ಹೃದಯಾಘಾತದಿಂದ ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ನಿಧನ
Team Udayavani, Mar 4, 2022, 7:53 PM IST
ಆಸ್ಟ್ರೇಲಿಯಾ :ಮೆಲ್ಬರ್ನ್: ಸರಿಸುಮಾರು ಒಂದೂವರೆ ದಶಕದ ಕಾಲ ವಿಶ್ವದ ಘಟಾನುಘಟಿ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನರಾಗಿ ಗೋಚರಿಸಿದ್ದ ಆಸ್ಟ್ರೇಲಿಯದ ಲೆಜೆಂಡ್ರಿ ಲೆಗ್‌ಸ್ಪಿನ್ನರ್ ಶೇನ್ ವಾರ್ನ್ ದಿಢೀರನೇ ಬದುಕಿನ ಪಯಣ ಮುಗಿಸಿ ಹೊರಟು ಹೋಗಿದ್ದಾರೆ. 52 ವರ್ಷದ ವಾರ್ನ್ ಶುಕ್ರವಾರ ಥಾಯ್ಲೆಂಡ್‌ನಲ್ಲಿ “ಸಂಭಾವ್ಯ ಹೃದಯಾಘಾತ’ದಿಂದ ಸಾವನ್ನಪ್ಪಿದರು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಇದರೊಂದಿಗೆ ಒಂದೇ ದಿನ ಆಸ್ಟ್ರೇಲಿಯ ಇಬ್ಬರು ಖ್ಯಾತನಾಮ ಕ್ರಿಕೆಟಿಗರನ್ನು ಕಳೆದುಕೊಂಡಂತಾಯಿತು. ಬೆಳಗ್ಗೆಯಷ್ಟೇ ಮಾಜಿ ವಿಕೆಟ್ ಕೀಪರ್ ರಾಡ್ನಿ ಮಾರ್ಷ್ ತೀರಿಕೊಂಡಿದ್ದರು. ವಿಪರ್ಯಾಸವೆಂದರೆ, ಮಾರ್ಷ್ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದ ವಾರ್ನ್ ಸಂಜೆ ಸ್ವತಃ ತಾವೇ ಇಹಲೋಕಕ್ಕೆ ಗುಡ್‌ಬೈ ಹೇಳಿದ್ದು!
ಪ್ರಜ್ಞಾಹೀನ ಸ್ಥಿತಿಯಲ್ಲಿ…
ಥಾಯ್ಲೆಂಡ್‌ಗೆ ಆಗಮಿಸಿದ್ದ ಶೇನ್ ವಾರ್ನ್ ಇಲ್ಲಿನ 2ನೇ ಅತೀ ದೊಡ್ಡ ದ್ವೀಪವಾದ “ಕೋಹ್ ಸುಮುಯಿ’ಯ ವಿಲ್ಲಾ ಒಂದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ ಎಂದು ಆಸ್ಟ್ರೇಲಿಯದ “ಫಾಕ್ಸ್ ಸ್ಪೋರ್ಟ್ಸ್ ‘ವರದಿ ಮಾಡಿದೆ. ಉಳಿದಂತೆ ಯಾವುದೇ ವಿಷಯವನ್ನು ಬಹಿರಂಗಪಡಿಸಲಾಗಿಲ್ಲ. ಇವರ ಸಾವು ಅನುಮಾನಾಸ್ಪದವಾಗಿದ್ದು, ಇನ್ನಷ್ಟೇ ಸ್ಪಷ್ಟ ಚಿತ್ರಣ ಲಭಿಸಬೇಕಿದೆ.
ವಾರ್ನ್ ಅವರ ಅಕಾಲಿಕ ಅಗಲಿಕೆಯಿಂದ ಕ್ರಿಕೆಟ್ ಜಗತ್ತು ಆಘಾತಕ್ಕೊಳಗಾಗಿದೆ. ಅವರ ಈ ದಿಢೀರ್ ಸಾವನ್ನು ಯಾರೂ ನಂಬುವ ಸ್ಥಿತಿಯಲ್ಲಿಲ್ಲ.
ಸೆಹವಾಗ್ ಮೊದಲ ಟ್ವೀಟ್
ಶೇನ್ ವಾರ್ನ್ ಅವರ ಸಾವಿನ ಸುದ್ದಿ ಭಾರತೀಯರಿಗೆ ಮೊದಲು ತಿಳಿದದ್ದೇ ವೀರೇಂದ್ರ ಸೆಹವಾಗ್ ಅವರ ಟ್ವೀಟ್ ಮೂಲಕ. ಅಲ್ಲಿಯ ತನಕ ಆಸ್ಟ್ರೇಲಿಯದಿಂದಲೂ ಸುದ್ದಿ ಲಭಿಸಿರಲಿಲ್ಲ.
1,001 ವಿಕೆಟ್‌ಗಳ ಸರದಾರ
1992ರಲ್ಲಿ ಭಾರತದ ವಿರುದ್ಧ ಸಿಡ್ನಿಯಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ್ದ ಶೇನ್ ಕೀತ್ ವಾರ್ನ್, 2007ರಲ್ಲಿ ಸಿಡ್ನಿಯಲ್ಲೇ ಇಂಗ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್ ಆಡಿದ್ದರು. ಈ 15 ವರ್ಷಗಳ 145 ಟೆಸ್ಟ್ ಬಾಳ್ವೆಯಲ್ಲಿ ಅವರು ವಿಶ್ವದ ಎಲ್ಲ ಖ್ಯಾತನಾಮ ಬ್ಯಾಟ್ಸ್‌ಮನ್‌ಗಳನ್ನು ತಮ್ಮ ಸ್ಪಿನ್ ಮೋಡಿಗೆ ಸಿಲುಕಿಸಿ ಮೆರೆದಿದ್ದರು. ಒಂದೆಡೆ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್, ಇನ್ನೊಂದೆಡೆ ಭಾರತದ ಅನಿಲ್ ಕುಂಬ್ಳೆ, ಈ ನಡುವೆ ಏಷ್ಯಾದ ಆಚೆಯ ಶೇನ್ ವಾರ್ನ್ ಜಾಗತಿಕ ಕ್ರಿಕೆಟ್ ಮೇಲೆ ಸ್ಪಿನ್ ದಂಡಯಾತ್ರೆ ಮಾಡಿದ್ದನ್ನು ಕಲ್ಪಿಸಿಕೊಳ್ಳು ವುದು ಸದಾ ರೋಮಾಂಚನ ಮೂಡಿಸುವ ಸಂಗತಿ.
ಟೆಸ್ಟ್ ಕ್ರಿಕೆಟಿನ ಸರ್ವಾಧಿಕ ವಿಕೆಟ್ ಸಾಧಕರಲ್ಲಿ ಮುರಳೀ ಧರನ್ ಬಳಿಕ ಕಾಣಿಸಿಕೊಳ್ಳುವ ಹೆಸರೇ ಶೇನ್ ವಾರ್ನ್ (708) ಅವರದು. 194 ಏಕದಿನ ಪಂದ್ಯಗಳಿಂದ 293 ವಿಕೆಟ್ ಕಬಳಿಸಿದ ಸಾಧನೆಯೂ ಇವರದ್ದಾಗಿದೆ. ಹೀಗೆ ಒಟ್ಟು 1,001 ಅಂತಾರಾಷ್ಟ್ರೀಯ ವಿಕೆಟ್‌ಗಳ ಒಡೆಯ ಈ ಶೇನ್ ವಾರ್ನ್.
ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ 37 ಸಲ 5 ಪ್ಲಸ್ ವಿಕೆಟ್, ಟೆಸ್ಟ್ ಒಂದರಲ್ಲಿ 10 ಸಲ 10 ಪ್ಲಸ್ ವಿಕೆಟ್ ಉರುಳಿಸಿದ ಸಾಧನೆ ವಾರ್ನ್ ಅವರದು. 71ಕ್ಕೆ 8 ವಿಕೆಟ್ ಕೆಡವಿದ್ದು ಅತ್ಯುತ್ತಮ ಸಾಧನೆ. ಈ 708 ಟೆಸ್ಟ್ ವಿಕೆಟ್‌ಗಳಲ್ಲಿ 325 ವಿಕೆಟ್‌ಗಳನ್ನು ಅವರು ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಗಳಿಸಿದ್ದರು.
1993ರ ಆ್ಯಶಸ್ ಸರಣಿಯ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಮೈಕ್ ಗ್ಯಾಟಿಂಗ್ ಅವರನ್ನು ಕೆಡವಿದ ಅವರ ಎಸೆತ “ಶತಮಾನದ ಎಸೆತ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
2005ರ ಆ್ಯಶಸ್ ಸರಣಿಯ ವೇಳೆ ಶೇನ್ ವಾರ್ನ್ ಸಾಧ ನೆಯ ಉತ್ತುಂಗದಲ್ಲಿದ್ದರು. ಅದು ಅವರ ಟೆಸ್ಟ್ ಬದುಕಿನ ಸಂಧ್ಯಾಕಾಲ ಆಗಿತ್ತು ಎಂಬುದನ್ನು ಮರೆಯುವಂತಿಲ್ಲ. ಇಲ್ಲಿ ವಾರ್ನ್ 40 ವಿಕೆಟ್ ಉಡಾಯಿಸಿ ಇಂಗ್ಲೆಂಡಿಗೆ ಘಾತಕವಾಗಿ ಪರಿಣಮಿಸಿದ್ದರು. ಈ ಸಾಧನೆಗೆ ಸರಣಿಶ್ರೇಷ್ಠ ಗೌರವ ಒಲಿದಿತ್ತು. 1999ರ ವಿಶ್ವಕಪ್ ಗೆಲುವಿನಲ್ಲಿ ಶೇನ್ ವಾರ್ನ್ ಪಾತ್ರ ಮಹತ್ವದ್ದಾಗಿತ್ತು. ಪಾಕಿಸ್ಥಾನ ವಿರುದ್ಧದ ಫೈನಲ್‌ನಲ್ಲಿ 33ಕ್ಕೆ 4 ವಿಕೆಟ್ ಕೆಡವಿ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದರು.
ಡ್ರಗ್ಸ್ ವಿವಾದದ ನಂಟು
ಶೇನ್ ವಾರ್ನ್ಗೂ ವಿವಾದಕ್ಕೂ ಬಲವಾದ ನಂಟಿದೆ. 2003ರ ವಿಶ್ವಕಪ್ ವೇಳೆ ಡ್ರಗ್ಸ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಶೇನ್ ವಾರ್ನ್ ಅವರನ್ನು ದಕ್ಷಿಣ ಆಫ್ರಿಕಾದಿಂದ ವಾಪಸ್ ಕಳುಹಿಸಲಾಗಿತ್ತು. 1994ರಲ್ಲಿ ಭಾರತದ ಬುಕ್ಕಿಯೊಬ್ಬನಿಂದ ದುಡ್ಡು ಪಡೆದ ವಿವಾದದಲ್ಲೂ ಸಿಲುಕಿದ್ದರು.
ಮೊದಲ ಐಪಿಎಲ್ ವಿಜೇತ ನಾಯಕ
ಐಪಿಎಲ್‌ನಲ್ಲೂ ಛಾಪು ಮೂಡಿಸಿದ ಶೇನ್ ವಾರ್ನ್ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿನ ನೆಚ್ಚಿನ ಆಟಗಾರನಾಗಿದ್ದರು. ಚೊಚ್ಚಲ ಐಪಿಎಲ್‌ನಲ್ಲಿ ಶೇನ್ ವಾರ್ನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಚಾಂಪಿಯನ್ ಆಗಿತ್ತು ಎಂಬುದನ್ನು ಮರೆಯುವಂತಿಲ್ಲ.
ರಾಡ್ನಿ ಮಾರ್ಷ್ ನಿಧನ
ಬ್ರಿಸ್ಬೇನ್: “ಐರನ್ ಗ್ಲೌಸ್’ ಖ್ಯಾತಿಯ ಆಸ್ಟ್ರೇಲಿಯದ ವಿಕೆಟ್ ಕೀಪರ್ ರಾಡ್ನಿ ಮಾರ್ಷ್ (74) ಇನ್ನಿಲ್ಲ. ಹೃದಯಾಘಾತಕ್ಕೊಳಗಾಗಿ ಕ್ವೀನ್ಸ್ ಲ್ಯಾಂಡ್ ಆಸ್ಪತ್ರೆಗೆ ದಾಖಲಾಗಿದ್ದ ಅವರು ಶುಕ್ರವಾರ ಕೊನೆಯುಸಿರೆಳೆದರು.1970-1984ರ ಅವಧಿಯಲ್ಲಿ ಜಾಗತಿಕ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರು ಮಾಡಿದ ರಾಡ್ನಿ ವಿಲಿಯಂ ಮಾರ್ಷ್, 96 ಟೆಸ್ಟ್‌ಗಳಿಂದ 343 ಕ್ಯಾಚ್ ಹಾಗೂ 12 ಸ್ಟಂಪಿಂಗ್ ಮಾಡಿದ ಸಾಹಸಿ.
BREAKING
Australia cricket legend, Shane Warne, dies of ‘suspected heart attack’, aged 52.
Details: https://t.co/Q83t5FWzTb pic.twitter.com/YtQkY8Ir8p
— Fox Cricket (@FoxCricket) March 4, 2022
Cannot believe it.
One of the greatest spinners, the man who made spin cool, superstar Shane Warne is no more.
Life is very fragile, but this is very difficult to fathom. My heartfelt condolences to his family, friends and fans all around the world. pic.twitter.com/f7FUzZBaYX— Virender Sehwag (@virendersehwag) March 4, 2022
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.