ಅಮೃತ್ ಸರೋವರ ಯೋಜನೆಗೆ 75 ಕೆರೆ ಗುರುತಿಸಿ: ಸಚಿವೆ ಶೋಭಾ ಕರಂದ್ಲಾಜೆ ಸೂಚನೆ
Team Udayavani, May 7, 2022, 10:51 PM IST
ಉಡುಪಿ: ಕೇಂದ್ರ ಸರಕಾರದ ಅಮೃತ್ ಸರೋವರ ಯೋಜನೆಯಡಿ ಕೆರೆಗಳ ಅಭಿವೃದ್ಧಿ ಸಂಬಂಧ ಒಂದು ಎಕ್ರೆಗೂ ಅಧಿಕ ವಿಸ್ತೀರ್ಣ ಹೊಂದಿರುವ 75 ಕೆರೆಗಳನ್ನು ಗುರುತಿಸುವಂತೆ ಜಿಲ್ಲಾಡಳಿತಕ್ಕೆ ಕೇಂದ್ರ ಕೃಷಿ (ರಾಜ್ಯಖಾತೆ) ಸಚಿವೆ ಶೋಭಾ ಕರಂದ್ಲಾಜೆ ಸೂಚಿಸಿದರು.
ಜಿ.ಪಂ. ಕಚೇರಿಯ ಡಾ| ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಮೃತ್ ಸರೋವರ ಯೋಜನೆಗೆ ಜಿಲ್ಲೆಯ 75 ಕೆರೆಗಳನ್ನು ಗುರುತಿಸಿ (ಕಲ್ಯಾಣಿಯೂ ಆಗಬಹುದು) ನರೇಗಾ, ಶಾಸಕ, ಸಂಸದರ ಅನುದಾನದಡಿ ಅಥವಾ ಸಿಎಸ್‌ಆರ್ ನಿಧಿಯಲ್ಲಿಯೂ ಅಭಿವೃದ್ಧಿಪಡಿಸಬಹುದು ಎಂದರು.
ಜಿಲ್ಲಾ ಕೃಷಿ ಯೋಜನೆ
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ ಕೃಷಿ ಮೂಲ ಸೌಕರ್ಯ ನಿಧಿ ಅಡಿಯಲ್ಲಿ ದೇಶಾದ್ಯಂತ 1 ಲಕ್ಷ ಕೋಟಿ ಅನುದಾನವು ಮೀಸಲಿಡಲಾಗಿದೆ. ರಾಜ್ಯಕ್ಕೆ 14,000 ಕೋಟಿ ರೂ. ಬಿಡುಗಡೆಯಾಗಿದೆ. ಸ್ವ-ಸಹಾಯ ಗುಂಪುಗಳು, ಖಾಸಗಿ ವ್ಯಕ್ತಿಗಳು, ಸಹಕಾರಿ ಸಂಘದವರಿಗೆ 2 ಕೋ.ರೂ.ವರೆಗೆ ಶೇ. 3ರ ಬಡ್ಡಿಯಲ್ಲಿ ಸಾಲಸೌಲಭ್ಯ ನೀಡಲಾಗುತ್ತದೆ. ಇದಕ್ಕೆ ಜಿಲ್ಲೆಯಲ್ಲಿ ಕೃಷಿಯ ಅಭಿವೃದ್ಧಿ ಹಾಗೂ ರೈತರ ಆದಾಯ ದ್ವಿಗುಣಗೊಳಿಸಲು ಪೂರಕವಾ ಗುವಂತೆ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ವಿವಿಧ ಇಲಾಖೆಯ ಸಹಕಾರದೊಂದಿಗೆ ಜಿಲ್ಲಾ ಕೃಷಿ ಯೋಜನೆ (ಡಿಎಪಿ) ಸಿದ್ಧಪಡಿಸಿ ರಾಜ್ಯಕ್ಕೆ ಕಳುಹಿಸಬೇಕು. ಇದರಲ್ಲಿ ಪ್ರಯೋಗಾಲಯ, ಆಹಾರ ಸಂಸ್ಕರಣ ಘಟಕ, ಕೋಲ್ಡ್ ಸ್ಟೋರೇಜ್‌ಗಳು, ಮಣ್ಣು ಪರೀಕ್ಷಾ ಕೇಂದ್ರ, ಗೋದಾಮು ನಿರ್ಮಿಸಲು ಅವಕಾಶವಿದೆ ಎಂದರು.
ಮೀನು ರಫ್ತು ಇಲ್ಲಿಂದಲೇ ಆಗಲಿ
ಉಡುಪಿ ಸಹಿತವಾಗಿ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದಲ್ಲಿ ಮೀನು ಉತ್ಪತ್ತಿಯಾಗುತ್ತಿದೆ. ಇಲ್ಲಿನ ಮೀನುಗಾರರು ಹಿಡಿದ ಮೀನುಗಳು ಕೇರಳದ ಮೂಲಕ ವಿದೇಶಕ್ಕೆ ರಫ್ತಾಗುತ್ತಿದೆ. ನಮ್ಮ ರಾಜ್ಯ ಅಥವಾ ಜಿಲ್ಲೆಯಿಂದಲೇ ಏಕೆ ರಫ್ತು ಮಾಡಲು ಸಾಧ್ಯವಿಲ್ಲ. ಜಿಲ್ಲೆಯಲ್ಲೇ ಇದಕ್ಕೇ ಬೇಕಾದ ವ್ಯವಸ್ಥೆಯನ್ನು ಮೀನುಗಾರಿಕೆ ಇಲಾಖೆ ಕಲ್ಪಿಸಿಕೊಡಬಹುದಲ್ಲವೇ? ಒಟ್ಟಾರೆ ಮೀನು ಉತ್ಪಾದನೆಯ ಶೇ. 10ರಷ್ಟು ಕೂಡ ಇಲ್ಲಿಂದ ರಫ್ತಾಗುತ್ತಿಲ್ಲ. ಇದರ ಬಗ್ಗೆ ಕೂಡಲೇ ಸಮರ್ಪಕ ಮಾಹಿತಿ ಒದಗಿಸಿ, ಯೋಜನೆ ರೂಪಿಸಲು ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಖಾಸಗಿ ಬ್ಯಾಂಕ್‌ಗಳಿಗೆ ಎಚ್ಚರಿಕೆ
ಸ್ವ-ನಿಧಿ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ 50 ಸಾವಿರ ರೂ. ವರೆಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಲು ಅವಕಾಶವಿದೆ. ಹಾಗೆಯೇ ಸರಕಾರದ ಹಲವು ಯೋಜನೆಯಡಿ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯಕ್ಕೆ ಅವಕಾಶವಿದೆ. ಆದರೆ ಕೆಲವು ಖಾಸಗಿ ಬ್ಯಾಂಕ್‌ಗಳು ದಾಖಲೆಗಳ ನೆಪದಲ್ಲಿ ಸಾಲ ನೀಡದೇ ಇರುವ ಬಗ್ಗೆ ದೂರು ಬರುತ್ತಿವೆ. ಇಂತಹ ಬ್ಯಾಂಕ್‌ಗಳಲ್ಲಿ ಸರಕಾರದ ವಿವಿಧ ಇಲಾಖೆಯಿಂದ ಇಟ್ಟಿರುವ ಠೇವಣಿಯನ್ನು ವಾಪಸ್ ಪಡೆಯಬೇಕು. ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಸ್ಪಷ್ಟ ಸೂಚನೆ ನೀಡಬೇಕು. ಕೇಂದ್ರ ಹಣಕಾಸು ಸಚಿವರಿಗೂ ಈ ಬಗ್ಗೆ ಪತ್ರ ಬರೆಯಲಾಗುವುದು ಎಂದರು.
ಭೂಮಿ ಅಗೆಯುವ
ಮಾಹಿತಿ ನೀಡಿ
ಪಿಡಬ್ಲ್ಯೂಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಕುಡಿಯುವ ನೀರಿನ ಕಾಮಗಾರಿ ಸಹಿತವ ವಿವಿಧ ಇಲಾಖೆಯ ಕಾಮಗಾರಿ ವೇಳೆ ಭೂಮಿ ಅಗೆಯುವಾಗ ಬಿಎಸ್ಸೆನ್ನೆಲ್ ಸಹಿತವಾಗಿ ಎಲ್ಲ ಮೊಬೈಲ್ ನೆಟ್‌ವರ್ಕಿಂಗ್ ಸಂಸ್ಥೆಗಳಿಗೂ ಮಾಹಿತಿ ಒದಗಿಸಬೇಕು.ಭೂಮಿಯಡಿಯಲ್ಲಿರುವ ಕೇಬಲ್ ತುಂಡಾಗದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದರು.
ಅಪಘಾತ ತಪ್ಪಿಸಿ
ರಾಷ್ಟ್ರೀಯ ಹೆದ್ದಾರಿಯ ಬಾಕಿ ಉಳಿದ ಕಾಮಗಾರಿಗಳನ್ನು ಶೀಘ್ರ ಕೈಗೊಳ್ಳುವುದರೊಂದಿಗೆ ಹೆದ್ದಾರಿಯಲ್ಲಿ ಆಗುವ ಅಪಘಾತಗಳನ್ನು ತಪ್ಪಿಸಬೇಕು. ಜಿಲ್ಲೆಯಲ್ಲಿ ಈಗಾಗಲೇ 30 ಬ್ಲ್ಯಾಕ್ ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ಈ ಸ್ಥಳಗಳಲ್ಲಿ ಅಗತ್ಯವಿರುವ ರಸ್ತೆ ಸುರಕ್ಷ ಕಾಮಗಾರಿ ಶೀಘ್ರ ನಡೆಸಬೇಕು. ಕಟಪಾಡಿ, ಅಂಬಲಪಾಡಿಯಲ್ಲಿ ಮೇಲ್ಸೇತುವೆ ನಿರ್ಮಾಣ, ಸಂತೆಕಟ್ಟೆಯಲ್ಲಿ ಸರ್ಕಲ್ ಕಾಮಗಾರಿಯನ್ನು ಆದ್ಯತೆ ಮೇಲೆ ಕೈಗೊಳ್ಳುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.
ಕಲ್ಸಂಕದಲ್ಲಿ ಬೃಹತ್ ವೃತ್ತ ನಿರ್ಮಾಣಕ್ಕೆ ಜಮೀನು ಸ್ವಾಧೀನ ಸಾಧ್ಯವೇ ಎಂದು ಅಧಿಕಾರಿಗಳನ್ನು ಸಚಿವರು ಪ್ರಶ್ನಿಸಿದರು. ಉಡುಪಿ ಹಾಗೂ ಕುಂದಾಪುರದ ರೈಲು ನಿಲ್ದಾಣಗಳಲ್ಲಿ ಸಾರ್ವಜನಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ನಿರ್ದೇಶಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, ಶಾಸಕರಾದ ಸುಕುಮಾರ ಶೆಟ್ಟಿ, ಲಾಲಾಜಿ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ., ಜಿ.ಪಂ. ಸಿಇಒ ಡಾ| ವೈ. ನವೀನ್ ಭಟ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ
ನರೇಗಾದಡಿ ಜಿಲ್ಲೆಗೆ 7 ಲಕ್ಷ ಮಾನವ ದಿನಗಳ ಗುರಿ ನೀಡಲಾಗಿದ್ದು, ಪ್ರಸ್ತುತ 9.25 ಲಕ್ಷ ಮಾನವ ದಿನಗಳ ಕೂಲಿ ಕಾರ್ಯಗಳನ್ನು ಮಾಡುವುದರೊಂದಿಗೆ ಶೇ. 132.14 ಗುರಿ ಸಾಧಿಸಲಾಗಿದೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 1,2 ಮತ್ತು 3ನೇ ಹಂತದ 31 ರಸ್ತೆ ಕಾಮಗಾರಿಗಳನ್ನು 90.28 ಕೋ.ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಜಲಜೀವನ್ ಮಿಷನ್ ಯೋಜನೆಯಡಿ 1,09,765 ಹೊಸದಾಗಿ ನಳ್ಳಿ ಸಂಪರ್ಕ ಒದಗಿಸುವ ಕಾಮಗಾರಿಗಳನ್ನು ಕೈಗೊಂಡು 41,711 ಮನೆಗಳಿಗೆ ಕುಡಿಯುವ ನೀರಿನ ನಳ್ಳಿ ಸಂಪರ್ಕ ಒದಗಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.