ಗುತ್ತಿಗೆದಾರರ ಸಂಘದಿಂದ ಮತ್ತೆ ಕಮಿಷನ್ ಆರೋಪ
ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿಯದ್ದು ಎನ್ನಲಾದ ಆಡಿಯೋ ಬಹಿರಂಗ - ಶೀಘ್ರ ಇನ್ನಷ್ಟು ದಾಖಲೆ ಬಿಡುಗಡೆ
Team Udayavani, Jan 17, 2023, 6:45 AM IST
ಬೆಂಗಳೂರು: ಆಡಳಿತ ಪಕ್ಷದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಕರ್ನಾಟಕ ಗುತ್ತಿಗೆದಾರರ ಸಂಘ, ಈಗ ಅದೇ ಕಮಿಷನ್‌ಗೆ ಸಂಬಂಧಿಸಿ ಬಿಜೆಪಿಯ ಶಾಸಕರೊಬ್ಬರದು ಎನ್ನಲಾದ “ಆಡಿಯೋ ಬಾಂಬ್’ ಸಿಡಿಸಿದೆ. ಜತೆಗೆ ನೂರಕ್ಕೂ ಹೆಚ್ಚು ಆಡಿಯೋ ಮತ್ತು ವಾಟ್ಸ್‌ಆ್ಯಪ್ ರೆಕಾರ್ಡಿಂಗ್‌ಗಳಿದ್ದು, 30 ದಿನಗಳ ಬಳಿಕ ಅವುಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸಲಾಗುವುದು ಎಂದು ಎಚ್ಚರಿಸಿದೆ.
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಆರ್. ಮಂಜುನಾಥ್ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ವಿರುದ್ಧ ಆರೋಪ ಮಾಡಿ, ತಾನು ಶಾಸಕರೊಂದಿಗೆ ನಡೆಸಿದ್ದು ಎನ್ನಲಾದ ಸಂಭಾಷಣೆಯ ಆಡಿಯೋ ಕ್ಲಿಪಿಂಗ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೂರು ವರ್ಷಗಳಲ್ಲಿ ಚಿತ್ರದುರ್ಗದಲ್ಲಿ ವಿವಿಧ ಕಾಮಗಾರಿಗಳಿಗೆ ಸಾಕಷ್ಟು ಕಮಿಷನ್ ನೀಡಿದ್ದೇನೆ ಎಂದು ಆರೋಪಿಸಿದರು.
ಕಮಿಷನ್ ಕಾಮಗಾರಿಯಿಂದ ಕಾಮಗಾರಿಗೆ ಭಿನ್ನವಾಗಿದೆ. ಕೆಲವೆಡೆ 25 ಪರ್ಸೆಂಟ್ ಇದ್ದರೆ, ಕೆಲವು ಕಾಮಗಾರಿಗಳಲ್ಲಿ 10 ಪರ್ಸೆಂಟ್ ಇದೆ. ಸ್ವಲ್ಪ ಹಣ ನೇರವಾಗಿ ಶಾಸಕರಿಗೆ ನೀಡಿದರೆ, ಸ್ವಲ್ಪ ಮೊತ್ತ ಎಂಜಿನಿಯರ್‌ಗಳ ಮೂಲಕ ತಲುಪುತ್ತದೆ. ಸಾಲ-ಸೋಲ ಮಾಡಿ, ಚಿನ್ನಾಭರಣಗಳನ್ನು ಅಡ ಇಟ್ಟು ಇವರಿಗೆ ಪರ್ಸೆಂಟೇಜ್ ಕೊಡಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
18ರಂದು ಬೆಂಗಳೂರಿನಲ್ಲಿ ಪ್ರತಿಭಟನೆ
ಕಮಿಷನ್‌ಗೆ ಕಡಿವಾಣ ಹಾಕಬೇಕು, ವಿವಿಧ ಕಾಮಗಾರಿಗಳ ಬಾಕಿ ಬಿಡುಗಡೆ, ಸರಕು ಸೇವಾ ತೆರಿಗೆ (ಜಿಎಸ್‌ಟಿ) ಪ್ರಮಾಣವನ್ನು ಶೇ.12ಕ್ಕೆ ಸೀಮಿತಗೊಳಿಸಬೇಕು ಎನ್ನುವುದು ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಜ. 18ರಂದು ನಗರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ತಿಳಿಸಿದರು.
ಕಾಮಗಾರಿಗಳ ಒಟ್ಟು ಮೊತ್ತದ ಶೇ. 20ರಿಂದ 40ರಷ್ಟು ಹಣ ವಿವಿಧ ರೂಪಗಳಲ್ಲಿ ಸೋರಿಕೆ ಆಗುತ್ತಿದ್ದು, ಬಹುತೇಕ ಹಣ ವಿವಿಧ ವೆಚ್ಚಗಳಿಗೆ ಹೊಂದಿಸಬೇಕಾದ ಅನಿವಾರ್ಯ ಇದೆ. ಸಂಘವು ಯಾವುದೇ ಒಂದು ಪಕ್ಷ ಅಥವಾ ಸರಕಾರದ ವಿರುದ್ಧ ಆಪಾದನೆ ಮಾಡುತ್ತಿಲ್ಲ. ವ್ಯವಸ್ಥೆ ಕುರಿತು ಪ್ರಶ್ನಿಸುತ್ತಿದೆ. ರಾಜ್ಯದ ಮಟ್ಟಿಗೆ ಮೂರೂ ಪಕ್ಷಗಳ ಸರಕಾರಗಳಲ್ಲೂ ಭ್ರಷ್ಟಾಚಾರ ಇತ್ತು. ಹಿಂದೆಯೂ ಇತ್ತು. ಈಗಲೂ ಇದೆ. ಮುಂದೆಯೂ ಇರುತ್ತದೆ. ಭ್ರಷ್ಟಾಚಾರವು ಸರಕಾರದಿಂದ ಸರಕಾರಕ್ಕೆ ಬೆಳೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಂಪಣ್ಣ ವಿರುದ್ಧದ ಮಾನನಷ್ಟ ಮೊಕದ್ದಮೆ ಹಿಂದೆಗೆದುಕೊಳ್ಳಲ್ಲ
ಬೆಂಗಳೂರು: ಯಾರು ಎಲ್ಲಿ ಬೇಕಾದರೂ ದೂರು ನೀಡಬಹುದು. ಯಾವ ದಾಖಲೆಯನ್ನು ಬೇಕಾದರೂ ಪಡೆಯಬಹುದು. ಆದರೆ ನಾನು ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ವಿರುದ್ಧ ಹೂಡಿರುವ ಮಾನನಷ್ಟ ಮೊಕದ್ದಮೆಯನ್ನು ಯಾವ ಕಾರಣಕ್ಕೂ ಹಿಂದೆಗೆದುಕೊಳ್ಳುವುದಿಲ್ಲ ಎಂದು ತೋಟಗಾರಿಕೆ ಮತ್ತು ಯೋಜನಾ ಸಚಿವ ಮುನಿರತ್ನ ಸ್ಪಷ್ಟಪಡಿಸಿದ್ದಾರೆ.
ಕೆಂಪಣ್ಣ ಲೋಕಾಯುಕ್ತದಿಂದ ತಮ್ಮ ಆಸ್ತಿ ವಿವರವನ್ನು ಪಡೆದಿರುವುದಾಗಿ ಹೇಳಿರುವುದನ್ನು ಸುದ್ದಿಗಾರರು ಸಚಿವರ ಗಮನಕ್ಕೆ ತಂದ ಸಂದರ್ಭದಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಏನಾದರೂ ನ್ಯೂನತೆಗಳು ಕಂಡು ಬಂದಿದ್ದರೆ ಅದನ್ನು ಪ್ರಶ್ನಿಸುವ ಅಧಿಕಾರ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಇದೆ. ನನ್ನ ಮೇಲಿನ ಆರೋಪಗಳಿಗೆ ನಾನು ಕಾನೂನಿನ ಚೌಕಟ್ಟಿನಲ್ಲೇ ಪ್ರತಿಕ್ರಿಯಿಸುತ್ತೇನೆ ಎಂದು ಸಚಿವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.