3ನೇ ಟಿ20 : ಬಟ್ಲರ್ ಬೊಂಬಾಟ್ ಬ್ಯಾಟಿಂಗ್, ಇಂಗ್ಲೆಂಡಿಗೆ ಜಯ : ಕೊಹ್ಲಿ ಹೋರಾಟ ವ್ಯರ್ಥ
ಭಾರತಕ್ಕೆ 8 ವಿಕೆಟ್ ಸೋಲು
Team Udayavani, Mar 16, 2021, 11:08 PM IST
ಅಹ್ಮದಾಬಾದ್: ಮೂರನೇ ಟಿ20 ಮುಖಾ ಮುಖೀಯಲ್ಲಿ ತಿರುಗಿ ಬಿದ್ದ ಇಂಗ್ಲೆಂಡ್ 8 ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಸರಣಿಯಲ್ಲಿ ಮೇಲುಗೈ ಸಾಧಿಸಿದೆ. ಆರಂಭಕಾರ ಜಾಸ್ ಬಟ್ಲರ್ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶಿಸಿ ಕೊಹ್ಲಿ ಪಡೆಗೆ ಕಗ್ಗಂಟಾಗಿ ಪರಿಣಮಿಸಿದರು.
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ 6 ವಿಕೆಟಿಗೆ 156 ರನ್ ಪೇರಿಸಿ ಸವಾಲು ಹಾಕಿದರೆ, ಇಂಗ್ಲೆಂಡ್ 18.2 ಓವರ್‌ಗಳಲ್ಲಿ ಕೇವಲ ಎರಡೇ ವಿಕೆಟ್ ನಷ್ಟಕ್ಕೆ 158 ರನ್ ಬಾರಿಸಿ ಗೆಲುವಿನ ಹಳಿ ಏರಿತು. ಇದರೊಂದಿಗೆ ಮೂರೂ ಪಂದ್ಯಗಳಲ್ಲಿ ಟಾಸ್ ಗೆದ್ದು ಚೇಸಿಂಗ್ ಮಾಡಿದ ತಂಡವೇ ಗೆದ್ದು ಬಂದಂತಾಯಿತು.
ಕಳೆದ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದ ಆರಂಭಕಾರ ಜಾಸ್ ಬಟ್ಲರ್ ಈ ಬಾರಿ ಕ್ರೀಸ್ ಆಕ್ರಮಿಸಿಕೊಂಡು ಅಜೇಯ 83 ರನ್ ಹೊಡೆದರು (52 ಎಸೆತ, 5 ಬೌಂಡರಿ, 4 ಸಿಕ್ಸರ್). ಇದು ಭಾರತದ ವಿರುದ್ಧ ಇಂಗ್ಲೆಂಡ್ ಕ್ರಿಕೆಟಿಗನೊಬ್ಬನ ಅತ್ಯಧಿಕ ವೈಯಕ್ತಿಕ ಗಳಿಕೆಯಾಗಿದೆ. ಇವರೊಂದಿಗೆ ಜಾನಿ ಬೇರ್‌ಸ್ಟೊ 40 ರನ್ ಮಾಡಿ ಔಟಾಗದೆ ಉಳಿದರು.
ಬೌಲಿಂಗ್‌ನಲ್ಲಿ ಯಶಸ್ಸು ಸಾಧಿಸಿದವರು ಚಹಲ್ ಮತ್ತು ವಾಷಿಂಗ್ಟನ್ ಸುಂದರ್ ಮಾತ್ರ. ಇವರು ಕ್ರಮವಾಗಿ ಜಾಸನ್ ರಾಯ್ (9) ಮತ್ತು ಡೇವಿಡ್ ಮಾಲನ್ (18) ವಿಕೆಟ್ ಉರುಳಿಸಿದರು.
ಕೊಹ್ಲಿ ಕಪ್ತಾನನ ಆಟ
15ನೇ ಓವರ್ ತನಕ ಕುಂಟುತ್ತ ಸಾಗಿದ ಟೀಮ್ ಇಂಡಿಯಾ, ಬಳಿಕ ಒಮ್ಮೆಲೇ ಬಿರುಸಿನ ಬ್ಯಾಟಿಂಗಿಗೆ ಮುಂದಾಯಿತು. ಕ್ಯಾಪ್ಟನ್ ಕೊಹ್ಲಿ ಮತ್ತು ಹಾರ್ಡ್ ಹಿಟ್ಟರ್ ಹಾರ್ದಿಕ್ ಪಾಂಡ್ಯ ಆಂಗ್ಲರ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. 33 ಎಸೆತಗಳಿಂದ 70 ರನ್ ಒಟ್ಟುಗೂಡಿಸಿ 6ನೇ ವಿಕೆಟಿಗೆ ಭಾರತೀಯ ದಾಖಲೆ ಸ್ಥಾಪಿಸಿದರು. ಕೊಹ್ಲಿ 46 ಎಸೆತಗಳಿಂದ 77 ರನ್ ಬಾರಿಸಿದರು. ಇದು ಅವರ ಸತತ 2ನೇ ಅರ್ಧ ಶತಕ. ಈ ಅಜೇಯ ಆಟದಲ್ಲಿ 8 ಫೋರ್, 4 ಸಿಕ್ಸರ್ ಒಳಗೊಂಡಿತ್ತು. ಅಂತಿಮ ಎಸೆತದಲ್ಲಿ ಔಟಾದ ಪಾಂಡ್ಯ 15 ಎಸೆತಗಳಿಂದ 17 ರನ್ ಮಾಡಿದರು (2 ಸಿಕ್ಸರ್).
ಇದನ್ನೂ ಓದಿ :5.8 ಕೋಟಿ ಕೋವಿಡ್ ಲಸಿಕೆ ಡೋಸ್‌ಗಳನ್ನು ಜಗತ್ತಿನ 70 ದೇಶಗಳಿಗೆ ಭಾರತ ಪೂರೈಸಿದೆ : ಮೋದಿ
ರಾಹುಲ್ ಮತ್ತೆ ವಿಫಲ
ಮೊದಲೆರಡು ಪಂದ್ಯಗಳ ವೈಫಲ್ಯದ ಹೊರತಾಗಿಯೂ ರಾಹುಲ್ ಸ್ಥಾನ ಉಳಿಸಿಕೊಂಡದ್ದೇ ಅಚ್ಚರಿಯಾಗಿತ್ತು. ಆದರೆ ತಂಡ ತನ್ನ ಮೇಲಿರಿಸಿದ ವಿಶ್ವಾಸವನ್ನು ರಾಹುಲ್ ಮತ್ತೆ ಹುಸಿಗೊಳಿಸಿದರು. ನಾಲ್ಕೇ ಎಸೆತ ಎದುರಿಸಿ ಖಾತೆ ತೆರೆಯದೆ ವುಡ್ ಎಸೆತದಲ್ಲಿ ಬೌಲ್ಡ್ ಆದರು. ಇದು ಅವರ ಸತತ 2ನೇ ಸೊನ್ನೆಯಾದರೆ, ಕಳೆದ 4 ಇನ್ನಿಂಗ್ಸ್‌ಗಳಲ್ಲಿ ಸುತ್ತಿದ 3ನೇ ಸೊನ್ನೆ.
ವುಡ್ ತಮ್ಮ ಮುಂದಿನ ಓವರಿನಲ್ಲೇ ಮತ್ತೂಂದು ಬಿಗ್ ವಿಕೆಟ್ ಉರುಳಿಸಿದರು. ಸರಣಿಯಲ್ಲಿ ಮೊದಲ ಸಲ ಆಡಲಿಳಿದ ರೋಹಿತ್ ಶರ್ಮ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. 17 ಎಸೆತಗಳಿಂದ 15 ರನ್ ಮಾಡಿದ ರೋಹಿತ್ (2 ಬೌಂಡರಿ), ಶಾರ್ಟ್ ಫೈನ್ ಲೆಗ್ ಫೀಲ್ಡರ್ ಆರ್ಚರ್‌ಗೆ ಸುಲಭ ಕ್ಯಾಚ್ ನೀಡಿದರು.
ಕಳೆದ ಪಂದ್ಯದ ಹೀರೋ ಇಶಾನ್ ಕಿಶನ್ ಇಲ್ಲಿ ವನ್‌ಡೌನ್‌ನಲ್ಲಿ ಬಂದರು. ಆದರೆ ಗಳಿಸಿದ್ದು ನಾಲ್ಕೇ ರನ್. ಜೋರ್ಡನ್ ಅವರ ಬೌನ್ಸರ್ ಎಸೆತವೊಂದನ್ನು ಕೆಣಕಲು ಹೋಗಿ ಕೀಪರ್ ಬಟ್ಲರ್‌ಗೆ ಕ್ಯಾಚ್ ನೀಡಿದರು. ಪವರ್ ಪ್ಲೇ ಅವಧಿಯಲ್ಲಿ ಭಾರತ 3 ವಿಕೆಟ್ ನಷ್ಟಕ್ಕೆ ಕೇವಲ 24 ರನ್ ಮಾಡಿತ್ತು. ಮೊದಲ ಪಂದ್ಯದಲ್ಲೂ ಇದೇ ರೀತಿ ಪರದಾಡಿದ್ದ ಭಾರತ, ಪವರ್ ಪ್ಲೇ ವೇಳೆ 3 ವಿಕೆಟಿಗೆ 22 ರನ್ ಗಳಿಸಿತ್ತು.
ವಿರಾಟ್ ಕೊಹ್ಲಿ-ರಿಷಭ್ ಪಂತ್ ಒಟ್ಟುಗೂಡಿದ ಬಳಿಕ ಭಾರತದ ರನ್‌ಗತಿ ಚೇತರಿಕೆ ಕಂಡಿತು. ಇಬ್ಬರೂ ಕುಸಿತದ ಬಗ್ಗೆ ಚಿಂತಿಸದೆ ಸಹಜ ಶೈಲಿಯ ಆಟಕ್ಕೆ ಮುಂದಾದರು. ಸ್ಪಿನ್ನರ್ ಆದಿಲ್ ರಶೀದ್ ಎಸೆತಗಳಿಗೆ ಸತತ ಬೌಂಡರಿಯ ರುಚಿ ತೋರಿಸುವ ಮೂಲಕ ಪಂತ್ ಸಿಡಿದು ನಿಂತರು. ಆದರೆ ಅಷ್ಟೇ ಬೇಗ ರನೌಟ್ ರೂಪದಲ್ಲಿ ವಿಕೆಟ್ ಒಪ್ಪಿಸುವ ಸಂಕಟಕ್ಕೆ ಸಿಲುಕಿದರು.
ಇದನ್ನೂ ಓದಿ :ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಹೊಸ ತಿರುವು : ಯುವತಿಯ ಅಪಹರಣವಾಗಿದೆ ಎಂದು ಪೋಷಕರ ದೂರು
ಸ್ಯಾಮ್ ಕರನ್ ಎಸೆತದಲ್ಲಿ ಎರಡು ರನ್ ಪೂರೈಸಿದ ಪಂತ್ ಇಲ್ಲಿಗೇ ನಿಲ್ಲಬಹುದಿತ್ತು, ಆದರೆ ಓವರ್ ತ್ರೋ ಆದುದನ್ನು ಕಂಡು ಇನ್ನೊಂದು ರನ್ನಿಗೆ ಓಡಿದರು. ಪರಿಣಾಮ, ರನೌಟ್! ಪಂತ್ ಗಳಿಕೆ 20 ಎಸೆತಗಳಿಂದ 25 ರನ್ (3 ಬೌಂಡರಿ). ಕೊಹ್ಲಿ-ಪಂತ್ ಜೋಡಿಯಿಂದ 4ನೇ ವಿಕೆಟಿಗೆ 5.5 ಓವರ್‌ಗಳಿಂದ 40 ರನ್ ಒಟ್ಟುಗೂಡಿತು.
ಪಂತ್ ನಿರ್ಗಮನದ ಬಳಿಕ ಕೊಹ್ಲಿ ಬ್ಯಾಟಿಂಗ್ ತುಸು ನಿಧಾನಗೊಂಡಿತು. ಇನ್ನೊಂದೆಡೆ ಶ್ರೇಯಸ್ ಅಯ್ಯರ್ ಮೊದಲ ಎಸೆತವನ್ನೇ ಬೌಂಡರಿಗೆ ಬಡಿದಟ್ಟಿ ಖಾತೆ ತೆರೆದರು. ಆದರೆ ಸೆಕೆಂಡ್ ಸ್ಪೆಲ್ ದಾಳಿಗಿಳಿದ ಮಾರ್ಕ್ ವುಡ್
ಅಯ್ಯರ್‌ಗೆ ಕಂಟಕವಾದರು. ಎಸೆತಕ್ಕೊಂದರಂತೆ 9 ರನ್ ಮಾಡಿದ ಅವರು ಮಾಲನ್‌ಗೆ ಕ್ಯಾಚ್ ನೀಡಿ ವಾಪಸಾದರು. 15 ಓವರ್ ಮುಕ್ತಾಯಕ್ಕೆ ಭಾರತ 5 ವಿಕೆಟಿಗೆ 87 ರನ್ ಮಾಡಿ ಕುಂಟುತ್ತಿತ್ತು. 100 ರನ್ ಪೂರ್ತಿಗೊಳ್ಳುವಾಗ ಭರ್ತಿ 16 ಓವರ್ ಮುಗಿದಿತ್ತು.
ಅಹ್ಮದಾಬಾದ್ ಸ್ಟೇಡಿಯಂ ಖಾಲಿ ಖಾಲಿ!
ಕೋವಿಡ್-19 ಹೆಚ್ಚುತ್ತಿರುವ ಕಾರಣ ಭಾರತ-ಇಂಗ್ಲೆಂಡ್ ನಡುವಿನ ಉಳಿದ ಮೂರೂ ಟಿ20 ಪಂದ್ಯಗಳನ್ನು ಖಾಲಿ ಸ್ಟೇಡಿಯಂನಲ್ಲಿ ಆಡಿಸಲು ನಿರ್ಧರಿಸಲಾಯಿತು. ಇದರಿಂದ ಮಂಗಳವಾರದ ಪಂದ್ಯಕ್ಕಾಗಿ ಟಿಕೆಟ್ ಪಡೆದ ವೀಕ್ಷಕರು ತೀವ್ರ ನಿರಾಸೆ ಅನುಭವಿಸಿದರು.
ಅಹ್ಮದಾಬಾದ್ ಟಿ20 ಪಂದ್ಯಗಳಿಗೆ ಕೋವಿಡ್ ಮಾರ್ಗಸೂಚಿಯಂತೆ ಶೇ. 50ರಷ್ಟು ವೀಕ್ಷಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಮೊದಲೆರಡು ಪಂದ್ಯಗಳ ವೇಳೆ ತಲಾ 65 ಸಾವಿರದಷ್ಟು ಪ್ರೇಕ್ಷಕರು ಆಗಮಿಸಿದ್ದರು. ಆದರೆ ಸೋಮವಾರ ರಾತ್ರಿ ತೆಗೆದುಕೊಂಡ ದಿಢೀರ್ ನಿರ್ಣಯವೊಂದರಲ್ಲಿ ಉಳಿದ ಪಂದ್ಯಗಳಿಗೆ ವೀಕ್ಷಕರನ್ನು ನಿರ್ಬಂಧಿಸಲು ನಿರ್ಧರಿಸಲಾಯಿತು.
ಸ್ಕೋರ್ ಪಟ್ಟಿ
ಭಾರತ
ರೋಹಿತ್ ಶರ್ಮ ಸಿ ಆರ್ಚರ್ ಬಿ ವುಡ್ 15
ಕೆ. ಎಲ್. ರಾಹುಲ್ ಬಿ ವುಡ್ 0
ಇಶಾನ್ ಕಿಶನ್ ಸಿ ಬಟ್ಲರ್ ಬಿ ಜೋರ್ಡನ್ 4
ವಿರಾಟ್ ಕೊಹ್ಲಿ ಔಟಾಗದೆ 77
ರಿಷಭ್ ಪಂತ್ ರನೌಟ್ 25
ಶ್ರೇಯಸ್ ಅಯ್ಯರ್ ಸಿ ಮಾಲನ್ ಬಿ ವುಡ್ 9
ಹಾರ್ದಿಕ್ ಪಾಂಡ್ಯ ಸಿ ಆರ್ಚರ್ ಬಿ ಜೋರ್ಡನ್ 17
ಇತರ 9
ಒಟ್ಟು (6 ವಿಕೆಟಿಗೆ) 156
ವಿಕೆಟ್ ಪತನ: 1-7, 2-20, 3-24, 4-64, 5-86, 6-156.
ಬೌಲಿಂಗ್:
ಆದಿಲ್ ರಶೀದ್ 4-0-26-0
ಜೊಫ್ರಾ ಆರ್ಚರ್ 4-0-32-0
ಮಾರ್ಕ್ ವುಡ್ 4-0-31-3
ಕ್ರಿಸ್ ಜೋರ್ಡನ್ 4-1-35-2
ಬೆನ್ ಸ್ಟೋಕ್ಸ್ 2-0-12-0
ಸ್ಯಾಮ್ ಕರನ್ 2-0-14-0
ಇಂಗ್ಲೆಂಡ್
ಜಾಸನ್ ರಾಯ್ ಸಿ ರೋಹಿತ್ ಬಿ ಚಹಲ್ 9
ಜಾಸ್ ಬಟ್ಲರ್ ಔಟಾಗದೆ 83
ಡೇವಿಡ್ ಮಾಲನ್ ಸಂಪ್ಡ್ ಪಂತ್ ಬಿ ಸುಂದರ್ 18
ಜಾನಿ ಬೇರ್‌ಸ್ಟೊ ಔಟಾಗದೆ 40
ಇತರ 8
ಒಟ್ಟು (18.2 ಓವರ್‌ಗಳಲ್ಲಿ 2 ವಿಕೆಟಿಗೆ) 158
ವಿಕೆಟ್ ಪತನ: 1-23, 2-81.
ಬೌಲಿಂಗ್: ಭುವನೇಶ್ವರ್ ಕುಮಾರ್ 4-0-27-0
ಶಾರ್ದೂಲ್ ಠಾಕೂರ್ 3.2-0-36-0
ಯಜುವೇಂದ್ರ ಚಹಲ್ 4-0-41-1
ಹಾರ್ದಿಕ್ ಪಾಂಡ್ಯ 3-0-22-0
ವಾಷಿಂಗ್ಟನ್ ಸುಂದರ್ 4-0-26-1
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress: ಜಮೀರ್ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ ದೂರು
Olympics; 2036ರ ಒಲಿಂಪಿಕ್ಸ್‌ಗೆ ಬಿಡ್: ಭಾರತದಿಂದ ಐಒಸಿಗೆ ಅಧಿಕೃತ ಅರ್ಜಿ
Belagavi: ಎಸ್‌ಡಿಎ ಆತ್ಮಹ*ತ್ಯೆ: ಸಚಿವೆ ಹೆಬ್ಬಾಳ್ಕರ್ ರಾಜೀನಾಮೆಗೆ ಬಿಜೆಪಿ ಪಟ್ಟು
Supreme Court: ಬೇಕಾಬಿಟ್ಟಿ ಖಾಸಗಿ ಆಸ್ತಿ ಸ್ವಾಧೀನ ಸಲ್ಲ;ವಿಶೇಷ ಪ್ರಕರಣದಲ್ಲಷ್ಟೇ ಸ್ವಾಧೀನ
LignoSat: ಮರದಿಂದ ತಯಾರಿಸಿದ ವಿಶ್ವದ ಮೊದಲ ಉಪಗ್ರಹ ಉಡಾವಣೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.