Election Updates: BJP ಗೆ ಕಗ್ಗಂಟಾಯಿತು 12 ಕ್ಷೇತ್ರಗಳು
ಹೇಗಿದೆ ಕೇಸರಿ ಪಾಳಯದ ಎರಡನೇ ಪಟ್ಟಿ?: ಇಲ್ಲಿದೆ ಅಂಕಿ-ಅಂಶ
Team Udayavani, Apr 13, 2023, 7:45 AM IST
ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಮೊದಲ, ಎರಡನೇ ಹಂತದಲ್ಲಿ ಒಟ್ಟು 212 ಮಂದಿ ಹುರಿಯಾಳುಗಳ ಪಟ್ಟಿ ಪ್ರಕಟಗೊಂಡಿದ್ದು, ಇನ್ನೂ 12 ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆ ಬಾಕಿ ಉಳಿಸಿಕೊಂಡಿದೆ. ಕ್ಷೇತ್ರದಲ್ಲಿ ಹಾಲಿ ಇರುವ ಶಾಸಕರ ಬಗ್ಗೆ ಅಸಮಾಧಾನ, ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದು, ವಯಸ್ಸಿನ ಆಧಾರದಲ್ಲಿ ಟಿಕೆಟ್ ನಿರಾಕರಣೆ, ಹೊಸಮುಖಗಳಿಗೆ ಅವಕಾಶ ನೀಡಬೇಕೆಂಬ ಕಾರಣಕ್ಕಾಗಿ ಕೆಲವೆಡೆ ಟಿಕೆಟ್ ಹಂಚಿಕೆ ಕಗ್ಗಂಟಾಗಿ ಪರಿಣಮಿಸಿದೆ. ಗೆಲ್ಲುವ ಅಭ್ಯರ್ಥಿಗೆ ಮಣೆ ಹಾಕುವ ನಿಟ್ಟಿನಲ್ಲಿ ಹೈಕಮಾಂಡ್ ಅಳೆದು ತೂಗಿ ಟಿಕೆಟ್ ಹಂಚಿಕೆ ಮಾಡಲು ನಿರ್ಧರಿಸಿದೆ. ಹಲವರಿಗೆ ಏನಾಗಲಿದೆಯೋ ಎಂಬ ಆತಂಕ. ಈ ಕುರಿತ ಸಮಗ್ರ ವರದಿ ಇಲ್ಲಿದೆ.
ಭಾಲ್ಕಿಗೆ ಪ್ರಕಾಶ, ಬೀದರ್‌ಗೆ ಈಶ್ವರ್
ಬೀದರ್: ಜಿಲ್ಲೆಯ ಭಾಲ್ಕಿ ಮತ್ತು ಬೀದರ್ ಕ್ಷೇತ್ರದಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದು ತಮ್ಮ ಉಮೇದುವಾರರ ಹೆಸರು ಘೋಷಣೆ ವಿಳಂಬಕ್ಕೆ ಕಾರಣವಾಗಿತ್ತು. ಭಾಲ್ಕಿಯಲ್ಲಿ ಮಾಜಿ ಶಾಸಕ ಪ್ರಕಾಶ ಖಂಡ್ರೆ ಅವರಿಗೆ ಬುಧವಾರ ರಾತ್ರಿ ಟಿಕೆಟ್ ಅಂತಿಮಗೊಂಡಿದೆ. ಹಿಂದಿನ ಪರಾಜಿತ ಅಭ್ಯರ್ಥಿ ಡಿ.ಕೆ.ಸಿದ್ರಾಮ್ ನಡುವೆ ಪ್ರಬಲ ಪೈಪೋಟಿಯಿತ್ತು, ಅ ಧಿಕ ಸಂಖ್ಯೆಯಲ್ಲಿರುವ ಮರಾಠಾ ಸಮಾಜದ ಅಭ್ಯರ್ಥಿಗೆ ಭಾಲ್ಕಿಯಲ್ಲಿ ಪ್ರಾಧಾನ್ಯತೆ ಕೊಡಬೇಕೆಂಬ ಒತ್ತಡ ಹೆಚ್ಚಿತ್ತು. ಹಾಗಾಗಿ ಇಬ್ಬರು ಪ್ರಬಲ ಅಭ್ಯರ್ಥಿಗಳ ಕಾದಾಟದ ಮಧ್ಯ ಹೊಸ ಮುಖವನ್ನು ಕಣಕ್ಕಿಳಿಸುವ ಸಾಧ್ಯತೆಯಿತ್ತು. ಬೀದರ್ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಮಾಜಿ ಎಂಎಲ್‌ಸಿ ರಘುನಾಥರಾವ್ ಮಲ್ಕಾಪುರೆ, ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ, ವಿಭಾಗ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್ ಮತ್ತು ಬಿಡಿಎ ಮಾಜಿ ಅಧ್ಯಕ್ಷ ಬಾಬು ವಾಲಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದರು. ಕೊನೆಯದಾಗಿ ಈಶ್ವರಸಿಂಗ್ ಠಾಕೂರ್ ಅವರಿಗೆ ಟಿಕೆಟ್ ಲಭಿಸಿದೆ.
ಮೂಡಿಗೆರೆಗೆ ದೀಪಕ್
ಚಿಕ್ಕಮಗಳೂರು: ಮೂಡಿಗೆರೆ ಮೀಸಲು ಕ್ಷೇತ್ರದಿಂದ ದೀಪಕ್ ದೊಡ್ಡಯ್ಯ ಅವರಿಗೆ ಟಿಕೆಟ್ ಲಭಿಸಿದೆ. ಹಾಲಿ ಶಾಸಕ ಹಾಗೂ ಬಿ.ಎಸ್.ಯಡಿಯೂರಪ್ಪ ಆಪ್ತ ಎಂ.ಪಿ. ಕುಮಾರಸ್ವಾಮಿ ಹೆಸರು ಬಲವಾಗಿ ಕೇಳಿ ಬಂದಿದ್ದರೂ ಬಿಜೆಪಿ ವರಿಷ್ಠರು ಕುಮಾರಸ್ವಾಮಿ ಹೆಸರು ಘೋಷಣೆ ಮಾಡಿಲ್ಲ. ಕುಮಾರಸ್ವಾಮಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಭಾರೀ ಗೊಂದಲ ಏರ್ಪಟ್ಟಿದ್ದು, ಪಕ್ಷದ ಕಾರ್ಯಕರ್ತರೇ ವಿರೋಧ ವ್ಯಕ್ತಪಡಿಸಿದ್ದರು. ಕುಮಾರಸ್ವಾಮಿ ವಿರೋ ಧಿ ಬಣ ಅವರಿಗೆ ಟಿಕೆಟ್ ನೀಡದಂತೆ ಆಕ್ಷೇಪ ವ್ಯಕ್ತಪಡಿಸುತ್ತು. ಮತ್ತೂಂದು ಬಣ ಟಿಕೆಟ್ ನೀಡುವಂತೆ ಆಗ್ರಹಿಸಿತ್ತು. ಪರ, ವಿರೋಧ ಬಣದಿಂದ ಪಕ್ಷದ ವರಿಷ್ಠರಿಗೆ ಪತ್ರ ಅಭಿಯಾನ ನಡೆಸಿದ್ದರು. ವಿರೋಧಿ ಬಣ ಶಾಸಕರು ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿಲ್ಲ. ವಿಪಕ್ಷದ ಕಾರ್ಯಕರ್ತರೊಂದಿಗೆ ಅನ್ಯೋನ್ಯವಾಗಿದ್ದಾರೆ. ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆಂಬ ದೂರು ಮುಂದಿಟ್ಟಿದ್ದಾರೆ. ಈ ಕ್ಷೇತ್ರದಿಂದ ಸ್ಪ ರ್ಧಿಸಲು ಆರ್‌ಎಸ್‌ಎಸ್ ಹಿನ್ನೆಲೆಯುಳ್ಳ ವ್ಯಕ್ತಿಯಿಂದ ಹಿಡಿದು ಹಲವಾರು ಹೆಸರು ಪ್ರಸ್ತಾಪವಾಗಿತ್ತು.
ಕೆಜಿಎಫ್ಗೆ ಅಶ್ವಿನಿ ಸಂಪಂಗಿ
ಕೋಲಾರ: ಬಿಜೆಪಿ ಟಿಕೆಟ್‌ಗಾಗಿ ದಿಢೀರ್ ಅಭ್ಯರ್ಥಿಗಳು ಕ್ಷೇತ್ರ ಪ್ರವೇಶಿಸಿರುವುದರಿಂದ ಕೆಜಿಎಫ್ ಬಿಜೆಪಿ ಟಿಕೆಟ್ ಹಂಚಿಕೆ ಕಗ್ಗಂಟಾಗಿ ಪರಿಣಮಿಸಿತ್ತು. ಮಾಜಿ ಶಾಸಕ ವೈ.ಸಂಪಂಗಿ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದರು. ಪಕ್ಷವು ಅವರ ಕುಟುಂಬದ ಯಾರಿಗಾದರೂ ಟಿಕೆಟ್ ನೀಡಬಹುದೆಂಬ ಲೆಕ್ಕಾಚಾರಗಳಿತ್ತು. ಆದರೆ, ಕೆಲವು ತಿಂಗಳುಗಳ ಹಿಂದಷ್ಟೆ ಮೋಹನ್‌ಕೃಷ್ಣ ಬಿಜೆಪಿ ಟಿಕೆಟ್‌ಗಾಗಿ ಕ್ಷೇತ್ರವನ್ನು ಪ್ರವೇಶಿಸಿದರು. ಪ್ರಚಾರ ಕಾರ್ಯವನ್ನೂ ಆರಂಭಿಸಿದ್ದರು. ಚುನಾವಣಾ ವೇಳಾಪಟ್ಟಿ ಪ್ರಕಟವಾದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಬೆಂಬಲಗೊಂದಿಗೆ ವೇಲುನಾಯಕರ್ ಕೆಜಿಎಫ್ ಕ್ಷೇತ್ರ ಪ್ರವೇಶಿಸಿದ್ದಾರೆ. ಖುದ್ದು ಸಚಿವ ಮುನಿರತ್ನ ವೇಲುನಾಯಕರ್‌ರನ್ನು ಕೆಜಿಎಫ್ ಕ್ಷೇತ್ರಕ್ಕೆ ಪರಿಚಯಿಸಿ ಹೋಗಿದ್ದಾರೆ. ಇದರ ಜೊತೆಗೆ ಸಂಸದ ಮುನಿಸ್ವಾಮಿ ತನ್ನ ಪತ್ನಿಯನ್ನು ಇದೇ ಕ್ಷೇತ್ರದಿಂದ ರಾಜಕೀಯ ಪ್ರವೇಶಿಸುವಂತೆ ಮಾಡುವ ಆಸೆ ಇಟ್ಟುಕೊಂಡಿದ್ದರು. ಅಂತಿಮವಾಗಿ ಅಶ್ವಿನಿ ಸಂಪಂಗಿ ಅವರಿಗೆ ಟಿಕೆಟ್ ನೀಡಿದೆ.
ಹಾವೇರಿಗೆ ಗವಿಸಿದ್ದಪ್ಪ
ಹಾವೇರಿ: ಹಾವೇರಿ (ಎಸ್‌ಸಿ ಮೀಸಲು) ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿತ್ತು. ಹಾಲಿ ಶಾಸಕ ನೆಹರು ಓಲೇಕಾರ ಇದ್ದರೂ ಅವರಿಗೆ ಟಿಕೆಟ್ ತಪ್ಪಿಸಿ ಬೇರೆಯವರು ಪಡೆದುಕೊಳ್ಳಲು ತೆರೆಮರೆಯ ಕಸರತ್ತು ಜೋರಾಗಿ ನಡೆಸಿದ್ದರು. ಗವಿಸಿದ್ದಪ್ಪ ದ್ಯಾಮಣ್ಣವರ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಹಾನಗಲ್ಲ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಪಡೆದುಕೊಳ್ಳುವಲ್ಲಿ ಮಾಜಿ ಶಾಸಕ ಶಿವರಾಜ ಸಜ್ಜನರ್ ಯಶಸ್ವಿಯಾಗಿದ್ದಾರೆ. ಜಿಪಂ ಮಾಜಿ ಸದಸ್ಯ ಕೃಷ್ಣ ಈಳಗೇರ, ಬಿಜೆಪಿ ಮುಖಂಡ ರಾಜಶೇಖರ ಕಟ್ಟೆಗೌಡ, ಪುರಸಭೆ ಮಾಜಿ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ್ ಟಿಕೆಟ್‌ಗಾಗಿ ಫೈಟ್ ನಡೆಸಿದ್ದರು. ಅಲ್ಲದೇ, ಈ ಕ್ಷೇತ್ರದಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂಬ ಕೂಗು ಹೆಚ್ಚಾಗಿತ್ತು. ಈ ಹಿನ್ನೆಲೆ ಈ ಎರಡೂ ಕ್ಷೇತ್ರಗಳಿಗೆ ಅಳೆದು, ತೂಗಿ ಟಿಕೆಟ್ ಘೋಷಿಸುವ ಲೆಕ್ಕಾಚಾರ ಬಿಜೆಪಿ ಹೈಕಮಾಂಡ್ ಹೊಂದಿತ್ತು.
ಅರಸೀಕೆರೆಗೆ ಬಸವರಾಜ್
ಹಾಸನ: ಜಿಲ್ಲೆಯ ಅರಸೀಕೆರೆ ಕ್ಷೇತ್ರದಲ್ಲಿ ಎನ್.ಆರ್.ಸಂತೋಷ್ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕೊನೆಯದಾಗಿ ಜಿ.ವಿ. ಬಸವರಾಜ್ ಅವರಿಗೆ ಟಿಕೆಟ್ ಲಭಿಸಿದೆ. ಸಂತೋಷ್ ಅವರು ಕಳೆದ ಮೂರು ವರ್ಷಗಳಿಂದಲೂ ಕ್ಷೇತ್ರದಲ್ಲಿ ಸ್ಪರ್ಧೆಗೆ ಸಿದ್ಧತೆ ಮಾಡಿಕೊಂಡಿದ್ದರು. ಮೊದಲ ಪಟ್ಟಿಯಲ್ಲಿಯೇ ಅವರ ಹೆಸರು ಘೋಷಣೆ ಆಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಟಿಕೆಟ್ ಘೋಷಣೆ ಆಗದಿರುವುದು ಕುತೂಹಲ ಕೆರಳಿಸಿತ್ತು, ಎನ್.ಆರ್ ಸಂತೋಷ್ ಅವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆಯೇ ಹೆಚ್ಚು ಎಂದು ಹೇಳಲಾಗಿತ್ತು. ಸಂತೋಷ್ ಹೊರಗಿನವರು, ಅವರಿಗೆ ಟಿಕೆಟ್ ಕೊಡಕೂಡದು ಎಂದು ಸ್ಥಳೀಯರು ವಿರೋಧಿಸಿದ್ದರು.ಬಹುಮುಖ್ಯವಾಗಿ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಪುತ್ರ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೇ ಅಡ್ಡಗಾಲು ಹಾಕಿದ್ದರು ಎನ್ನಲಾಗಿದೆ. ಎನ್.ಆರ್.ಸಂತೋಷ್ ಅವರು ತಿಪಟೂರು ತಾಲೂಕು ನೊಣವಿನಕೆರೆಯವರು. ಯಡಿಯೂರಪ್ಪ ಅವರ ತಂಗಿಯ ಮೊಮ್ಮಗ. ಹಾಗಾಗಿ ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ಶಾಸಕರನ್ನು ಮುಂಬೈಗೆ ಕಳುಹಿಸುವಾಗ ಮುಂಚೂಣಿಯಲ್ಲಿದ್ದರು. ಯಡಿಯೂರಪ್ಪ ಸಿಎಂ ಆದ ನಂತರ ಅವರ ರಾಜಕೀಯ ಕಾರ್ಯದರ್ಶಿಯೂ ಆಗಿದ್ದವರು.
ಬಳಿಕ ಕೆಲ ದಿನಗಳ ನಂತರ ಯಡಿಯೂರಪ್ಪ ಅವರ ಕುಟುಂಬದವರ ವಿರೋಧ ಕಟ್ಟಿಕೊಂಡು ರಾದ್ಧಾಂತ ಮಾಡಿದ್ದರು. ಹಾಗಾಗಿ ಯಡಿಯೂರಪ್ಪ ಮತ್ತು ಪುತ್ರನ ವಿರೋಧದಿಂದ ಎರಡನೇ ಪಟ್ಟಿಯಲ್ಲೂ ಸಂತೋಷ್ ಹೆಸರು ಘೋಷಣೆ ಆಗಿಲ್ಲ .
ಕೆಆರ್‌ಡಿಸಿಎಲ್ ಉಪಾಧ್ಯಕ್ಷರಾಗಿದ್ದ ಅರಸೀಕೆರೆಯ ಜಿವಿಟಿ ಬಸವರಾಜು ಅವರಿಗೆ ಟಿಕೆಟ್ ಲಭಿಸಿದೆ. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧೆಗಿಳಿದಿದ್ದ ಯಡಿಯೂರಪ್ಪ ಅವರ ಸಂಬಂಧಿ, ಬೆಂಗಳೂರು ಗ್ರಾಮಾಂತರ ಜಿಪಂ ಮಾಜಿ ಅಧ್ಯಕ್ಷ ಮರಿಸ್ವಾಮಿ ಅವರಿಗೆ ಟಿಕೆಟ್ ಸಿಗಬಹುದೆಂಬ ಸುದ್ದಿಯೂ ಹರಡಿತ್ತು. ಬೇಲೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿದ್ಧೇಶ್ ನಾಗೇಂದ್ರ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಅಲ್ಲಿ ಹುಲ್ಲಹಳ್ಳಿ ಸುರೇಶ್ ಅವರಿಗೆ ಟಿಕೆಟ್ ಘೋಷಣೆ ಆಗಿದೆ. ಹಾಗಾಗಿ ಸಿದ್ಧೇಶ್ ನಾಗೇಂದ್ರ ಅವರ ಹೆಸರೂ ಕೇಳಿ ಬರುತ್ತಿದೆ. ಅವರು ಅರಸೀಕೆರೆ ಕ್ಷೇತ್ರದ ಪ್ರಮುಖ ಮಠವೊಂದರ ಭಕ್ತ. ಆ ಮೂಲಕ ಸಿದ್ದೇಶ್ ನಾಗೇಂದ್ರ ಟಿಕೆಟ್ ಗಿಟ್ಟಿಸಿಕೊಂಡರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.
ಬಂಡಿಗೆ ಸ್ವಪಕ್ಷದಲ್ಲೇ ವಿರೋಧ
ಗದಗ: ರೋಣ ಕ್ಷೇತ್ರದ ಹಾಲಿ ಶಾಸಕ ಕಳಕಪ್ಪ ಬಂಡಿ ಅವರಿಗೆ ಸ್ಥಳೀಯರ ಜತೆಗೆ ಕುಟುಂಬಸ್ಥರ ವಿರೋಧದ ನಡುವೆ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿರುವ ಕಾರಣ ಬಿಜೆಪಿ ಅಭ್ಯರ್ಥಿ ಆಯ್ಕೆ ಗೊಂದಲ ಮುಂದುವರಿದಿದೆ. ವರಿಷ್ಠರು ಜಿಲ್ಲೆಯಲ್ಲಿ ರೋಣ ಹೊರತುಪಡಿಸಿ ಗದಗ, ಶಿರಹಟ್ಟಿ ಹಾಗೂ ನರಗುಂದ ಕ್ಷೇತ್ರದ ಅಭ್ಯರ್ಥಿಗಳನ್ನು ಮಾತ್ರ ಘೋಷಿಸಿದ್ದು, ಹಾಲಿ ಶಾಸಕ ಕಳಕಪ್ಪ ಬಂಡಿ ಅವರಿಗೆ ಟಿಕೆಟ್ ಕೈತಪ್ಪಬಹುದು ಎಂಬ ಅನುಮಾನ ಹೆಚ್ಚಿಸಿದೆ. ಕಳಕಪ್ಪ ಬಂಡಿ ಅವರಿಗೆ ಸ್ವಪಕ್ಷದಲ್ಲಿಯೇ ಪೈಪೋಟಿ ಎದುರಾಗಿದ್ದು, ಸ್ವತಃ ಕಳಕಪ್ಪ ಬಂಡಿ ಅವರ ಪತ್ನಿ ಸಂಯುಕ್ತಾ ಬಂಡಿ, ಸಹೋದರ ಸಿದ್ದಪ್ಪ ಬಂಡಿ ಅವರೇ ಟಿಕೆಟ್ ಕೇಳಿರುವುದು ಅಚ್ಚರಿ ಉಂಟು ಮಾಡಿದೆ. ಅಲ್ಲದೇ, ಮುಖಂಡರಾದ ರವೀಂದ್ರನಾಥ ದಂಡಿನ, ಹೇಮಗಿರೀಶ ಹಾವಿನಾಳ, ಬಿಜೆಪಿ ಜಿಲ್ಲಾಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ ಕಮಲದ ಟಿಕೆಟ್‌ಗಾಗಿ ಕಸರತ್ತು ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ.
ರಾಮದಾಸ್‌ಗೆ ಭೀತಿ
ಮೈಸೂರು: ಮೈಸೂರು ನಗರದ ಕೃಷ್ಣರಾಜ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿಯಿಂದ ನಾಲ್ಕು ಬಾರಿ ಪ್ರತಿನಿಧಿಸಿರುವ ಶಾಸಕ ಎಸ್.ಎ.ರಾಮದಾಸ್ ಅವರಿಗೆ ಈ ಬಾರಿ ಟಿಕೆಟ್ ದೊರೆಯಲಿದೆಯೇ ಎಂಬ ಪ್ರಶ್ನೆ ಎದ್ದಿದೆ. ರಾಮದಾಸ್ ಅವರಿಗೆ ಟಿಕೆಟ್ ನೀಡುವ ಬಗ್ಗೆ ಕ್ಷೇತ್ರದ ಬಿಜೆಪಿ ಕೆಲವು ಮುಖಂಡರು, ಕಾರ್ಯಕರ್ತರ ವಿರೋಧವಿದೆ. ರಾಮದಾಸ್ ಕ್ಷೇತ್ರದಲ್ಲಿ ಕಾರ್ಯಕರ್ತರನ್ನು ನಿರ್ಲಕ್ಷಿಸಿದ್ದಾರೆ ಎಂಬುದು ಅವರ ಮೇಲಿರುವ ಬಲವಾದ ಆರೋಪ. ಕ್ಷೇತ್ರದಲ್ಲಿ ಬ್ರಾಹ್ಮಣ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಮದಾಸ್ ಬ್ರಾಹ್ಮಣ ಸಮಾಜಕ್ಕೆ ಸೇರಿದ್ದಾರೆ. ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದವರು ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ರಾಮದಾಸ್ ಅವರಿಗೆ ಟಿಕೆಟ್ ನೀಡುವುದನ್ನು ವಿರೋಧಿಸಿದ್ದರು. ಮಾಜಿ ಸಿಎಂ ಯಡಿಯೂರಪ್ಪ ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿದ್ದರು. ರಾಮದಾಸ್ ಅವರಿಗೆ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕೊನೆಯ ಹಂತದಲ್ಲಿ ಟಿಕೆಟ್ ನೀಡಲಾಗಿತ್ತು. ಮೈಸೂರು ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇವರಿಬ್ಬರೂ ಬ್ರಾಹ್ಮಣ ಸಮುದಾಯದವರು.
ಮೈಸೂರು ನಗರದ ಹೆಗ್ಗಡದೇವನಕೋಟೆ (ಪರಿಶಿಷ್ಟ ಪಂಗಡ-ಮೀಸಲು) ಕ್ಷೇತ್ರಕ್ಕೆ ಕೃಷ್ಣ ನಾಯಕ್ ಅವರಿಗೆ ಬಿಜೆಪಿ ಟಿಕೆಟ್ ಲಭಿಸಿದೆ. ಬಿಜೆಪಿಯಲ್ಲಿ ಕೃಷ್ಣಸ್ವಾಮಿ, ಅಪ್ಪಣ್ಣ , ಕೃಷ್ಣ ನಾಯಕ ಅವರ ಮಧ್ಯೆ ಟಿಕೆಟ್‌ಗಾಗಿ ಪೈಪೋಟಿ ನಡೆದಿತ್ತು. ಕೃಷ್ಣನಾಯಕ ಇತ್ತೀಚೆಗೆ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದರು.
ಗುಬ್ಬಿ ಟಿಕೆಟ್ ದಿಲೀಪ್‌ಗೆ
ತುಮಕೂರು: ಗುಬ್ಬಿ ಕ್ಷೇತ್ರದಲ್ಲಿ ದಿಲೀಪ್ ಕುಮಾರ್‌ಗೆ ವರಿಷ್ಠರು ಬಿಜೆಪಿ ಟಿಕೆಟ್ ಕೊಟ್ಟಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗಾಗಿ ಭಾರೀ ಪೈಪೋಟಿ ಏರ್ಪಟ್ಟಿತ್ತು. ಇದುವರೆಗೂ ನಡೆದಿರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಬಿಜೆಪಿಯೇ ಪ್ರಬಲ ಸ್ಪರ್ಧೆ ನೀಡಿದೆ, 2 ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಹಿಂದುಳಿದ ವರ್ಗ ಗೊಲ್ಲ ಸಮುದಾಯದ ಜಿ.ಎನ್.ಬೆಟ್ಟಸ್ವಾಮಿ ಅಂತರದ ಮತಗಳಿಂದ ಸೋಲು ಕಂಡಿದ್ದರು. ಕಳೆದ ವರ್ಷ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ದಿಲೀಪ್ ಕುಮಾರ್ ಸ್ಪರ್ಧಿಸಿದ ಪರಿಣಾಮ ಬಿಜೆಪಿ ಅಭ್ಯರ್ಥಿ ಸೋಲು ಕಂಡಿದ್ದರು. ಕ್ಷೇತ್ರದಲ್ಲಿ ಜಿ.ಎನ್. ಬೆಟ್ಟಸ್ವಾಮಿ, ದಿಲೀಪ್ ಕುಮಾರ್, ಚಂದ್ರಶೇಖರ್ ಬಾಬು, ಎನ್.ಸಿ.ಪ್ರಕಾಶ್, ಎಬಿವಿಪಿ ಕಾರ್ಯ ಕರ್ತರಾಗಿ ಈಗ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್. ಟಿ.ಭೈರಪ್ಪ, ಅ.ನಾ.ಲಿಂಗಪ್ಪ, ಬಿ.ದೊಡ್ಡಯ್ಯ, ಹೆಸರಿನ ಜೊತೆಗೆ ಇತ್ತೀಚೆಗೆ ಧಿಡೀರನೆ ವಸತಿ ಸಚಿವ ವಿ.ಸೋಮಣ್ಣ ಅವರ ಪುತ್ರ ಡಾ.ಅರುಣ್ ಸೋಮಣ್ಣ ಅವರ ಹೆಸರು ಕೇಳಿ ಬಂದಿತ್ತು. ಗುಬ್ಬಿ ಕ್ಷೇತ್ರದಲ್ಲಿ ತನ್ನ ಮಗನಿಗೆ ಟಿಕೆಟ್ ನೀಡುವಂತೆ ಪಕ್ಷದ ವರಿಷ್ಠರಲ್ಲಿ ಕೇಳಿದ್ದೇನೆಂದು ವಸತಿ ಸಚಿವ ಸೋಮಣ್ಣ ಸಿದ್ಧಗಂಗಾ ಮಠಕ್ಕೆ ಬಂದ ವೇಳೆ ತಿಳಿಸಿದ್ದರು. ಕ್ಷೇತ್ರಕ್ಕೆ ಅಳೆದು ತೂಗಿ ದಿಲೀಪ್ ಕುಮಾರ್ ಅವರನ್ನು ಹುರಿಯಾಳನ್ನಾಗಿಸಿದೆ.
ಬೈಂದೂರಿಗೆ ಗುರುರಾಜ್
ಕುಂದಾಪುರ: ಬೈಂದೂರು ಕ್ಷೇತ್ರದಲ್ಲಿ ಗುರುರಾಜ್ ಗಂಟಿಹೊಳೆ ಅವರಿಗೆ ಟಿಕೆಟ್ ಲಭಿಸಿದೆ. ಇದು ಉಡುಪಿ ಜಿಲ್ಲೆಗೆ ಸೇರಿದ್ದರೂ, ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಬರುವುದರಿಂದ ಇಲ್ಲಿ ಯಡಿಯೂರಪ್ಪ ಅವರ ಅಭಿಪ್ರಾಯ ಸಹ ಪ್ರಮುಖವಾಗಿತ್ತು. ಬಿಜೆಪಿ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರಿಬ್ಬರೂ ಒಬ್ಬೊಬ್ಬರನ್ನು ಸೂಚಿಸಿದ್ದರಿಂದ ಒಮ್ಮತದ ಅಭ್ಯರ್ಥಿ ಯಾರೆಂದು ಅಂತಿಮಗೊಳಿಸಲು ಸಾಧ್ಯವಾಗಿರಲಿಲ್ಲ. ಪಕ್ಷದ ಮೂಲಗಳ ಪ್ರಕಾರ ಹಾಲಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟರಿಗೆ ಟಿಕೆಟ್ ಇಲ್ಲ ಎನ್ನುವುದು ಬಹುತೇಕ ನಿಶ್ಚಿತವಾಗಿತ್ತು, ಆದರೂ ಅವರು ಪ್ರಯತ್ನ ಮುಂದುವರಿಸಿದ್ದರು. ಇನ್ನು ಬೈಂದೂರು ಮಾಜಿ ಮಂಡಲದ ಅಧ್ಯಕ್ಷ ಪ್ರಣಯ್ ಕುಮಾರ್ ಶೆಟ್ಟರ ಪರ ಬಿಎಸ್‌ವೈ, ಹಿಂದೂ ಸಂಘಟನೆ ಪರ ಮುಖಂಡ ಗುರುರಾಜ್ ಗಂಟಿಹೊಳೆ ಪರ ಸಂತೋಷ್ ಬ್ಯಾಟಿಂಗ್ ನಡೆಸಿದ್ದರು ಎನ್ನಲಾಗಿದೆ. ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ್ ಶೆಟ್ಟರು ಹಿಂದೆ ಸರಿದಿದ್ದರಿಂದ ಬೈಂದೂರಲ್ಲಿ ಬಂಟ ಸಮುದಾಯದವರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿತ್ತು. ಕೊನೆಗೆ ಗುರುರಾಜ್ ಗಂಟಿಹೊಳೆ ಅವರು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ರೆಡ್ಡಿಗೆ ಸಿಕ್ಕಿತು ಟಿಕೆಟ್
ಬಳ್ಳಾರಿ: ಹಗರಿಬೊಮ್ಮನಹಳ್ಳಿ ಎಸ್ಸಿ ಮೀಸಲು ಕ್ಷೇತ್ರಗಳನ್ನು ಬಿಜೆಪಿ ಬಾಕಿ ಉಳಿಸಿಕೊಂಡಿದೆ. ಹರಪನಹಳ್ಳಿ ಕ್ಷೇತ್ರದಲ್ಲಿ ಹಾಲಿ ಶಾಸಕ ಜಿ.ಕರುಣಾಕರ ರೆಡ್ಡಿಗೆ ಟಿಕೆಟ್ ಲಭಿಸಿದೆ. ಮೊದಲ ಪಟ್ಟಿಯಲ್ಲಿ ಹೆಸರು ಘೋಷಣೆಯಾಗದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಸೂತ್ರದಡಿ ರೆಡ್ಡಿ ಕುಟುಂಬದ ಶಾಸಕ ಜಿ.ಸೋಮಶೇಖರ ರೆಡ್ಡಿಗೆ ಟಿಕೆಟ್ ನೀಡಿ ಕರುಣಾಕರರೆಡ್ಡಿಗೆ ನೀಡುವುದು ಅನುಮಾನ ಎಂಬ ಮಾತುಗಳು ಕೇಳಿಬಂದಿತ್ತು. ಅಲ್ಲದೇ, ಕರುಣಾಕರ ರೆಡ್ಡಿಯವರು ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಹೊಂದಾಣಿಕೆಯಿಲ್ಲ. ಅಂತರ ಕಾಯ್ದುಕೊಂಡಿದ್ದಾರೆಂಬ ಆಂತರಿಕ ವಿಷಯಗಳು ಸಹ ಪಕ್ಷದ ಸರ್ವೇಯಲ್ಲಿ ತಿಳಿದು ಬಂದಿತ್ತು. ಹಗರಿಬೊಮ್ಮನಹಳ್ಳಿ ಎಸ್ಸಿ ಮೀಸಲು ಕ್ಷೇತ್ರದ ಟಿಕೆಟ್ ಸಹ ಘೋಷಣೆಯಾಗಿಲ್ಲ. ಮಾಜಿ ಶಾಸಕ ನೇಮಿರಾಜ್ ನಾಯ್ಕ, ನಿವೃತ್ತ ಐಎಎಸ್ ಅಧಿಕಾರಿ ಲಕ್ಷೀ¾ ನಾರಾಯಣ, ಬಲ್ಲಹುಣಸೆ ರಾಮಣ್ಣ ಆಕಾಂಕ್ಷಿಗಳಾಗಿದ್ದಾರೆ. ಕಾಂಗ್ರೆಸ್‌ನ ಹಾಲಿ ಶಾಸಕ ಭೀಮಾನಾಯ್ಕ ವಿರುದ್ಧ ಮಾಜಿ ಶಾಸಕ ನೇಮಿರಾಜ್ ನಾಯ್ಕ ಸತತ ಎರಡು ಬಾರಿ ಪರಾಭವಗೊಂಡಿದ್ದಾರೆ. ಮೂರನೇ ಬಾರಿಗೆ ಸ್ಪ ರ್ಧಿಸಿದರೆ ಗೆಲ್ಲುವರೇ ಎಂಬ ಅನುಮಾನ ಪಕ್ಷವನ್ನು ಕಾಡುತ್ತಿದೆ. ಇನ್ನುಳಿದ ಇಬ್ಬರು ಆಕಾಂಕ್ಷಿಗಳು ಸಹ ಎಷ್ಟರ ಮಟ್ಟಿಗೆ ಸಮರ್ಥರಿದ್ದಾರೆ ಎಂಬ ಅನುಮಾನ ಪಕ್ಷಕ್ಕೆ ಕಾಡುತ್ತಿದೆ.
ಸೂಕ್ತ ಅಭ್ಯರ್ಥಿಗೆ ಶೋಧ
ರಾಯಚೂರು: ಮಾನ್ವಿ ಕ್ಷೇತ್ರದಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಸೂಕ್ತ ಅಭ್ಯರ್ಥಿಗಾಗಿ ಕಾದು ನೋಡುವ ತಂತ್ರ ಹೆಣೆದಿದೆ. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಉತ್ತಮ ಮತ ಪಡೆದಿದ್ದ ಶರಣಪ್ಪ ಗುಡದಿನ್ನಿ ಈ ಬಾರಿ ಕಾಂಗ್ರೆಸ್ ಸೇರಿದ್ದಾರೆ. ಮಾಜಿ ಶಾಸಕ ಗಂಗಾಧರ ನಾಯಕ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಈ ಕ್ಷೇತ್ರದಲ್ಲಿ ಸದ್ಯ ಜೆಡಿಎಸ್ ಶಾಸಕರಿದ್ದು, ಆಡಳಿತ ವಿರೋ ಧಿ ಅಲೆಯಿದೆ. ಈ ಅವಕಾಶವನ್ನು ಬಿಜೆಪಿ ಕಾಂಗ್ರೆಸ್ ಬಳಸಿಕೊಳ್ಳಲು ಮುಂದಾಗಿವೆ. ಕಾಂಗ್ರೆಸ್‌ನಲ್ಲಿ ಟಿಕೆಟ್‌ನಲ್ಲಿ ಪೈಪೋಟಿ ಜೋರಾಗಿದ್ದು, ಮಾಜಿ ಶಾಸಕ ಹಂಪಯ್ಯ ನಾಯಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಅಲ್ಲಿ ಟಿಕೆಟ್ ಸಿಗದಿದ್ದಲ್ಲಿ ಈ ಇಬ್ಬರಲ್ಲಿ ಒಬ್ಬರು ಬಿಜೆಪಿಯಿಂದ ಕಣಕ್ಕಿಳಿಯಬಹುದು ಎನ್ನಲಾಗುತ್ತಿದೆ. ಶರಣಪ್ಪ ಗುಡದಿನ್ನಿ ಮತ್ತೆ ಬಿಜೆಪಿ ಬರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು.
ರಾಮಚಂದ್ರಗೌಡರಿಗೆ ಟಿಕೆಟ್
ಶಿಡ್ಲಘಟ್ಟ: ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಎಂ.ರಾಜಣ್ಣ ಮತ್ತು ಉದ್ಯಮಿ ಹಾಗೂ ಸಮಾಜ ಸೇವಕ ಸೀಕಲ್ ರಾಮಚಂದ್ರಗೌಡರ ಮಧ್ಯೆ ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ಏರ್ಪಟ್ಟಿತ್ತು. ಕ್ಷೇತ್ರದಲ್ಲಿ ಈಗಾಗಲೇ ಅನೇಕ ರೀತಿಯ ಜನಸೇವಾ ಕಾರ್ಯ ಮಾಡುತ್ತಾ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸೀಕಲ್ ರಾಮಚಂದ್ರಗೌಡರ ನೇತೃತ್ವದಲ್ಲಿ ವಿವಿಧ ಪಕ್ಷಗಳ ಅನೇಕ ಮುಖಂಡರು ಸುನಾಮಿಯಂತೆ ಸೇರ್ಪಡೆ ಯಾಗುತ್ತಿದ್ದಾರೆ. ಇದರಿಂದಾಗಿ ಕ್ಷೇತ್ರಾದ್ಯಂತ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿ ಕುತೂಹಲ ಕೆರಳಿಸಿದೆ.
ಶಿವಮೊಗ್ಗ ನಗರ ಬಿಸಿತುಪ್ಪ
ಶಿವಮೊಗ್ಗ: ಸಂಘಟನಾತ್ಮಕವಾಗಿ ತುಂಬಾ ಪ್ರಬಲವಾಗಿದ್ದ ಶಿವಮೊಗ್ಗ ನಗರ ಪ್ರಸ್ತುತ ಬಿಜೆಪಿಗೆ ಕಗ್ಗಂಟಾಗಿ ಪರಿಣಮಿಸಿದೆ. ಮೊದಲ ಪಟ್ಟಿಯಲ್ಲೇ ಟಿಕೆಟ್ ಘೋಷಣೆಯಾಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಈಶ್ವರಪ್ಪ ವಿದಾಯ, ಆಯನೂರು ಮಂಜುನಾಥ್ ಬಂಡಾಯ ಬಿಜೆಪಿ ಪಾಲಿಗೆ ಬಿಸಿ ತುಪ್ಪವಾಗಿದೆ. ಟಿಕೆಟ್ ಘೋಷಣೆಗೆ ಕೆಲವೇ ಗಂಟೆಗಳ ಮೊದಲು ಕೆ.ಎಸ್. ಈಶ್ವರಪ್ಪ ವರಿಷ್ಠರಿಗೆ ಬರೆದಿರುವ ವಿದಾಯದ ಪತ್ರ ಹಲವು ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಹೊಸ ಬೆಳವಣಿಗೆಯಿಂದ ಇತ್ತ ಟಿಕೆಟ್ ಆಕಾಂಕ್ಷಿಗಳಲ್ಲಿ ಆಸೆ ಚಿಗುರಿದೆ. ಎಸ್.ದತ್ತಾತ್ರಿ, ಧನಂಜಯ ಸರ್ಜಿ, ಹರಿಕೃಷ್ಣ, ಜ್ಯೋತಿ ಪ್ರಕಾಶ್ ಮುಂತಾದವರು ತಮಗೆ ಟಿಕೆಟ್ ಸಿಗಬಹುದು ಎಂಬ ಲೆಕ್ಕಾಚಾರ ಹಾಕಿದ್ದಾರೆ. ಇಷ್ಟೆಲ್ಲ ಬೆಳವಣಿಗೆಗಳ ನಡುವೆಯೂ ಆಯನೂರು ಮಂಜುನಾಥ್ ಟಿಕೆಟ್ ಸಿಗುವ ಭರವಸೆಯಲ್ಲಿದ್ದಾರೆ.
ಕೊನೆಗೂ ಪರಣ್ಣ ಮುನವಳ್ಳಿಗೆ ಟಿಕೆಟ್
ಕೊಪ್ಪಳ: ಭತ್ತದ ನಾಡು ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿಗೆ ಬಿಜೆಪಿ ಮೊದಲ ಪಟ್ಟಿಯಲ್ಲಿ ಹೆಸರು ಪ್ರಕಟಿಸಿರಲಿಲ್ಲ. ಇದರಿಂದ ಅವರಿಗೆ ಢವ..ಢವ.. ಶುರುವಾಗಿತ್ತು. ಆದರೆ ಎರಡನೇ ಪಟ್ಟಿಯಲ್ಲಿ ಅವರಿಗೆ ಟಿಕೆಟ್ ಲಭಿಸಿದೆ. ಇಲ್ಲಿ ಪಕ್ಷದ ಮುಖಂಡರಾದ ವಿರೂಪಾಕ್ಷಪ್ಪ ಸಿಂಗನಾಳ, ಗಿರಿಗೌಡ, ನೆಕ್ಕಂಟಿ ಸೂರಿಬಾಬು ಸೇರಿ ಹಲವರು ಟಿಕೆಟ್ ಆಕಾಂಕ್ಷಿತರಾಗಿದ್ದರು. ವಿಶೇಷವೆಂಬಂತೆ ಗಂಗಾವತಿ ಕ್ಷೇತ್ರದಲ್ಲಿ ಈ ಬಾರಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಕೆಆರ್‌ಪಿ ಪಕ್ಷ ಸ್ಥಾಪಿಸಿ ಚುನಾವಣಾ ಕಣಕ್ಕಿಳಿದಿದ್ದಾರೆ. ಹೀಗಾಗಿ ಅಂಜನಾದ್ರಿಯ ನೆಲದಲ್ಲಿ ಅವರಿಗೆ ಟಕ್ಕರ್ ಕೊಡಲು, ಪ್ರಬಲ ಸಂಘ ಪರಿವಾರದ ನಾಯಕರು ಅಥವಾ ಹಿಂದುತ್ವದ ಕಟ್ಟಾಳುಗಳನ್ನು ಕಣಕ್ಕಿಳಿಸಿ ಮುಂದೆ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎನ್ನುವ ಚಿಂತನೆಯಲ್ಲಿ ಪಕ್ಷ ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಿಸಿರಲಿಲ್ಲ. ಪರಣ್ಣಗೆ ಟಿಕೆಟ್ ಕೊಟ್ಟರೆ ಪಕ್ಷದೊಳಗೆ ಕೆಲವು ಭಿನ್ನಮತ ಕಾಣಿಸಲಿವೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಮೊದಲ ಪಟ್ಟಿಯಲ್ಲಿ ಹೆಸರು ಬಾರದ ಹಿನ್ನೆಲೆಯಲ್ಲಿ ಪರಣ್ಣ ಬೆಂಗಳೂರಿಗೆ ತೆರಳಿ ಬಿಎಸ್‌ವೈ ಸೇರಿ ಹಲವು ನಾಯಕರನ್ನು ಭೇಟಿ ಮಾಡಿದ್ದರು. ಕೊನೆಗೂ ಟಿಕೆಟ್ ಪಡೆಯುವಲ್ಲಿ ಪರಣ್ಣ ಮುನವಳ್ಳಿ ಯಶಸ್ವಿಯಾಗಿದ್ದಾರೆ.
ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರಕ್ಕೆ ಹೊಸ ಮುಖಗಳಿಗೆ ಅವಕಾಶ
ಚನ್ನಗಿರಿಗೆ ಶಿವಕುಮಾರ್
ದಾವಣಗೆರೆ: ಮಾಯಕೊಂಡ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ 13ಕ್ಕೂ ಹೆಚ್ಚು ಜನ ಬಿಜೆಪಿ ಟಿಕೆಟ್ ಆಕಾಂಕ್ಷಿತರಿದ್ದರು. ಹಾಲಿ ಶಾಸಕ ಪ್ರೊ|ಲಿಂಗಣ್ಣ ಅವರಿಗೆ ವಯಸ್ಸಿನ ಆಧಾರದಲ್ಲಿ ಟಿಕೆಟ್ ನಿರಾಕರಣೆ ಆಗಬಹುದೆಂಬ ಮಾತು ಕೇಳಿ ಬರುತ್ತಿತ್ತು. ಮಾಜಿ ಶಾಸಕ ಎಂ.ಬಸವರಾಜ ನಾಯ್ಕ ಅವರಿಗೆ ಕೊನೆಯದಾಗಿ ಟಿಕೆಟ್ ಲಭಿಸಿದೆ. ತಾಪಂ ಮಾಜಿ ಸದಸ್ಯ ಆಲೂರು ನಿಂಗರಾಜ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಹನುಮಂತ ನಾಯ್ಕ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ಎಲ್. ಶಿವಪ್ರಕಾಶ್ ಒಳಗೊಂಡಂತೆ 13ಕ್ಕೂ ಹೆಚ್ಚು ಜನ ಆಕಾಂಕ್ಷಿಗಳಿದ್ದರು. ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಎಂ. ಬಸವರಾಜ ನಾಯ್ಕ ಟಿಕೆಟ್‌ಗೆ ಭಾರೀ ಪ್ರಯತ್ನ ನಡೆಸಿದ್ದರು. ಟಿಕೆಟ್ ದೊರೆಯದ ಕಾರಣಕ್ಕೆ ಬಿಜೆಪಿ ತ್ಯಜಿಸಿ ಕಳೆದ ಚುನಾವಣೆಯಲ್ಲಿ ಜೆಡಿಯುನಿಂದ ಸ್ಪರ್ಧಿಸಿದ್ದರು. ಹೊಸಬರಿಗೆ ಅವಕಾಶದ ಕೋಟಾದಡಿ ಆಲೂರು ನಿಂಗರಾಜ್, ಆರ್.ಎಲ್. ಶಿವಪ್ರಕಾಶ್ ಮುಂಚೂಣಿಯಲ್ಲಿದ್ದರು. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮಾಡಾಳು ವಿರೂಪಾಕ್ಷಪ್ಪ ಜೈಲುವಾಸ ಅನುಭವಿಸುತ್ತಿರುವ ಕಾರಣಕ್ಕೆ ಚನ್ನಗಿರಿಯಲ್ಲಿ ಶಿವಕುಮಾರ್ ಅವರಿಗೆ ಟಿಕೆಟ್ ದೊರಕಿದೆ.
ಉತ್ತರಕ್ಕೆ ಲೋಕಿಕೆರೆ
ದಾವಣಗೆರೆ: ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಹೊಸ ಮುಖಗಳಿಗೆ ಅವಕಾಶ ನೀಡಬಹುದೆಂಬ ಲೆಕ್ಕಾಚಾರವಿತ್ತು. ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ ಅವರಿಗೆ ಟಿಕೆಟ್ ಘೋಷಿಸಿದೆ. ದಾವಣಗೆರೆ ಉತ್ತರ ಕ್ಷೇತ್ರದ ಹಾಲಿ ಶಾಸಕ ಎಸ್.ಎ.ರವೀಂದ್ರನಾಥ್ ಚುನಾವಣೆಯಿಂದ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ಬಿಜೆಪಿ ಹೊಸಮುಖದ ತಲಾಶ್‌ನಲ್ಲಿತ್ತು. ಸಂಸದ ಡಾ| ಜಿ.ಎಂ. ಸಿದ್ದೇಶ್ವರ ಪುತ್ರ ಜಿ.ಎಸ್.ಅನಿತ್‌ಕುಮಾರ್, ಮಾಜಿ ಮೇಯರ್ ಎಸ್.ಟಿ. ವೀರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್, ಬಯಲುಸೀಮೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಣಬೇರು ಜೀವನಮೂರ್ತಿ, ಕೊಂಡಜ್ಜಿ ಜಯಪ್ರಕಾಶ್, ಬಿಜೆಪಿ ರಾಜ್ಯ ಕಾರ್ಯದರ್ಶಿ, ಮಾಜಿ ಮೇಯರ್ ಸುಧಾ ಜಯ ರುದ್ರೇಶ್ ಆಕಾಂಕ್ಷಿತರಾಗಿದ್ದರು.
ದಕ್ಷಿಣಕ್ಕೆ ಅಜಯ್‌ಕುಮಾರ್
ದಾವಣಗೆರೆ: ದಾವಣಗೆರೆ ದಕ್ಷಿಣದಿಂದ ಮಾಜಿ ಮೇಯರ್ ಬಿ.ಜಿ.ಅಜಯ್‌ಕುಮಾರ್ ಹೈಕಮಾಂಡ್ ಟಿಕೆಟ್ ಘೋಷಿಸಿದೆ. ನಗರಸಭೆ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ಮೇಯರ್‌ಗಳಾದ ಬಿ.ಜಿ.ಅಜಯ್‌ಕುಮಾರ್, ಉಮಾ ಪ್ರಕಾಶ್, ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸ ಕರಿಯಪ್ಪ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ. ಸತೀಶ್, ವೈ. ಮಲ್ಲೇಶ್ ಪ್ರಮುಖ ಆಕಾಂಕ್ಷಿತರಾಗಿದ್ದರು. ಮಾಜಿ ಮೇಯರ್ ಬಿ.ಜಿ. ಅಜಯ್‌ಕುಮಾರ್ ಜನತಾ ಪರಿವಾರದಿಂದ ಬಿಜೆಪಿಗೆ ಬಂದವರು. 2019ರ ನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದು ಮೇಯರ್ ಆಗಿದ್ದವರು. ರಿಯಲ್ ಎಸ್ಟೇಟ್, ಹೊಟೇಲ್‌ಉದ್ಯಮಿ. ಅಂತಾರಾಷ್ಟ್ರೀಯ ಕ್ರೀಡಾಪಟು ಆಗಿರುವ ಅಜಯ್‌ಕುಮಾರ್ ಸಂಘಟನ ಚತುರ. ರಾಜಕೀಯ ನಡೆಯ ಮೂಲಕವೇ ಬಹುಮತವೇ ಇಲ್ಲದ ನಗರಪಾಲಿಕೆಯಲ್ಲಿ ಬಿಜೆಪಿಗೆ ಅಧಿಕಾರ ತಂದುಕೊಟ್ಟವರು.
ಲಿಂಗಾಯತರಿಗೆ ಟಿಕೆಟ್ ನೀಡಲೂ ಪೈಪೋಟಿ
ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸಿ ಕೊಳ್ಳಲು ಆಕಾಂಕ್ಷಿಗಳು ತಿಂಗಳಿನಿಂದ ಪೈಪೋಟಿಗೆ ಬಿದ್ದಿರುವುದು ಎಲ್ಲರಿಗೂ ಗೊತ್ತು. ಆದರೆ ಹೆಚ್ಚು-ಕಡಿಮೆ ಇಷ್ಟೇ ಪ್ರಮಾಣದ ಪೈಪೋಟಿ ವೀರಶೈವ-ಲಿಂಗಾಯತ ಸಮುದಾಯದ ಅಭ್ಯರ್ಥಿ ಗಳಿಗೆ ಟಿಕೆಟ್ ನೀಡುವ ವಿಚಾರದಲ್ಲೂ ಆಗಿದೆ!
ಕಾಂಗ್ರೆಸ್ ಮತ್ತು ಬಿಜೆಪಿ ವೀರಶೈವ-ಲಿಂಗಾಯತ ಸಮು ದಾಯಕ್ಕೆ ಸೇರಿದ ಅಭ್ಯರ್ಥಿಗಳಿಗೆ ಅತೀ ಹೆಚ್ಚು ಟಿಕೆಟ್ ನೀಡಿವೆ. ಈ ಮೂಲಕ ಅತೀದೊಡ್ಡ ಸಮುದಾಯಕ್ಕೆ ಮಣೆ ಹಾಕಲು ಮುಂದಾಗಿವೆ. ಹಾಗೊಂದು ವೇಳೆ ಈ ಪ್ರಯತ್ನದಲ್ಲಿ ಯಶಸ್ವಿಯಾದರೆ ಅನಾಯಾಸವಾಗಿ ಅಧಿಕಾರದ ಗದ್ದುಗೆ ಏರಬಹುದು ಎಂಬ ಲೆಕ್ಕಾಚಾರ ಈ ಪಕ್ಷಗಳದ್ದಾಗಿದೆ.
ಕಾಂಗ್ರೆಸ್ ಇದುವರೆಗೆ 166 ಸೀಟುಗಳಿಗೆ ಟಿಕೆಟ್ ಹಂಚಿಕೆ ಮಾಡಿದ್ದು, ಈ ಪೈಕಿ ಎರಡೂ ಪಟ್ಟಿಯಲ್ಲಿ ಕ್ರಮವಾಗಿ 30 ಹಾಗೂ 11 ಸೇರಿ 41 ಲಿಂಗಾಯತ ಸಮುದಾಯದ ಅಭ್ಯರ್ಥಿಗಳಿಗೆ ನೀಡಿದೆ. 58 ಸೀಟುಗಳು ಬಾಕಿ ಇದ್ದು, ಇನ್ನೂ ಕನಿಷ್ಠ 8-10 ಲಿಂಗಾಯತ ಸಮುದಾಯದ ಅಭ್ಯರ್ಥಿಗಳಿಗೆ ಮಣೆ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಬಿಜೆಪಿ ತನ್ನ ಮೊದಲ ಪಟ್ಟಿಯಲ್ಲೇ 189 ಸೀಟುಗಳಿಗೆ ಟಿಕೆಟ್ ಘೋಷಿಸಿದ್ದು, ಅದರಲ್ಲಿ 51 ಅಭ್ಯರ್ಥಿಗಳು ವೀರಶೈವ- ಲಿಂಗಾಯತ ಸಮುದಾಯಕ್ಕೆ ಸೇರಿದವರಿದ್ದಾರೆ.
ಒಕ್ಕಲಿಗರಿಗೆ ನೀಡಲೂ ಪೈಪೋಟಿ: ಮತ್ತೂಂದು ಅತಿದೊಡ್ಡ ಸಮುದಾಯ ಒಕ್ಕಲಿಗರಿಗೆ ಕಾಂಗ್ರೆಸ್ 35 ಸೀಟುಗಳನ್ನು ನೀಡಿದ್ದರೆ, ಬಿಜೆಪಿ ಇದಕ್ಕಿಂತ ಹೆಚ್ಚು ಅಂದರೆ 41 ಟಿಕೆಟ್‌ಗಳನ್ನು ಘೋಷಿಸಿದೆ. ಬಿಜೆಪಿ 32 ಟಿಕೆಟ್ ಒಬಿಸಿ ಸಮು ದಾಯಗಳಿಗೆ ನೀಡಿದ್ದರೆ, ಕಾಂಗ್ರೆಸ್ 28 ಮಂದಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್‌ನಲ್ಲಿ ಒಂದು ವೇಳೆ ವೀರಶೈವ- ಲಿಂಗಾ ಯತರು ಪಡೆದ ಟಿಕೆಟ್ ಸಂಖ್ಯೆ 50ರ ಗಡಿ ದಾಟಿದರೆ, ಇಷ್ಟೊಂದು ಪ್ರಮಾಣದ ಸೀಟುಗಳನ್ನು ಆ ಸಮುದಾಯಕ್ಕೆ ಬಿಟ್ಟುಕೊಟ್ಟಿರುವುದು ಇದೇ ಮೊದಲು ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.