ಶಿಕ್ಷಕರ ಕೊರತೆ ನೀಗಿಸಲು ಕ್ರಮ: ಶಿಕ್ಷಣ ಸಚಿವ ಮಧು ಬಂಗಾರಪ್ಪ
Team Udayavani, Jul 23, 2023, 6:52 AM IST
ಮಂಗಳೂರು: ವರ್ಗಾವಣೆಯಿಂದಾಗಿ ಜಿಲ್ಲೆಯಲ್ಲಿ ಉಂಟಾಗಿರುವ ಶಿಕ್ಷಕರ ಕೊರತೆಯನ್ನು ನಿವಾರಿಸಲು ತಿಂಗಳೊಳಗೆ ಕ್ರಮ ಕೈಗೊಳ್ಳಲಾಗುವುದು. ಅತಿಥಿ ಶಿಕ್ಷಕರನ್ನು ನಿಯೋಜಿಸಲು ಆದ್ಯತೆ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದರು.
ದ.ಕ. ಜಿ.ಪಂ.ನಲ್ಲಿ ಶನಿವಾರ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ, ಪ.ಪೂ. ಶಿಕ್ಷಣ ಇಲಾಖೆ ಮತ್ತು ಡಯಟ್ ಪ್ರಗತಿ ಪರಿಶೀಲನ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಸುಮಾರು 15 ಸಾವಿರ ಹೊಸ ಶಿಕ್ಷಕರ ನೇಮಕಾತಿಯಾಗುತ್ತಿದ್ದು, ಅಗತ್ಯವಿರುವೆಡೆ ನಿಯೋಜಿಸಲಾಗುವುದು. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಿದ್ದರೆ ಅಂತಹ ಮಕ್ಕಳನ್ನು 4-5 ಕಿ.ಮೀ. ವ್ಯಾಪ್ತಿಯ ಇನ್ನೊಂದು ಶಾಲೆಗೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬಹುದು. ಆವಶ್ಯಕತೆ ಇದ್ದರೆ ಮತ್ತು ಹೆತ್ತವರು ಅನುಮತಿಸಿದರೆ ಮಾತ್ರ ಮಕ್ಕಳನ್ನು ಸ್ಥಳಾಂತರಿಸಬಹುದು ಎಂದರು.
ಈ ಬಾರಿ ಶಾಲಾ ನಿರ್ವಹಣ ಶುಲ್ಕವನ್ನು 10 ಸಾವಿರದಿಂದ 20 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದ್ದು, ಇಂತಹ ಶಾಲೆಗಳಲ್ಲಿ ಈ ಮೊತ್ತವನ್ನು ವಿದ್ಯಾರ್ಥಿಗಳನ್ನು ಇನ್ನೊಂದು ಶಾಲೆಗೆ ಕಳುಹಿಸುವ ನಿಟ್ಟಿನಲ್ಲಿ ಪ್ರಯಾಣ ವೆಚ್ಚಕ್ಕೆ ಬಳಸಬಹುದು. ಆದರೆ ಯಾವುದೇ ಶಾಲೆಯನ್ನು ಮುಚ್ಚಲು ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲೆ ಟಾಪ್‌ನಲ್ಲೇ ಇರಲಿ
ಶಿಕ್ಷಣದ ವಿಚಾರಕ್ಕೆ ಬಂದಾಗ ಕರಾವಳಿ ಯಾವಾಗಲೂ ಮುಂಚೂಣಿಯಲ್ಲಿರುತ್ತದೆ. ಇಲಾಖೆ, ಶಿಕ್ಷಕರು, ಹೆತ್ತವರ ನಿರಂತರ ಶ್ರಮದಿಂದ ಇದು ಸಾಧ್ಯವಾಗಿದೆ. ಮುಂದೆಯೂ ಶಿಕ್ಷಣದಲ್ಲಿ ಟಾಪ್‌ನಲ್ಲಿ ಇರುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಕಾರ್ಯಗತಗೊಳಿಸಬೇಕು ಎಂದರು.
ಅನುದಾನ ಹಂಚಿಕೆ
ರಾಜ್ಯ ಸರಕಾರದ ಈ ಹಿಂದಿನ ಸೂಚನೆಯಿಂದಾಗಿ ಇಲಾಖಾ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಯಾವುದಾದರೂ ಯೋಜನೆಗಳ ಕೆಲಸ ಸ್ಥಗಿತಗೊಂಡಿದ್ದರೆ, ಜಿಲ್ಲಾ ಉಸ್ತುವಾರಿ ಸಚಿವರ ಅನುಮತಿ ಪಡೆದು ಮುಂದುವರಿಸಬೇಕು. ಶಿಥಿಲಗೊಂಡಿರುವ, ಹೆಚ್ಚು ಹಾಳಾಗಿರುವ ಮತ್ತು ದುರಸ್ತಿ ಮಾಡಲೇಬೇಕಾದ ಶಾಲೆಗಳಿದ್ದರೆ ಇಲಾಖೆಗೆ ಮಾಹಿತಿ ನೀಡಿ. ಇದಕ್ಕೆ ಅನುದಾನ ಹಂಚಿಕೆ ಮಾಡಲಾಗುವುದು ಎಂದು ಸಚಿವರು ಸೂಚಿಸಿದರು.
ಡಿ ದರ್ಜೆ ನೌಕರರ ನಿಯೋಜನೆ
ಶಾಲಾ ಶಿಕ್ಷಣ, ಪ.ಪೂ. ಶಿಕ್ಷಣ ಮತ್ತು ಡಯೆಟ್ ಮೂರರಲ್ಲೂ ಡಿ-ದರ್ಜೆ ನೌಕರರು ಇಲ್ಲದಿರುವುದನ್ನು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ನೌಕರರ ನಿಯೋಜನೆಗೆ ಸಂಬಂಧಿಸಿದಂತೆ ಕ್ರಮ ವಹಿಸುವಂತೆ ಜಿ.ಪಂ. ಸಿಇಒಗೆ ಸಚಿವರು ಸೂಚಿಸಿದರು.
ಶಿಕ್ಷಣ ಇಲಾಖೆ ಪ್ರೌಢ ಶಿಕ್ಷಣ ವಿಭಾಗದ ರಾಜ್ಯ ನಿರ್ದೇಶಕ ಕೃಷ್ಣ ಜಿ. ಕರಿಚೆನ್ನಣ್ಣನವರ್, ಜಿ.ಪಂ. ಸಿಇಒ ಡಾ| ಆನಂದ್, ಬೆಳಗಾವಿಯ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಸಿಪ್ರಿಯನ್ ಮೊಂತೇರೋ, ಸಚಿವರ ಆಪ್ತ ಸಹಾಯಕ ಎಂ.ಕೆ. ಕಿಶೋರ್ ಕುಮಾರ್ ಉಪಸ್ಥಿತರಿದ್ದರು.
ಡಿಡಿಪಿಐ ದಯಾನಂದ ನಾಯಕ್, ಡಿಡಿಪಿಯು ಸಿ.ಡಿ. ಜಯಣ್ಣ, ಡಿಡಿಪಿಐ (ಅಭಿವೃದ್ಧಿ) ರಾಜಲಕ್ಷ್ಮೀ ಅವರು ಇಲಾಖೆಯ ಪ್ರಗತಿಯ ಕುರಿತು ಸಚಿವರಿಗೆ ವಿವರಿಸಿದರು. ಬಿಇಒಗಳು, ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
“13,500 ಖಾಯಂ ಶಿಕ್ಷಕರ ನೇಮಕ ಶೀಘ್ರ’
ಮಂಗಳೂರು: ರಾಜ್ಯದಲ್ಲಿ 50 ಸಾವಿರದಷ್ಟು ಶಿಕ್ಷಕರ ಕೊರತೆ ಇದೆ. 33 ಸಾವಿರದಷ್ಟು ಅತಿಥಿ ಶಿಕ್ಷಕರಿದ್ದಾರೆ. 13,500 ಶಿಕ್ಷಕರ ನೇಮಿಸುವ ಕಾರ್ಯ ಆದಷ್ಟು ಬೇಗ ನಡೆಯಲಿದೆ. ಈ ವಿಚಾರ ಪ್ರಸ್ತುತ ನ್ಯಾಯಾಲಯದಲ್ಲಿದ್ದು, ಪೂರಕ ಪ್ರಕ್ರಿಯೆಗಳೆಲ್ಲವೂ ನಡೆದಿವೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಖಾತೆ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಾಜ್ಯಾದ್ಯಂತ ಸರಕಾರಿ ಶಾಲೆಗಳ ಶಿಕ್ಷಕರ ಕೊರತೆ ನೀಗಿಸಲು 25 ಸಾವಿರ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿ ಕೌನ್ಸೆಲಿಂಗ್ ಅಲ್ಪಾವಧಿಯಲ್ಲಿಯೇ ನಡೆದಿದೆ. ಜು. 31ರೊಳಗೆ ಪ್ರಕ್ರಿಯೆ ಅಂತ್ಯಗೊಳ್ಳಲಿದೆ ಎಂದರು.
ಬಿಜೆಪಿಯವರಿಗೆ ಕಾಮನ್‌ಸೆನ್ಸ್ ಇಲ್ಲ
ಭಾವನಾತ್ಮಕ ವಿಚಾರಗಳನ್ನಿರಿಸಿ ಆಟವಾಡುತ್ತಿದ್ದ ಬಿಜೆಪಿಗೆ ಈ ಸಲದ ಅಸೆಂಬ್ಲಿ ಚುನಾವಣೆಯಲ್ಲಿ ರಾಜ್ಯದ ಜನತೆ ಸರಿಯಾದ ಪಾಠ ಕಲಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಇದನ್ನು ಅರ್ಥಮಾಡಿಕೊಳ್ಳಲಿ. ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಘೋಷಣೆ ಮಾಡಿದ ಗ್ಯಾರಂಟಿಗಳ ವಿಚಾರದಲ್ಲಿ ವಿಪಕ್ಷ ಮಾತನಾಡುವುದನ್ನು ನೋಡಿದಾಗ ಅವರಿಗೆ ಕಾಮನ್‌ಸೆನ್ಸ್ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಸರಕಾರ ಬಂದು ಬರೀ 60 ದಿನಗಳಷ್ಟೇ ಆಗಿದೆ. ಅದರೊಳಗೆ ನಮ್ಮ ಬಹುತೇಕ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ ಎಂದರು.
ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ ಅವರು ಮುಖ್ಯಮಂತ್ರಿ ವಿರುದ್ಧ ನೀಡಿದ್ದಾರೆನ್ನಲಾದ ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಆ ಬಗ್ಗೆ ಸೂಕ್ತ ಮಾಹಿತಿ ಇಲ್ಲ. ಹಾಗಿದ್ದರೂ ಅವರು ಪಕ್ಷದ ಹಿರಿಯ ನಾಯಕರು, ಅದಕ್ಕೆ ನಾನು ಪ್ರತಿಕ್ರಿಯಿಸುವುದು ಸರಿಯಲ್ಲ. ಅದು ಪಕ್ಷದ ಆಂತರಿಕ ಸಭೆಯಲ್ಲಿ ಈ ಬಗ್ಗೆ ಮಾತನಾಡುವೆ ಎಂದರು.
ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಮಾಡುತ್ತಿರುವ ಆರೋಪಗಳ ಬಗ್ಗೆ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರು ಮಾತನಾಡಿದ ತತ್‌ಕ್ಷಣ ಸರಕಾರ ಬಿದ್ದು ಹೋಗದು. ಸರಕಾರ ಜನರ ಕೈಯಲ್ಲಿ ಇರುವುದು ಎಂದರು.
ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಶುಭೋದಯ ಆಳ್ವ, ನೀರಜ್‌ಪಾಲ್, ಸಲೀಂ, ಸುಹಾನ್ ಆಳ್ವ ಮುಂತಾದವರಿದ್ದರು.
ಶೂನ್ಯ ದಾಖಲಾತಿ ಶಾಲೆಗಳ ಬಗ್ಗೆ ನಿಗಾ
ಪುತ್ತೂರು: ದ.ಕ., ಉಡುಪಿ ಜಿಲ್ಲೆಯ 55 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶೂನ್ಯ ದಾಖಲಾತಿ ಇರುವ ಬಗ್ಗೆ ಮಂಗಳೂರಿನಲ್ಲಿ ನಡೆದ ಇಲಾಖಾ ಸಭೆಯಲ್ಲಿ ಪ್ರಸ್ತಾವವಾಗಿದ್ದು ಆ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳ, ಶಿಕ್ಷಕರ ನಿಯೋಜನೆ ಸೇರಿದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗಂಭೀರ ಚಿಂತನೆ ನಡೆಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಪತ್ರಕರ್ತರ ಜತೆ ಮಾತನಾಡಿದ ಅವರು, ಶೂನ್ಯ ದಾಖಲಾತಿ ಇರುವ ಶಾಲೆಗಳನ್ನು ಮುಖ್ಯವಾಗಿಟ್ಟುಕೊಂಡು ಅಲ್ಲಿಗೆ ಹೆಚ್ಚು ಶಿಕ್ಷಕರ ನಿಯೋಜನೆಗೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಮುಖ್ಯಮಂತ್ರಿಗಳು ಒಂದಷ್ಟು ಅನುದಾನ ನೀಡಿದ್ದಾರೆ. ಇದರಲ್ಲಿ ಶಿಥಿಲಗೊಂಡಿರುವ ಕಟ್ಟಡಗಳ ದುರಸ್ತಿ ಸೇರಿದಂತೆ ಶಾಲೆಯ ಮೂಲ ಸೌಕರ್ಯ ಒದಗಿಸಲು ಆದ್ಯತೆ ನೀಡಲಾಗುವುದು ಎಂದ ಅವರು ಶಾಲೆಗಳಲ್ಲಿ ಕಲಿಕಾ ಸ್ನೇಹಿ ಯೋಜನೆ ಜಾರಿ ಮಾಡಲಾಗುವುದು ಎಂದರು.
ಕನ್ನಡ ಭಾಷೆಯನ್ನು ಉಳಿಸಿಕೊಂಡು ನಿಯಮ ಅನುಸಾರವಾಗಿ ಕರಾವಳಿ ಭಾಗದಲ್ಲಿಯು ಸರಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಕಲಿಕೆಗೆ ಅವಕಾಶ ನೀಡುವ ಬಗ್ಗೆ ಯೋಜನೆ ರೂಪಿಸಲಾಗುವುದು ಎಂದರು.
ಕೊಳತೆ ಮೊಟ್ಟೆ: ಕ್ರಮ
ಅಂಗನವಾಡಿಗಳಿಗೆ ಕೊಳತೆ ಮೊಟ್ಟೆ ಪೂರೈಕೆಯ ದೂರುಗಳಿದ್ದು ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಗಮನಕ್ಕೆ ತರಲಾಗುವುದು. ತಪ್ಪುದಾರರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಲಿದೆ ಎಂದರು.
ಶಾಸಕ ಅಶೋಕ್ ಕುಮಾರ್ ರೈ ಉಪಸ್ಥಿತರಿದ್ದರು.
ಬಿಲ್ಲವ ಸಮಾಜವನ್ನು ಸಿಎಂ ಅವಗಣಿಸಿಲ್ಲ
ಬಿಲ್ಲವ ಸಮಾಜವನ್ನು ಸರಕಾರವಾಗಲೀ, ಕಾಂಗ್ರೆಸ್ ಪಕ್ಷವಾಗಲೀ ಅವಗಣನೆ ಮಾಡಿಲ್ಲ ಎಂದು ಮಧು ಸಮರ್ಥಿಸಿಕೊಂಡಿದ್ದಾರೆ.
ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಅಸಮಾಧಾನದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ನಾನು ಈಡಿಗ ಸಮುದಾಯದವ. ಅವಕಾಶ ಸಿಕ್ಕಿದೆ ಅನ್ನುವುದಕ್ಕೆ ನಾನೇ ಉದಾಹರಣೆ ಎಂದರು. ನಮ್ಮ ಸಮುದಾಯಕ್ಕೆ ನೂರಕ್ಕೆ ನೂರರನ್ನು ಪ್ರಾತಿನಿಧ್ಯತೆ ನೀಡಿದ್ದಾರೆ. ಹಾಗಾಗಿ ಬಿಲ್ಲವ, ಈಡಿಗ ಸಮುದಾಯಕ್ಕೆ ಸಿದ್ದರಾಮಯ್ಯ ಯಾವುದೇ ಅನ್ಯಾಯ ಮಾಡಿಲ್ಲ ಎಂದರು.
ಬಿಲ್ಲವ ಸಮುದಾಯದ ಅಭಿವೃದ್ಧಿಗೆ ಪೂರಕವಾದ ಸಹಕಾರವನ್ನು ಸರಕಾರ ನೀಡಲಿದೆ. ಬಿಲ್ಲವ ನಿಗಮಕ್ಕೆ ಅನುದಾನದ ಜತೆಗೆ ಬಂಟರ ನಿಗಮ, ಮೀನುಗಾರರ ಕುಟುಂಬದ ಹಿತ ಕಾಯಲು ಸರಕಾರ ಬದ್ಧವಿದೆ ಎಂದರು.
ಹರಿಪ್ರಸಾದ್ ಬಿ.ಕೆ. ಅವರನ್ನು ಅವಗಣಿಸಿರುವುದೇ ಅವರ ಅಸಮಾಧಾನಕ್ಕೆ ಕಾರಣವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಖಂಡಿತಾ ಇಲ್ಲ. ಅವರು ರಾಷ್ಟ್ರ ಮಟ್ಟದ ನಾಯಕರು. ಅವರ ಮಾತಿನ ಬಗ್ಗೆ ಅವರ ಜತೆ ಚರ್ಚೆ ಮಾಡಿ ತಿಳಿದುಕೊಳ್ಳುತ್ತೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.