ವಿಧಾನ-ಕದನ 2023: ರಾಯಚೂರು ಜಿಲ್ಲೆಯಲ್ಲಿ ಕುಂತರೂ ನಿಂತರೂ ರಾಜಕೀಯದ್ದೇ ಧ್ಯಾನ
Team Udayavani, Apr 29, 2023, 7:27 AM IST
ಚುನಾವಣೆಗೆ ದಿನಗಣನೆ ಶುರುವಾಗುತ್ತಿದ್ದಂತೆ ಎಲ್ಲೆಲ್ಲೂ ರಾಜಕೀಯದ್ದೇ ಮಾತಾಗಿದೆ. ಅಭ್ಯರ್ಥಿಗಳು ಮತದಾರರ ನಾಡಿಮಿಡಿತ ಅರಿಯುವಲ್ಲಿ ಬ್ಯುಸಿಯಾಗಿದ್ದರೆ, ಮತದಾರ ಯಾರನ್ನು ಆಯ್ಕೆ ಮಾಡಬೇಕೆಂಬ ಲೆಕ್ಕಾಚಾರದಲ್ಲಿದ್ದಾನೆ. ಜಿಲ್ಲೆಯ ಏಳು ಕ್ಷೇತ್ರಗಳಲ್ಲೂ ಈ ಬಾರಿ ಪ್ರಬಲ ಪೈಪೋಟಿ ಕಂಡು ಬರುತ್ತಿದೆ. ಯಾವ ಪಕ್ಷಗಳಿಗೂ ಸುಲಭಕ್ಕೆ ಗೆಲುವು ಸಿಗಲಿದೆ ಎನ್ನುವ ವಾತಾವರಣ ಕಂಡು ಬರುತ್ತಿಲ್ಲ. ಕೆಲವೆಡೆ ವ್ಯಕ್ತಿ ಪ್ರಾಬಲ್ಯ, ಕೆಲವೆಡೆ ಪಕ್ಷ ಪ್ರಾಬಲ್ಯವಾದರೆ, ಒಂದೆರಡು ಕಡೆ ಅನುಕಂಪದ ಅಲೆ ಕೆಲಸ ಮಾಡುವ ಸಾಧ್ಯತೆಗಳಿವೆ. ಇನ್ನೂ ಕೆಲವೆಡೆ ಮತದಾರ ಕೂಡ ಬದಲಾವಣೆ ಬಯಸುತ್ತಿದ್ದು, ಹಾಲಿ ಶಾಸಕರಿಗೂ ಢವಢವ ಶುರುವಾಗಿದೆ.
ರಾಯಚೂರು ನಗರ
ಸಾಮಾನ್ಯ ವರ್ಗಕ್ಕೆ ಮೀಸಲಾದ ಈ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಡಾ|ಶಿವರಾಜ್ ಪಾಟೀಲ್ ಹ್ಯಾಟ್ರಿಕ್ ಗೆಲುವಿನ ತವಕದಲ್ಲಿದ್ದಾರೆ. ಇತ್ತ ಅಲ್ಪಸಂಖ್ಯಾತರ ಒಗ್ಗಟ್ಟಿನ ಮಂತ್ರವೇ ಕಾಂಗ್ರೆಸ್ ಗೆಲುವಿನ ಅಸ್ತ್ರವಾಗಿದೆ. ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಮಣೆ ಹಾಕಿದ್ದರೂ ಅಭ್ಯರ್ಥಿ ಮಹ್ಮದ್ ಶಾಲಂ ಸಮರ್ಥರಲ್ಲ ಎಂಬ ಬಗ್ಗೆ ಪಕ್ಷದೊಳಗೆ ಬೇಸರವಿದೆ. ಜೆಡಿಎಸ್ ನಗರಸಭೆ ಮಾಜಿ ಅಧ್ಯಕ್ಷ ಈ.ವಿನಯಕುಮಾರ್ ಅವರನ್ನು ಕಣಕ್ಕಿಳಿಸಿದೆ. ಕಣದಲ್ಲಿ ಒಟ್ಟು 18 ಅಭ್ಯರ್ಥಿಗಳಿದ್ದು, ತೀವ್ರತರ ಪೈಪೋಟಿ ನೀಡುವವರಿಲ್ಲ. ಇದರಿಂದ ಬಿಜೆಪಿ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಮುಸ್ಲಿಮರು, ದಲಿತರು, ಲಿಂಗಾಯತರ ಪ್ರಾಬಲ್ಯವಿದೆ. ಮುಸ್ಲಿಂ ಸಮುದಾಯದ ಮತಗಳು ನಿರ್ಣಾಯಕವಾಗಿದ್ದು, ಕಾಂಗ್ರೆಸ್‌ಗೆ ಇದು ಪೂರಕವಾಗಿದೆ. ಜೆಡಿಎಸ್, ಬಿಜೆಪಿ ಕ್ರಮವಾಗಿ ಗೆದ್ದಿದ್ದು, ಈ ಬಾರಿ ಕಾಂಗ್ರೆಸ್ ಗೆಲುವಿನ ನಿರೀಕ್ಷೆಯಲ್ಲಿದೆ.
ರಾಯಚೂರು ಗ್ರಾಮೀಣ
ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ದದ್ದಲ್ ಬಸನಗೌಡ ಎರಡನೇ ಬಾರಿ ಗೆಲುವಿನ ನಿರೀಕ್ಷೆಯಲ್ಲಿದ್ದರೆ, ಮಾಜಿ ಶಾಸಕ ತಿಪ್ಪರಾಜ್ ಹವಲ್ದಾರ್ ಮತ್ತೂಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಜೆಡಿಎಸ್ ಜಿಪಂ ಮಾಜಿ ಸದಸ್ಯ ಸಣ್ಣ ನರಸಿಂಹ ನಾಯಕರನ್ನು ಕಣಕ್ಕಿಳಿಸಿದ್ದು, ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಕಡಿಮೆ ಇದೆ. ಕಾಂಗ್ರೆಸ್ ಬಿಜೆಪಿ ನಡುವೆ ನೇರ ಸ್ಪರ್ಧೆಯಿದೆ. ಕ್ಷೇತ್ರದಲ್ಲಿ ಎಂಟು ಅಭ್ಯರ್ಥಿಗಳು ಕಣದಲ್ಲಿದ್ದು, ಉಳಿದವರು ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಕಡಿಮೆ. ಪರಿಶಿಷ್ಟ ಸಮಾಜ ಮತ್ತು ಕುರುಬ ಸಮಾಜದ ಮತಗಳು ಹೆಚ್ಚಾಗಿದ್ದು, ಲಿಂಗಾಯತ, ಅಲ್ಪಸಂಖ್ಯಾತರ ಪ್ರಾಬಲ್ಯವೂ ಇದೆ. ಈ ಕ್ಷೇತ್ರದಲ್ಲಿ ಕಳೆದ 4 ದಶಕಗಳಿಂದ ಸತತ 2ನೇ ಗೆಲುವು ಯಾರಿಗೂ ಸಿಕ್ಕಿಲ್ಲ. ಇತಿಹಾಸ ಮುಂದುವರಿದರೆ ಬಿಜೆಪಿಗೆ ಗೆಲುವು ಖಚಿತ. ಇಲ್ಲ ಕಾಂಗ್ರೆಸ್ ಗೆದ್ದು ಇತಿಹಾಸ ಮುರಿಯಬೇಕಿದೆ.
ಮಾನ್ವಿ (ಎಸ್‌ಟಿ ಮೀಸಲು)
ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಮತ್ತೂಂದು ಗೆಲುವಿನ ತವಕದಲ್ಲಿದ್ದರೆ, ಮಾಜಿ ಸಂಸದ ಹಂಪಯ್ಯ ನಾಯಕ ಕಾಂಗ್ರೆಸ್‌ನಿಂದ, ಮಾಜಿ ಸಂಸದ ಬಿ.ವಿ.ನಾಯಕ ಬಿಜೆಪಿಯಿಂದ ಕಣಕ್ಕಿಳಿದು ಪೈಪೋಟಿ ನೀಡಿದ್ದಾರೆ. ಬಿಜೆಪಿ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿರುವುದು ಕ್ಷೇತ್ರದ ಚಿತ್ರಣವನ್ನೇ ಬದಲಿಸಿದೆ. ಇಲ್ಲಿಯೂ ಪರಿಶಿಷ್ಟ ಜಾತಿ, ಕುರುಬ, ಲಿಂಗಾಯತ, ಅಲ್ಪಸಂಖ್ಯಾತರ ಪ್ರಾಬಲ್ಯವಿದೆ. ಆಂಧ್ರ ರೆಡ್ಡಿಗಳು ನಿರ್ಣಾಯಕ ಮತಗಳಾಗಿವೆ. ಕಣದಲ್ಲಿ ಏಳು ಅಭ್ಯರ್ಥಿಗಳಿದ್ದು, ಪೈಪೋಟಿ ನೀಡುವ ಸಾಧ್ಯತೆ ಕಡಿಮೆ. ಬಿಜೆಪಿ ಒಮ್ಮೆಯೂ ಖಾತೆ ತೆಗೆದಿಲ್ಲ. ಈ ಬಾರಿ ಇತಿಹಾಸ ಬರೆಯಲಿದೆಯೇ ನೋಡಬೇಕಿದೆ. ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಗೆಲುವು ಯಾರಿಗೂ ಸುಲಭವಾಗಿಲ್ಲ. ಪಕ್ಷೇತರವಾಗಿ ಸ್ಪರ್ಧಿಸಿರುವ ಡಾ|ಪ್ರೀತಿ ಮೇತ್ರೆ ಕಣದಿಂದ ಹಿಂದೆ ಸರಿಯುವ ಸಾಧ್ಯತೆಗಳಿದ್ದು, ಕಾಂಗ್ರೆಸ್ ಬಂಡಾಯ ಶಮನವಾಗಲಿದೆ. ಆದರೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ ಬಿಜೆಪಿ ಅಭ್ಯರ್ಥಿ ಆಗಿರುವುದು ಕೈ ಪಡೆಗೆ ಸಂಕಷ್ಟ ತಂದೊಡ್ಡಿದೆ.
ಮಸ್ಕಿ (ಎಸ್‌ಟಿ ಮೀಸಲು)
ಈ ಕ್ಷೇತ್ರವೂ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಕಳೆದ ಉಪಚುನಾವಣೆಯಲ್ಲಿ ಹೀನಾಯ ಸೋಲುಂಡಿದ್ದ ಪ್ರತಾಪಗೌಡ ಪಾಟೀಲ್ ಮತ್ತೂಮ್ಮೆ ಬಿಜೆಪಿಯಿಂದ ಕಣದಲ್ಲಿದ್ದಾರೆ. ಆದರೆ, ವರ್ಷದೊಳಗೆ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಂಡಿದ್ದು, ಜನರಲ್ಲಿ ಅವರ ಬಗ್ಗೆ ಮೃದುಧೋರಣೆ ಮೂಡಿದೆ. ಅನುಕಂಪದ ಅಲೆಯಿಂದ ಗೆದ್ದು ಬಂದಿದ್ದ ಕಾಂಗ್ರೆಸ್ ಶಾಸಕ ಬಸನಗೌಡ ತುರ್ವಿಹಾಳ ಕೂಡ ಪೂರ್ಣಾವಧಿ ಶಾಸಕನಾಗಲು ಕಣಕ್ಕಿಳಿದಿದ್ದಾರೆ. ಆದರೆ, ಹಿಂದಿದ್ದ ಅನುಕಂಪದ ಅಲೆ ಕುಗ್ಗಿದ್ದು, ಈ ಬಾರಿ ಸ್ವಂತ ಬಲದ ಮೇಲೆ ಗೆಲ್ಲಬೇಕಿದೆ. ಕಾಂಗ್ರೆಸ್, ಬಿಜೆಪಿ ನಡುವೆ ಮತ್ತೂಮ್ಮೆ ಹಣಾಹಣಿಯಿದೆ. ಜೆಡಿಎಸ್ ಅಭ್ಯರ್ಥಿ ರಾಘವೇಂದ್ರ ನಾಯಕ ಹೆಚ್ಚೇನೂ ಪರಿಣಾಮ ಬೀರುವ ಸಾಧ್ಯತೆ ಇಲ್ಲ. ಉಳಿದ ನಾಲ್ಕು ಅಭ್ಯರ್ಥಿಗಳು ಕೂಡ ಪ್ರಭಾವ ಬೀರುವ ಸಾಧ್ಯತೆ ಕಡಿಮೆ. ಇಲ್ಲಿಯೂ ಪರಿಶಿಷ್ಟ ಪಂಗಡ, ಕುರುಬ ಮತ್ತು ಲಿಂಗಾಯತ ಸಮಾಜದ ಪ್ರಾಬಲ್ಯವಿದೆ. ಲಿಂಗಾಯತ ಮತಗಳು ನಿರ್ಣಾಯಕವಾಗಿದೆ..
ಸಿಂಧನೂರು
ಈ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ವೆಂಕಟರಾವ್ ನಾಡಗೌಡ ಜೆಡಿಎಸ್‌ನಿಂದ ಮತ್ತೂಮ್ಮೆ ಕಣಕ್ಕಿಳಿದರೆ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಒಂದು ಬಾರಿಯೂ ಗೆಲುವು ಸಾಧಿ ಸದ ಬಿಜೆಪಿ ಈ ಬಾರಿ ಗೆಲುವಿನ ಗುರಿ ಮುಟ್ಟಲು ಹವಣಿಸುತ್ತಿದೆ. ಹಿಂದೆ ಬಿಎಸ್ಸಾರ್ ಪಕ್ಷದಿಂದ ಸ್ಪರ್ಧಿಸಿ ಎರಡನೇ ಸ್ಥಾನದಲ್ಲಿದ್ದ ಕೆ.ಕರಿಯಪ್ಪಗೆ ಬಿಜೆಪಿ ಮಣೆ ಹಾಕಿದೆ. ಕುರುಬ ಸಮಾಜದ ಒಲವು ಗಿಟ್ಟಿಸುವಲ್ಲಿ ಈ ತಂತ್ರ ಯಶಸ್ವಿಯಾಗುವ ನಿರೀಕ್ಷೆಯಿದೆ. ಜೆಡಿಎಸ್, ಕಾಂಗ್ರೆಸ್ ಲಿಂಗಾಯತ ಮತಗಳ ವಿಭಜನೆ ಮಾಡುವ ನಿರೀಕ್ಷೆಯಿದ್ದು, ಬಿಜೆಪಿಗೆ ಲಾಭವಾಗಬಹುದು. ಇನ್ನು ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಾಕಿದ್ದು, ಸದ್ಯಕ್ಕೆ ಶಮನಗೊಂಡಿದೆ. ಆದರೆ, ಚುನಾವಣೆಯಲ್ಲಿ ಅದು ಇನ್ಯಾವ ರೀತಿ ಪರಿಣಾಮ ಬೀರುವುದೋ ನೋಡಬೇಕಿದೆ. ಕೆಆರ್‌ಪಿ ಪಕ್ಷದ ಅಭ್ಯರ್ಥಿ ಮಲ್ಲಿಕಾರ್ಜುನ ನೆಕ್ಕಂಟಿ ಕಣದಲ್ಲಿದ್ದು, ಸೋಲು ಗೆಲುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಲಿಂಗಾಯತ, ಕುರುಬ ಸಮಾಜದ ಪ್ರಾಬಲ್ಯವಿದೆ. ಆಂಧ್ರ, ಬಂಗಾಳಿ ವಲಸಿಗರ ಮತಗಳು 25 ಸಾವಿರಕ್ಕಿಂತ ಹೆಚ್ಚಾಗಿದ್ದು, ನಿರ್ಣಾಯಕ ಪಾತ್ರ ವಹಿಸುತ್ತವೆ. ಕಾಂಗ್ರೆಸ್, ಜೆಡಿಎಸ್ ನಾಲ್ಕು ಅವ ಧಿಯಲ್ಲಿ ತಲಾ ಎರಡು ಬಾರಿ ಗೆದ್ದಿವೆ. ಸಂಪ್ರದಾಯ ಮುಂದುವರಿಯುವುದೇ? ಬಿಜೆಪಿ ಗೆದ್ದು ಇತಿಹಾಸ ನಿರ್ಮಿಸುವುದೇ ನೋಡಬೇಕು.
ಲಿಂಗಸುಗೂರು
ಈ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಕಳೆದ ಬಾರಿಯಂತೆ ಕಾಂಗ್ರೆಸ್‌ನಿಂದ ಡಿ.ಎಸ್.ಹೂಲಗೇರಿ, ಬಿಜೆಪಿಯಿಂದ ಮಾನಪ್ಪ ವಜ್ಜಲ್ ಕಣದಲ್ಲಿದ್ದಾರೆ. ಜೆಡಿಎಸ್‌ನಿಂದ ಸಿದ್ದು ಬಂಡಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಈ ಬಾರಿ ಸೋಲಿನ ಅನುಕಂಪ ಕೈ ಹಿಡಿಯುವ ವಿಶ್ವಾಸದಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ 2ನೇ ಬಾರಿಗೆ, ಬಿಜೆಪಿ ಅಭ್ಯರ್ಥಿ 3ನೇ ಬಾರಿ ಆಯ್ಕೆ ಬಯಸಿದರೆ, ಜೆಡಿಎಸ್ ಅಭ್ಯರ್ಥಿ ಎರಡು ಸೋಲುಗಳನ್ನು ಮೆಟ್ಟಿ ಮೂರನೇ ಬಾರಿ ಗೆಲುವಿಗಾಗಿ ಯತ್ನಿಸುತ್ತಿದ್ದಾರೆ. ಯಾವುದೇ ಪಕ್ಷಗಳು ಮಾದಿಗ ಸಮಾಜದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿಲ್ಲ ಎಂಬ ಅಸಮಾಧಾನ ಪರಿಶಿಷ್ಟ ಜಾತಿ ಜನರಲ್ಲಿದೆ. ಈ ಸಮಾಜದ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದು ಎಲ್ಲ ಪಕ್ಷಗಳು ನಿಲುವು ಒಂದೆಯಾಗಿರುವುದರಿಂದ ಯಾರಿಗೆ ಬೆಂಬಲ ಸಿಗುವುದೋ ನೋಡಬೇಕು. ಕಾಂಗ್ರೆಸ್‌ಗೆ ಬಂಡಾಯದ ಭೀತಿಯಿದೆ. ಟಿಕೆಟ್ ಆಕಾಂಕ್ಷಿ ಆರ್.ರುದ್ರಯ್ಯ ಬಂಡಾಯ ಸಾರಿ ಕೆಆರ್‌ಪಿ ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಲಿಂಗಾಯತ ಮತಗಳು ನಿರ್ಣಾಯಕವಾಗಿದ್ದು, ಅಮರೇಗೌಡ ಬಯ್ನಾಪುರ ಪ್ರಭಾವ ಬೀರುವ ಸಾಧ್ಯತೆಗಳಿವೆ.
ದೇವದುರ್ಗ
ಈ ಕ್ಷೇತ್ರವೂ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಬಿಜೆಪಿಯಿಂದ ಕೆ.ಶಿವನಗೌಡ ನಾಯಕ ಕಣಕ್ಕಿಳಿದರೆ, ಕಾಂಗ್ರೆಸ್‌ನಿಂದ ಅವರ ಸಂಬಂ ಧಿ ಶ್ರೀದೇವಿ ನಾಯಕ ಸ್ಪ ರ್ಧಿಸಿದ್ದಾರೆ. ಸೋಲಿನ ಅನುಕಂಪದ ಅಲೆಯಲ್ಲಿ ತೇಲಿರುವ ಜೆಡಿಎಸ್ ಅಭ್ಯರ್ಥಿ ಕರೆಮ್ಮ ಜಿ. ನಾಯಕ ಈ ಬಾರಿ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಬಿಜೆಪಿ ಜೆಡಿಎಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ಸಾಂಪ್ರದಾಯಿಕ ಮತ ಹೊಂದಿರುವ ಕಾಂಗ್ರೆಸ್ ಕೂಡ ಸೆಣಸಾಟಕ್ಕೆ ಸಿದ್ಧವಾಗಿದೆ. ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಮತಗಳು ಹೆಚ್ಚಾಗಿದ್ದು, ಲಿಂಗಾಯತ ಮತಗಳು ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕರಿಗೆ ವಿರೋ ಧಿ ಅಲೆ ಇದ್ದರೆ, ಜೆಡಿಎಸ್‌ಗೆ ಅನುಕಂಪ ವರವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಶ್ರೀದೇವಿ ನಾಯಕ ಶಿವನಗೌಡ ನಾಯಕರ ಸಂಬಂಧಿ ಯಾಗಿದ್ದು, ಕುಟುಂಬ ರಾಜಕಾರಣದಿಂದ ಮತದಾರ ವಿಮುಖನಾಗುತ್ತಿರುವುದು ಕಂಡು ಬರುತ್ತಿದೆ. ಅರಕೇರಾ ತಾಲೂಕು ರಚನೆ ವಿಷಯ ಗಬ್ಬೂರು, ಜಾಲಹಳ್ಳಿ ಜನರ ಬೇಸರಕ್ಕೆ ಕಾರಣವಾಗಿದ್ದು, ಬಿಜೆಪಿಗೆ ಸವಾಲಾಗಿದೆ. ಜೆಡಿಎಸ್‌ಗೆ ದೇವೆಗೌಡರ ನೀರಾವರಿ ಯೋಜನೆ ಪೂರಕವಾಗಿದೆ.
~ ಸಿದ್ಧಯ್ಯಸ್ವಾಮಿ ಕುಕನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.