ರಾಜ್ಯದ ಪಶುಪಾಲಕರಿಗೆ ಪ್ರತಿ ದಿನ 11 ಕೋಟಿ ರೂ. ಕೈತಪ್ಪಿ ಹೋಗುತ್ತಿದೆ : ಸಿದ್ದರಾಮಯ್ಯ
ಇದಕ್ಕೆ ಭ್ರಷ್ಟ ಬಿಜೆಪಿಯೆ ನೇರ ಕಾರಣ...
Team Udayavani, Mar 8, 2023, 2:17 PM IST
ಬೆಂಗಳೂರು : ರಾಜ್ಯದ ಹಾಲು ಉತ್ಪಾದಕ ರೈತರು ಹಾಗೂ ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಭ್ರಷ್ಟ ಬಿಜೆಪಿಯೆ ನೇರ ಕಾರಣ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಅವರು,ರಾಜ್ಯದ ಪ್ರಮುಖ ದಿನ ಪತ್ರಿಕೆಗಳು ಇಂದು ಹಾಲು ಮತ್ತು ಹಾಲಿನ ಉತ್ಪನ್ನಗಳ ಕುರಿತಂತೆ ಅತ್ಯಂತ ಆತಂಕಕಾರಿಯಾದ ವರದಿಗಳನ್ನು ಪ್ರಕಟಿಸಿವೆ. ಈ ಮಾರ್ಚ್‍ನಲ್ಲಿ ಪ್ರತಿ ದಿನ 99 ಲಕ್ಷ ಲೀಟರುಗಳಷ್ಟು ಹಾಲು ಸಂಗ್ರಹವಾಗಬೇಕಾಗಿದ್ದ ಕಡೆ ಕೇವಲ 71 ಲಕ್ಷ ಲೀಟರುಗಳಷ್ಟು ಹಾಲನ್ನು ಮಾತ್ರ ಕೆಎಂಎಫ್ ಸಂಗ್ರಹಿಸುತ್ತಿದೆ. ಇದೂ ಕೂಡ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಪ್ರಸ್ತುತ ಪ್ರತಿ ದಿನ ಸುಮಾರು 28 ಲಕ್ಷ ಲೀಟರುಗಳಷ್ಟು ಹಾಲಿನ ಉತ್ಪಾದನೆ ಕಡಿಮೆಯಾಗಿದೆ. ಇದರಿಂದಾಗಿ ರಾಜ್ಯದ ಪಶುಪಾಲಕರಿಗೆ ಪ್ರತಿ ದಿನ ಸುಮಾರು 11 ಕೋಟಿ ರೂಪಾಯಿಗಳಷ್ಟು ಹಣ ಕೈತಪ್ಪಿ ಹೋಗುತ್ತಿದೆ. ಗ್ರಾಮೀಣ ಭಾಗದ ಮಹಿಳೆಯರು ತಮ್ಮ ಸಂಸಾರಗಳನ್ನು ನಡೆಸಲು ಹೈನುಗಾರಿಕೆ ಒಂದು ಪ್ರಮುಖ ಸಾಧನವಾಗಿತ್ತು. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ಮತ್ತು ಬಸವರಾಜ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರ್ಕಾರಗಳ ಹಾದಿ ತಪ್ಪಿದ ಅಡ್ಡ ಕಸುಬಿ ನೀತಿಗಳೆ ಇದಕ್ಕೆ ಕಾರಣವಲ್ಲವೆ ಎಂದು ಪ್ರಶ್ನೆ ಮುಂದಿಟ್ಟಿದ್ದಾರೆ.
ಪತ್ರಿಕೆಗಳು ವರದಿ ಮಾಡಿರುವಂತೆ ರಾಜ್ಯದ ರೈತರು ಹಸುಗಳನ್ನು ವ್ಯಾಪಕವಾಗಿ ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಚರ್ಮಗಂಟು ಕಾಯಿಲೆ ಕೂಡ ಲಕ್ಷಾಂತರ ಜಾನುವಾರುಗಳನ್ನು ರೋಗಗ್ರಸ್ತವಾಗುವಂತೆ ಮಾಡಿದೆ. ಸುಮಾರು 32000 ಜಾನುವಾರುಗಳು ಈ ರೋಗದಿಂದ ಮರಣ ಹೊಂದಿವೆ. ಗುಜರಾತ್ ಮೂಲದ ರಾಜಕಾರಣಿಗಳು ಮತ್ತು ವ್ಯಾಪಾರಿಗಳ ಕಣ್ಣು ನಮ್ಮ ಕೆಎಂಎಫ್ ಮೇಲೆ ಬಿದ್ದಾಗಿನಿಂದ ರಾಜ್ಯದ ಹೈನು ಉದ್ಯಮಕ್ಕೆ ಗರ ಬಡಿದಂತಾಗಿದೆ. ಇವರಿಂದಾಗಿ ರಾಜ್ಯದ ರೈತರಿಗೂ ಸಂಕಷ್ಟ ಬಂದೊದಗಿದೆ. ಕೊಳ್ಳುವ ಗ್ರಾಹಕರೂ ವಿಪರೀತ ಸಂಕಷ್ಟ ಅನುಭವಿಸುತ್ತಿದ್ದಾರೆ. ನಂದಿನಿ ಮಳಿಗೆಗಳಲ್ಲಿ ಕಲಬೆರಕೆ ತುಪ್ಪವೂ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಜನರು ದೂರುತ್ತಿದ್ದಾರೆ. ಜನರಿಗೆ ಉತ್ತಮ ನಂದಿನಿ ತುಪ್ಪ ಸೇರಿದಂತೆ ಗುಣಮಟ್ಟದ ಪದಾರ್ಥಗಳು ಸಿಗುತ್ತಿಲ್ಲ. ಕೊಳ್ಳುವ ಗ್ರಾಹಕರ ಕೈ ಸುಡುವಷ್ಟು ಮಟ್ಟಿಗೆ ಬೆಲೆಗಳು ಏರಿಕೆಯಾಗಿವೆ ಎಂದು ಹೇಳಿದ್ದಾರೆ.
ಬಿಜೆಪಿಯ ದುಷ್ಟ ಆಡಳಿತದಿಂದಾಗಿ ನಮ್ಮ ನಾಡಿನ ಪ್ರತಿಷ್ಠಿತ ಸಂಸ್ಥೆಯಾದ ಕೆಂಎಂಎಫ್‍ಗೆ ಇಂದು ಈ ಗಂಡಾಂತರ ಬಂದೊದಗಿದೆ. ಕೇಂದ್ರದ ಮೋದಿ ಸರ್ಕಾರ ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್‍ಗಳಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ತಯಾರಿ ನಡೆಸಿತ್ತು. ರೈತರು ವಿರೋಚಿತ ಪ್ರತಿಭಟಿಸಿದ ಕಾರಣದಿಂದ ತಾತ್ಕಾಲಿಕವಾಗಿ ಮೋದಿ ಸರ್ಕಾರ ಹಿಂದೆ ಸರಿದಿದೆ ಎಂದಿದ್ದಾರೆ.
ಬಿಜೆಪಿ ಸರ್ಕಾರವೆ ನನಗೆ ಕೊಟ್ಟಿರುವ ಮಾಹಿತಿ ಪ್ರಕಾರ 2019 ರಲ್ಲಿ 1.29 ಕೋಟಿ ಹಸು ಎಮ್ಮೆ, ಎತ್ತು, ಕೋಣಗಳಿದ್ದವು. ಅವು 2022 ರ ಡಿಸೆಂಬರ್ ವೇಳೆಗೆ 1.15 ಕೋಟಿ ಇಳಿಕೆಯಾಗಿವೆ. ಈ 14 ಲಕ್ಷ ಜಾನುವಾರುಗಳು ಎಲ್ಲಿಗೆ ಹೋದವು? ವರ್ಷದಿಂದ ವರ್ಷಕ್ಕೆ ಜಾನುವಾರುಗಳ ಸಂಖ್ಯೆ ಹೆಚ್ಚಾಗುವುದರ ಬದಲಿಗೆ ಕಡಿಮೆಯಾಗುವುದಕ್ಕೆ ಕಾರಣಗಳೇನು? ಸರ್ಕಾರವೆ ನನಗೆ ಕೊಟ್ಟಿರುವ ಮಾಹಿತಿಯ ಪ್ರಕಾರ, ಸರ್ಕಾರದ ಅನುದಾನದಿಂದ ನಡೆಯುತ್ತಿರುವ ಬಹುತೇಕ ಗೋಶಾಲೆಗಳಲ್ಲಿ ಗಂಡು ಕರುಗಳ ಪ್ರಮಾಣ ಶೇ.10 ಕ್ಕಿಂತ ಕಡಿಮೆ ಇದೆ. ನಿಸರ್ಗ ತತ್ವದ ಪ್ರಕಾರ ಶೇ.50 ರಷ್ಟು ಗಂಡು ಕರುಗಳು ಹುಟ್ಟುತ್ತವೆ. ಹಾಗಿದ್ದರೆ ಹುಟ್ಟಿದ ಗಂಡುಕರುಗಳು ಎಲ್ಲಿಗೆ ಹೋಗುತ್ತಿವೆ? ಸಬರ್‍ವಾಲ್‍ಗಳು, ಬಿಂದ್ರಾಗಳು, ಜೈನ್‍ಗಳು, ಶರ್ಮಾ ಮುಂತಾದವರು ಮಾಡುತ್ತಿರುವ ಬೀಫ್ ಎಕ್ಸ್‍ಪೋರ್ಟ್ ಪ್ರಮಾಣ ಸಾವಿರಾರು ಕೋಟಿಗಳಿಗೆ ಏರಿಕೆಯಾಗಿರುವುದಾಗಿ ವರದಿಗಳಿವೆ ಎಂದು ತಿಳಿಸಿದ್ದಾರೆ.
ಹಾಗಿದ್ದರೆ ಯಾರ ಅಭಯದಿಂದ ಇವರೆಲ್ಲ ಎಕ್ಸ್‍ಪೋರ್ಟ್ ಮಾಡುತ್ತಿದ್ದಾರೆ? ಇದಕ್ಕೆಲ್ಲ ಬಿಜೆಪಿ ಸರ್ಕಾರಗಳು ಉತ್ತರ ಹೇಳಬೇಕು.
ನಮ್ಮ ರಾಜ್ಯದಲ್ಲಿ ಸುಮಾರು 25 ಲಕ್ಷ ನೋಂದಾಯಿತ ಹಾಲು ಉತ್ಪಾದಕರಿದ್ದಾರೆ. ಹಾಲನ್ನು ಯಥೇಚ್ಛವಾಗಿ ಉತ್ಪಾದಿಸುತ್ತಿದ್ದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಮುಂತಾದ ಜಿಲ್ಲೆಗಳ ರೈತರೆ ಹಸುಗಳನ್ನು ಸಾಕಲು ನಿರಾಸಕ್ತಿ ತೋರಿಸುತ್ತಿದ್ದಾರೆ. ಗ್ರಾಮೀಣ ಆರ್ಥಿಕತೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿರುವ ಹೈನುಗಾರಿಕೆಯ ಚೈತನ್ಯವನ್ನು ನಾಶ ಮಾಡಲು ಮನುವಾದಿ ಶಕ್ತಿಗಳು ಹಾಗೂ ಕಾರ್ಪೊರೇಟ್ ಶಕ್ತಿಗಳು ಒಂದಾಗಿ ಶ್ರಮಿಸುತ್ತಿವೆ ಎಂದು ವಿವರಗಳನ್ನು ಮುಂದಿಟ್ಟಿದ್ದಾರೆ.
ನಮ್ಮ ಸರ್ಕಾರ ಇದ್ದಾಗ 2013 ರಿಂದ 2018ರ ಅವಧಿಯಲ್ಲಿ ಹಾಲಿಗೆ ನೀಡುವ ಪ್ರೋತ್ಸಾಹ ಧನವನ್ನು ಲೀಟರಿಗೆ 5 ರೂಪಾಯಿಗಳಷ್ಟು ಹೆಚ್ಚಿಸಿದ್ದೆವು. ನಮ್ಮ ಸರ್ಕಾರದ ನಿರ್ಧಾರದಿಂದಾಗಿ 2012-13 ರಲ್ಲಿ 45 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದ ಹಾಲಿನ ಪ್ರಮಾಣವು 2017 ರ ವೇಳೆಗೆ 73 ಲಕ್ಷ ಲೀಟರಿಗೆ [28 ಲಕ್ಷ ಲೀಟರು] ಏರಿಕೆಯಾಗಿತ್ತು. ಈಗ 2017 ಕ್ಕಿಂತ 2 ಲಕ್ಷ ಲೀಟರುಗಳಷ್ಟು ಕಡಿಮೆ ಹಾಲು ಪ್ರತಿ ದಿನ ಸಂಗ್ರಹವಾಗುತ್ತಿದೆ. ನಮ್ಮ ಸರ್ಕಾರದ ನೀತಿಗಳಿಂದಾಗಿ ರೈತರ ಬದುಕಿನಲ್ಲಿ ಒಂದಿಷ್ಟು ಚೈತನ್ಯ ಮೂಡಿತ್ತು. ಆದರೆ ಬಿಜೆಪಿ ಸರ್ಕಾರ ಹಾಲು ಉತ್ಪಾದಕರಿಗೆ ನೀಡುವ ಸಹಾಯಧನವನ್ನು ಕೂಡ ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡುತ್ತಿದೆ. 2017-18 ರಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದಾಗ 1356 ಕೋಟಿ ರೂಪಾಯಿಗಳನ್ನು ನಾವು ಹಾಲಿನ ಸಹಾಯಧನಕ್ಕಾಗಿ ರೈತರಿಗೆ ಕೊಟ್ಟಿದ್ದೆವು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 2020 -21 ರಲ್ಲಿ 1186 ಕೋಟಿ ಖರ್ಚು ಮಾಡಿದ್ದರೆ 2023-24ಕ್ಕೆ ಕೇವಲ 1200 ಕೋಟಿ ರೂಪಾಯಿಗಳನ್ನು ಬಜೆಟ್‍ನಲ್ಲಿ ಒದಗಿಸಿದ್ದಾರೆ ಎಂದು ಹೇಳಿದ್ದಾರೆ.
ಇದಿಷ್ಟೆ ಸಾಕಲ್ಲ ಬಿಜೆಪಿಯವರ ದುರುದ್ದೇಶ ಏನು ಎಂದು ಅರ್ಥ ಮಾಡಿಕೊಳ್ಳಲು. ಸರ್ಕಾರ ತನ್ನ ಪಶುಪಾಲಕ ವಿರೋಧಿ ನೀತಿಗಳಿಂದಾಗಿ ಹಾಲು ಉತ್ಪಾದಕರ ಬದುಕನ್ನು ನಿರ್ನಾಮ ಮಾಡಲು ಹೊರಟಿದೆ. ಕಳೆದ 5 ವರ್ಷಗಳಲ್ಲಿ ಜಾನುವಾರುಗಳಿಗೆ ನೀಡುವ ಹಿಂಡಿ, ಬೂಸಾ ಮುಂತಾದ ಪಶು ಆಹಾರದ ಬೆಲೆಗಳು 3 ಪಟ್ಟಿಗೂ ಹೆಚ್ಚಾಗಿವೆ. 2017-18ಕ್ಕೂ ಮೊದಲು 49 ಕೆಜಿ ಬೂಸಾದ ಬೆಲೆ 450 ರೂ ಇದ್ದದ್ದು ಈಗ 1300 ರಿಂದ 1350 ರೂಗಳಿಗೆ ಏರಿಕೆಯಾಗಿದೆ. 30 ಕೆಜಿ ಹಿಂಡಿಯ ಬೆಲೆ 400 ರೂ ಇದ್ದದ್ದು ಈಗ 1500 ಕ್ಕೂ ಹೆಚ್ಚಾಗಿದೆ. ಆದರೆ ಹಾಲಿನ ದರಗಳು ಮಾತ್ರ ಹೆಚ್ಚಾಗಿಲ್ಲ. ಇದರಿಂದಾಗಿ ನಮ್ಮ ರೈತರು ಜಾನುವಾರುಗಳನ್ನು ಸಾಕಣೆ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.
ಪಶು ಆಹಾರದ ಬೆಲೆ ಹೆಚ್ಚಾಗಿರುವುದಕ್ಕೆ ಕಾರಣ ಏನು? ರೈತರು ಬೆಳೆಯುವ ಮೆಕ್ಕೆ ಜೋಳ, ಗೋಧಿ, ಶೇಂಗಾ ಮುಂತಾದವುಗಳ ಬೆಲೆಗಳು 2017 ಕ್ಕೂ ಮೊದಲು ಇದ್ದ ಬೆಲೆಗಳಿಗಿಂತ ಕಡಿಮೆ ಇವೆ. ತಮ್ಮ ಬೆಳೆಗಳಿಗೂ ಉತ್ತಮ ಬೆಲೆಯನ್ನು ರೈತರು ಪಡೆಯುತ್ತಿಲ್ಲ. ಹಾಲು ಮಾರಾಟದಿಂದಲೂ ನಷ್ಟ ಅನುಭವಿಸುತ್ತಿದ್ದಾರೆ. ಆದರೂ ಹಿಂಡಿ, ಬೂಸಾ ಬೆಲೆ ಗಗನ ಮುಟ್ಟಿದೆ. ಇದಕ್ಕೆ ಮುಖ್ಯ ಕಾರಣ ಪೆಟ್ರೋಲ್, ಡೀಸೆಲ್ ಮೇಲಿನ ಮೋದಿ ಸಕಾರದ ತೆರಿಗೆ ಕಾರಣ. ಬೆಲೆ ಏರಿಕೆ ಕಾರಣ ಹಾಗೂ ರಸ್ತೆಗಳ ಟೋಲ್ಗಳಲ್ಲಿ ವಿಪರೀತ ಸುಂಕ ವಸೂಲಿ ಮಾಡಿ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸುವಲ್ಲಿ ಮೋದಿ ಸರ್ಕಾರದ ಪಾತ್ರ ದೊಡ್ಡದು. ಇದೆಲ್ಲ ಸಾಲದು ಎಂದು ಹೇಳಿ ಹಿಂಡಿಗೆ ಶೇ.5 ರಷ್ಟು ಜಿಎಸ್‍ಟಿಯನ್ನು ವಿಧಿಸಲಾಗುತ್ತಿದೆ ಎಂದಿದ್ದಾರೆ.
ಇದರ ಜೊತೆಯಲ್ಲಿ ಈ ದುಷ್ಟ ಬಿಜೆಪಿ ಸರ್ಕಾರ ಸರ್ಕಾರಿ ಕಾವಲು ಜಮೀನುಗಳನ್ನು, ಡಿನೋಟಿಫೈ ಮಾಡಿ ಉಳ್ಳವರಿಗೆ, ಆರೆಸ್ಸೆಸ್ಸಿನವರಿಗೆ, ಬಂಡವಾಳಿಗರಿಗೆ ಹಂಚಲು ಪ್ರಾರಂಭಿಸಿದೆ. ಟಿಪ್ಪುಸುಲ್ತಾನನ ದೂರದೃಷ್ಟಿಯ ಕಾರಣದಿಂದ ಹಳೆ ಮೈಸೂರು ಭಾಗದಲ್ಲಿ ಲಕ್ಷಾಂತರ ಎಕರೆ ಭೂಮಿಯನ್ನು ‘ಅಮೃತ್ ಮಹಲ್ ಕಾವಲು’ಗಳೆಂದು ಮೀಸಲಿರಿಸಲಾಗಿತ್ತು. ಇದರಲ್ಲಿ ಚಿತ್ರದುರ್ಗ ಜಿಲ್ಲೆಯೊಂದರಲ್ಲೆ 23189 ಎಕರೆಗೂ ಹೆಚ್ಚಿನ ಭೂಮಿಯನ್ನು ಅಮೃತ್ ಮಹಲ್ ಕಾವಲ್ ಎಂದು ಕಾಯ್ದಿರಿಸಿದ್ದ. ಬ್ರಿಟಿಷ್ ಸರ್ಕಾರ, ಮೈಸೂರು ಅರಸರ ಆಡಳಿತಗಳೂ ಕೂಡ ಕಾವಲುಗಳನ್ನು ಕಾಪಾಡಿಕೊಂಡು ಬಂದಿದ್ದವು. ಸ್ವಾತಂತ್ರ್ಯಾ ನಂತರದ ಸರ್ಕಾರಗಳು ಅನಿವಾರ್ಯ ಕಾರಣಗಳಲ್ಲದೆ ಇನ್ನಿತರೆ ಉದ್ದೇಶಗಳಿಗೆ ಈ ಜಮೀನುಗಳನ್ನು ಮುಟ್ಟಿರಲಿಲ್ಲ. ಆದರೆ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಈ ಜಮೀನುಗಳ ಮೇಲೆ ಕಣ್ಣು ಹಾಕಿದೆ. ಚಿತ್ರದುರ್ಗದ ಪಶುಪಾಲಕರ ಬೆನ್ನಿಗೆ ಇರಿಯಲು ನಿಂತಿರುವ ಈ ಸರ್ಕಾರ ಸಾವಿರಗಟ್ಟಲೆ ಎಕರೆಗಳನ್ನು ಡಿನೋಟಿಫೈ ಮಾಡಲು ಮುಂದಾಗಿದೆ. ಇದು ಅಕ್ಷಮ್ಯ. ಜಾನುವಾರುಗಳ ಸಂರಕ್ಷಣೆ ಮತ್ತು ಅವುಗಳಿಗೆ ಆಹಾರವಿಲ್ಲದಂತೆ ಮಾಡುವುದು ಇವೆರಡೂ ಸಹ ಎಂದಿಗೂ ಜೊತೆಯಾಗಿ ಸಾಗಲು ಸಾಧ್ಯವಿಲ್ಲ. ಆದರೂ ಜನದ್ರೋಹಿಯಾದ ಬಿಜೆಪಿ ಹುಲ್ಲುಗಾವಲುಗಳನ್ನು ಜನರಿಂದ ಕಿತ್ತುಕೊಳ್ಳಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರ ಕೂಡಲೆ ಎಲ್ಲ ಹುಲ್ಲುಗಾವಲುಗಳನ್ನು ಆರೆಸ್ಸೆಸ್ಸಿಗೆ ಸರ್ಕಾರಿ ಜಮೀನುಗಳನ್ನು ಮನಸೋ ಇಚ್ಛೆ ನೀಡಲಾಗುತ್ತಿದೆ. ನಮ್ಮ ರೈತರ ಜಾನುವಾರುಗಳು ಮೇಯಲು ಜಾಗ ಇಲ್ಲದಂತಾಗಿದೆ. ಇದನ್ನು ಕೂಡಲೆ ನಿಲ್ಲಿಸಿ ರಾಜ್ಯದಲ್ಲಿರುವ ಎಲ್ಲ ಮೇವಿನ ಕ್ಷೇತ್ರಗಳನ್ನು ಉಳಿಸಬೇಕು. ಸರ್ಕಾರ ಕೂಡಲೆ ಮಧ್ಯ ಪ್ರವೇಶಿಸಿ ರೈತರು ಮತ್ತು ಗ್ರಾಹಕರ ಇಬ್ಬರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕವಾಗಿ ಸಮಸ್ಯೆಗಳನ್ನು ಪರಿಹರಿಸಬೇಕು. ಪಶುಭಾಗ್ಯ ಯೋಜನೆಯನ್ನು ಸಶಕ್ತಗೊಳಿಸಬೇಕು. ರೈತರಿಗೆ ಸಂಭವಿಸುತ್ತಿರುವ ನಷ್ಟವನ್ನು ಸರ್ಕಾರ ತುಂಬಿಕೊಡಬೇಕು. ಹಿಂಡಿ ಬೂಸಾ ಸೇರಿದಂತೆ ಎಲ್ಲ ಪಶು ಆಹಾರಗಳ ಬೆಲೆಯನ್ನು ಕಡಿಮೆ ಮಾಡಿ ರಿಯಾಯಿತಿ ದರದಲ್ಲಿ ಒದಗಿಸಬೇಕು. ಹಿಂಡಿಯ ಮೇಲಿನ ಜಿಎಸ್‍ಟಿಯನ್ನು ಕೂಡಲೆ ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.