ಯುವಜನರು ಮತ್ತು ಪಾರ್ಕಿನ್‌ಸನ್ಸ್ ಕಾಯಿಲೆ
Team Udayavani, Jun 26, 2022, 2:50 PM IST
ಪಾರ್ಕಿನ್‌ಸನ್ ಎನ್ನುವುದು ನರಗಳ ಕಾರ್ಯಕ್ಷಮತೆ ಕ್ಷಯಿಸುವ ಒಂದು ಕಾಯಿಲೆ. ಮಿದುಳಿನ ಬೇಸಲ್ ಗ್ಯಾಂಗ್ಲಿಯಾ ಎಂಬ ಭಾಗವು ಕ್ಷಯಿಸಿ, ಸಂಕುಚನ ಹೊಂದುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಇದು ಸಾಮಾನ್ಯವಾಗಿ ಹಿರಿಯ ವಯಸ್ಕರನ್ನು ಬಾಧಿಸುತ್ತದೆ.ಯುವ ವಯಸ್ಕರಲ್ಲಿ ಕೆಲವರಲ್ಲಿಯೂ ಇದು ಕಾಣಿಸಿಕೊಳ್ಳುವುದುಂಟು.
ಪಾರ್ಕಿನ್ ಸನ್‌ಗೆ ಒಳಗಾಗುವ ಸಣ್ಣ ವಯಸ್ಕರಲ್ಲಿ ಅದು 50 ವರ್ಷಗಳಿಗಿಂತ ಕಿರಿಯ ವಯೋಮಾನದಲ್ಲಿ ಆರಂಭವಾಗುತ್ತದೆ. ಇಂತಹ ರೋಗಿಗಳಲ್ಲಿಯೂ ಉಪವರ್ಗವೊಂದಿದೆ; ಬಾಲ ಪಾರ್ಕಿನ್‌ಸನಿಸಂ ಎಂದು ಅದನ್ನು ಕರೆಯುತ್ತಾರೆ. ಇದು ಸಾಮಾನ್ಯವಾಗಿ 21 ವರ್ಷ ವಯಸ್ಸಿಗೆ ಮುನ್ನ ಕಾಣಿಸಿಕೊಳ್ಳುತ್ತದೆ. ಇದು ಸಾಮಾನ್ಯವಾಗಿ ವಂಶವಾಹಿ ರೂಪಾಂತರದ ಜತೆಗೆ ಸಂಬಂಧ ಹೊಂದಿರುತ್ತದೆ.
ನಡುಕಗಳು, ಕೈಕಾಲುಗಳು ಪೆಡಸಾಗುವುದು, ಬ್ರ್ಯಾಡಿಕೈನೇಸಿಯಾ (ನಿಧಾನಗತಿ) ಮತ್ತು ದೇಹಭಂಗಿಗಳ ಅಸ್ಥಿರತೆ (ಸಮತೋಲನ ಮತ್ತು ಸಂಯೋಜನೆಯಲ್ಲಿ ತೊಂದರೆ) ಪಾರ್ಕಿನ್ ಸನಿಸಂನ ಲಕ್ಷಣಗಳು.
ರೋಗ ಆರಂಭವಾದ ಬಳಿಕ ಕಾಲಾಂತರದಲ್ಲಿ ಅದು ಅವರ ಮುಖಭಾವನೆಗಳ ಮೇಲೆಯೂ ಪ್ರಭಾವ ಬೀರಿ ಮುಖವು ಮುಖವಾಡದಂತಾಗುತ್ತದೆ. ರೋಗಿಗಳಿಗೆ ನಗುವುದಕ್ಕೆ, ನುಂಗುವುದಕ್ಕೆ, ಮಾತನಾಡುವುದಕ್ಕೆ ತೊಂದರೆಯಾಗುತ್ತದೆ. ಅದು ಅವರ ಕೈಬರಹವನ್ನೂ ಬಾಧಿಸಿ ಮೈಕ್ರೊಗ್ರಾಫಿಯಾ (ಕೈಬರಹ ಸಣ್ಣದಾಗುವುದು) ಕ್ಕೆ ಕಾರಣವಾಗುತ್ತದೆ. 40ಕ್ಕಿಂತ ಕೆಳಗಿನ ವಯೋಮಾನದವರಲ್ಲಿ ಪಾರ್ಕಿನ್‌ಸನಿಸಂ ಉಂಟಾಗುವ ಪ್ರಮಾಣ 1 ಲಕ್ಷಕ್ಕೆ 0.5 ಆಗಿದ್ದರೆ ಒಟ್ಟಾರೆ ವಯೋಗುಂಪಿನಲ್ಲಿ ಇದು ಉಂಟಾಗುವ ಪ್ರಮಾಣ 1 ಲಕ್ಷ ಮಂದಿಗೆ 13.4 ಆಗಿದೆ.
ಕಾರಣಗಳು ಸಣ್ಣ ವಯಸ್ಸಿನವರಲ್ಲಿ ಪಾರ್ಕಿನ್‌ಸನಿಸಂಗೆ ಕೆಲವು ವಂಶವಾಹಿ ರೂಪಾಂತರಗಳು ಕಾರಣವಾಗುತ್ತವೆ. ಪಿಎಆರ್‌ಕೆ, ಸಿನುಸ್ಲೈನ್, ಪಿಐಎನ್‌ಕೆ1, ಎಲ್‌ಆರ್ ಆರ್‌ಕೆ2 ಎಂಬ ವಂಶವಾಹಿಗಳಲ್ಲಿ ಈ ರೂಪಾಂತರ ಆಗಿರಬಹುದು. ಎನ್ ಸೆಫಲೈಟಿಸ್ ಅಥವಾ ಮೆದುಳು ಜ್ವರದ ಬಳಿಕ ಪಾರ್ಕಿನ್‌ಸನಿಸಂ ಲಕ್ಷಣಗಳು ತಲೆದೋರಬಹುದಾಗಿದ್ದು, ಇದನ್ನು ಪೋಸ್ಟ್ ಎನ್‌ಸೆಫಾಲಿಟಿಕ್ ಪಾರ್ಕಿನ್ ಸನಿಸಂ ಎಂದು ಕರೆಯಲಾಗುತ್ತದೆ. ಸೆರಬ್ರಲ್ ಪಾಲ್ಸಿಯಲ್ಲಿ ಉಂಟಾಗುವಂತಹ ನಡಿಗೆಯ ತೊಂದರೆಯನ್ನು ಹೊಂದಿರುವುದರ ಜತೆಗೆ ಪಾರ್ಕಿನ್‌ಸನಿಸಂನ ಕೆಲವು ಲಕ್ಷಣಗಳನ್ನು ಹೊಂದಿರುವ ಮಕ್ಕಳು ಡೋಪಾ ರೆಸ್ಪಾನ್ಸಿವ್ ಡಿಸ್ಟೋನಿಯಾಗೆ ತುತ್ತಾಗಿರಬಹುದು. ಅಂಗಾಂಗಗಳಲ್ಲಿ ತಾಮ್ರದಂಶ ಅತಿಯಾಗಿ ಶೇಖರವಾಗುವ ಆನುವಂಶಿಕ ಸಮಸ್ಯೆಯೊಂದಿದ್ದು, ಇದನ್ನು ವಿಲ್ಸನ್ಸ್ ಡಿಸಾರ್ಡರ್ ಎನ್ನುತ್ತಾರೆ; ಇದು ಕೂಡ ಪಾರ್ಕಿನ್‌ಸನಿಸಂನ ಹಾಗೆ ಕಂಡುಬರಬಹುದು. ಮಚಾದೊ ಜೋಸೆಫ್ ಕಾಯಿಲೆ, ಹಂಟಿಂಗ್‌ಸನ್ಸ್ ಕಾಯಿಲೆಯಂತಹ ನರವ್ಯವಸ್ಥೆ ಕ್ಷಯಿಸುವ ಕಾಯಿಲೆಗಳು ಕೂಡ ಪಾರ್ಕಿನ್‌ಸನ್‌ನಂತಹ ಲಕ್ಷಣಗಳಿಗೆ ಕಾರಣವಾಗುತ್ತವೆ.
ಪಾರ್ಕಿನ್‌ಸನಿಸಂ ಹೇಗೆ ಭಿನ್ನ?
ಸಣ್ಣ ವಯಸ್ಸಿನಲ್ಲಿಯೇ ಪಾರ್ಕಿನ್‌ಸನಿಸಂ ಆರಂಭವಾಗಿರುವವರಿಗೆ ಪಾರ್ಕಿನ್ ಸನಿಸಂನ ಕೌಟುಂಬಿಕ ಇತಿಹಾಸ ಇರುತ್ತದೆ.
ಲಕ್ಷಣಗಳು ನಿಧಾನಗತಿಯಲ್ಲಿ ಪ್ರಗತಿ ಹೊಂದುತ್ತವೆ.
ಡೋಪಾಮಿನರ್ಜಿಕ್ ಔಷಧಗಳಿಂದ ಹೆಚ್ಚು ಅಡ್ಡ ಪರಿಣಾಮಗಳು ಉಂಟಾಗುತ್ತವೆ.
ಡಿಸ್ಟೋನಿಯಾ (ಕೈಕಾಲುಗಳು ತಿರುಚಿಕೊಳ್ಳುವುದು ಅಥವಾ ಅಸಹಜ ಭಂಗಿಗಳು) ಹೆಚ್ಚು ಬಾರಿ ಉಂಟಾಗುತ್ತವೆ.
ಯುವ ವಯಸ್ಸಿನಲ್ಲಿಯೇ ಆರಂಭವಾಗುವ ಪಾರ್ಕಿನ್‌ಸನಿಸಂ: ಬೇಗನೆ ಪತ್ತೆ ಹಚ್ಚುವುದು ಏಕೆ ಮುಖ್ಯ? ಪಾರ್ಕಿನ್‌ಸನ್‌ಗೆ ತುತ್ತಾಗುವ ಯುವ ವಯಸ್ಕರು ತಮ್ಮ ವೃತ್ತಿ ಜೀವನದ ವಿವಿಧ ಹಂತಗಳಲ್ಲಿರಬಹುದು. ತಮಗಾಗಿ ವ್ಯಯಿಸಲು ಅವರಿಗೆ ಹೆಚ್ಚು ಸಮಯ ಸಿಗುವುದಿಲ್ಲ. ಅವರು ಮಕ್ಕಳನ್ನು ಹೊಂದುವ ವಯಸ್ಸಿನಲ್ಲಿರಬಹುದು ಮತ್ತು ಗರ್ಭಧಾರಣೆಯ ಯೋಜನೆ ಹಾಕಿಕೊಳ್ಳಲು ಬಯಸಿರಬಹುದು; ಅವರಿಗೆ ವಂಶವಾಹಿ ಆಪ್ತಸಮಾಲೋಚನೆಯ ಅಗತ್ಯವಿರುತ್ತದೆ. ಯುವ ರೋಗಿಗಳ ನರಶಾಸ್ತ್ರೀಯ ನಮನೀಯತೆ ಹೆಚ್ಚಿದ್ದು, ಅವರ ಹೊಂದಿಕೊಳ್ಳುವ ಸಾಮರ್ಥ್ಯ ಮತ್ತು ರೋಗ ನಿರ್ವಹಣೆಯ ಸಾಮರ್ಥ್ಯ ವಯೋವೃದ್ಧರಿಗೆ ಹೋಲಿಸಿದರೆ ಭಿನ್ನವಾಗಿರುತ್ತದೆ. ವೈದ್ಯಕೀಯ ಸ್ಥಿತಿಗತಿಗಳ ಮೇಲೆ ಋತುಚಕ್ರದ ಪ್ರಭಾವ ಯುವ ರೋಗಿಗಳಲ್ಲಿ ಒಂದು ನಿರ್ದಿಷ್ಟ, ಗಮನಾರ್ಹ ವಿಚಾರವಾಗಿರುತ್ತದೆ.
(ಮುಂದಿನ ವಾರಕ್ಕೆ)
-ಡಾ| ರೋಹಿತ್ ಪೈ
ಕನ್ಸಲ್ಟಂಟ್, ನ್ಯುರಾಲಜಿ ವಿಭಾಗ,
ಕೆಎಂಸಿ ಆಸ್ಪತ್ರೆ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.