ತಲೆಮರೆಸಿಕೊಂಡಿದ್ದ 8 ಆರೋಪಿಗಳ ಬಂಧನ
Team Udayavani, Mar 15, 2023, 6:09 AM IST
ಮಂಗಳೂರು: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಕಾವೂರು ಕುಂಜತ್ತಬೈಲ್ ನಿವಾಸಿ ರಾಜ ಆಲಿಯಾಸ್‌ಜಪಾನ್ ಮಂಗ ಆಲಿಯಾಸ್ ರೋಹನ್ ರೆಡ್ಡಿ (36), ಕಣ್ಣೂರು ಪಡೀಲ್ ನಿವಾಸಿ ಪ್ರಕಾಶ ಶೆಟ್ಟಿ, ಕೃಷ್ಣಾಪುರದ ನಿಸ್ಸಾರ್ ಹುಸೈನ್, ಕಸ್ಬಾ ಬೆಂಗ್ರೆಯ ಕಬೀರ್ ಸಹಿತ 8 ಮಂದಿ ಕುಖ್ಯಾತ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಕೊಲೆ, ದರೋಡೆ ಪ್ರಕರಣದ ಆರೋಪಿ
ರಾಜ ಆಲಿಯಾಸ್ ಜಪಾನ್ ಮಂಗ ಆಲಿಯಾಸ್ ರೋಹನ್ ರೆಡ್ಡಿ (36)ಯನ್ನು ಬೆಂಗಳೂರಿನಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ. ಈತ 2013ರಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬಸ್ ಚಾಲಕ ಪ್ರಸನ್ನ ಕೊಲೆ ಪ್ರಕರಣ, ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣ, ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉದ್ಯಮಿಯೊಬ್ಬರ ಕೊಲೆಗೆ ಯತ್ನಿಸಿದ ಪ್ರಕರಣ, ಕಾರಾಗೃಹದಲ್ಲಿ ನಡೆದ ಹಲ್ಲೆ, ನ್ಯಾಯಾಲಯದ ಆವರಣದಲ್ಲಿ ನಡೆದ ಕೊಲೆಯತ್ನ, ಜೀವಬೆದರಿಕೆ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದ ವಿಚಾರಣೆಯ ಸಮಯ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನ ವಿರುದ್ದ ನ್ಯಾಯಾಲಯ ಎಲ್‌ಪಿಸಿ ವಾರಂಟ್ ಹೊರಡಿಸಲಾಗಿತ್ತು.
ನಕಲಿ ಆಧಾರ್ ಕಾರ್ಡ್ ಪಡೆದಿದ್ದ
ಈತ ಬೆಂಗಳೂರಿನಲ್ಲಿ ತನ್ನ ಹೆಸರನ್ನು ರೋಹನ್ ರೆಡ್ಡಿ ಎಂಬುದಾಗಿ ನಕಲಿ ದಾಖಲೆ ಸೃಷ್ಟಿಸಿ ಹೆಸರು ಮತ್ತು ವಿಳಾಸ ಬದಲಾಯಿಸಿ ಆಧಾರ್ ಕಾರ್ಡ್, ಸಿಮ್ ಕಾರ್ಡ್ ಪಡೆದು ಉಪಯೋಗಿಸುತ್ತಿದ್ದ. ಈತ 2022ರಲ್ಲಿ ಬೆಂಗಳೂರು ನಗರದ ಚಾಮರಾಜಪೇಟೆ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವರಿಗೆ ಹಲ್ಲೆ ನಡೆಸಿದ್ದ. ಅಲ್ಲದೆ ಪೊಲೀಸ್ ಸಿಬಂದಿಗೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ. ಈತನ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಪಿ.ಎ. ಹೆಗ್ಡೆ, ಪೊಲೀಸ್ ಇನ್‌ಸ್ಪೆಕ್ಟರ್ ಶ್ಯಾಮ್ ಸುಂದರ್ ಎಚ್.ಎಂ., ಎಎಸ್‌ಐ ಮೋಹನ್ ಕೆ.ವಿ., ಸಿಸಿಬಿ ಸಿಬಂದಿ ಪಾಲ್ಗೊಂಡಿದ್ದರು.
ಹಲವು ಪ್ರಕರಣಗಳು
ಪ್ರಕಾಶ ಶೆಟ್ಟಿ ಮಂಗಳೂರಿನ ಪಡೀಲ್ ನಿವಾಸಿಯಾಗಿದ್ದು ಈತನ ಮೇಲೆ ಮಂಗಳೂರಿನ ಬರ್ಕೆ, ಕಂಕನಾಡಿ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ಕೃಷ್ಣಾಪುರದ ನಿಸ್ಸಾರ್ ಹುಸೈನ್ ಮೇಲೆ ಬರ್ಕೆ, ಸುರತ್ಕಲ್, ಮೂಲ್ಕಿ ಮತ್ತು ಪುತ್ತೂರು ಹಾಗೂ ಇತರ ಕೆಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಕಬೀರ್ ಆಲಿಯಾಸ್ ಅಬ್ದುಲ್ ಕಬೀರ್ ಆಲಿಯಾಸ್ ಕಬ್ಬಿ (30) ಮಂಗಳೂರು ಕಸಬಾ ಬೆಂಗ್ರೆಯವನಾಗಿದ್ದು ಈತನ ಮೇಲೆ ಪಣಂಬೂರು, ಮಂಗಳೂರು ದಕ್ಷಿಣ ಠಾಣೆ, ಪೂರ್ವ ಠಾಣೆ, ಕಂಕನಾಡಿ, ಬಜಪೆ ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣೆಗಳಲ್ಲಿ 8 ಪ್ರಕರಣಗಳಲ್ಲಿ ಜಾಮೀನು ರಹಿತ ವಾರಂಟ್ ಇತ್ತು. ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ ಅಚ್ಯುತ ಮತ್ತು ರಿಜ್ವಾನ್ ಬಂಧಿಸಲ್ಪಟ್ಟ ಇತರ ಇಬ್ಬರು ಆರೋಪಿಗಳು ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್ ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.