ಸೋನು ಅವರಿಂದ 20 ಕೋಟಿ ತೆರಿಗೆ ವಂಚನೆ: ಐಟಿ ಇಲಾಖೆ ಮಾಹಿತಿ
Team Udayavani, Sep 18, 2021, 1:49 PM IST
ಮುಂಬೈ: ಬಹುಭಾಷಾ ನಟ ಸೋನು ಸೂದ್ ಅವರು ಸುಮಾರು 20 ಕೋಟಿಗೂ ಅಧಿಕ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಸೋನು ಸೂದ್ ಅವರಿಗೆ ಸೇರಿದ ಮುಂಬೈಯಲ್ಲಿನ ಮನೆ ಸೇರಿದಂತೆ ಒಟ್ಟು ಒಟ್ಟು 28 ಕಚೇರಿಗಳ ಮೇಲೆ ಐಟಿ ಇಲಾಖೆ ದಾಳಿ ನಡೆಸಿತ್ತು. ಲಕ್ನೊ ಮೂಲದ ಮೂಲಭೂತ ಸೌಕರ್ಯಗಳಲ್ಲಿ ತೊಡಗಿರುವ ಹಲವು ಕೈಗಾರಿಕೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಶೋಧ ಮತ್ತು ವಶಪಡಿಸಿಕೊಳ್ಳುವ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ ತಿಳಿಸಿದೆ.
ಇದುವರೆಗೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ನಟ ಮತ್ತು ಅವರ ಸಹಚರರು ಸುಮಾರು 20 ಕೋಟಿ ರೂಪಾಯಿಗೂ ಅಧಿಕ ತೆರಿಗೆ ವಂಚನೆ ಮಾಡಿದ್ದು ಬೆಳಕಿಗೆ ಬಂದಿದೆ ಎಂದು ಇಲಾಖೆ ಹೇಳಿದೆ. ಇದುವರೆಗೆ ನಟನಿಗೆ ಸೇರಿದ ಮುಂಬೈ, ಲಕ್ನೊ, ಕಾನ್ಪುರ, ಜೈಪುರ, ದೆಹಲಿ ಮತ್ತು ಗುರುಗ್ರಾಮ್ ಗಳಲ್ಲಿರುವ ಒಟ್ಟು 28 ಕಚೇರಿಗಳು, ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಳೆದ ಬುಧವಾರದಿಂದ ದಾಳಿ ನಡೆಸಿ ಶೋಧ ನಡೆಸಿದ್ದರು.
ಕಳೆದ ವರ್ಷ ಕೋವಿಡ್-19 ಲಾಕ್ ಡೌನ್ ಆದ ನಂತರ ವಲಸೆ ಕಾರ್ಮಿಕರಿಗೆ ಅವರ ಊರುಗಳಿಗೆ ತಲುಪಲು ಸಹಾಯ ಮಾಡಿ ಮತ್ತು ಕಷ್ಟದಲ್ಲಿರುವವರಿಗೆ ನೆರವು ನೀಡಿ ರಾಷ್ಟ್ರಮಟ್ಟದಲ್ಲಿ 48 ವರ್ಷದ ನಟ ಸೋನು ಸೂದ್ ಸುದ್ದಿಯಾಗಿದ್ದರು.
ಇನ್ನು ಸೋನು ಸೂದ್ ಅವರ ಮನೆ ಮೇಲೆ ಐಟಿ ದಾಳಿ ನಡೆದಿರುವ ವಿಚಾರ ರಾಜಕೀಯ ಬಣ್ಣ ಪಡೆದುಕೊಂಡಿದೆ. ಕಾಂಗ್ರೆಸ್ ಹಾಗೂ ಆಪ್ ಪಕ್ಷಗಳು ನೇರವಾಗಿ ಕೇಂದ್ರ ಸರ್ಕಾರದ ಮೇಲೆ ಆಕ್ರೋಶ ಹೊರಹಾಕಿವೆ.