಯಕೃತ್ ಕಸಿ.
ಸಾಮಾನ್ಯವಾಗಿ ಮಿದುಳು ಮೃತ ದಾನಿಯಿಂದ ಆರೋಗ್ಯವಂತ ಯಕೃತ್ತನ್ನು ಪಡೆಯಲಾಗುತ್ತದೆ; ಕೆಲವೊಮ್ಮೆ ಆರೋಗ್ಯಯುತ ಜೀವಂತ ವ್ಯಕ್ತಿಯೂ ಯಕೃತ್ತನ್ನು ದಾನ ಮಾಡಬಹುದಾಗಿದೆ. ಯಕೃತ್ತಿನ ಪುನರುಜ್ಜೀವನ ಸಾಮರ್ಥ್ಯ ಅಪಾರವಾಗಿದ್ದು, ಯಕೃತ್ ಕಸಿಯ ಸಂದರ್ಭದಲ್ಲಿ ಆರೋಗ್ಯವಂತ ವ್ಯಕ್ತಿಯ ಯಕೃತ್ತಿನ ಭಾಗವೊಂದನ್ನು ಮಾತ್ರ ತೆಗೆಯಲಾಗುತ್ತದೆ. ಹೀಗಾಗಿ ಕಸಿ ಮಾಡಲಾದ ಆರೋಗ್ಯವಂತ ಯಕೃತ್ತಿನ ಭಾಗವು ಕೆಲವು ವಾರಗಳಲ್ಲಿ ಪರಿಪೂರ್ಣ ಯಕೃತ್ ಆಗಿ ಬೆಳವಣಿಗೆ ಹೊಂದುತ್ತದೆ. ಆದ್ದರಿಂದ ರೋಗಿ ಮತ್ತು ಜೀವಂತ ದಾನಿ – ಇಬ್ಬರೂ ಆರೋಗ್ಯಯುತ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.
ಹೆಪಾಟಿಕ್ ಎನ್‌ಸೆಫಲೋಪಥಿ, ವೇರಿಸೆಲ್ ಹ್ಯಾಮರೇಜ್ ಅಥವಾ ಎಸಿಟಿಸ್‌ನಂತಹ ಹೆಪೆಟಿಕ್ ಡಿಕಂಪೆನ್‌ಸೇಶನ್‌ಗೆ ಈಡಾದ ರೋಗಿಗಳಿಗೆ ಆರಂಭದಲ್ಲಿ ಔಷಧ ಚಿಕಿತ್ಸೆಯನ್ನು ಒದಗಿಸಬೇಕು ಮತ್ತು ಸಂಭಾವ್ಯ ಯಕೃತ್ ಕಸಿ ಹೊಂದಬಲ್ಲಂಥವರಿಗೆ ಸಮಗ್ರ ಯಕೃತ್ ಕಸಿ ವಿಶ್ಲೇಷಣೆಯನ್ನು ಆರಂಭಿಸಬೇಕು. ಯಕೃತ್ ಕಸಿಗಳಲ್ಲಿ ಶೇ. 80ರಷ್ಟು ಡಿಕಂಪೆನ್‌ಸೇಶನ್‌ನಿಂದ ಉಂಟಾಗಿರುವ ದೀರ್ಘಕಾಲೀನ ಯಕೃತ್ ಕಾಯಿಲೆಗಳಿಂದ ಆಗಿರುತ್ತವೆ. ದೀರ್ಘಕಾಲೀನ ಮತ್ತು ಅಲ್ಪಕಾಲೀನ ಅಂತಿಮ ಹಂತದ ಯಕೃತ್ ಕಾಯಿಲೆಯನ್ನು ಹೊಂದಿರುವವರಲ್ಲಿ ಜೀವ ಉಳಿಸುವ ಕೊಡುಗೆಯಾಗಿ ಯಕೃತ್ ಕಸಿ ಶಸ್ತ್ರಚಿಕಿತ್ಸೆ ಮಾನ್ಯತೆ ಹೊಂದಿದೆ. ಇದು ಸಹಜ ಆರೋಗ್ಯ, ಜೀವನಶೈಲಿಯನ್ನು ಪುನರ್ ಸ್ಥಾಪಿಸುತ್ತದೆಯಲ್ಲದೆ ಜೀವಿತಾವಧಿಯನ್ನು 15 ವರ್ಷಗಳಷ್ಟು ವಿಸ್ತರಿಸುತ್ತದೆ. ಇತರ ಎಲ್ಲ ವೈದ್ಯಕೀಯ ಚಿಕಿತ್ಸಾ ಆಯ್ಕೆಗಳು ವಿಫಲವಾದ ಸಂದರ್ಭದಲ್ಲಿ ವಿವಿಧ ಯಕೃತ್ ಕಾಯಿಲೆಗಳಿಗೆ ಚಿಕಿತ್ಸೆ ಆಯ್ಕೆಯಾಗಿ ಯಕೃತ್ ಕಸಿ ಚಿಕಿತ್ಸೆಯು ಸುರಕ್ಷಿತ ಆಯ್ಕೆಯಾಗಿ ಗುರುತಿಸಿಕೊಂಡಿದೆ.
ಟ್ರಾನ್ಸ್‌ಪ್ಲಾಂಟ್ ರಿಸೀಪಿಯೆಂಟ್‌ಗಳ ಸೈಂಟಿ ಕ್ ರಿಜಿಸ್ಟ್ರಿಯ ಅಂಕಿ ಅಂಶಗಳ ಪ್ರಕಾರ ರೋಗಿ ಬದುಕುಳಿಯುವ ಒಟ್ಟಾರೆ ದರವು ಉತ್ತಮವಾಗಿದ್ದು, ಮೃತ ವ್ಯಕ್ತಿಯಿಂದ ದಾನ ಪಡೆದ 1 ವರ್ಷದ ಬಳಿಕ ಶೇ. 90ರಷ್ಟು ಮತ್ತು 5 ವರ್ಷಗಳ ಬಳಿಕ ಶೇ. 77ರಷ್ಟು ಇದೆ. ಅತ್ಯುತ್ತಮವಾದ ರೋಗಿ ಆರೈಕೆ ಒದಗಿಸುವುದು ಸಾಧ್ಯವಾಗುವುದಕ್ಕೆ ಬಹು ವಿಭಾಗೀಯ ತಂಡ ವಿಧಾನವನ್ನು ಅನಸರಿಸಬೇಕಾಗಿರುತ್ತದೆ.
ಯಕೃತ್ ಕಸಿಗೆ ಮುನ್ನ ಹೆಪಟಾಲಜಿಸ್ಟ್, ಕಸಿ ಶಸ್ತ್ರಚಿಕಿತ್ಸಾ ತಜ್ಞರು ಮತ್ತು ಕಸಿ ಸಂಯೋಜಕರು ರೋಗಿಯ ವಿಶ್ಲೇಷಣೆ ನಡೆಸುವುದು, ಎಲ್ಲ ಔಷಧ ಚಿಕಿತ್ಸೆಗಳ ಬಗ್ಗೆ, ಜೀವನ ಶೈಲಿ ಬದಲಾವಣೆಗಳ ಬಗ್ಗೆ, ನಡೆಸಬೇಕಾದ ಶಸ್ತ್ರಚಿಕಿತ್ಸೆಗಳ ವಿಧಗಳ ಬಗ್ಗೆ ಸಮಾಲೋಚಿಸುವುದು, ಕಸಿ ನಡೆಸಿದ ಬಳಿಕದ ಹಂತದ ಬಗ್ಗೆ – ಇಮ್ಯುನೋಸಪ್ರಶನ್ ಮತ್ತು ಸಂಭಾವ್ಯ ಸಂಕೀರ್ಣ ಸ್ಥಿತಿಗಳು ಹಾಗೂ ಫಲಿತಾಂಶಗಳ ಬಗ್ಗೆ ವಿಸ್ತೃತ ಸಮಾಲೋಚನೆಯನ್ನು ಕೈಗೊಳ್ಳುವುದು ಅತ್ಯಂತ ಮುಖ್ಯವಾಗಿರುತ್ತದೆ.
ಮದ್ಯಪಾನ ಅಥವಾ ಮಾದಕದ್ರವ್ಯ ವ್ಯಸನ ವಿಚಾರ ಇದ್ದಲ್ಲಿ ಅವುಗಳನ್ನು ಪರಿಹರಿಸಲು ವಿಶೇಷ ಕಸಿ ಮನಶಾಸ್ತ್ರಜ್ಞರಿಂದ ಮನಶಾಸ್ತ್ರೀಯ ವಿಶ್ಲೇಷಣೆ ನಡೆಸಿ ರೋಗಿಯು ಶಸ್ತ್ರಚಿಕಿತ್ಸೆ ಮತ್ತು ಅದರ ಸಂಭಾವ್ಯ ಫಲಿತಾಂಶಗಳ ಬಗ್ಗೆ ಅರಿವು ಹೊಂದುವಂತೆ ಮಾಡುವುದು ಅಗತ್ಯವಾಗಿರುತ್ತದೆ. ಯಕೃತ್ ಕಸಿ ಶಸ್ತ್ರಚಿಕಿತ್ಸೆಯ ವಿಮಾ ಕವರೇಜ್ ಮತ್ತು ಇಮ್ಯುನೊಸಪ್ರಸಿವ್ ಔಷಧಗಳ ಬಗ್ಗೆ ವಿಶೇಷ ತಂಡವೊಂದು ವಿಶ್ಲೇಷಣೆ ನಡೆಸುತ್ತದೆ.
ಕಸಿಗೆ ಮೊದಲಿನ ಮತ್ತು ಕಸಿಯ ಬಳಿಕದ ಹಂತಗಳಲ್ಲಿ ಸಮರ್ಪಕ ಪೌಷ್ಟಿಕತೆಯನ್ನು ಕಾಯ್ದುಕೊಳ್ಳುವಲ್ಲಿ ಹಾಗೂ ಮಧುಮೇಹ, ಅಧಿಕ ರಕ್ತದೊತ್ತಡ, ಹೈಪರ್ ಲಿಪಿಡೇಮಿಯಾದಂತಹ ಅನಾರೋಗ್ಯಗಳು ಇದ್ದ ಸಂದರ್ಭದಲ್ಲಿ ಅಗತ್ಯ ಆಹಾರ ಶೈಲಿ ಬದಲಾವಣೆಗಳನ್ನು ಮಾಡಿಕೊಳ್ಳುವ ವಿಚಾರದಲ್ಲಿ ಪೌಷ್ಟಿಕಾಂಶ ತಜ್ಞರು ಪ್ರಧಾನ ಪಾತ್ರವನ್ನು ನಿರ್ವಹಿಸುತ್ತಾರೆ.
ಡಾ| ವಿದ್ಯಾ ಎಸ್. ಭಟ್
ಸರ್ಜಿಕಲ್ ಗ್ಯಾಸ್ಟ್ರೊಎಂಟರಾಲಜಿಸ್ಟ್
ಕೆಎಂಸಿ ಆಸ್ಪತ್ರೆ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Melioidosis:ನಿರ್ಲಕ್ಷಿತ ಹಾಗೂ ಮಾರಣಾಂತಿಕ ಸಾಂಕ್ರಾಮಿಕ ರೋಗ ಮೆಲಿಯೊಡೋಸಿಸ್
World Osteoporosis Day: ಆಸ್ಟಿಯೊಪೊರೋಸಿಸ್ ಅಥವಾ ಮೂಳೆ ಸವಕಳಿ ಎಂದರೇನು?
Anesthesia: ರೋಗಿ ಸುರಕ್ಷೆಗೆ ಒಂದು ನಮನ – ವಿಶ್ವ ಅರಿವಳಿಕೆ ದಿನ ಅಕ್ಟೋಬರ್ 16
Global Infection Control: ಜಾಗತಿಕ ಸೋಂಕು ನಿಯಂತ್ರಣ ಸಪ್ತಾಹ
Thalassemia: ತಲಸ್ಸೇಮಿಯಾ ರೋಗಿಗಳು ಗುಣಮುಖರಾಗಬಹುದೇ?
MUST WATCH
ಹೊಸ ಸೇರ್ಪಡೆ
Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್ ಮುಂಡಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.