ಉತ್ತರದಲ್ಲಿ ಯಾತ್ರೆ-ಸಮಾವೇಶ ಪರ್ವ ; ರಾಜಕೀಯ ಪಕ್ಷಗಳ ತಾಲೀಮು
Team Udayavani, Jan 20, 2023, 8:10 AM IST
ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ತಮ್ಮ ಪಕ್ಷದ ಪ್ರಭಾವದ ಮುದ್ರೆಯೊತ್ತಲು, ಮತದಾರರ ಮನದೊಳಗೆ ಸ್ಥಾನ ಪಡೆಯುವ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ತಾಲೀಮು ನಡೆಸುತ್ತಿವೆ. ರಾಜ್ಯದ ಪ್ರಮುಖ ಮೂರು ಪಕ್ಷಗಳು ಸದ್ಯ ಉತ್ತರ ಕರ್ನಾಟಕವನ್ನೇ ಕೇಂದ್ರವಾಗಿರಿಸಿಕೊಂಡು ಚುನಾವಣೆ ಪೂರ್ವಭಾವಿ ಪ್ರಚಾರ ಶುರುವಿಟ್ಟುಕೊಂಡಿವೆ.
ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕಾದರೆ ಉತ್ತರ ಕರ್ನಾಟಕದಲ್ಲಿ ಉತ್ತಮ ಸಾಧನೆ ತೋರಬೇಕು ಎಂದು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತಮ್ಮದೇ ಯತ್ನಕ್ಕೆ ಮುಂದಾಗಿವೆ. ಪ್ರಧಾನಿ, ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ, ಕೇಂದ್ರ-ರಾಜ್ಯಗಳ ಸಚಿವರುಗಳು, ಪಕ್ಷದ ನಾಯಕರು ಉತ್ತರಮುಖೀಯಾಗಿದ್ದಾರೆ. ವಿವಿಧ ಅಭಿವೃದ್ಧಿ, ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ, ಫಲಾನುಭವಿಗಳಿಗೆ ಸೌಲಭ್ಯ, ಹಕ್ಕುಪತ್ರ ವಿತರಣೆ, ಸರಕಾರದ ವಿರುದ್ಧ ಆರೋಪ, ಜನಾಕ್ರೋಶ , ಪ್ರಜಾಧ್ವನಿ, ಪಂಚರತ್ನ ಹೀಗೆ ವಿವಿಧ ಹೆಸರಲ್ಲಿ ಸಮಾವೇಶ, ಯಾತ್ರೆಗಳ ಮೆರವಣಿಗೆ ಜೋರಾಗಿಯೇ ಸದ್ದು ಮಾಡತೊಡಗಿದೆ.
ಪ್ರಧಾನಿ ನರೇಂದ್ರ ಮೋದಿ ತಿಂಗಳಿಗೊಮ್ಮೆಯಾದರೂ ಸರಿ ರಾಜ್ಯಕ್ಕೆ ಬರಲು ಸಿದ್ಧ ಎಂದು ಬಿಜೆಪಿ ರಾಜ್ಯ ನಾಯಕರುಗಳಿಗೆ ಭರವಸೆ ನೀಡಿದ್ದರು. ಪ್ರಧಾನಿಯವರು ಈಗಾಗಲೇ ತಿಂಗಳಲ್ಲಿ ಎರಡು ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದು, ಅದು ಉತ್ತರ ಕರ್ನಾಟಕ ಭಾಗಕ್ಕೆ ಎಂಬುದು ಗಮನಾರ್ಹವಾಗಿದೆ. ಹುಬ್ಬಳ್ಳಿ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಿಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ಇನ್ನೊಂದು ತಿಂಗಳಲ್ಲಿ ಮತ್ತೆ ಧಾರವಾಡಕ್ಕೆ ಆಗಮಿಸಲಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ ರಾಜಕೀಯ ಭಾಷಣ ಮಾಡದಿದ್ದರೂ ಸೂಕ್ಷ್ಮವಾಗಿ ಏನು ಸಂದೇಶ ನೀಡಬೇಕಾಗಿತ್ತೂ ಅದನ್ನು ನೀಡುವ ಕಾರ್ಯ ಮಾಡಿದ್ದರು. ವಿಶೇಷವಾಗಿ ಯುವಕರು, ಮಹಿಳೆಯರನ್ನು ಕೇಂದ್ರೀಕರಿಸಿ ಮೆಚ್ಚುಗೆ ಹಾಗೂ ಸಾಧನೆಗೆ ಪ್ರೇರಣೆಯ ಮಾತುಗಳನ್ನಾಡಿದ್ದರು. ಇದಾದ ಹತ್ತು ದಿನದೊಳಗೆ ಕಲಬುರಗಿ, ಯಾದಗಿರಿ ಜಿಲ್ಲೆಗಳ ಪ್ರವಾಸ ಕೈಗೊಂಡು, ಬಂಜಾರ ಸಮುದಾಯ ವಾಸಿಸುವ ಹಟ್ಟಿಗಳನ್ನು ಕಂದಾಯ ಗ್ರಾಮ ಘೋಷಣೆ ಹಾಗೂ ಹಕ್ಕುಪತ್ರಗಳ ವಿತರಣೆ, ನೀರಾವರಿ ಯೋಜನೆಗೆ ಶಂಕುಸ್ಥಾಪನೆ ಸಮಾರಂಭದಲ್ಲಿ ಪದೇ ಪದೇ ಡಬಲ್ ಎಂಜಿನ್ ಸರ್ಕಾರ ಇದ್ದರೆ ಅಭಿವೃದ್ಧಿ ವೇಗ ಹೇಗೆ ಹೆಚ್ಚಲಿದೆ ಎಂಬುದಕ್ಕೆ ಕರ್ನಾಟಕದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳೇ ಸಾಕ್ಷಿ ಎಂದು ಹೇಳುವ ಮೂಲಕ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಬಲ ನೀಡುವಂತೆ ಕೋರಿದ್ದಾರೆ.
ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ಮೂಲಕ ಕಾಂಗ್ರೆಸ್‌ಗೆ ಹೆಚ್ಚಿನ ಬೆಂಬಲ ನೀಡುತ್ತ ಬಂದಿರುವ ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಪ್ರಾಬಲ್ಯ ಇನ್ನಷ್ಟು ಹೆಚ್ಚಿಸುವ ನಿಟ್ಟನಲ್ಲಿ ತಮ್ಮದೇ ಪ್ರಭಾವ ಬೀರುವ ಕಾರ್ಯ ಮಾಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕ್ಷೇತ್ರದಲ್ಲಿಯೇ ಗುಡುಗಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣಸಿಂಗ್, ಸಿಎಂ ಬಸವರಾಜ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ ಕಟೀಲ್, ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿಗಳು, ರಾಜ್ಯದ ಸಚಿವರುಗಳು ಈಗಾಗಲೇ ಜನಸಂಕಲ್ಪ ಯಾತ್ರೆ, ವಿವಿಧ ಸೌಲಭ್ಯಗಳ ನೀಡಿಕೆ, ಹಕ್ಕುಪತ್ರಗಳ ವಿತರಣೆ, ಹಲವು ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಸಮಾರಂಭ, ರೈತ, ಕಾರ್ಮಿಕರು, ಮಹಿಳೆಯರು, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳ ಮೋರ್ಚಾ ಸಮಾವೇಶಗಳನ್ನು ಕೈಗೊಳ್ಳುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರುವ ಯತ್ನ ತೋರಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಈಗಾಗಲೇ ರಾಜ್ಯಕ್ಕೆ ಆಗಮಿಸಿ ಚುನಾವಣಾ ಕಾರ್ಯತಂತ್ರದ ಪಾಠ ಮಾಡಿದ್ದು, ಪಕ್ಷದ ನಾಯಕರು, ಪದಾಧಿಕಾರಿಗಳಿಗೆ ಟಾಸ್ಕ್ಗಳನ್ನು ನೀಡಿದ್ದಾರೆ. ಜ.26ರಂದು ಹುಬ್ಬಳ್ಳಿಯಲ್ಲಿ ನಡೆಯುವ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಅಮೃತಮಹೋತ್ಸವಕ್ಕೆ ಚಾಲನೆ ನೀಡಲು ಆಗಮಿಸುತ್ತಿದ್ದು, ಕಾಂಗ್ರೆಸ್‌ನಿಂದ ಟೀಕಾಸ್ತ್ರಗಳ ಪ್ರಯೋಗ: ವಿಪಕ್ಷ ಕಾಂಗ್ರೆಸ್ ಮತದಾರರ ಮೇಲೆ ಪ್ರಭಾವ ಬೀರುವ ನಿಟ್ಟನಲ್ಲಿ ಜನಾಕ್ರೋಶ, ಪ್ರಜಾಧ್ವನಿ ವಿವಿಧ ಹೆಸರಿನಲ್ಲಿ ಸಮಾವೇಶಗಳ ಮೂಲಕ ಬಿಜೆಪಿ ಆಡಳಿತ ವೈಫಲ್ಯಗಳ ವಿರುದ್ಧ ಟೀಕಾಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ವಿಶೇಷವಾಗಿ ಉತ್ತರ ಕರ್ನಾಟಕದ ಪ್ರಮುಖ ವಿಷಯ, ಸಮಸ್ಯೆಗಳನ್ನು ಹಿಡಿದುಕೊಂಡು ಜನರ ಗಮನ ಸೆಳೆಯಲು ಮುಂದಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹಿತ ಅನೇಕ ನಾಯಕರು ಸಮಾವೇಶಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಉತ್ತರ ಕರ್ನಾಟಕದ ಪ್ರಮುಖ ನೀರಾವರಿ ವಿಷಯಗಳಾದ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ, ಮಹಾದಾಯಿ, ತುಂಗಭದ್ರಾ ಸಮಾನಾಂತರ ಜಲಾಶಯ, ಕಾರಂಜಾ ಇನ್ನಿತರ ನೀರಾವರಿ ಯೋಜನೆಗಳ ವಿಷಯವಾಗಿಯೇ ಸಮಾವೇಶ ಕೈಗೊಂಡಿದೆ. ಮತ್ತೂಂದು ಕಡೆ ಮಹಾದಾಯಿ ವಿಷಯವಾಗಿ ಹುಬ್ಬಳ್ಳಿಯಲ್ಲಿ ಸಮಾವೇಶ ನಡೆಸುವ ಮೂಲಕ ಕೇಂದ್ರ-ರಾಜ್ಯ ಸರಕಾರಗಳು ಡಿಪಿಆರ್‌ಗೆ ಅನುಮೋದನೆ ಎಂಬ ಕಣ್ಣೊರೆಸುವ ತಂತ್ರಕ್ಕೆ ಮುಂದಾಗಿವೆ ಎಂದು ಆರೋಪಿಸಿದೆ. ಕಲಬುರಗಿ, ವಿಜಯಪುರ, ರಾಯಚೂರು, ಬಳ್ಳಾರಿ, ಕೊಪ್ಪಳ, ಗದಗ, ಹಾವೇರಿ ಇನ್ನಿತರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಸಮಾವೇಶ ನಡೆಸುವ ಮೂಲಕ ಬಿಜೆಪಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನಕ್ಕೆ ಮುಂದಾಗಿದೆ.
ಜೆಡಿಎಸ್‌ನ ಪಂಚರತ್ನ ಯಾತ್ರೆ
ಜೆಡಿಎಸ್ ಕೂಡ ಯಾತ್ರೆ, ಸಮಾವೇಶ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ರಾಜ್ಯದಲ್ಲಿ ಆರಂಭಿಸಿರುವ ಪಂಚರತ್ನ ಯಾತ್ರೆ ಇದೀಗ ಉತ್ತರ ಕರ್ನಾಟಕ ಪ್ರವೇಶಿಸಿದೆ. ಬೀದರ್, ಕಲಬುರಗಿ, ವಿಜಯಪುರ, ರಾಯಚೂರು, ಬಳ್ಳಾರಿ ಇನ್ನಿತರ ಕಡೆಗಳಲ್ಲಿ ಪಂಚರತ್ನ ಯಾತ್ರೆ ಕೈಗೊಂಡಿದ್ದು, ಬಿಜೆಪಿ-ಕಾಂಗ್ರೆಸ್‌ಗಳ ವಿರುದ್ಧದ ಟೀಕಾಸ್ತ್ರಗಳ ಜತೆಗೆ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಸಾಲ ಪೂರ್ಣ ಮನ್ನಾ ಸಹಿತ ವಿವಿಧ ಸೌಲಭ್ಯಗಳ ನೀಡಿಕೆ ಭರವಸೆ ನೀಡುತ್ತಿದ್ದಾರೆ. ಉತ್ತರದಲ್ಲಿ ಕೆಲವು ಕ್ಷೇತ್ರಗಳನ್ನು ಹೊರತುಪಡಿಸಿದರೆ ಉಳಿದ ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಕಾರ್ಯಕರ್ತರು ಹಾಗೂ ನಾಯಕರ ಕೊರತೆ ಕಾಡುತ್ತಿದ್ದು, ಅದನ್ನು ಸರಿದೂಗಿಸುವ ನಿಟ್ಟಿನಲ್ಲಿ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತಮ್ಮದೇ ಯತ್ನದಲ್ಲಿ ತೊಡಗಿದ್ದಾರೆ. ಆಮ್‌ಆದ್ಮಿ ಪಕ್ಷ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ರಾಜ್ಯಕ್ಕೆ ಅದರಲ್ಲೂ ಉತ್ತರ ಕರ್ನಾಟಕಕ್ಕೆ ಕರೆತರುವ ಯತ್ನ ನಡೆಸಿದೆ.
ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.