ಸೋಂಕಿಗೆ ದಿನಕ್ಕೆ 32 ಬಲಿ; ಮೇ ಮುಂಬೈಗೆ ಕರಾಳ
ಸಾವಿನ ಪ್ರಮಾಣ ಶೇ.250 ಹೆಚ್ಚು
Team Udayavani, Jun 3, 2020, 6:50 AM IST
ಮುಂಬಯಿ: ಭಾರತದಲ್ಲೇ ಅತಿ ಹೆಚ್ಚು ಸೋಂಕಿತರಿರುವ ರಾಜ್ಯ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ಮಹಾರಾಷ್ಟ್ರದಲ್ಲಿ ಸೋಂಕು ಕಾಡ್ಗಿಚ್ಚಿನಂತೆ ವ್ಯಾಪಿಸುತ್ತಿದೆ. ಮಹಾರಾಷ್ಟ್ರದ ರಾಜಧಾನಿ, ವಾಣಿಜ್ಯ ನಗರಿ ಮುಂಬೈನಲ್ಲಿಯೇ ಸೋಂಕಿತರ ಸಂಖ್ಯೆ ಹೆಚ್ಚು. ಅಲ್ಲಿ ಮೇನಲ್ಲಿ ಪ್ರತಿ ದಿನ ಸರಾಸರಿ 32 ಮಂದಿ ಕೋವಿಡ್ 19 ವೈರಸ್ ಗೆ ಬಲಿಯಾಗಿದ್ದಾರೆ. ದಿನಂಪ್ರತಿ ಒಂದು ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ದೃಢಪಟ್ಟಿದೆ ಎಂಬ ಆಘಾತಕಾರಿ ಮಾಹಿತಿಯೊಂದು ಈಗ ಹೊರಬಿದ್ದಿದೆ.
ಎಪ್ರಿಲ್‌ನಿಂದೀಚೆಗೆ ಮುಂಬಯಿಯಲ್ಲಿ ಕೋವಿಡ್ 19 ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿರುವ ಮಾಹಿತಿಯನ್ನು ಸ್ವತಃ ಬೃಹನ್ಮುಂಬಯಿ ನಗರ ಪಾಲಿಕೆಯೇ ನೀಡಿದೆ. ಅದರಂತೆ ಕಳೆದ ತಿಂಗಳಲ್ಲಿ ದಿನಕ್ಕೆ 32 ಮಂದಿ ಯಂತೆ ಸೋಂಕಿನಿಂದ ಮೃತಪಟ್ಟಿದ್ದಾರೆ. ಇನ್ನೊಂದು ಆತಂಕಕಾರಿ ವಿಚಾರವೆಂದರೆ, ಸೀಮಿತ ಪರೀಕ್ಷೆ ಪ್ರಮಾಣ ಹಾಗೂ ಸಾವಿಗೆ ಕಾರಣಗಳನ್ನು ಅರಿಯು ವಲ್ಲಿ ಇರುವಂಥ ಸವಾಲುಗಳಿಂದಾಗಿ ನೈಜ ಸೋಂಕಿತರ ಸಂಖ್ಯೆ ಎಷ್ಟು ಎಂಬುದು ಇನ್ನೂ ಗೊತ್ತಾಗುತ್ತಿಲ್ಲ. ಈ ಸೋಂಕು ಎಲ್ಲರೂ ಅಂದುಕೊಂಡದ್ದಕ್ಕಿಂತಲೂ ಹೆಚ್ಚೇ ವ್ಯಾಪಿಸಿರುವ ಭೀತಿಯೂ ಇದೆ ಎನ್ನುತ್ತಾರೆ ಇಲ್ಲಿನ ಆರೋಗ್ಯ ತಜ್ಞರು.
ಎಪ್ರಿಲ್ ಮತ್ತು ಮೇನಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದರೂ ಮುಂಬೈನಲ್ಲಿ ಕೋವಿಡ್ 19 ದಿಂದ ಸಾವಿಗೀಡಾ ದವರ ಪ್ರಮಾಣ ಶೇ.250ರಷ್ಟು ಹೆಚ್ಚಳವಾಗಿದೆ. ಎಪ್ರಿಲ್ ತಿಂಗಳಲ್ಲಿ ನಗರವು 281 ಸಾವುಗಳಿಗೆ ಸಾಕ್ಷಿಯಾದರೆ(ದಿನಕ್ಕೆ ಸರಾಸರಿ 9), ಮೇ ತಿಂಗಳಲ್ಲಿ 989 ಮಂದಿ ಸಾವಿಗೀಡಾಗಿದ್ದಾರೆ. ಅಷ್ಟೇ ಅಲ್ಲ, ಎಪ್ರಿಲ್‌ಗೆ ಹೋಲಿಸಿದರೆ ಮೇ ತಿಂಗಳಲ್ಲಿ ಹೊಸ ಪ್ರಕರಣ ಗಳ ಪ್ರಮಾಣ 4 ಪಟ್ಟು ಅಧಿಕವಾಗಿತ್ತು. ಎಪ್ರಿಲ್ ನಲ್ಲಿ 6,910 ಮಂದಿಗೆ ಸೋಂಕು ದೃಢಪಟ್ಟರೆ, ಮೇ ತಿಂಗಳಲ್ಲಿ ಇದು 32,625 ಆಗಿತ್ತು. ಮುಂಬೈಗೆ ಕೋವಿಡ್ 19 ಕಾಲಿಟ್ಟಂಥ ಮಾರ್ಚ್ ತಿಂಗಳಲ್ಲಿ 151 ಸೋಂಕಿತರು ಪತ್ತೆಯಾಗಿ, 7 ಮಂದಿ ಮೃತಪಟ್ಟಿದ್ದರು. ಪ್ರಸ್ತುತ ಮುಂಬೈನಲ್ಲಿ 40 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದು, 1,300ಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ.
ಸಾವಿನ ಮೇಲೆ ಗಮನ: ಮುಂಬಯಿಯಲ್ಲಿ ಯಾವಾಗ ಕೋವಿಡ್ 19 ಸೋಂಕು ಉತ್ತುಂಗಕ್ಕೆ ತಲುಪುತ್ತದೆ ಎಂಬುದನ್ನು ಈಗಲೇ ಊಹಿಸಲು ಸಾಧ್ಯವಿಲ್ಲ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ. ಸದ್ಯಕ್ಕೆ ನಾವು ಸಾವಿನ ಸಂಖ್ಯೆಗಳ ಮೇಲೆ ಗಮನ ಕೇಂದ್ರೀಕರಿಸ ಬೇಕಿದೆ. ಸಾವಿನ ಪ್ರಮಾಣವನ್ನು ಇನ್ನಷ್ಟು ಇಳಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ಸದ್ಯದ ಮಟ್ಟಿಗೆ ಮುಂಬಯಿಯಲ್ಲಿ ಮರಣ ಪ್ರಮಾಣ ಶೇ.3.2ರಷ್ಟಿದ್ದು, ಇತರ ಪ್ರದೇಶಗಳಿಗೆ ಹೋಲಿಸಿದರೆ ಅಷ್ಟೇನೂ ಹೆಚ್ಚಿಲ್ಲ ಎಂದು ಮಹಾರಾಷ್ಟ್ರ ಕೋವಿಡ್ ಕಾರ್ಯಪಡೆಯ ಸದಸ್ಯರೂ ಆಗಿರುವ ಡಾ. ಓಂ ಶ್ರೀವಾಸ್ತವ ಹೇಳಿದ್ದಾರೆ.
ಪರೀಕ್ಷೆ ಪ್ರಮಾಣ ಕಡಿಮೆ: ಬೃಹನ್ಮುಂಬಯಿ ನಗರ ಪಾಲಿಕೆಯು ಕೋವಿಡ್ 19 ಪರೀಕ್ಷೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನಡೆಸುತ್ತಿಲ್ಲ. ಪರೀಕ್ಷೆಯ ಪ್ರಮಾಣವು ದಿನಕ್ಕೆ 3,500 4000 ವನ್ನು ಮೀರುತ್ತಿಲ್ಲ. ನಾವು ಪರೀಕ್ಷೆಯೇ ನಡೆಸದಿದ್ದರೆ, ಪ್ರಕರಣಗಳು ಪತ್ತೆಯಾಗುವುದು ಹೇಗೆ, ವೈರಸ್‌ಗೆ ಕಡಿವಾಣ ಹಾಕುವುದಾದರೂ ಹೇಗೆ ಎಂದು ಮುಂಬಯಿಯ ಹಿರಿಯ ವೈದ್ಯರು ಪ್ರಶ್ನಿಸಿದ್ದಾರೆ. ಹಲವು ಮಂದಿ ಮನೆಗಳಲ್ಲೇ ಸಾವಿಗೀಡಾಗಿದ್ದಾರೆ, ಇನ್ನೂ ಕೆಲವರು ಆಸ್ಪತ್ರೆಗೆ ಕರೆತರುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಇವರ ಸಂಖ್ಯೆಯು ಕೋವಿಡ್ 19 ಅಧಿಕೃತ ಸಾವಿನ ಸಂಖ್ಯೆಯಲ್ಲಿ ಸೇರ್ಪಡೆಯಾಗುತ್ತಿಲ್ಲ ಎಂದೂ ವೈದ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜತೆಗೆ, ಮೇ ತಿಂಗಳಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಿದ್ದು ಕೂಡ ಪ್ರಕರಣಗಳು ಹೆಚ್ಚಲು ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಮ್ಮ ಸ್ಥಿತಿ ಉತ್ತಮ: ಕೇಂದ್ರ ಸಮರ್ಥನೆ
ಕೋವಿಡ್ 19 ವೈರಸ್‌ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತ ಸರಕಾರ ಕೈಗೊಂಡ ಕ್ರಮಗಳು ಅತ್ಯಂತ ಪರಿಣಾಮಕಾರಿ ಯಾಗಿವೆ. ಇತರ ದೇಶಗಳಿಗೆ ಹೋಲಿಸಿದರೆ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಹೇಳಿದೆ.
ದೇಶದಲ್ಲಿ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ನಡುವೆಯೇ ಈ ಕುರಿತು ಸ್ಪಷ್ಟನೆ ನೀಡಿದ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್, ಕೇವಲ ಸೋಂಕಿತರ ಸಂಖ್ಯೆಯ ನ್ನಷ್ಟೇ ನೋಡುವುದು ಹಾಗೂ ಜಗತ್ತಿನ ಟಾಪ್ 10 ಹಾಟ್ ಸ್ಪಾಟ್ ದೇಶಗಳ ಪೈಕಿ ಭಾರತ 7ನೇ ಸ್ಥಾನಕ್ಕೆ ತಲುಪಿದೆ ಎಂದು ಹೇಳುವುದು ತಪ್ಪು. ಈ ವಿಚಾರದಲ್ಲಿ ಬೇರೆ ದೇಶಗಳ ಜನಸಂಖ್ಯೆಯನ್ನೂ ನಾವು ಪರಿಗಣಿಸಬೇಕಾಗುತ್ತದೆ. ಸುಮಾರು 14 ದೇಶಗಳ ಜನಸಂಖ್ಯೆಯನ್ನು ಒಟ್ಟಾಗಿ ಪರಿಗಣಿಸಿದರೆ ಅದು ಭಾರತದ ಒಟ್ಟಾರೆ ಜನಸಂಖ್ಯೆಗೆ ಸಮನಾಗುತ್ತದೆ. ಅಲ್ಲಿನ ಪ್ರಕರಣಗಳನ್ನು ಗಮನಿಸಿದರೆ, ಆ 14 ದೇಶಗಳು ಭಾರತಕ್ಕಿಂತ 55.2 ಪಟ್ಟು ಅಧಿಕ ಕೋವಿಡ್ 19 ಸಾವುಗಳನ್ನು ಕಂಡಿವೆ. ಆದರೆ, ಭಾರತದಲ್ಲಿ ಕೋವಿಡ್ 19 ಮರಣ ಪ್ರಮಾಣ ಶೇ.2.82ರಷ್ಟಿದೆ. ಇದು ಇಡೀ ಜಗತ್ತಿನಲ್ಲೇ ಅತ್ಯಂತ ಕನಿಷ್ಠ ಪ್ರಮಾಣ ಎಂದು ತಿಳಿಸಿದ್ದಾರೆ.
ಜಾಗತಿಕ ಮರಣ ಪ್ರಮಾಣವು ಶೇ.6.13 ಆಗಿದೆ. ನಾವು ಸಮಯಕ್ಕೆ ಸರಿಯಾಗಿ ಪ್ರಕರಣಗಳನ್ನು ಪತ್ತೆ ಹಚ್ಚಿ, ಚಿಕಿತ್ಸೆ ನೀಡುತ್ತಿರುವ ಕಾರಣ ನಮಗೆ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದೂ ಅಗರ್ವಾಲ್ ಹೇಳಿದ್ದಾರೆ. ಭಾರತದಲ್ಲಿ ಪ್ರತಿ ಎರಡು ಕೋವಿಡ್ 19 ಸಾವಿನಲ್ಲಿ ಒಂದು ಸಾವು ಹಿರಿಯ ನಾಗರಿಕರದ್ದು. ಒಟ್ಟು ಮೃತರಲ್ಲಿ ಶೇ.73ರಷ್ಟು ಮಂದಿ ಹಲವು ಕಾಯಿಲೆಗಳಿಂದ ಬಳಲುತ್ತಿದ್ದವರು ಎಂದೂ ಅವರು ಮಾಹಿತಿ ನೀಡಿದ್ದಾರೆ.
ವಾರಾಂತ್ಯದಲ್ಲಿ ವರದಿ: ಭಾರತದಲ್ಲಿ ಸೋಂಕು ಸಾಮುದಾಯಿಕವಾಗಿ ವ್ಯಾಪಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ವಿಜ್ಞಾನಿ ನಿವೇದಿತಾ ಗುಪ್ತಾ, ನಾವು ಇಲ್ಲಿ ಸಾಮುದಾಯಿಕ ವ್ಯಾಪಿಸುವಿಕೆ ಎಂಬ ಪದವನ್ನು ಬಳಸುವ ಬದಲು, ಸೋಂಕು ಎಷ್ಟರಮಟ್ಟಿಗೆ ವ್ಯಾಪಿಸಿದೆ, ಇತರೆ ದೇಶಗಳಿಗೆ ಹೋಲಿಸಿದರೆ ನಮ್ಮ ಸ್ಥಿತಿ ಹೇಗಿದೆ ಎಂಬುದನ್ನು ಅರ್ಥಮಾಡಿಕೊಳ್ಳ ಬೇಕಾಗಿದೆ. ಐಸಿಎಂಆರ್ ಈ ಕುರಿತು ಅಧ್ಯಯನ ನಡೆಸುತ್ತಿದೆ. 34 ಸಾವಿರ ಮಂದಿಯನ್ನು ಪರೀಕ್ಷಿಸಲಾ ಗಿದೆ. ಈ ವಾರಾಂತ್ಯ ಅಥವಾ ಮುಂದಿನ ವಾರದ ಆರಂಭದಲ್ಲಿ ಇದರ ವರದಿ ಬರಲಿದೆ ಎಂದು ತಿಳಿಸಿದ್ದಾರೆ.
ರೆಮ್‌ಡಿಸೀವರ್ ಮಾರಾಟಕ್ಕೆ ಅನುಮತಿ
ಹೊಸದಿಲ್ಲಿ: ಕೋವಿಡ್ 19 ರೋಗಿಗಳಿಗೆ ನಿಯಮಿತವಾಗಿ ಬಳಸಲಾಗುವ ರೆಮ್‌ಡಿಸಿವರ್ ಔಷಧಿಯನ್ನು ಭಾರತದಲ್ಲಿ ಮಾರಾಟ ಮಾಡಲು ಅಮೆರಿಕ ಗಿಲೀಡ್ ಸೈನ್ಸಸ್ ಕಂಪೆನಿಗೆ “ಕೇಂದ್ರೀಯ ಔಷಧಿಗಳ ಗುಣಮಟ್ಟ ನಿಯಂತ್ರಣ ಸಂಸ್ಥೆ’ (ಸಿಡಿಎಸ್‌ಸಿಒ) ಅನುಮತಿ ನೀಡಿದೆ.
ಕೋವಿಡ್ 19 ಸೋಂಕು ಹೆಚ್ಚುತ್ತಲೇ ಇರುವ ಹಿನ್ನೆಲೆಯಲ್ಲಿ ಈ ಔಷಧಿಯನ್ನು ಅಗತ್ಯಬಿದ್ದಾಗ ಅಥವಾ ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸುವ ಉದ್ದೇಶದಿಂದ ಈ ಅನುಮತಿ ನೀಡಲಾಗಿದೆ. ತಜ್ಞರ ಸಲಹೆಗಳನ್ನು ಪಡೆದ ಅನಂತರವೇ ಪರವಾನಗಿ ನೀಡಲಾಗಿದೆ ಎಂದು ಹೇಳಲಾಗಿದೆ. ಈ ಔಷಧಿಯ ಬಳಕೆಗೆ ಕೆಲವಾರು ನಿಬಂಧನೆಗಳನ್ನು ಹೇರಲಾಗಿದೆ. ನೋಂದಾಯಿತ ವೈದ್ಯರ ಸಲಹೆ ಇದ್ದರಷ್ಟೇ ಇದನ್ನು ಮಾರಾಟ ಮಾಡಬೇಕು. ಐದು ದಿನಗಳಿಗಿಂತ ಹೆಚ್ಚಿನ ಅವಧಿಗೆ ಇದನ್ನು ಉಪಯೋಗಿಸುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.