ರಾಜ್ಯದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಸೀಟು ಮೀಸಲಾತಿ ಪಾಲನೆ ಕಡ್ಡಾಯ
ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಗೆ ಮತ್ತೊಮ್ಮೆ ಡಾ.ಸಿ ಎನ್.ಅಶ್ವತ್ಥನಾರಾಯಣ ಪತ್ರ
Team Udayavani, Jan 26, 2023, 2:45 PM IST
ಬೆಂಗಳೂರು: 2020ರಲ್ಲಿ ಜಾರಿಗೆ ತಂದಿರುವ ತಿದ್ದುಪಡಿ ನಿಯಮಗಳ ಪ್ರಕಾರ ರಾಜ್ಯದ ವಿದ್ಯಾರ್ಥಿಗಳಿಗೆ ಅಖಿಲ ಭಾರತೀಯ ಕೋಟಾ ಹೊರತುಪಡಿಸಿ ಶೇ.25ರಷ್ಟು ಸೀಟುಗಳನ್ನು ಕೊಡುವುದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಕುಲಪತಿಗಳಿಗೆ ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು ಮತ್ತೊಮ್ಮೆ ತೀಕ್ಷ್ಣ ಪತ್ರ ಬರೆದಿದ್ದಾರೆ.
ಸಚಿವರು ಈ ಸಂಬಂಧವಾಗಿ ಕೆಲದಿನಗಳ ಹಿಂದೆ ಕೂಡ ಪತ್ರ ಬರೆದು, ಸಂಸ್ಥೆಯು ಅಖಿಲ ಭಾರತ ಮಟ್ಟದ ಮೆರಿಟ್ ಕೋಟಾದಡಿ ಆಯ್ಕೆಯಾದ ರಾಜ್ಯದ ವಿದ್ಯಾರ್ಥಿಗಳನ್ನು ಕೂಡ ಸ್ಥಳೀಯ ಮೀಸಲಿನಡಿ ಪರಿಗಣಿಸಿ, ದಾರಿ ತಪ್ಪಿಸುತ್ತಿರುವುದು ಸಹಜ ನ್ಯಾಯದ ತತ್ವಕ್ಕೆ ವಿರುದ್ದವಾದುದು ಎಂದು ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ವಿಶಾಖಪಟ್ಟಣ, ರಾಯಪುರ, ಕೋಲ್ಕತ್ತ ಮುಂತಾದ ಕಡೆಗಳಲ್ಲಿ ಇರುವ ಇಂತಹುದೇ ಕಾನೂನು ಶಿಕ್ಷಣ ಸಂಸ್ಥೆಗಳಲ್ಲಿ ಆಯಾ ರಾಜ್ಯದ ವಿದ್ಯಾರ್ಥಿಗಳಿಗೆ ಅಖಿಲ ಭಾರತ ಮೆರಿಟ್ ಕೋಟಾ ಹೊರತುಪಡಿಸಿಯೇ ಆಯಾ ರಾಜ್ಯಗಳ ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಸೀಟುಗಳನ್ನು ಕೊಡಲಾಗುತ್ತಿದೆ. ಇದನ್ನು ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ಕೂಡ ಅನುಸರಿಸುವುದು ಕಡ್ಡಾಯವಾಗಿದೆ ಎಂದು ಸಚಿವರು ನೆನಪಿಸಿದ್ದಾರೆ.
2022ನೇ ಸಾಲಿನಲ್ಲಿ ಸಂಸ್ಥೆಯಲ್ಲಿ ಒಟ್ಟು 180 ವಿದ್ಯಾರ್ಥಿಗಳಿಗೆ ಪ್ರವೇಶ ಕೊಡಲಾಗಿದೆ. ಇದರಲ್ಲಿ 45 ಸೀಟುಗಳನ್ನು ರಾಜ್ಯದ ವಿದ್ಯಾರ್ಥಿಗಳಿಗೆ ಸ್ಥಳೀಯ ಮೀಸಲಾತಿ ಅಡಿ ಕೊಡಬೇಕಿತ್ತು. ಆದರೆ ಅಖಿಲ ಭಾರತೀಯ ಮೆರಿಟ್ ಕೋಟಾದಡಿ ಆಯ್ಕೆಯಾಗಿದ್ದ ರಾಜ್ಯದ 13 ವಿದ್ಯಾರ್ಥಿಗಳನ್ನು ಕೂಡ ‘ಸ್ಥಳೀಯ ಮೀಸಲಾತಿ’ ಅಡಿ ಪರಿಗಣಿಸಿ, ಕೇವಲ 32 ವಿದ್ಯಾರ್ಥಿಗಳಿಗೆ ಮಾತ್ರ ಸ್ಥಳೀಯ ಮೀಸಲಾತಿ ಸೌಲಭ್ಯದಡಿ ಪ್ರವೇಶ ಕೊಟ್ಟಿರುವುದು ಸರಿಯಲ್ಲ. ಇದರಿಂದ ರಾಜ್ಯದ 13 ವಿದ್ಯಾರ್ಥಿಗಳು ಅವಕಾಶ ಕಳೆದುಕೊಂಡಂತಾಗಿದೆ ಎಂದು ಅವರು ವಿವರಿದ್ದಾರೆ.
2023ರಲ್ಲಿ ಈ ಸಂಸ್ಥೆಯಲ್ಲಿ ಒಟ್ಟು 240 ವಿದ್ಯಾರ್ಥಿಗಳಿಗೆ ಅವಕಾಶವಿದ್ದು, ಈ ಪೈಕಿ 60 ಸೀಟುಗಳನ್ನು ಸ್ಥಳೀಯ ಮೀಸಲಾತಿ ಅಡಿ ರಾಜ್ಯದ ವಿದ್ಯಾರ್ಥಿಗಳಿಗೆ ಕೊಡಬೇಕು. ಈಗಾಗಲೇ ತಾತ್ಕಾಲಿಕ ಆಯ್ಕೆ ಪ್ರಕಟಿಸಿದ್ದಲ್ಲಿ ಆಗಿರುವ ಲೋಪವನ್ನು ಸರಿಪಡಿಸಬೇಕು. ಅಕಸ್ಮಾತ್ ಆಗದಿದ್ದರೆ ‘ಸೂಪರ್-ನ್ಯೂಮರಿ’ ಮಾನದಂಡವನ್ನು ಪರಿಗಣಿಸಿ, ಆಯ್ಕೆ ಪಟ್ಟಿಯನ್ನು ಪರಿಷ್ಜರಿಸಬೇಕು ಎಂದು ಅವರು ನಿರ್ದೇಶಿಸಿದ್ದಾರೆ.
ಇದಲ್ಲದೆ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಸಂಸ್ಥೆಗೆ ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನಲ್ಲಿ 22 ಕೋಟಿ ರೂಪಾಯಿ ಅನುದಾನ ನೀಡಿದೆ. ಇದನ್ನು ಸಂಸ್ಥೆಯು ಮರೆಯಬಾರದು. ಹಾಗೆಯೇ ಸ್ಥಳೀಯ ಮೀಸಲಾತಿಗೆ ಸಂಬಂಧಿಸಿದಂತೆ ಕನ್ನಡಪರ ಸಂಘಟನೆಗಳು ಮತ್ತು ವಕೀಲರ ಸಂಘಗಳು ಎತ್ತಿರುವ ದನಿಯನ್ನು ಕೂಡ ಗಮನಿಸಬೇಕು ಎಂದು ಅಶ್ವತ್ಥನಾರಾಯಣ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.