ಯೋಗಿತಾ; ಕಂಬನಿ ಒರೆಸುವ ಕರುಣೆಯ ಕೈ!
Team Udayavani, Jan 2, 2022, 6:50 AM IST
ಈಕೆಯ ಹೆಸರು ಯೋಗಿತಾ ಭಯಾನಾ. ಹುಟ್ಟೂರು ದಿಲ್ಲಿ. ಕಿಂಗ್ ಫಿಷರ್ ಏರ್‌ಲೈನ್ಸ್‌ನಲ್ಲಿ ದೊಡ್ಡ ಹುದ್ದೆಯಲ್ಲಿದ್ದಳು. ಅಂಥವಳು 22ನೇ ವಯಸ್ಸಿಗೇ ಆ ಹುದ್ದೆ ತ್ಯಜಿಸಿ ಬಡವರು, ಅಸಹಾಯಕರು, ರೇಪ್ ಸಂತ್ರಸ್ತೆಯರ ಸೇವೆಗೆ ನಿಂತಿದ್ದಾಳೆ. ಈಕೆಯ ಹೆಸರು ಕೇಳಿದರೆ ಸಾಕು; ಪುಂಡರು ನಿಂತಲ್ಲಿಯೇ ನಡುಗು ತ್ತಾರೆ. ಅತ್ಯಾಚಾರಕ್ಕೆ ತುತ್ತಾದ ಹೆಣ್ಣುಮಕ್ಕಳು, ಅಕ್ಕ ಇರೋ ತನಕ ನಮಗೆ ಚಿಂತೆಯಿಲ್ಲ ಎಂದು ಎದ್ದು ನಿಲ್ಲುತ್ತಾರೆ. ಒಂದರ್ಥದಲ್ಲಿ ಈ ಯೋಗಿತಾ ಹೆಣ್ಣುವೇಷದಲ್ಲಿರುವ ಅಣ್ಣಾಬಾಂಡ್!
* * * *
ಇದಿಷ್ಟು ವಿವರಣೆಯನ್ನು ಇಂಟರ್‌ನೆಟ್‌ನಲ್ಲಿ ಓದಿದಾಗ ಈ ಹೆಣ್ಣು ಮಗಳನ್ನು ಮಾತಾಡಿಸುವ ಆಸೆಯಾಯಿತು. 15 ದಿನಗಳ ಸತತ ಪ್ರಯತ್ನದ ಅನಂತರ ಕಡೆಗೂ ಫೋನ್‌ಗೆ ಸಿಕ್ಕಿದ ಆಕೆ- “ಸರ್ ಜೀ, ನಾನೀಗ ಟ್ರಾವೆಲ್ ಮಾಡ್ತಿದೀನಿ. ದಿಲ್ಲಿಯಿಂದ ದೂರದಲ್ಲಿ ಇದ್ದೇನೆ. ನೆಟ್‌ವರ್ಕ್ ಪ್ರಾಬ್ಲಿಮ್ ಈಗ ಸ್ವಲ್ಪ ಹೊತ್ತು ಮಾತಾಡ್ತೇನೆ, ನೋಟ್ ಮಾಡ್ಕೊಳ್ಳಿ ಅಂದವಳೇ ಹೇಳುತ್ತಾ ಹೋದಳು: ಅದು 2002ರ ಒಂದು ದಿನ. ಅವತ್ತು ಫ್ರೆಂಡ್ ಜತೆ ನಿನೆಮಾಕ್ಕೆ ಹೋಗಿದ್ದೆ. ನಿನೆಮಾ ಮುಗಿಸಿ ನಾವು ಅದೂ ಇದೂ ಮಾತಾಡಿಕೊಂಡು ಮನೆಗೆ ಬರುತ್ತಿದ್ದಾಗಲೇ, ನಮ್ಮ ಕಣ್ಣೆದುರೇ ಒಂದು ಆಕ್ಸಿಡೆಂಟ್ ಆಗಿಬಿಡು. ಕಾರ್‌ನಲ್ಲಿ ಭರ್ರನೆ ಬಂದವನೊಬ್ಬ, ಸೆಕ್ಯೂರಿಟಿ ಗಾರ್ಡ್‌ಗೆ ಗುದ್ದಿಸಿ ಹೋಗಿಬಿಟ್ಟ. ಜನನಿಬಿಡ ರಸ್ತೆ ಅದು. ಗಾಯಗೊಂಡವನು ರಕ್ತದ ಮಡುವಿನಲ್ಲಿ ಬಿದ್ದು ನೋವಿನಿಂದ ಚೀರುತ್ತಿದ್ದರೂ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ. ತತ್‌ಕ್ಷಣವೇ ಆ್ಯಂಬುಲೆನ್ಸ್‌ಗೆ/ ಪೊಲೀಸರಿಗೆ ಕರೆ ಮಾಡಿದೆ.
ಪ್ರಯೋಜನವಾಗಲಿಲ್ಲ. ಕಡೆಗೆ ಫ್ರೆಂಡ್ ಸಹಾಯದಿಂದ ಆಟೋ ಮಾಡಿಕೊಂಡು ನಾನೇ ಆ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದೆ. ಆತನಿಂದ ವಿಳಾಸ ಪಡೆದು ಮನೆಯವರಿಗೆ ವಿಷಯ ತಿಳಿಸಿದೆ. ಮಾರಣಾಂತಿಕ ಪೆಟ್ಟು ಬಿದ್ದಿದೆ ಎಂದು ತಿಳಿದರೂ ಆಸ್ಪತ್ರೆಗೆ ದಾಖಲಿಸಿಕೊಳ್ಳಲು 2 ಗಂಟೆ ತಡ ಮಾಡಿದರು. ಕಡೆಗೊಮ್ಮೆ, ಡಾಕ್ಟರ್ ಚಿಕಿತ್ಸೆ ಆರಂಭಿಸಿದ ಸ್ವಲ್ಪ ಹೊತ್ತಿಗೇ ನನ್ನ ಕಣ್ಣೆದುರೇ ಆ ವ್ಯಕ್ತಿಯ ಉಸಿರು ನಿಂತಿತು. ಡಾಕ್ಟರ್ ನಿರ್ವಿಕಾರ ಭಾವದಿಂದ- “ಸಾರಿ’ ಎನ್ನುತ್ತಾ ಹೋಗಿಬಿಟ್ಟರು. ಹೊರಗೆ ಬಂದರೆ, ಒಬ್ಬಳು ಅಮಾಯಕ ಹೆಂಗಸು, 1 ರಿಂದ 5 ವರ್ಷದೊಳಗಿನ 3 ಮಕ್ಕಳೂ ಕಾಣಿಸಿದರು. ಅವರು ಮೃತ ವ್ಯಕ್ತಿಯ ಹೆಂಡತಿ- ಮಕ್ಕಳು ಎಂದು ತಿಳಿದಾಗ ಹೇಗೆ ಸಂತೈಸಬೇಕೋ ತಿಳಿಯಲಿಲ್ಲ.
ಈ ಘಟನೆ ನಡೆದಾಗ ನನಗೆ 22 ವರ್ಷ. ನಾನಾಗ ಕಿಂಗ್ ಫಿಷರ್ ಏರ್‌ಲೈನ್ಸ್‌ನಲ್ಲಿ ದೊಡ್ಡ ಹುದ್ದೆಯಲ್ಲಿದ್ದೆ. ಕೈತುಂಬಾ ಸಂಬಳ. ಕಣ್ತುಂಬಾ ಕನಸು. ನಿತ್ಯವೂ ಗಗನಯಾನ. ವಾರಕ್ಕೊಂದು ದೇಶ ನೋಡುವ ಅವಕಾಶ. ಪಂಚತಾರಾ ಹೊಟೇಲ್‌ಗಳಲ್ಲೇ ವಾಸ. ಹೆಚ್ಚಾಗಿ ವಿಐಪಿಗಳ ಜತೆಯಲ್ಲೇ ಮಾತು- ಹೀಗಿತ್ತು ನನ್ನಲೈಫ್ ಸ್ಟೈಲ್ ವಿಮಾನ ಯಾನದ ವೇಳೆ ಸಂಕಷ್ಟದ ಸಮಯದಲ್ಲಿ ಜೀವಗಳನ್ನು ಉಳಿಸುವುದು ಹೇಗೆಂದು ನಮಗೆ ತರಬೇತಿ ನೀಡಲಾಗಿತ್ತು. ಹಾಗಿದ್ದರೂ ಕಣ್ಣೆದುರೇ ಅಪಘಾತ ನಡೆದಾಗ, ಸ್ವಲ್ಪ ಹೊತ್ತಿಗೇ ಸಾವೂ ಸಂಭವಿಸಿದಾಗ ನಾನು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದೆ.
ಈ ಘಟನೆ ಅನಂತರ ಡಿಪ್ರಶನ್‌ಗೆ ಹೋಗಿಬಿಟ್ಟೆ. ಕಣ್ಮುಚ್ಚಿದರೆ ಸಾಕು, ಕಾಪಾಡೀ ಎಂದು ಚೀರುತ್ತಿದ್ದ ಆ ಸೆಕ್ಯೂರಿಟಿ ಗಾರ್ಡ್‌ನ, ಮುಂದೆ ನಮಗ್ಯಾರು ದಿಕ್ಕು ಎಂದು ಎದೆ ಬಡಿದುಕೊಂಡು ಅಳುತ್ತಿದ್ದ ಆ ತಾಯಿ- ಮಕ್ಕಳ ಚಿತ್ರ ಕಣ್ಮುಂದೆ ಬರುತ್ತಿತ್ತು. ಒಂದು ಜೀವದ ಬೆಲೆ ಇಷ್ಟೇನಾ? ಬಡವರ ಪ್ರಾಣಕ್ಕೆ ಬೆಲೆ ಯೇ ಇಲ್ಲವಾ? ಎಂದು ಯೋಚಿಸುವಂತೆ ಮಾಡಿದ ಸಂದ ರ್ಭ ಅದು. ಬಡವರಿಗೆ, ನೊಂದವರಿಗೆ ನ್ಯಾಯ ಕೊಡಿಸಲು ನಾನ್ಯಾಕೆ ಹೋರಾ ಡಬಾರದು ಎಂಬ ಯೋಚನೆ ಜತೆಯಾಗಿದ್ದೇ ಆಗ. ಇದೇ ನನ್ನ ಬದು ಕಿನ ಟರ್ನಿಂಗ್ ಪಾಯಿಂಟ್ ಅನ್ನಬಹುದು. ಸಾಕಷ್ಟು ಯೋಚನೆ ಮಾಡಿ, ಕಡೆ ಗೊಂದು ದಿನ ಅಪ್ಪ-ಅಮ್ಮನ ಮುಂದೆ ನಿಂತು ಹೇಳಿಬಿಟ್ಟೆ: ನಾನು ಕೆಲಸ ಬಿಡ್ತಾ ಇದ್ದೇನೆ. ಮುಂದೆ ಬಡವರು/ ನೊಂದವರ ಸೇವೆ ಮಾಡಿಕೊಂಡು ಬದುಕ್ತೇನೆ!.
ನಮ್ಮಪ್ಪ ದಿಲ್ಲಿಯಲ್ಲಿ ಎಲೆಕ್ಟ್ರಿಕಲ್ ಕಂಟ್ರಾÂಕ್ಟರ್. ನಮ್ಮ ಕುಟುಂಬದವರೆಲ್ಲಾ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಕಾರ್ಪೋರೆಟ್ ಕಂಪೆನಿಯಲ್ಲಿ ಕೆಲಸ ಮಾಡ್ತಾ ಇದ್ದವಳು ನಾನೊಬ್ಬಳೇ. “ಕೆಲ್ಸ ಬಿಡ್ತೇನೆ’ ಎಂದಾಗ ಎಲ್ಲರೂ ವಿರೋಧಿಸಿದರು. ನಿನಗೇನು ಹುಚ್ಚಾ? ಈಗ ಸಿಕ್ಕಿರೋದು ದೊಡ್ಡ ಸಂಬಳದ ಕೆಲಸ. ಸ್ವಲ್ಪ ದಿನಗಳಲ್ಲಿ ಪ್ರಮೋಷನ್ ಆಗಲಿದೆ. ತಿಂದುಂಡುಕೊಂಡು ಎಂಜಾಯ್ ಮಾಡುವಂಥ ವಯಸ್ಸಿನಲ್ಲಿ ನೀನು ಸಮಾಜ ಸೇವೆ ಮಾಡ್ತೇನೆ ಅಂತಿದ್ದೀಯಲ್ಲ? ಎಂದು ಬೈದರು. ಯಾರೇನೇ ಅಂದರೂ ನನ್ನ ಹೆಜ್ಜೆ ಹಿಂದಿ ಡಲಿಲ್ಲ. ಈ ವೇಳೆಗೆ, ನಾನು ಕಿಂಗ್ ಫಿಷರ್ ಸಂಸ್ಥೆ ಸೇರಿ 7 ವರ್ಷ ಕಳೆದಿದ್ದವು. ಕಡೆ ಗೊಮ್ಮೆ ಎಲ್ಲರ ಮನವೊಲಿಸಿ ನೌಕರಿಗೆ ಗುಡ್ ಬೈ ಹೇಳಿದೆ. ಅದರ ಬೆನ್ನಿಗೇ ಬಡವರು, ಅಸಹಾಯಕರಿಗೆ ನೆರವಾಗುವ ಉದ್ದೇಶದಿಂದ 2007ರಲ್ಲಿ ದಾಸ್ ಚಾರಿಟೆಬಲ್ ಫೌಂಡೇಶನ್(ದಾಸ-ಸೇವೆ ಮಾಡುವವನು) ಆರಂಭಿಸಿದೆ. ರಸ್ತೆ ಅಪಘಾತಕ್ಕೆ ತುತ್ತಾದವರಿಗೆ ಪರಿಹಾರ ಕೊಡಿಸುವುದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನೆರವಾಗುವುದು, ನೊಂದವರ ಪರವಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದು- ನನ್ನ ಕೆಲಸವಾಗಿತ್ತು. ಕಿಂಗ್ ಫಿಷರ್ ಸಂಸ್ಥೆಯಲ್ಲಿ ದುಡಿದಿದ್ದ ಹಣವನ್ನೆಲ್ಲ ಈ ಸೇವಾಕಾರ್ಯಕ್ಕೆ ಬಳಸಿಕೊಂಡೆ. ಈ ಸಮಯದಲ್ಲೇ ವಿಪತ್ತು ನಿರ್ವಹಣೆ ವಿಷಯದಲ್ಲಿ ಎಂ.ಎ. ಪದವಿಯನ್ನೂ ಮುಗಿಸಿದೆ.
2011ರಲ್ಲಿ ನಿರ್ಭಯಾ ಅತ್ಯಾಚಾರ ಪ್ರಕರಣ ಆಯಿತಲ್ಲ, ಅದು ನನ್ನ ಅಂತರಂಗವನ್ನು ಕಲಕಿದ ಇನ್ನೊಂದು ಸಂದರ್ಭ. ದುರ್ಘಟನೆ ನಡೆದ ದಿನ ನಾನೂ ನಿರ್ಭಯಾ ಹೋಗಿದ್ದ ಮಾಲ್‌ಗೆ ಹೋಗಿದ್ದೆ . 9 ಗಂಟೆಗೆ ಕ್ಯಾಬ್‌ನಲ್ಲಿ ಮನೆಗೆ ಬಂದುಬಿಟ್ಟೆ. ಬ್ಯಾಡ್ ಲಕ್. ನಿರ್ಭಯಾಗೆ ಅಂತ ಅದೃಷ್ಟ ಇರಲಿಲ್ಲ. ದುಷ್ಕೃ ತ್ಯದ ವಿವರ ತಿಳಿದಾಗ ರಕ್ತ ಕುದಿಯಿತು. ನಾನೇ ಮುಂದಾಗಿ ಹೋಗಿ ನಿರ್ಭಯಾಳ ಅಮ್ಮನನ್ನು ಪರಿಚಯ ಮಾಡಿಕೊಂಡೆ. ಕಾಮುಕರಿಗೆ ಶಿಕ್ಷೆ ಯಾಗಲಿ ಎಂದು ಒತ್ತಾಯಿಸುತ್ತಾ ನಿರ್ಭಯಾಳ ಅಮ್ಮನ ಜತೆ ಪದೇ ಪದೆ ಕೋರ್ಟ್‌ಗೆ ಹೋಗತೊಡಗಿದಾಗ, ಎದೆಯೊಡೆಯುವಂಥ ಮತ್ತಷ್ಟು ದೃಶ್ಯಗಳು ಕಾಣಿಸಿದವು. ನಿರ್ಭಯಾ ಪ್ರಕರಣ ರಾಷ್ಟ್ರಾದ್ಯಂತ ಸುದ್ದಿಯಾದ್ದರಿಂದ ಅವರ ಕೇಸ್‌ಗೆ ಪ್ರಾಮುಖ್ಯ ಸಿಕ್ಕಿತು. ವಿಚಾರಣೆಯೂ ಬೇಗ ಬೇಗ ನಡೆಯುತ್ತಿತ್ತು. ಆದರೆ ಅಂಥದ್ದೇ ದೌರ್ಜನ್ಯಕ್ಕೆ ತುತ್ತಾದ ಅದೆಷ್ಟೋ ಹೆಣ್ಣು ಮಕ್ಕಳು ಯಾರಲ್ಲಿ, ಹೇಗೆ ನ್ಯಾಯ ಕೇಳಬೇಕೆಂದು ಗೊತ್ತಾಗದೇ ಕೋರ್ಟ್‌ನ ಮೂಲೆಯಲ್ಲಿ ಕೂತಿರುತ್ತಿದ್ದರು. ನಿರ್ಭಯಾ ಪರವಾಗಿ ಹೋರಾಡಿದಂತೆಯೇ ಈ ಮಕ್ಕಳ ಪರವಾಗಿ ದನಿ ಎತ್ತಬಾರದೇಕೆ ಅನ್ನಿಸಿತು. ಆಗ ಶುರುವಾದದ್ದೇ “ಪೀಪಲ್ ಎಗೆನೆಸ್ಟ್ ರೇಪ್ ಇನ್ ಇಂಡಿಯಾ’ ಎನ್‌ಜಿಒ.
ಅತ್ಯಾಚಾರ ಪ್ರಕರಣಗಳಲ್ಲಿ ಕೋರ್ಟ್‌ಗೆ ಹೋದವರು ವರ್ಷಗಳ ಕಾಲ ನ್ಯಾಯ ಕ್ಕಾಗಿ ಕಾಯಬೇಕಾಗುತ್ತದೆ. ಅದನ್ನು ಮೀರಿದ ಸವಾಲೆಂದರೆ, ಹೆಚ್ಚಿನವರು ದೂರು ಕೊಡಲು ಮುಂದೆ ಬರುವುದೇ ಇಲ್ಲ. ಕೆಲವೊಮ್ಮೆ ಸಂತ್ರ ಸ್ತೆಯರು ದೂರು ಕೊಡಲು ಒಪ್ಪಿದರೂ, ಮರ್ಯಾದೆ ಹೋಗುತ್ತೆ ಎನ್ನುತ್ತಾ ಪೋಷಕರು ಅವರ ಬಾಯಿ ಮುಚ್ಚಿಸುತ್ತಾರೆ. ಇದನ್ನೆಲ್ಲ ಹೇಗೋ ದಾಟಿ ಕೋರ್ಟ್‌ಗೆ ಬಂದರೆ ಅಲ್ಲಿ ವಕೀಲರು ಇರಿಯುವಂಥ ಪ್ರಶ್ನೆ ಕೇಳಿ ಕಂಗಾಲು ಮಾಡುತ್ತಾರೆ. ನಿರ್ಭಯಾ ಕೇಸ್ ನಡೆಯುವ ಸಂದರ್ಭದಲ್ಲಿ ಇದನ್ನೆಲ್ಲ ನಾನು ಪ್ರತ್ಯಕ್ಷವಾಗಿ ಕಂಡೆ. ಇಡೀ ದಿನ ಕೋರ್ಟ್‌ನಲ್ಲಿ ನಿಂತ ದಿನಗಳನ್ನು ನಾನು ಲೆಕ್ಕವಿಟ್ಟಿಲ್ಲ. ಕೆಲವೊಮ್ಮೆ ಒಂದೇ ದಿನ ಐದಾರು ಕೋರ್ಟ್‌ಗಳಿಗೆ ಹೋಗಿದ್ದೂ ಉಂಟು. ಅದೊಮ್ಮೆ ನೆರವು ಕೇಳಿಕೊಂಡು ಬಂದಿದ್ದ ಸಂತ್ರಸ್ತೆಯನ್ನು ಭೇಟಿ ಮಾಡಲು ಹೋದರೆ ಕಂಡಿದ್ದೇನು ಗೊತ್ತಾ?- ಐದು ವರ್ಷದ ಪುಟ್ಟ ಬಾಲೆ. ಪಾಪಿಗಳು, ಆ ಪುಟ್ಟ ಕಂದನ ಮೇಲೂ ಅತ್ಯಾಚಾರ ಮಾಡಿದ್ದರು. ಆ ಮಗು ಏನು ಹೇಳಲೂ ತೋಚದೆ ಸುಮ್ಮನೇ ಕೈಹಿಡಿದುಕೊಂಡಿತು. ಬಿಕ್ಕಳಿಸುವುದನ್ನು ಬಿಟ್ಟು ನಾನು ಬೇರೇನೂ ಮಾಡುವಂತಿರಲಿಲ್ಲ.
ಎಲ್ಲರಿಗೂ ಗೊತ್ತಿರುವಂತೆ ಅತ್ಯಾಚಾರಿಗಳಲ್ಲಿ ಹೆಚ್ಚಿನವರು ಶ್ರೀಮಂತ ಹಿನ್ನೆಲೆ ಯವರು ಅಥವಾ ಪುಂಡರು. ನೊಂದವರ ಪರವಾಗಿ ನಾನು ಕೋರ್ಟ್ ಗೆ ಹೋದಾಗ ಅವರೆಲ್ಲ ಸಿಟ್ಟಾಗುತ್ತಿದ್ದರು. ಅವರಿಗೇ ಇಲ್ಲದ ಉಸಾಬರಿ ನಿನಗ್ಯಾಕೆ? ಜೈಲಿಂದ ಆಚೆ ಬಂದು ನಿನ್ನನ್ನು ವಿಚಾರಿಸಿಕೊಳೆ¤àವೆ ಎನ್ನುತ್ತಿದ್ದರು. ಒಬ್ಬನಂತೂ, ನ್ಯಾಯಾಧೀಶರು ಶಿಕ್ಷೆ ಪ್ರಕಟಿಸಿದಾಗ ಕೋರ್ಟ್‌ನಲ್ಲಿಯೇ ನನಗೆ ಪ್ರಾಣ ಬೆದರಿಕೆ ಹಾಕಿದ. ಇಂಥ ಸಂದರ್ಭಗಳಲ್ಲೆಲ್ಲ- ತಪ್ಪು ಮಾಡಿರುವ ಅವನಿಗೇ ಅಷ್ಟು ಸೊಕ್ಕಿರಬೇಕಾದರೆ, ತಪ್ಪೇ ಮಾಡಿಲ್ಲದ ನನಗೆ ಇನ್ನೆಷ್ಟಿರಬೇಡ ಅನ್ನಿಸುತ್ತಿತ್ತು. ಬೇಸರದ ಸಂಗತಿ ಎಂದರೆ- ಕೆಲವು ವಕೀಲರು, ಪೊಲೀಸ್ ಅಧಿಕಾರಿಗಳೂ ಆ ಪುಂಡರ ಪರ ವಕಾಲತ್ತು ವಹಿಸುತ್ತಿದ್ದುದು, ಕೆಲವರಂತೂ ಕೇಸ್ ಸೆಟ್ಲ ಮಾಡೋಣ ಬನ್ನಿ ಎಂದು ನನ್ನಿಂದ ಮಂಗಳಾರತಿ ಮಾಡಿಸಿ ಕೊಂಡರು. ಸಮಾಧಾನದ ಸಂಗತಿ ಎಂದರೆ- ಕೊಲ್ಲುವವರು ಇರುವ ಕಡೆಯಲ್ಲೇ ಕಾಯುವವರೂ ಇರುತ್ತಿದ್ದರು. ಕೆಲವೊಮ್ಮೆ ಲಾಯರ್‌ಗೆ ಫೀಸ್ ಕೊಡಲು ಹಣವಿಲ್ಲ ಅಂದುಕೊಂಡಾಗ ಅಕಸ್ಮಾತ್ ಸಿಕ್ಕವರು ಹಣ ಕೊಟ್ಟಿದ್ದಾರೆ. ಕೆಲವೊಮ್ಮೆ ವಕೀಲರೇ ಫೀಸ್ ಪಡೆಯಲು ನಿರಾಕರಿಸಿದ್ದಾರೆ.
ಅತ್ಯಾಚಾರಕ್ಕೆ ಗುರಿಯಾದ ಹೆಣ್ಣುಮಕ್ಕಳನ್ನು ರಕ್ಷಿಸುವುದು, ಅವರಿಗೆ ಪುನರ್ವಸತಿ ಕಲ್ಪಿಸುವುದು, ಬದುಕಿಗೆ ಭದ್ರತೆ ಒದಗಿಸುವುದು ನನ್ನ ಉದ್ದೇಶ. ಹೋರಾಟದಲ್ಲಿ ಗೆಲ್ತಿನಾ? ಗೊತ್ತಿಲ್ಲ. ಆದರೆ ಕಡೆಯ ಕ್ಷಣದವರೆಗೂ ನೊಂದ ವರ ಜತೆ ಇತೇìನೆ. ಅದು ನನ್ನ ಭರವಸೆ. ನಿರ್ಭಯಾ ಪ್ರಕರಣದಲ್ಲಿ 16 ವರ್ಷದ ಬಾಲಕನೂ ಅಪರಾಧಿ. ಅವನು ಬಾಲಾಪರಾಧಿ ಆಗಿರುವುದರಿಂದ ಅವ ನನ್ನು ಬಿಡುಗಡೆ ಮಾಡಬೇಕು ಎಂಬ ಹುಯಿಲೆದ್ದಿತು. ಅದನ್ನು ವಿರೋ ಧಿಸಿ ನಿರ್ಭಯಾಳ ತಾಯಿಯೊಂದಿಗೆ ಪ್ರತಿಭಟನೆ ನಡೆಸಿ ಕಾನೂನು ತಿದ್ದುಪಡಿ ಮಾಡಿಸಿದ್ದು, ಪೋಷಕರು ಒಪ್ಪಿದರೆ ಬಾಲ್ಯವಿವಾಹ ಮಾಡಬಹುದು ಎಂಬ ರಾಜಸ್ಥಾನ ಸರಕಾರದ ನಿರ್ಧಾರ ಪ್ರಶ್ನಿಸಿ ಅಲ್ಲೂ ಕಾಯ್ದೆಗೆ ತಿದ್ದುಪಡಿ ತಂದದ್ದು, ತಾವು ವಾಸವಿದ್ದ ಹಳೆಯ ಮನೆಗೆ ಹೋಗಲು ಬಯಸದ ಅತ್ಯಾಚಾರ ಸಂತ್ರಸ್ತೆಯ ಕುಟುಂಬಕ್ಕೆ 22 ಲಕ್ಷ ರೂ. ವೆಚ್ಚದಲ್ಲಿ ಹೊಸ ಮನೆ ಕೊಡಿಸಿದ್ದು, ಇದೆಲ್ಲವೂ ನಮ್ಮ ಎನ್‌ಜಿಒ ಮೂಲಕ ನಾವು ಮಾಡಿರುವ ಒಳ್ಳೆಯ ಕೆಲಸ.
ಈ ಸೇವೆಗೆ ಪ್ರತಿಯಾಗಿ ನನಗೆ ನೊಂದ ಹೆಣ್ಣು ಮಕ್ಕಳ/ ಪೋಷಕರ ಪ್ರೀತಿ ಸಿಕ್ಕಿದೆ. ನಮ್ಮ ಪರವಾಗಿ ದನಿಯೆತ್ತಲು ಒಬ್ಬರಿದ್ದಾರೆ ಎಂಬ ನಂಬಿಕೆ ಅವರಿಗೆ ಬಂದಿದೆ. ಕಳೆದ ವರ್ಷ ಕೋವಿಡ್ ಬಂತಲ್ಲ; ಆಗ ನನ್ನ ಆರೋಗ್ಯಕ್ಕಾಗಿ ಆ ಜನ ಪ್ರಾರ್ಥಿಸಿದ್ದನ್ನು ಕಂಡೆ. ದಿನವೂ ಹತ್ತಾರು ಕೋರ್ಟ್‌ಗೆ ಹೋಗಿ ಬರ್ತೀರ. ನಿಮಗೆ ಆರೋಗ್ಯ ಕೆಟ್ಟರೆ ನಮಗೆ ಯಾರು ದಿಕ್ಕು? ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಿ ಎಂದವರಿಗೆ ಲೆಕ್ಕವಿಲ್ಲ. ನಾನು ಸೂಪರ್ ವುಮೆನ್ ಅಲ್ಲ. ಆದರೆ ಯಾವುದೋ ಒಂದು ಶಕ್ತಿ ನನ್ನನ್ನು ಕಾಪಾಡುತ್ತದೆ ಎಂಬ ನಂಬಿಕೆಯಲ್ಲಿ ಬದುಕ್ತಾ ಇದ್ದೇನೆ.
ನಮ್ಮ ಎನ್‌ಜಿಒ ಮೂಲಕ ಸಾವಿರಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ನೌಕರಿ, ಆರ್ಥಿಕ ಭದ್ರತೆ ಮತ್ತು ಹೊಸಬದುಕು ಕಲ್ಪಿಸಿದ್ದೇನೆ ಎನ್ನಲು ಹೆಮ್ಮೆಯಾಗುತ್ತೆ. ಅದೇ ಸಮಯಕ್ಕೆ, ಅಷ್ಟೂ ಹೆಣ್ಣುಮಕ್ಕಳ ಮೇಲೆ ಪುರುಷರಿಂದ ದೌರ್ಜನ್ಯ ನಡೆದಿದೆ ಎನ್ನಲು ಸಂಕಟವಾಗುತ್ತೆ. ಹೆಣ್ಣಿನ ಮೈ-ಮನಸ್ಸು ಹೂವಿನಷ್ಟು ಮೃದು. ಇವತ್ತು ನೀನು ಒಂದು ಹೆಣ್ಣನ್ನು ಕೆಟ್ಟ ದೃಷ್ಟಿಯಿಂದ ನೋಡಿದರೆ, ನಾಳೆ ನಮ್ಮನ್ನು ಇನ್ನೊಬ್ಬರು ಅದೇ ದೃಷ್ಟಿಯಿಂದ ನೋಡುತ್ತಾರೆ ಎಂಬ ಸೂಕ್ಷ್ಮವನ್ನು ಮನೆಮನೆಯ ಹೆಂಗಸರು ತಮ್ಮ ಮಗ/ ಗಂಡನಿಗೆ ಅರ್ಥ ಮಾಡಿಸಬೇಕು. ಆಗ ಮಾತ್ರ ಅತ್ಯಾಚಾರದ ಸಂಖ್ಯೆ ಕಡಿಮೆಯಾಗಬಹು ದೇನೋ. ಕಾರ್ಪೋರೆಟ್ ಕಂಪೆನಿಯಲ್ಲೇ ಇದ್ದಿದ್ದರೆ ನಾನು ಕೋಟಿ ರೂಪಾಯಿಗಳನ್ನೇ ಸಂಪಾದಿಸಬಹುದಿತ್ತು ನಿಜ. ಆದರೆ ಒಬ್ಬರ ಕಂಬನಿ ಒರೆಸಿದಾಗ ಸಿಗುವ ಖುಷಿ, ಕೋಟಿ ರೂಪಾಯಿ ಕಂಡಾಗ ಆಗುವುದಿಲ್ಲ ಎನ್ನುತ್ತಾ ಮಾತು ಮುಗಿಸಿದರು ಯೋಗಿತಾ.
ನೊಂದವರಿಗೆ ನ್ಯಾಯ ಕೊಡಿಸಲು ಹೋರಾಡುತ್ತಿರುವ ಈ ದಿಟ್ಟೆಗೆ ಅಭಿ ನಂದನೆ ಹೇಳಬೇಕು ಅನ್ನಿಸಿದರೆ- [email protected]
– ಎ.ಆರ್.ಮಣಿಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.