Plastic: ಪ್ಲಾಸ್ಟಿಕ್‌ನಿಂದಾಗುವ ಪರಿಸರ ಮಾಲಿನ್ಯವನ್ನು ಸೋಲಿಸಿ
Team Udayavani, Jun 5, 2023, 7:23 AM IST
ಸಾಮಾನ್ಯವಾಗಿ ಪರಿಸರ ಎಂದರೆ ನಮ್ಮ ಸುತ್ತ-ಮುತ್ತಲಿನ ಸ್ಥಳವೆಂದು ಭಾವಿಸುವುದು ಸ್ವಾಭಾವಿಕ. ಆದರೆ ಪರಿಸರದ ಅರ್ಥ ಬಹಳ ವಿಶಾಲವಾಗಿದ್ದು ಪರಿಸರವನ್ನು ನಮ್ಮ ಸುತ್ತ-ಮುತ್ತಲಿನ ಸ್ಥಳಕ್ಕೆ ಮಾತ್ರ ಸೀಮಿತಗೊಳಿಸುವುದು ಸಮಂಜಸವಲ್ಲ. ಪರಿಸರ ಎಂದರೆ ನಮ್ಮ ಹತ್ತಿರದ ಸ್ಥಳದಿಂದ ಪ್ರಾರಂಭವಾಗಿ ವಿಶ್ವದ ಕೊನೆಯ ತುದಿಯವರೆಗೂ ಕಾಣುವ ಪ್ರತಿಯೊಂದು ಸ್ಥಳಗಳು ಇದರಲ್ಲಿ ಸೇರಿಕೊಂಡಿವೆ.
ಸಮುದ್ರ ಮಾಲಿನ್ಯ, ಅಧಿಕ ಜನಸಂಖ್ಯೆ, ಜಾಗತಿಕ ತಾಪಮಾನ, ಸುಸ್ಥಿರ ಅಭಿವೃದ್ಧಿ ಮತ್ತು ವನ್ಯಜೀವಿಗಳ ಅಪರಾಧಗಳೆಲ್ಲವೂ ಪರಿಸರದಲ್ಲಿ ಅಡಗಿವೆ. ಒಟ್ಟಾರೆ ವಿಶ್ವವನ್ನೇ ಆವರಿಸಿಕೊಂಡಿರುವ ಈ ಪರಿಸರವು ಸದಾ ಸ್ವತ್ಛಂದವಾಗಿ ಇರಬೇಕು. ಅಂದಾಗ ಮಾತ್ರ ಇಲ್ಲಿ ಬದುಕುವ ಪ್ರತೀ ಜೀವಿಗಳಿಗೆ ಉತ್ತಮ ವಾತಾವರಣವನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಈ ಕಾರ್ಯವು ಕೇವಲ ಮನುಕುಲದಿಂದ ಮಾತ್ರ ಸಾಧ್ಯವೆಂಬುದನ್ನು ಮರೆಯ ಬಾರದು. ಆದರೆ ಇಂದು ವಿಶ್ವದೆಲ್ಲೆಡೆ ಪರಿಸರ ಮಾಲಿನ್ಯದಿಂದ ಉಂಟಾಗುವ ಬಗೆಗಳನ್ನು ಗಮನಿಸಿದರೆ ವಿಶ್ವದ ಅಂತ್ಯವು ಸಮೀಪಿಸುತ್ತಿದೆ ಎಂಬ ಕಳವಳಕಾರಿ ಅಂಶವು ಪರಿಸರ ತಜ್ಞರಲ್ಲಿ ಹುಟ್ಟುತ್ತಿರುವುದು ಸುಳ್ಳೇನಲ್ಲ.
ಮುಂದುವರಿದ ದೇಶಗಳಲ್ಲಿ ಒಂದಾಗಿರುವ ಸ್ವೀಡನ್ ದೇಶವು ಭವಿಷ್ಯದಲ್ಲಿ ವಿಶ್ವದಾದ್ಯಂತ ಘಟಿಸಬಹುದಾದ ಭಯಾನಕ ಪರಿಸರ ಮಾಲಿನ್ಯಗಳನ್ನು ಇಂದಿನಿಂದಲೇ ತಡೆಗಟ್ಟಬೇಕೆಂದು 1968ರಲ್ಲಿ ಮೊದಲ ಬಾರಿಗೆ ವಿಶ್ವಸಂಸ್ಥೆಯ ಮಹಾಸಮ್ಮೇಳನದಲ್ಲಿ ಪ್ರತಿಪಾದಿಸಿತು. ಅದರಂತೆ ಸ್ವೀಡನ್ ದೇಶವು 1969ರಲ್ಲಿ ಪರಿಸರ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುವ ಸಮ್ಮೇಳನವನ್ನು ಕೆನಡಾದ ರಾಜತಾಂತ್ರಿಕ ಹಾಗೂ ಪರಿಸರದ ಕುರಿತು ಮೃದು ಸ್ಥಾನವನ್ನು ಹೊಂದಿದ್ದ ಮೌರಿಸ್ ಸ್ಟ್ರಾಂಗ್ ನೇತೃತ್ವದಲ್ಲಿ ಪರಿಸರದ ಕಾಳಜಿ ಕುರಿತಾದ ರೂಪುರೇಷೆಗಳನ್ನು ತಯಾರಿಸಲಾಯಿತು. ಅಂದು ಭವಿಷ್ಯದ ಭಯಾನಕ ತೊಂದರೆಗಳನ್ನು ವಿಶ್ವಕ್ಕೆ ಪರಿಚಯಿಸಿದ ಪ್ರಯುಕ್ತ ಕೊನೆಗೆ 1973, ಜೂ.5ರಂದು ಪ್ರಥಮ ಬಾರಿಗೆ ವಿಶ್ವ ಪರಿಸರ ದಿನವನ್ನು ವಿಶ್ವದೆಲ್ಲೆಡೆ ಆಚರಿಸಲು ಪ್ರಾರಂಭವಾಯಿತು. ಸದ್ಯದ 2023, ಜೂ. 5ರಂದು ಆಫ್ರಿಕಾದ ಐವರಿ ಕೋಸ್ಟ್ ದೇಶದಲ್ಲಿ ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರಗಳು ಹಾಗೂ ಪ್ಲಾಸ್ಟಿಕ್ ಮಾಲಿನ್ಯವನ್ನು ಸೋಲಿಸಿ ಎಂಬ ಧ್ಯೇಯದೊಂದಿಗೆ ಆಚರಿಸಲಾಗುತ್ತಿದೆ.
ಇಂದು ಪ್ಲಾಸ್ಟಿಕ್ ಎಂಬುದು ಮಾನವನ ಬದುಕಿನ ಅವಿಭಾಜ್ಯ ಅಂಗವಾಗಿ ಹೊರಹೊಮ್ಮಿದೆ. ಪ್ಲಾಸ್ಟಿಕ್ ಇಲ್ಲದ ಬದುಕನ್ನು ಕಾಣಲು ಸಾಧ್ಯವಿಲ್ಲದಂತಾಗಿದೆ. ಇಂತಹ ಕ್ಲಿಷ್ಟಕರ ಸಮಯದಲ್ಲಿ ಈ ಪ್ಲಾಸ್ಟಿಕ್‌ನ್ನು ಪರಿಸರದ ಸಮತೋಲನವನ್ನು ಕಾಪಾಡಲು ಹಾಗೂ ಮುಂಬರುವ ಪೀಳಿಗೆಯ ಆರೋಗ್ಯ ವಂತ ಬದುಕಿನ ಹಿತದೃಷ್ಟಿಯಿಂದ ಅನಿವಾರ್ಯವಾಗಿ ದೂರ ಸರಿಸಲೇಬೇಕಾದ ಪರಿಸ್ಥಿತಿ ಬಂದೊದಗಿದೆ.
ಈ ವಿಷಕಾರಿ ಪ್ಲಾಸ್ಟಿಕ್ ಇಲ್ಲದೆ ನಮ್ಮ ಪೂರ್ವಜರು ನೂರಾರು ವರ್ಷಗಳ ಕಾಲ ಆರೋಗ್ಯವಂತ ಬದುಕನ್ನು ಕಟ್ಟಿಕೊಂಡಿದ್ದನ್ನು ಮರೆಯ ಬಾರದು. ಪರಿಸರದ ಸ್ವತ್ಛತೆಗಾಗಿ ಕೇವಲ ಒಬ್ಬ ವ್ಯಕ್ತಿಯು ಹಾಗೂ ಒಂದು ಸ್ಥಳದಲ್ಲಿ ಎಷ್ಟೇ ಪ್ರಯತ್ನಿಸಿದರೂ ಸುಧಾರಣೆ ಎನ್ನುವುದು ಶೂನ್ಯ. ವಿಶ್ವದೆಲ್ಲೆಡೆ ಸಾಮೂಹಿಕವಾಗಿ ಪ್ರಯತ್ನಿಸಿ ದಾಗ ಮಾತ್ರ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದಲ್ಲದೆ ಪ್ರತಿಯೊಂದು ಜೀವಿಗಳು ಸುಂದರವಾದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಇಂದು ಪ್ರತೀವರ್ಷ ಸಮುದ್ರಕ್ಕೆ 11 ಬಿಲಿಯನ್ ಟನ್ ಪ್ಲಾಸ್ಟಿಕ್ ಅನ್ನು ತಂದು ಬಿಸಾಡಲಾಗುತ್ತಿದೆ. ಇದರ ಪ್ರಮಾಣವು ಇನ್ನು ಕೆಲವೇ ವರ್ಷಗಳಲ್ಲಿ ದುಪ್ಪಟ್ಟಾಗುವ ಸಂಭವವಿದೆ. ಇದರಿಂದ ಜಲಚರಗಳಿಗೆ ಹಾಗೂ ಇವುಗಳನ್ನು ಉಪಯೋಗಿಸುವ ಮನುಕುಲದ ಅಸ್ತಿತ್ವಕ್ಕೆ ಧಕ್ಕೆಯಾಗುವ ಅಪಾಯವಿದೆ. ಆದ್ದರಿಂದ ಈಗಿನಿಂದಲೆ ಈ ಪ್ಲಾಸ್ಟಿಕ್ ಬಳಕೆಯ ಕುರಿತು ಗಂಭೀರವಾಗಿ ಚಿಂತಿಸುವುದು ಅವಶ್ಯವಿದೆ.
ವಿಶ್ವದಲ್ಲಿಯೇ ಚೀನ ದೇಶವು ಕಳೆದ ದಶಕದಿಂದ ಉತ್ತಮ ಮಾನವಸ್ನೇಹಿ ಪರಿಸರವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವುದು ಸ್ವಾಗತಾರ್ಹ. ವಾಹನಗಳ ದಟ್ಟಣೆ ಹಾಗೂ ಓಡಾಟದಿಂದ ಉಂಟಾಗುತ್ತಿದ್ದ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಚೀನ ದೇಶವು ಹೊಗೆಯುಕ್ತ ವಾಹನಗಳನ್ನು ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ನಿಷೇಧಿಸುತ್ತಿದೆ. ಕೇವಲ ವಿದ್ಯುತ್‌ಚಾಲಿತ ವಾಹನಗಳಿಗೆ ಮತ್ತು ಸಸ್ಯ ಸಂಪತ್ತಿಗೆ ವಿಶೇಷ ಪ್ರಾಮುಖ್ಯವನ್ನು ಕೊಡುತ್ತಿದೆ. ಇದರಿಂದ ದೇಶದಲ್ಲಿ ಮಾಲಿನ್ಯ ಪ್ರಮಾಣವು ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿ ಪರಿಸರವನ್ನು ಮಾಲಿನ್ಯವು ವಿಮುಕ್ತಗೊಳ್ಳುತ್ತಿದೆ.
ವಿಶ್ವದೆಲ್ಲೆಡೆ ಚೀನದ ಈ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಭಾರತದಲ್ಲಿಯೂ ಪರಿಸರ ಸಂರಕ್ಷಣೆ ಎಂಬುದು ಅರಣ್ಯರೋದನವಾಗುತ್ತಿದ್ದು, ಇದರ ಸುಧಾರಣೆಗಾಗಿ ವಿದ್ಯುತ್‌ಚಾಲಿತ ವಾಹನಗಳಿಗೆ ಇನ್ನಷ್ಟು ಉತ್ತೇಜನ ಕೊಟ್ಟು ಪರಿಸರವನ್ನು ಸಂರಕ್ಷಿಸಬೇಕಾಗಿದೆ. ಭಾರತದಲ್ಲಿಯೂ ಚೀನ ದೇಶದ ಮಾದರಿಯಂತೆ ಪರಿಸರ ಮಾಲಿನ್ಯ ತಡೆಗಟ್ಟಲು ಹೊಗೆಯುಕ್ತ ವಾಹನಗಳ ಬಳಕೆಗೆ ಹಂತ-ಹಂತವಾಗಿ ಕಡಿವಾಣ ಹಾಕಬೇಕು. ಇದರ ಜತೆಗೆ ಸಸ್ಯ ಸಂಪತ್ತಿನ ರಕ್ಷಣೆಗೆ ಕಠಿನ ಕಾನೂನುಗಳನ್ನು ಜಾರಿಗೊಳಿಸಬೇಕು.
ಪರಿಸರದಲ್ಲಿ ಇನ್ನೊಂದು ಮಹತ್ವದ ಸಂಸ್ಕೃತಿಕವಾದ ಅಂಶವು ಅಡಗಿದೆ. ಮಾನವ ಜೀವಿಯು ಜಗತ್ತಿನಲ್ಲೆ ಅತ್ಯಂತ ಶ್ರೇಷ್ಠ ಹಾಗೂ ಬುದ್ಧಿªವಂತ ಜೀವ ಪ್ರಭೇದವಾಗಿದೆ. ಆದರೆ ವಿಶ್ವದೆಲ್ಲೆಡೆ ನಡೆಯುತ್ತಿರುವ ಈ ಪರಿಸರ ಮಾಲಿನ್ಯಕ್ಕೆ ಈ ಮಾನವ ಜೀವಿಯೇ ಕಾರಣವಾಗಿರುವುದು ಅಚ್ಚರಿಯೇನಲ್ಲ. ಹೇಳುವುದು ಉಪದೇಶ ಆದರೆ ಮಾಡುವುದು ಮಾತ್ರ ಪರಿಸರದ ವಿರುದ್ಧ ಕೆಲಸ ಎಂಬಂತೆ ಪರಿಸರದ ಕಾಳಜಿಗಾಗಿ ಕೈಕೊಳ್ಳುವ ಮಾರ್ಗಸೂಚಿಗಳನ್ನು ತಯಾರಿಸುವುದು ಮಾನ ವರೇ ಆಗಿದ್ದರೂ ಕೊನೆಗೆ ಆ ಕಟ್ಟಳೆಗಳನ್ನು ಪಾಲಿಸದವರು ಮಾನವರೆ ಇರುವುದು ದುರಂತ.
ನೆರೆ-ಹೊರೆಯವರೊಂದಿಗೆ ಉತ್ತಮ ಸಂಬಂಧವಿರಿಸಿ ಕೊಳ್ಳುವುದು, ಹಿರಿಯರಿಗೆ ಗೌರವ ಕೊಡುವುದು, ಬುದ್ಧಿ ಜೀವಿಗಳ ಮಾತಿಗೆ ಮನ್ನಣೆ ನೀಡುವುದು ಹಾಗೂ ಒಳ್ಳೆಯ ಆಚಾರ-ವಿಚಾರಗಳನ್ನು ಸಮಾಜದಲ್ಲಿ ಪ್ರತಿಪಾದಿಸುವುದು ಸಹ ಪರಿಸರದ ಭಾಗಗಳಾಗಿವೆ. ಉತ್ತಮ ಮಾನವ ಸಂಬಂಧವು ಯೋಗ್ಯ ಆರೋಗ್ಯದ ಪ್ರತೀಕವಾಗಿದೆ.
ಕಳೆದ 50 ವರ್ಷಗಳಿಂದ ಆಚರಿಸಲ್ಪಡುತ್ತಿರುವ ಈ ಪರಿಸರ ದಿನಾಚರಣೆಯು ಕೇವಲ ಆಚರಣೆ ಹಾಗೂ ಭಾಷಣಗಳಿಗೆ ಮಾತ್ರ ಸೀಮಿತವಾಗಿರುವುದು ಅತ್ಯಂತ ಖೇದಕರವಾಗಿದೆ. ಇಂದಿನ ಪರಿ ಸರ ಮಾಲಿನ್ಯಗಳ ತೊಂದರೆಗಳನ್ನು ಸ್ವೀಡನ್ ದೇಶವು ಅಂದೇ ಪ್ರತಿಪಾದಿಸಿತ್ತು. ಆದರೆ ಪರಿಸರದಲ್ಲಿನ ಮಾಲಿನ್ಯದ ಪ್ರಮಾಣ ಮಾತ್ರ ಕಿಂಚಿತ್ತೂ ಕಡಿಮೆಯಾಗದೆ, ಭಯಾನಕ ಪರಿ ಸ್ಥಿತಿ ಯಲ್ಲಿಯೇ ಏರುಮಾರ್ಗದತ್ತ ಮುನ್ನಡೆಯುತ್ತಿದೆ.
ಕಳೆದ ವರ್ಷಗಳಾಚೆ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಮಾತ್ರ ಪರಿಸರ ಮಾಲಿನ್ಯ ಹತೋಟಿಗೆ ಬಂದಿತ್ತು. ಆದರೆ ಈ ಲಾಕ್‌ಡೌನ್ ತೆರವುಗೊಳಿಸಿದ ಕೆಲವೇ ದಿನಗಳಲ್ಲಿ ಮಾಲಿನ್ಯವು ಮತ್ತೆ ಹೆಚ್ಚಳವಾಗಿ ವಿಜೃಂಭಿಸುತ್ತಿದೆ. ಸಸ್ಯ ಸಂಪತ್ತಿನ ಸಂರಕ್ಷಣೆ ಮತ್ತು ಪರಿ ಸರ ಮಾಲಿನ್ಯದ ಕುರಿತಾದ ಕಠಿನ ಕಾನೂನುಗಳ ಕೊರತೆಯ ಪರಿಣಾ ಮವೆ ಇಂದು ಪ್ರಮುಖವಾಗಿ ಪರಿಸರ ಮಾಲಿನ್ಯಕ್ಕೆ ಕಾರಣೀ ಭೂತ ವಾಗಿವೆ ಎಂದು ನಿಸ್ಸಂದೇಹವಾಗಿ ಹೇಳಬಹುದು. ಪರಿಸರ ಸಂರಕ್ಷಣೆ ಎಂಬುದು ಕೇವಲ ಸರಕಾರ ಹಾಗೂ ಸಂಘ- ಸಂಸ್ಥೆಗಳ ಜವಾಬ್ದಾರಿಯಲ್ಲ. ವಿಶ್ವದಲ್ಲಿರುವ ಪ್ರತಿಯೊಬ್ಬ ಮಾನವನ ಪ್ರತೀ ಕ್ಷಣದ ಕಾರ್ಯಗಳ ಮೇಲೆ ಅವಂಬಿತವಾಗಿದೆ.
ಬಸವರಾಜ ಶಿವಪ್ಪ ಗಿರಗಾಂವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.