Dharmasthala ಸಂಸ್ಕಾರವಂತ ಬದುಕು ನಮ್ಮದಾಗಲಿ: ಚಿತ್ರ ನಟ ದೊಡ್ಡಣ್ಣ ಕಳಕಳಿ
ಧರ್ಮಸ್ಥಳದಲ್ಲಿ 52ನೇ ವರ್ಷದ ಸಾಮೂಹಿಕ ವಿವಾಹ; 123 ಜೋಡಿ ದಾಂಪತ್ಯ ಜೀವನಕ್ಕೆ
Team Udayavani, May 2, 2024, 12:20 AM IST
ಬೆಳ್ತಂಗಡಿ: ಮನುಷ್ಯ ಜನ್ಮ ತಾಳಿದ ಮೇಲೆ ಹೇಗೇಗೋ ಬದುಕಬಾರದು. ಸಂಸ್ಕಾರವಂತನಾಗಿ ಬದುಕಬೇಕು. ಹೆತ್ತವರು ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ನೀಡಿ ಸಜ್ಜನ, ಸಚ್ಚಾರಿತ್ರ್ಯವಂತ ನಾಗರಿಕರಾಗಿ ರೂಪಿಸಬೇಕು. ಆ ಮೂಲಕ ಆರೋಗ್ಯ ಪೂರ್ಣ ಸಮಾಜ ನಿರ್ಮಿಸ ಬೇಕು ಎಂದು ಚಲನಚಿತ್ರನಟ ದೊಡ್ಡಣ್ಣ ನೂತನ ದಂಪತಿಗಳಿಗೆ ಹರಸಿದರು.
ಚತುರ್ದಾನ ಕ್ಷೇತ್ರವಾದ ಧರ್ಮಸ್ಥಳದಲ್ಲಿ ಬುಧವಾರ 6.45ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ನೆರವೇರಿದ 52ನೇ ವರ್ಷದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಶುಭಕೋರಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಹೆಗ್ಗಡೆ ಕುಟುಂಬದಿಂದ ಆರೋಗ್ಯ, ಭಕ್ತಿ, ಅಭಯ, ಶಿಕ್ಷಣ ಎಲ್ಲವೂ ಸಮಾ ಜಕ್ಕೆ ಅರ್ಪಿತವಾಗಿದೆ. ಎಬಿಸಿಡಿ ಎಲ್ಲ ಮಕ್ಕಳು ಕಳಿಯುತ್ತಾರೆ, ಆದರೆ ಇಂದಿನ ಶಿಕ್ಷಣದಲ್ಲಿ ಜೀವನ ಸಂಸ್ಕಾರ ಮರೆಯಾಗುತ್ತಿದೆ. ಮುಂದೆ ಕ್ಷೇತ್ರದಿಂದ ಸಂಸ್ಕಾರವನ್ನು ಕೊಡುವ ಕಾರ್ಯ ಪೂಜ್ಯ ಹೆಗ್ಗಡೆಯವರಿಂದಾಗಬೇಕಿದೆ ಎಂದ ಅವರು, ಬಲ್ಲವರು ಮತ್ತು ಶಾಸ್ತ್ರದಿಂದ ಸಂಸ್ಕಾರವಂತರಾಗಬೇಕು ಅದಕ್ಕಾಗಿ ಮಕ್ಕಳಿಗೆ ರಾಮಾಯಣ ಮತ್ತು ಮಹಾಭಾರತದಂತಹ ಪೌರಾಣಿಕ ಅಧ್ಯಯನಕ್ಕೊಳಪಡಿಸಬೇಕು ಎಂದರು.
ದುಂದುವೆಚ್ಚ ಇಲ್ಲಿಲ್ಲ
ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಸಾಮೂಹಿಕ ವಿವಾಹ ಅಂದರೆ ಸರಳ ವಿವಾಹ. ವರದಕ್ಷಿಣೆ ಪಿಡುಗು ಮತ್ತು ಮದುವೆ ಗಾಗುವ ದುಂದುವೆಚ್ಚ ಕಡಿಮೆಯಾಗಿದೆ. ಇಲ್ಲಿ ಮದುವೆ ಆದವರ ಎರಡು ಮೂರನೇ ಪೀಳಿಗೆ ಇಲ್ಲಿ ವಿವಾಹಕ್ಕೆ ಬರುತ್ತಿದ್ದಾರೆ. ಕೇವಲ ಬಡ ವರು ಮಾತ್ರವಲ್ಲದೆ ಆರ್ಥಿಕ ಸದೃಢರೂ ವಿವಾಹವಾಗುತ್ತಿದ್ದಾರೆ ಎಂದರೆ ಇದುವೇ ಸಾಮಾ ಜಿಕ ಪರಿವರ್ತನೆ ಎಂದು ತಿಳಿಸಿದರು.
ಹಳ್ಳಿ ತ್ಯಜಿಸದಿರಿ
ಹಳ್ಳಿಯ ಹುಡುಗ/ಹುಡುಗಿ ಎಂಬ ಕಾರಣಕ್ಕೆ ವಿವಾಹ ತಿರಸ್ಕೃತವಾಗುತ್ತದೆ. ಆದರೆ ಇಂದು ಹಳ್ಳಿಗಳು ಸಾಕಷ್ಟು ಅಭಿವೃದ್ಧಿಯಾಗಿವೆ ಎಂದು ಹೇಳಿದರು.
ಹಳ್ಳಿ ತ್ಯಜಿಸಿ ಪಟ್ಟಣ ಸೇರುವ ಸಂಸ್ಕೃತಿ ಬರಬಾರದು. ನಾವು ನಮ್ಮ ನಡತೆ, ಪಾವಿತ್ರ್ಯವನ್ನು ಉಳಿಸಿಕೊಂಡು ಜೀವನ ಸಾಗಿಸಬೇಕು. ನೂತನ ದಂಪತಿ ಸತ್ಸಂಗ ಮಾಡಿ ಸಂಸಾರವನ್ನು ಹೊಣೆಗಾರಿಕೆ ಮತ್ತು ಜವಾಬ್ದಾರಿಯಿಂದ ಅರ್ಥಪೂರ್ಣವಾಗಿ ನಿರ್ವಹಿಸಬೇಕು ಎಂದರು.
ಹೇಮಾವತಿ ವೀ. ಹೆಗ್ಗಡೆ, ಶಾಂತಾ ದೊಡ್ಡಣ್ಣ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ರತ್ನವರ್ಮ ಜೈನ್ ವಂದಿಸಿದರು. ಶ್ರೀನಿವಾಸ ರಾವ್ ಧರ್ಮಸ್ಥಳ ಮತ್ತು ಪೂಜಾ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು.ಡಾ| ಸುನಿಲ್ ಪಂಡಿತ್ ದಾಂಪತ್ಯ ದೀಕ್ಷೆ ನೆರವೇರಿಸಿದರು.
ಸಾಮಾಜಿಕ ಬದ್ಧತೆ ಬೆಳೆಯಲಿ
ಜೀವನದಲ್ಲಿ ಆಶ್ರಯ, ಆಹಾರ, ಬದುಕು ಕೊಟ್ಟವರನ್ನು ಎಂದೂ ಮರೆಯಬಾರದು. ತಾಯಿ-ತಂದೆ ಮಾಡಿದ ದಾನ-ಧರ್ಮ, ಸತ್ಕಾರ್ಯದ ಪುಣ್ಯಅವರ ಮಕ್ಕಳಿಗೂ ಲಭಿಸುತ್ತದೆ. ಯಾವುದೇ ನೀತಿ, ಧರ್ಮ, ಸಂಸ್ಕಾರ ಕಲಿಯಲು ವಯಸ್ಸಿನ ಮಿತಿ ಇಲ್ಲ. ಪ್ರೀತಿ-ವಿಶ್ವಾಸ, ಪರೋಪಕಾರ ಸೇವಾ ಕಳಕಳಿ, ಸಾಮಾಜಿಕ ಬದ್ಧತೆ ಮೊದಲಾದ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ನಟ ದೊಡ್ಡಣ್ಣ ಸಲಹೆ ನೀಡಿದರು.
12,900ನೇ ವಿಶೇಷ ಜೋಡಿ
ಬೈಕ್ ಅಪಘಾತದಿಂದ ಕಾಲು ಕಳೆದುಕೊಂಡ ಗದಗದ ಪ್ರವೀಣ ಖನ್ನೂರು ಅವರನ್ನು ಕವಿತಾ ಗಿಡಕೆಂಚಣ್ಣವರ್ ಪರಸ್ಪರ ಪ್ರೀತಿಸಿ ಮದುವೆಗೆ ಒಪ್ಪಿದ್ದು ಅವರಿಗೆ 12,900ನೇ ಜೋಡಿ ಎಂಬ ವಿಶೇಷ ಮಾನ್ಯತೆಯೊಂದಿಗೆ ಪ್ರತ್ಯೇಕ ವೇದಿಕೆ ನಿರ್ಮಿಸುವ ಮೂಲಕ ಗಣ್ಯರು ಹರಸಿದರು.
-ಡಾ| ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆಯವರು ಬೀಡಿನಲ್ಲಿ ವಧುವಿಗೆ ಸೀರೆ, ರವಿಕೆ ಮತ್ತು ವರನಿಗೆಧೋತಿ, ಶಾಲು ವಿತರಿಸಿದರು.
-ವಧೂ-ವರರ ಜೋಡಿ ಮದುವೆ ದಿಬ್ಬಣವಾಗಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಭವ್ಯ ಮೆರವಣಿಗೆಯಲ್ಲಿ ಅಮೃತವರ್ಷಿಣಿ ಸಭಾಭವನಕ್ಕೆ ಆಗಮಿಸಿದರು.
-ಮುಹೂರ್ತಕ್ಕೆ ಅರ್ಧಗಂಟೆ ಮುಂಚಿತವಾಗಿ ಹೆಗ್ಗಡೆ ದಂಪತಿ ಮತ್ತು ಚಲನಚಿತ್ರ ನಟ ದೊಡ್ಡಣ್ಣ ದಂಪತಿ ಮಂಗಳಸೂತ್ರ ವಿತರಿಸಿದರು. ಆಯಾಜಾತಿ-ಮತ ಸಂಪ್ರದಾಯದಂತೆ ಧಾರ್ಮಿಕ ವಿಧಿ- ವಿಧಾನಗಳನ್ನು ನಡೆಸಲಾಯಿತು.
-39 ಜೊತೆ ಅಂತರ್ಜಾತಿಯ ವಿವಾಹ ಸೇರಿದಂತೆ 23 ಜಿಲ್ಲೆಗಳ ಹಾಗೂ ತಮಿಳುನಾಡಿನ 1 ಜೋಡಿ ಸೇರಿ ಒಟ್ಟು 123 ಜೊತೆ ವಧೂ-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು.
-1972ರಿಂದ ಈವರೆಗೆ 12,900 ಜೋಡಿ ಸಾಮೂಹಿಕ ವಿವಾಹದಲ್ಲಿ ಸತಿಪತಿಯರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.