JDS ಸೇರಿದ ಆಲ್ಕೋಡ್ ಹನುಮಂತಪ್ಪ; ನೂತನ ಕಾರ್ಯಾಧ್ಯಕ್ಷರಾಗಿ ನೇಮಕ
ಪಾಪ ಡಿಕೆಶಿ ಅವರಿಗೆ ರಕ್ತದ ಕೊರತೆ ಆಗುತ್ತದೆ ಎಂದ ಹೆಚ್ ಡಿಕೆ
Team Udayavani, Apr 26, 2023, 4:40 PM IST
ಬೆಂಗಳೂರು: ಮಾಜಿ ಸಚಿವ ಆಲ್ಕೋಡ್ ಹನುಮಂತಪ್ಪ ಅವರು ಬುಧವಾರ ಬೆಳಗ್ಗೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷವನ್ನು ಸೇರಿದರು.ಪಕ್ಷದ ಶಾಲು ಹೊದಿಸಿ ಆಲ್ಕೊಡ್ ಹನುಮಂತಪ್ಪ ಅವರನ್ನು ಇಬ್ಬರು ನಾಯಕರು ಬರಮಾಡಿಕೊಂಡು ಪಕ್ಷದ ಕಾರ್ಯಾಧ್ಯಕ್ಷರಾಗಿ ನೇಮಕ ಮಾಡಲಾಗುತ್ತಿದೆ ಎಂದು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ನಮ್ಮಪಕ್ಷದ ಹಿರಿಯ ಮುಖಂಡರು ಮತ್ತೆ ತಮ್ಮ ಸ್ವಂತ ಮನೆಗೆ ಹನುಮಂತಪ್ಪ ಬರುತ್ತಿದ್ದಾರೆ. ಸಿಎಂ ಇಬ್ರಾಹಿಂ ನೇತೃತ್ವದಲ್ಲಿ ಜೆಡಿಎಸ್ ಗೆ ಮನೆಗೆ ಬರಲು ನಿರ್ಧಾರ ಮಾಡಿದ್ದಾರೆ. ಕಾಂಗ್ರೆಸ್ ನಲ್ಲಿ ಅವರ ಶಕ್ತಿ ಬಳಸಿಕೊಳ್ಳುವ ಕೆಲಸ ಮಾಡಲಿಲ್ಲ ಎಂದರು.
ಹನುಮಂತಪ್ಪ ಅವರ ದೇಹ ಕಾಂಗ್ರೆಸ್ ನಲ್ಲಿ ಇತ್ತು, ಮನಸ್ಸು ಜೆಡಿಎಸ್ ನಲ್ಲಿ ಇತ್ತು. ನಮ್ಮ ಸಂಪರ್ಕದಲ್ಲೇ ಅಲ್ಕೊಡ್ ಹನುಮಂತಪ್ಪ ಇದ್ದರು. ಕಾಂಗ್ರೆಸ್ ನಡವಳಿಕೆಯಿಂದ ಬೇಸತ್ತು ಅವರು ಜೆಡಿಎಸ್ ಗೆ ಬಂದಿದ್ದಾರೆ. ಅವರಿಗೆ ಜೆಡಿಎಸ್ ನಲ್ಲಿ ರಾಜ್ಯ ಮಟ್ಟದಲ್ಲಿ ಸ್ಥಾನಮಾನ ಕೊಡಲು ಸಿಎಂ ಇಬ್ರಾಹಿಂ ನಿರ್ಧಾರ ಮಾಡಿದ್ದಾರೆ. ಅವರ ಜತೆ ಉತ್ತರ ಕರ್ನಾಟಕ ಭಾಗದ ಹಲವಾರು ಜನ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದರು.
ಹನುಮಂತಪ್ಪ ಅವರ ಅನುಭವ ಜೆಡಿಎಸ್ ಗೆ ಉಪಯೋಗವಾಗುತ್ತದೆ. ನಾಳೆ ತುಮಕೂರಿನಲ್ಲಿ ಕೂಡ ಪಕ್ಷ ಸೇರ್ಪಡೆ ಕಾರ್ಯಕ್ರಮ ಇದೆ. ತುಮಕೂರಿನ 11 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲುತ್ತದೆ ಎಂಬ ನಂಬಿಕೆ ಇದೆ.ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಈ ಸಲ ಜೆಡಿಎಸ್ ಪಕ್ಷವು ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಹೆಚ್ಚು ಸೀಟ್ ಗೆಲ್ಲುತ್ತದೆ. ನಮ್ಮ 123 ಕ್ಷೇತ್ರಗಳ ಗುರಿಯನ್ನು ಮುಟ್ಟುತ್ತವೆ. ರಾಷ್ಟ್ರೀಯ ಪಕ್ಷಗಳಿಗೆ ಹಣಬಲ ಇದೆ. ಇಂದು ನಮಗೂ ಹಣಬಲ ಇದ್ದರೆ 140 ಸೀಟ್ ಗೆಲ್ಲುತ್ತೇವೆ ಎಂದು ಘೋಷಣೆ ಮಾಡುತ್ತಿದ್ದೆ ಎಂದರು.
ಸೋಮಣ್ಣ ವಿರುದ್ಧ ಕಿಡಿ
ಜೆಡಿಎಸ್ ಅಭ್ಯರ್ಥಿಗೆ ಆಮಿಷ ಇದ್ದಿರುವ ಸಚಿವ ಸೋಮಣ್ಣ ವೈಖರಿ ಬಗ್ಗೆ ಕಟುವಾಗಿ ಟೀಕಿಸಿದ ಕುಮಾರಸ್ವಾಮಿ, ಸೋಮಣ್ಣ ಅವರ ಭಾಷೆ ನಮಗೆ ಗೊತ್ತಿಲ್ಲ. ಗೂಟದ ಕಾರು ಅಂದರೆ ಏನು? ಪ್ರವೈಟ್ ಕಾರ್ ತಗೊಂಡು ಗೂಟಾ ಇಟ್ಟುಕೊಡ್ತಾರಾ? ಕಾಂಗ್ರೆಸ್ ನಾಯಕರು ನೋಡಿದರೆ ಬಿಜೆಪಿ ಶವಯಾತ್ರೆ ಅಂತಾರೆ. ಇವರು ನೋಡಿದ್ರೆ ಗೂಟದ ಕಾರ್ ಅಂತಾರೆ. ಇವರು ಯಾವ ಗೂಟದ ಕಾರ್ ಕೊಡ್ತಾರೆ ಅಂತ ಗೊತ್ತಿಲ್ಲ. ಇವೆಲ್ಲ ಈಗ ವರ್ಕ್ ಆಗೊಲ್ಲ. ಸೋಮಣ್ಣ ಬಳಸಿದ ಭಾಷೆ ನಮಗೆ ಗೊತ್ತಿಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಆತಂಕ ಶುರುವಾಗಿದೆ. ಅವರ ಇವತ್ತಿನ ಸ್ಥಿತಿ ನೋಡಿದರೆ ನಮಗೆ ಅರ್ಥ ಆಗುತ್ತದೆ. ಜೆಡಿಎಸ್ ಈ ಬಾರಿ ಎರಡು ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂದರು.
ಸಮೀಕ್ಷೆಗಳಿಗೆ ಟಾಂಗ್
ಬಹುಮತದ ಗುರಿ ಮುಟ್ಟಲು ನಮಗೆ ಸ್ವಲ್ಪ ಆರ್ಥಿಕ ಸಮಸ್ಯೆ ಇದೆ. ಆದರೂ ನಮಗೆ ಜನತೆ ಬೆಂಬಲ ದಲ್ಲಿ ನಂಬಿಕೆ ಇದೆ. 123 ಗುರಿ ನಾವು ತಲುಪುತ್ತೇವೆ. ನಾವು ಯಾರಿಗೂ ಹಣ ಕೊಟ್ಟು ಸರ್ವೆ ಮಾಡಿಸಿಲ್ಲ. ಅದರ ಅವಶ್ಯಕತೆ ನಮಗೆ ಇಲ್ಲ. ಜನರ ಬೆಂಬಲದ ಆಧಾರದಲ್ಲಿ ನಾವು ಬಹುಮತ ಬರುತ್ತೆ ಅಂತ ಹೇಳುತ್ತಿದ್ದೇವೆ. ಕೆಲವು ಖಾಸಗಿ ವಾಹಿನಿಗಳು 23- 24 ಅಂತ ತೋರಿಸ್ತಿದ್ದಾರೆ. ಪಾಪ ಅವರು 1 ಅಂಕಿ ಮುಂದೆ ಹಾಕೋದು ಮರೆತು ಹೋಗಿದ್ದಾರೆ. ಜೆಡಿಎಸ್ ಗೆ 123 ಸ್ಥಾನ ಈ ಬಾರಿ ಬರಲಿದೆ ಎಂದರು.
“ಸಿ” ಓಟರ್ ಕಾಂಗ್ರೆಸ್ ಪಕ್ಷ ಸಮೀಕ್ಷೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿಗಳು; ಅವರ ಸಮೀಕ್ಷೆ ನಿಜ ಆಗಲ್ಲ. 150 ಸ್ಥಾನ ಕಾಂಗ್ರೆಸ್ ಗೆ ಬರುತ್ತೆ, ರಕ್ತದಲ್ಲಿ ಬರೆದುಕೊಡ್ತೀನಿ ಎಂಬ ಡಿಕೆ ಶಿವಕುಮಾರ್ ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇನೆ. ಡಿ.ಕೆ.ಶಿವಕುಮಾರ್ ರಕ್ತದಲ್ಲಿ ಬರೆದು ಕೊಡೋದು ಬೇಡ. ಪಾಪ, ಅವರಿಗೆ ರಕ್ತದ ಕೊರತೆ ಆಗುತ್ತದೆ ಎಂದು ಟಾಂಗ್ ನೀಡಿದರು.
ಯಡಿಯೂರಪ್ಪ ಅವರು ನೋಡಿದರೆ ಜಗದೀಶ್ ಶೆಟ್ಟರ್ ಸೋಲುತ್ತಾರೆ ಅಂತ ರಕ್ತದಲ್ಲಿ ಬರೆದು ಕೊಡುತ್ತೇನೆ ಅಂತಾರೆ. ಯಾವ ನಾಯಕರು ರಕ್ತದ ಕೊರತೆ ಮಾಡಿಕೊಳ್ಳೋದು ಬೇಡ. ನೀವು ರಕ್ತದ ಕೊರತೆ ಮಾಡಿಕೊಳ್ಳೋದು ಅಗತ್ಯ ಇಲ್ಲ. ಯಾರೂ ರಕ್ತದಲ್ಲಿ ಬರೆದು ಕೊಡೋದು ಬೇಡ. ನೀವು ಹೇಳೋದು, ರಕ್ತದಲ್ಲಿ ಬರೆದು ಕೊಡೋದು ಮುಖ್ಯ ಅಲ್ಲ. ಜನರು ಮತ ಕೊಡೋದು ಮುಖ್ಯ. ಕಾಂಗ್ರೆಸ್, ಬಿಜೆಪಿ ನಾಯಕರು ಯಾವ ಆಧಾರದಲ್ಲಿ 150 ಸ್ಥಾನ ಅಂತಾರೆ ಹೇಳಲಿ ಎಂದು ಪ್ರಶ್ನಿಸಿದರು.
ನೀವು ನನ್ನನ್ನು ಕೇಳಬಹುದು, 123 ಕ್ಷೇತ್ರ ಹೇಗೆ ಬರುತ್ತದೆ ಅಂತ. ನಾನು 106 ಕ್ಷೇತ್ರಗಳಲ್ಲಿ ನೇರವಾಗಿ ಜನರ ಭೇಟಿ ಮಾಡಿದ್ದೇನೆ. ನಿತ್ಯ ಒಂದೊಂದು ಕ್ಷೇತ್ರದಲ್ಲಿ 50-60 ಹಳ್ಳಿ ಸುತ್ತಿದ್ದೇನೆ. ಜನರ ಸಂಪರ್ಕದಲ್ಲಿ ಮಾಡಿದ್ದೇನೆ. ಪಂಚರತ್ನ, ಜನತಾ ಜಲಧಾರೆ ಯಾತ್ರೆಗಳು ಯಶಸ್ವಿಯಾಗಿವೆ. ನನ್ನ ರೋಡ್ ಶೋಗೆ ಉತ್ತಮ ಜನ ಸ್ಪಂದನೆ ಸಿಕ್ಕಿದೆ. ದೇವನಹಳ್ಳಿಯಲ್ಲಿ ಜನ ಇಲ್ಲ ಅಂತ ಅಮಿತ್ ಶಾ ರೋಡ್ ಶೋ ಕ್ಯಾನ್ಸಲ್ ಆಯ್ತು. ಆದರೆ ನಮಗೆ ಜನರೇ ಆಶೀರ್ವಾದ ಮಾಡ್ತಾರೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.