ಹುಲಿಬಿಟ್ಟು ಇಲಿ ಹಿಡಿಯಬಾರದು : ಕೃಷಿ ಸಚಿವ ಬಿ.ಸಿ.ಪಾಟೀಲ್
Team Udayavani, Nov 17, 2021, 2:14 PM IST
ಬೆಂಗಳೂರು:ರಾಜ್ಯದಲ್ಲಿ ರೈತರಿಗೆ ಯಾವುದೇ ರೀತಿಯ ಕಳಪೆ ಕೃಷಿ ಪರಿಕರಗಳು, ರಸಗೊಬ್ಬರ,ಕೀಟನಾಶಕಗಳು ಸರಬರಾಜಾಗದಂತೆ ಕೃಷಿ ವಿಚಕ್ಷಣಾ ದಳವನ್ನು ಇನ್ನಷ್ಟು ಜಾಗೃತಗೊಳಿಸಲು ಕೃಷಿ ಸಚಿವ ಬಿ.ಸಿ.ಪಾಟೀಲರು ದಿಟ್ಟ ಕ್ರಮವಹಿಸಿ, “ಹುಲಿ ಬಿಟ್ಟು ಇಲಿ ಹಿಡಿಯಬಾರದು” ಎಂದಿದ್ದಾರೆ.
ವಿಕಾಸಸೌಧದ ಕಚೇರಿಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲರ ಅಧ್ಯಕ್ಷತೆಯಲ್ಲಿ ಸರ್ಕಾರದ ಕೃಷಿ ಇಲಾಖೆ ಪ್ರಧಾನಕಾರ್ಯದರ್ಶಿ ಉಮಾಶಂಕರ್ ನೇತೃತ್ವದಲ್ಲಿ ಕೃಷಿ ವಿಚಕ್ಷಣಾ ದಳದ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.
ಸಭೆಯಲ್ಲಿ ಕೃಷಿ ವಿಚಕ್ಷಣಾ ದಳದ ಕಾರ್ಯನಿರ್ವಹಣೆಯನ್ನು ಇನ್ನಷ್ಟು ಚುರುಕುಗೊಳಿಸುವುದರೊಂದಿಗೆ ಕಳಪೆ ರಸಗೊಬ್ಬರ, ಕೀಟನಾಶಕಗಳು ತಯಾರಾಗದಂತೆ ಅಕ್ರಮ ದಾಸ್ತಾನು, ಕಾಳಸಂತೆಯಲ್ಲಿ ಮಾರಾಟವಾಗದಂತೆ ತಳಮಟ್ಟದಲ್ಲಿಯೇ ಅವುಗಳನ್ನು ಬುಡಸಹಿತ ಕಿತ್ತುಹಾಕಬೇಕು.ರೈತರಿಗೆ ಅನ್ಯಾಯವಾಗುವಂತಹ ಇಂತಹ ಕುಕೃತ್ಯದಲ್ಲಿ ಯಾರೇ ಅಧಿಕಾರಿಗಳಿಗಾಗಲೀ ಇನ್ಯಾರೇ ಆಗಲೀ ಶಾಮೀಲಾಗದಂತೆ ನೋಡಿಕೊಂಡು ತಪ್ಪನ್ನು ಎಸಗಿದವರ್ಯಾರೇ ಆಗಲೀ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ದಾಳಿ ನಡೆಸುವುದು ಸದುದ್ದೇಶದಿಂದ ಕೂಡಿರಬೇಕು ಹಾಗ ರೈತರಿಗೆ ಉಪಯೋಗವಾಗುವಂತಿರಬೇಕು. ಇಲಾಖೆಗೆ ರೈತರಿಗೆ ದ್ರೋಹ ಬಗೆಯುವವರು ಯಾರೇ ಕಂಡುಬಂದರೂ ಮುಲಾಜಿಲ್ಲದೇ ಅಂತವರ ವಿರುದ್ಧ ಕ್ರಮ ಜರುಗಿಸಿ ಎಂದರು.
ತಳಮಟ್ಟದಲ್ಲಿಯೇ ಗುಣಮಟ್ಟದ ಅನುಮತಿ ನೀಡಿದ ಪ್ಯಾಕಿಂಗ್ ಗಳು ಮೇಲ್ಮಟ್ಟದವರೆಗೂ ಸರಬರಾಜಾಗಿ ಒಪ್ಪಿತ ಗುಣಮಟ್ಟದ ಮಾದರಿಗಳೇ ರೈತರಿಗೂ ತಲುಪುವಂತೆ ನೋಡಿಕೊಳ್ಳಬೇಕು. ಜಿಲ್ಲೆಯ ಕೃಷಿ ಅಧಿಕಾರಿಗಳು ವಿಚಕ್ಷಣಾ ದಳದವರು ಇದರತ್ತ ಹೆಚ್ಚಿನ ಲಕ್ಷ್ಯವಹಿಸಬೇಕು. ಅವರವರ ಜವಾಬ್ದಾರಿ ಕರ್ತವ್ಯಗಳನ್ನು ಅವರವರೇ ನಿರ್ವಹಿಸಬೇಕು.ಸ್ಥಳೀಯವಾಗಿ ಜಿಲ್ಲಾ ಕೃಷಿ ವಿಚಕ್ಷಣಾಧಿಕಾರಿಗಳೇ ಆಯಾ ಭಾಗದಲ್ಲಿ ಹದ್ದಿನ ಕಣ್ಣು ಇಡಬೇಕು.ಮೇಲ್ಮಟ್ಟದ ಅಧಿಕಾರಿಗಳಿಗೆ ಇಂತಹ ಕುಕೃತ್ಯಗಳು ಗಮನಕ್ಕೆ ಬಂದು ಸ್ಥಳೀಯವಾಗಿ ಅಧಿಕಾರಿಗಳಿಗೆ ಬಾರದೇ ಇದ್ದ ಸಂದರ್ಭದಲ್ಲಿ ಒಂದು ವೇಳೆ ರಾಜ್ಯದ ಯಾವುದೇ ಭಾಗದಲ್ಲಿಯೂ ಕೇಂದ್ರ ಕೃಷಿ ಜಾಗೃತಕೋಶದ ಅಧಿಕಾರಿಗಳು ದಾಳಿ ಮಾಡಿ ಕೃಷಿ ಪರಿಕರಗಳನ್ನು ಜಪ್ತು ಮಾಡಿದ ಸಂದರ್ಭದಲ್ಲಿ ಪರಿವೀಕ್ಷಕರಿಗೆ ನೋಟೀಸ್ ನೀಡುವುದಾಗಿ ಕೃಷಿ ಸಚಿವರು ಎಚ್ಚರಿಸಿದರು.
ಬಹುಮುಖ್ಯವಾಗಿ ಕೃಷಿ ಇಲಾಖೆಯ “ಟೋಲ್ ಫ್ರೀ-ಸಹಾಯವಾಣಿ” ದೂರವಾಣಿ ಸಂಖ್ಯೆಯನ್ನು ಜಾಗೃತಕೋಶಕ್ಕೂ ವಿಸ್ತರಿಸುವಂತೆ ಸಭೆಯಲ್ಲಿ ಸೂಚಿಸಿದ ಕೃಷಿ ಸಚಿವರು, ಜಪ್ತಿ ಮಾಡಿದ ಕೃಷಿ ಪರಿಕರಗಳ ವಿಲೇವಾರಿಗೆ ಸಂಬಂಧಿಸಿದಂತೆ ಅಗತ್ಯ ಮಾರ್ಗಸೂಚಿ ಹೊರಡಿಸಲು ಕೃಷಿ ಇಲಾಖಾ ಮುಖ್ಯಸ್ಥರಿಗೆ ಸೂಚಿಸಲಾಯಿತು.ಇದರೊಂದಿಗೆ ಜಾಗೃತಕೋಶದ ಕಾರ್ಯಕ್ಕೆ ಸುಗಮವಾಗುವಂತೆ ಕೃಷಿ ಪರಿಕರಗಳ ಗುಣಮಟ್ಟ ನಿಯಂತ್ರಣಕ್ಕೆ ಪೂರಕವಾಗಿ ಅಗತ್ಯವಾಗಿ ಬೇಕಾದ ತಂತ್ರಾಂಶ ಹಾಗೂ K-KISAN ಯಾಪ್ ನೊಂದಿಗೆ ಜೋಡಿಸಲು ಕ್ರಮವಹಿಸಬೇಕೆಂದು ಬಿ.ಸಿ.ಪಾಟೀಲರು ಅಧಿಕಾರಿಗಳಿಗೆ ಸಲಹೆ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.