ಅಮೆರಿಕದ ಚುನಾವಣೆಯಲ್ಲಿ ಭಾರತೀಯರ ಓಲೈಕೆ
Team Udayavani, Aug 20, 2020, 12:05 PM IST
ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಿಂದಿನ ಎಲ್ಲಾ ಚುನಾವಣೆಗಳಿಗಿಂತ ಹೆಚ್ಚು ಕುತೂಹಲ ಸೃಷ್ಟಿಸಿದೆ. ಅದಕ್ಕೆ ಕಾರಣ, ಈ ಬಾರಿಯ ಚುನಾವಣೆಯಲ್ಲಿ ಭಾರತ ಮೂಲದ ಅಮೆರಿಕನ್ನರು ಪ್ರಮುಖ ಪಾತ್ರ ವಹಿಸಿರುವುದು. ಇದನ್ನು ಮನಗಂಡೇ, ಹಾಲಿ ಅಧ್ಯಕ್ಷ, ರಿಪಬ್ಲಿಕನ್ ನಾಯಕ ಟ್ರಂಪ್ ಅವರು ಕಳೆದ ವರ್ಷ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆಯಿಸಿ, ಹೂಸ್ಟನ್‌ನಲ್ಲಿ ಹೌಡಿ ಮೋದಿ ಕಾರ್ಯಕ್ರಮ ನಡೆಸಿ, ಭಾರತೀಯ ಸಮುದಾಯವನ್ನು ಸೆಳೆಯುವ ಪ್ರಯತ್ನ ಮಾಡಿದ್ದರು. ಈಗ, ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡೆನ್ ಕ್ಯಾಲಿಫೋರ್ನಿಯಾ ಸಂಸದೆ ಕಮಲಾ ಹ್ಯಾರಿಸ್‌ರನ್ನು ಉಪಾಧ್ಯಕ್ಷ ಅಭ್ಯರ್ಥಿಯಾಗಿಸಿ ಭಾರತೀಯರ, ಕಪ್ಪು ವರ್ಣೀಯರ ಓಲೈಕೆಗೆ ಕೈ ಹಾಕಿದ್ದಾರೆ. ಭಾರತದೊಡನೆ ನಮ್ಮ ಸಂಬಂಧ ಮಧುರವಾಗಿರುತ್ತದೆ ಎಂದು ಹೇಳಿರುವ ಬೈಡೆನ್, ಈ ಚುನಾವಣೆಯಲ್ಲಿ ಭಾರತೀಯ ಮೂಲದವರನ್ನು ಕಡೆಗಣಿಸಲಾಗದು ಎಂಬ ಸುಳಿವು ನೀಡಿದ್ದಾರೆ.
ಭಾರತೀಯರ ಸಾಮಾಜಿಕ- ಆರ್ಥಿಕ ಪರಿಸ್ಥಿತಿ ಹೇಗಿದೆ?
ಪತ್ರಿಕೋದ್ಯಮದ ನೊಬೆಲ್ ಎಂದೇ ಪರಿಗಣಿಸಲ್ಪಡುವ ಪುಲಿಟ್ಜರ್ ಪ್ರಶಸ್ತಿಯನ್ನು ಮೂರು ಬಾರಿ ಪಡೆದಿರುವ ಅಮೆರಿಕದ ಪತ್ರಕರ್ತ ಥಾಮಸ್ ಫ್ರೀಡ್ ಮನ್ ತಮ್ಮ “ದ ವರ್ಲ್ಡ್ ಈಸ್ ಫ್ಲಾಟ್’ ಎಂಬ ಪುಸ್ತಕದಲ್ಲಿ ಬೌದ್ಧಿಕ ವಲಸೆಯ ಪರಿಣಾಮವಾಗಿ, ಅಮೆರಿಕಕ್ಕೆ ಹೆಚ್ಚು ಲಾಭವಾಗಿದೆ ಎನ್ನುತ್ತಾರೆ. ಇಂಥ ವಲಸೆಯಿಂದ ಭಾರತೀಯರು ಆರ್ಥಿಕವಾಗಿ ಸಬಲರಾಗಿದ್ದರೆ, ಇನ್ನೊಂದೆಡೆ ಅಮೆರಿಕಕ್ಕೆ ಅತ್ಯುತ್ತಮ ಶ್ರಮಿಕ ವರ್ಗ ಸಿಕ್ಕಿದೆ. ಸಂಶೋಧನೆ, ವೈದ್ಯಕೀಯ, ತಂತ್ರಜ್ಞಾನ, ಮ್ಯಾನೇಜ್‌ಮೆಂಟ್, ವೃತ್ತಿಪರ, ಉತ್ಪಾದನೆ, ಸೇಲ್ಸ್… ಹೀಗೆ ಇನ್ನೂ ಹತ್ತು ಹಲವು ಕ್ಷೇತ್ರಗಳಲ್ಲಿ ಅಮೆರಿಕ ಮುನ್ನಡೆ ಕಾಣಲು ಸಹಾಯವಾಗಿದೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಭಾರತೀಯರೇ ಮಂಚೂಣಿಯಲ್ಲಿದ್ದಾರೆ. ಭಾರತದ ಉತ್ಕೃಷ್ಟ ಪ್ರತಿಭಾನ್ವಿತರಿಗೆ ಅಮೆರಿಕ, ಎರಡನೇ ಮನೆಯಂತಾಗಿರುವುದು ಸುಳ್ಳಲ್ಲ ಎನ್ನುತ್ತಾರೆ. ಒಂದು ಸಮೀಕ್ಷೆಯ ಪ್ರಕಾರ, ಅಮೆರಿಕದಲ್ಲಿರುವ ಭಾರತೀಯರ ಒಟ್ಟು ವಾರ್ಷಿಕ ಆದಾಯ ಸರಾಸರಿ 80 ಲಕ್ಷ ರೂ. ಆಗಿದೆ! ಇದು ಅಮೆರಿಕನ್ನರು ಗಳಿಸುತ್ತಿರುವ ವಾರ್ಷಿಕ ಆದಾಯಕ್ಕಿಂತ ದುಪ್ಪಟ್ಟು
2ನೇ ಅತಿ ದೊಡ್ಡ ವಲಸಿಗರು ಭಾರತೀಯರು!
ಪ್ರತಿ ವರ್ಷ ಅಮೆರಿಕಕ್ಕೆ ಸುಮಾರು 8 ಲಕ್ಷ ಜನರು ವಲಸೆ ಬರುತ್ತಾರೆ. ಇವರಲ್ಲಿ ಅತಿ ಹೆಚ್ಚಿನವರು ಮೆಕ್ಸಿಕನ್ನರು. ಭಾರತೀಯರು ಎರಡನೇ ಸ್ಥಾನದಲ್ಲಿದ್ದಾರೆ. ಕೇವಲ ಉದ್ಯೋಗಾಕಾಂಕ್ಷಿಯಾಗಿ ಅಲ್ಲದೇ, ಶಿಕ್ಷಣ ಪಡೆಯಲು ಸಹ ಅಪಾರ ಸಂಖ್ಯೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ಅಮೆರಿಕಕ್ಕೆ ವಲಸೆ ಹೋಗುವುದುಂಟು. ಅಮೆರಿಕದಲ್ಲಿರುವ ಭಾರತೀಯರ ಒಟ್ಟು ಸಂಖ್ಯೆ 38 ಲಕ್ಷ
ದಾಟಿದೆ. ಅಮೆರಿಕದ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಇವರ ಸಂಖ್ಯೆ ಅಂದಾಜು ಶೇ.1.2ರಷ್ಟು.
ಹ್ಯಾರಿಸ್‌ಗೆ ದಕ್ಷಿಣ ಏಷ್ಯಾದ ಜನರೂ ಬೆಂಬಲ ಸಿಗಬಹುದೇ?
ಕಮಲಾ ಹ್ಯಾರಿಸ್ ಅವರ ಆಯ್ಕೆ ಕ್ಯಾಲಿಫೋರ್ನಿಯಾ, ಇಲಿನೋಯಿಸ್, ಟೆಕ್ಸಾಸ್, ನ್ಯೂಯಾರ್ಕ್, ಶಿಕಾಗೋ, ವಾಷಿಂಗ್ಟನ್ ಡಿಸಿ, ಹ್ಯೂಸ್ಟನ್, ಡಲ್ಲಾಸ್-ಫೋರ್ಟ್‌ವರ್ತ್, ಲಾಸ್ ಏಂಜಲೀಸ್, ಸ್ಯಾನ್ ಫ್ರಾನ್ಸಿಸ್ಕೋ, ನೆವಾಡಾ, ಅರಿಝೋನಾ, ಪೆನ್ಸಿಲ್ವೇನಿಯಾ, ವರ್ಜೀನಿಯಾ, ನಾರ್ತ್ ಕ್ಯಾಲಿಫೋರ್ನಿಯಾ, ಫ್ಲೋರಿಡಾದಲ್ಲಿರುವ ದಕ್ಷಿಣ ಏಷ್ಯಾದ ರಾಷ್ಟ್ರಗಳ ಪ್ರಜೆಗಳ ಮೇಲೂ ಪ್ರಭಾವ ಬೀರಬಹುದು. ದಕ್ಷಿಣ ಏಷ್ಯಾದ ಮಾಲ್ಡೀವ್ಸ್, ನೇಪಾಳ, ಶ್ರೀಲಂಕಾದಿಂದಲೂ ಒಂದಿಷ್ಟು ಜನರು ಅಮೆರಿಕಕ್ಕೆ ವಲಸೆ ಹೋಗಿದ್ದು, ಅಲ್ಲಿ ತಮ್ಮದೇ ಆದ ಹೆಗ್ಗುರುತನ್ನು ಸ್ಥಾಪಿಸಿದ್ದಾರೆ. ಅವರ ಸಂಖ್ಯೆ ಕಡಿಮೆಯಾದರೂ, ಚುನಾವಣೆ ದೃಷ್ಟಿಯಿಂದ ನೋಡುವುದಾದರೆ, ಕಮಲಾ ಹ್ಯಾರಿಸ್ ಅವರ ಆಯ್ಕೆ ಅಮೆರಿಕದಲ್ಲಿರುವ ದಕ್ಷಿಣ ಏಷ್ಯಾದ ಸಮುದಾಯಕ್ಕೆ ಸರ್ಕಾರದ ಮಟ್ಟದಲ್ಲಿ ತಮ್ಮ ಧ್ವನಿಯೊಂದನ್ನು ಮೊಳಗಿಸಲು ಸಿಕ್ಕಿರುವ ಆಶಾಕಿರಣ ಎಂಬಂಥ ಭಾವನೆ ಉದಯಿಸಿದೆ.
ರಾಜಕೀಯದಲ್ಲಿ ಭಾರತೀಯರ ಪ್ರಭಾವ
ತಮ್ಮ ವಿದ್ಯೆಯಿಂದ, ತಮ್ಮ ಔದ್ಯೋಗಿಕ ಕೌಶಲ್ಯದಿಂದ ಪ್ರತಿಷ್ಠಿತ ಸ್ಥಾನಮಾನಗಳಿಗೆ ಏರಿರುವ ಭಾರತೀಯರು, ರಾಜಕೀಯದಲ್ಲೂ ತಮ್ಮ ಛಾಪು ಮೂಡಿಸಲಾರಂಭಿಸಿದ್ದಾರೆ. ಅವರಲ್ಲಿ, ಕಮಲಾ ಹ್ಯಾರಿಸ್, ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿಯಾಗಿದ್ದ ನಿಕ್ಕಿ ಹ್ಯಾಲೆ, ಲೂಸಿಯಾನಾದ ಮಾಜಿ ಗವರ್ನರ್ ಬಾಬ್ಬಿ ಜಿಂದಾಲ್, ನ್ಯೂಯಾರ್ಕ್‌ನ ವಕೀಲರಾದ ಪ್ರೀತ್ ಭರಾರಾ ಪ್ರಮುಖರು. ಇದಲ್ಲದೆ, ಅಮೆರಿಕದಲ್ಲಿರುವ ಭಾರತೀಯ ಸಮೂಹ ರಾಷ್ಟ್ರಮಟ್ಟದಲ್ಲಿ ಹಲವಾರು
ಅಭಿಯಾನಗಳನ್ನು, ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪರೋಕ್ಷವಾಗಿ ತನ್ನ ಸಮೂಹ ಬಲವನ್ನು ಅಮೆರಿಕದ ರಾಜಕೀಯ ವಲಯಕ್ಕೆ ತೋರಿಸಿಕೊಟ್ಟಿದೆ.
ಚುನಾವಣೆಗಳಲ್ಲಿ ಭಾರತೀಯರ ಪ್ರಾಮುಖ್ಯತೆ
2016ರಲ್ಲಿ ನಡೆದಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲ್ಲಲು, ಭಾರತೀಯ ಮೂಲ ದ ವರ ಪಾತ್ರವೂ ಬಹು ದೊಡ್ಡದಿದೆ. ಅಲ್ಲಿನ ಬಲಪಂಥೀಯ ಹಿಂದೂಗಳು ದೊಡ್ಡ ಮಟ್ಟದಲ್ಲಿ ಟ್ರಂಪ್ ಅವರನ್ನು ಬೆಂಬಲಿಸಿದ್ದರು . ಈ ಬಾರಿಯೂ ಅದೇ ಭಾರತೀಯ ಸಮೂಹವೇ ಟ್ರಂಪ್ ಕೈ ಹಿಡಿಯಲಿದೆ ಎಂದು ಟ್ರಂಪ್ ಅವರ ಪುತ್ರ ಜೂನಿಯರ್ ಟ್ರಂಪ್ ಅವರು ಇತ್ತೀಚೆಗೆ ಹೇಳಿದ್ದನ್ನೂ ಇಲ್ಲಿ ಉಲ್ಲೇಖೀಸಲೇಬೇಕು. ಅಲ್ಲಿಗೆ, ಈ ಬಾರಿಯ ಚುನಾವಣೆಯಲ್ಲಿ ಭಾರತೀಯ ಸಮುದಾಯವೂ ಮಹತ್ವದ ಪಾತ್ರನಿರ್ವಹಿಸಲಿದೆ.
ಎಚ್1ಬಿ ವೀಸಾ, ಪೌರತ್ವ
ಅಮೆರಿಕದಲ್ಲಿ ಕೆಲಸ ಮಾಡಲು ತಾತ್ಕಾಲಿಕ ಅವಕಾಶ ಕಲ್ಪಿಸುವ ಎಚ್1ಬಿ ವೀಸಾವನ್ನು ಬಿಗಿಗೊಳಿಸುವ ಮೂಲಕ ಟ್ರಂಪ್ ಸರ್ಕಾರ, ಆತಂಕ ಸೃಷ್ಟಿಸಿದೆ. ಅದರ ಜೊತೆಗೆ ಹೊರಗಿನವರಿಗೆ, ವಾರ್ಷಿಕವಾಗಿ ಅಮೆರಿಕ ಪೌರತ್ವ ನೀಡುವಿಕೆಗೂ ಮಿತಿ ಹೇರಲಾಗಿದೆ. ಟ್ರಂಪ್ ಸರ್ಕಾರದ ಹೊಸ ನಿಯಮಗಳಿಂದಾಗಿ ವರ್ಷಗಳಿಂದ ಅಲ್ಲಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದ ಅನೇಕ ಭಾರತೀಯರಿಗೆ ಪೌರತ್ವ ಸಿಗುವ ಅನುಮಾನ ಒಂದೆಡೆಯಾಗಿದ್ದರೆ, ಅವರಲ್ಲಿ ಹಲವಾರು ಉದ್ಯೋಗಿಗಳು ಭಾರತಕ್ಕೆ
ಹಿಂದಿರುವ ಸಾಧ್ಯತೆ ದಟ್ಟವಾಗಿವೆ. ಪೌರತ್ವದ ನಿರೀಕ್ಷೆಯಲ್ಲಿರುವವರ, ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿರುವವರ ಪರವಾಗಿ ಕಮಲಾ ಮಾತನಾಡಲಿದ್ದಾರಾ ನೋಡಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.