ಪಠ್ಯ ಪರಿಷ್ಕರಣೆ, ಮತಾಂತರ ನಿಷೇಧ ಕಾಯ್ದೆ ರದ್ದತಿಗೆ BJP ಆಕ್ರೋಶ
Team Udayavani, Jun 16, 2023, 7:52 AM IST
ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ಹಾಗೂ ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಲು ರಾಜ್ಯ ಸಂಪುಟ ಸಭೆಯಲ್ಲಿ ಕೈಗೊಂಡಿರುವ ನಿರ್ಧಾರದ ವಿರುದ್ಧ ರಾಜ್ಯ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸರಕಾರ ದ್ವೇಷದ ನಡೆ ಅನುಸರಿಸುತ್ತಿದೆ ಎಂದು ಟೀಕಿಸಿದೆ.
ಪಕ್ಷದ ಅಧಿಕೃತ ಟ್ವಿಟರ್ ಖಾತೆಯಿಂದ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಲಾಗಿದ್ದು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಉಗ್ರಗಾಮಿ ಸಂಘಟನೆ ಪಿಎಫ್ಐ ವೇಷದಲ್ಲಿರುವ ಕಾಂಗ್ರೆಸ್ ಎಂದು ಕಿಡಿಕಾರಿದೆ. ಸಾವರ್ಕರ್ ಹಾಗೂ ಹೆಡ್ಗೇವಾರ್ ಪಠ್ಯವನ್ನು ಕೈಬಿಡಬೇಕೆಂಬುದು ಎಸ್‌ಡಿಪಿಐ ಅಂಗ ಸಂಸ್ಥೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಇರಾದೆಯಾಗಿತ್ತು. ಅದನ್ನು ಕಾಂಗ್ರೆಸ್ ಈಡೇರಿಸಿ ತುಷ್ಟೀಕರಣ ರಾಜಕಾರಣದ ತುತ್ತತುದಿ ಏರಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮಾಜಿ ಸಚಿವ ವಿ ಸುನಿಲ್ ಕುಮಾರ್, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್, ಸಂಸದ ತೇಜಸ್ವಿ ಸೂರ್ಯ, ಶಾಸಕ ಬಿ.ವೈ.ವಿಜಯೇಂದ್ರ ಸಹಿತ ಪ್ರಮುಖ ನಾಯಕರು ಈ ಸಂಬಂಧ ಆಕ್ರೋಶ ಹೊರಹಾಕಿದ್ದಾರೆ.
ತುಷ್ಟೀಕರಣ ನೀತಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದ್ವೇಷದ ಹಾಗೂ ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದು, ಹಿಂದಿನ ಸರಕಾರದ ತೀರ್ಮಾನಗಳನ್ನು ರದ್ದು ಮಾಡುವುದನ್ನೇ ತನ್ನ ಸಾಧನೆ ಎನ್ನುವಂತೆ ನಡೆದುಕೊಳ್ಳುತ್ತಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬೊಮ್ಮಾಯಿ ಅವರು, ಸಮಾಜಕ್ಕೆ ಮಾರಕವಾಗಿದ್ದ ಮತಾಂತರ ನಿಷೇಧ ಕಾಯ್ದೆ ರದ್ದು ಮಾಡುವ ತೀರ್ಮಾನ ತೆಗೆದುಕೊಂಡು ಯಾರ ಓಲೈಕೆ ಮಾಡುತ್ತಿದೆ? ಹೈಕಮಾಂಡ್ ಹಂಗಿನಲ್ಲಿ ಅಧಿಕಾರ ನಡೆಸುತ್ತಿರುವ ಸಿದ್ದರಾಮಯ್ಯ ರಾಜ್ಯದ ಜನರ ಹಿತಾಸಕ್ತಿಗಿಂತ ಹೈಕಮಾಂಡ್ ಓಲೈಕೆಗೆ ಆದ್ಯತೆ ನೀಡುತ್ತಿರುವಂತಿದೆ ಎಂದು ಆರೋಪಿಸಿದ್ದಾರೆ.
ಪಠ್ಯ ಪುಸ್ತಕವನ್ನೂ ಪರಿಷ್ಕರಣೆಯ ಹೆಸರಲ್ಲಿ ಎಲ್ಲರಲ್ಲೂ ದೇಶಭಕ್ತಿ ಬೆಳೆಯಲು ಕಾರಣವಾಗುವಂತಹ ಆರೆಸ್ಸೆಸ್ ಸಂಘಟನೆ ಸ್ಥಾಪಿಸಿರುವ ಡಾ| ಕೇಶವ ಬಲಿರಾಮ್ ಹೆಡ್ಗೇವಾರ್ ಹಾಗೂ ವೀರ ಸಾವರ್ಕರ್ ಅವರ ಕುರಿತ ಪಠ್ಯವನ್ನು ತೆಗೆದು ಹಾಕಲು ತೀರ್ಮಾನ ತೆಗೆದುಕೊಂಡಿರುವುದು ದೇಶದ್ರೋಹಕ್ಕೆ ಸಮಾನ ಎಂದಿದ್ದಾರೆ.
ಇಟಲಿ ಮೇಡಂ ಪಾಠ ಸೇರಿಸುತ್ತೀರಾ?
ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ ವಿ. ಸುನೀಲ್ ಕುಮಾರ್, ರಾಷ್ಟ್ರಭಕ್ತರಾದ ವೀರ ಸಾವರ್ಕರ್ ಮತ್ತು ಹೆಡೆಗೇವಾರ್ ಅವರ ಪಾಠಗಳನ್ನು ಪಠ್ಯ ಪುಸ್ತಕದಿಂದ ಕೈ ಬಿಟ್ಟಿರುವ ಕಾಂಗ್ರೆಸ್ ಸರಕಾರ ಲೋಕಸಭೆ ಸ್ಥಾನದಿಂದ ಅನರ್ಹಗೊಂಡಿರುವ ವಿಫಲ ನಾಯಕನ ಹೆಸರಿನಲ್ಲಿ ಮಕ್ಕಳಿಗೆ ಪಠ್ಯ ರೂಪಿಸುತ್ತದೆಯೇ? ಪ್ರಣಾಳಿಕೆಯ ಭರವಸೆ ಜಾರಿಗೆ ದಿನಾಂಕ ಗ್ಯಾರಂಟಿಯಾಗದ ಕಾರಣಕ್ಕೆ ಮತಾಂತರ ನಿಷೇಧ ಕಾಯಿದೆ ರದ್ದುಪಡಿಸಿ ಸಾರ್ವಜನಿಕರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಸಂಪುಟದಲ್ಲಿ ತೆಗೆದುಕೊಂಡ ಈ ಎರಡು ನಿರ್ಣಯದ ವಿರುದ್ಧ ಕಿಡಿಕಾರಿರುವ ಅವರು, ದೇಶಭಕ್ತ ಸ್ವಾತಂತ್ರ್ಯ ಹೋರಾಟಗಾರರ ಪಠ್ಯ ತೆಗೆಯಿರಿ ಎಂದು ನಕಲಿ ಗಾಂಧಿ ಪರಿವಾರ ನೀಡಿದ ಆದೇಶವನ್ನು ಪಾಲನೆ ಮಾಡುತ್ತಿದ್ದೀರಾ? ಮತಾಂಧ ಟಿಪ್ಪು, ದೇಶದ್ರೋಹಿ ಔರಂಗಜೇಬ್, ಅಧಿನಾಯಕಿ ಇಟಲಿ ಮೇಡಂ ಪಠ್ಯವನ್ನು ಸೇರಿಸಿ ಹೊಸ ಇತಿಹಾಸ ಬರೆಯುತ್ತೀರಾ ಎಂದು ಕಾಂಗ್ರೆಸಿಗರನ್ನು ಕೆಣಕಿದ್ದಾರೆ.
ಕನ್ನಡಿಗರು ಸುಮ್ಮನೆ ಕುಳಿತರೆ ಬೆಂಗಳೂರಿನಲ್ಲಿ ಲೂಲು ಮಾಲ… ಕಟ್ಟಿದವರ ಇತಿಹಾಸವನ್ನೂ ಮುಂದಿನ ಪೀಳಿಗೆಯ ಜನಕ್ಕೆ ಕಾಂಗ್ರೆಸಿಗರು ಹೇಳಿಕೊಡಬಹುದು. ಮಂಗಳೂರು ಕುಕ್ಕರ್ ಸ್ಫೋಟದ ಆರೋಪಿಗೂ ದೇಶಭಕ್ತರ ಪಠ್ಯದ ಸಾಲಿನಲ್ಲಿ ಅವಕಾಶ ನೀಡಬಹುದು. ವಿದ್ಯಾರ್ಥಿಗಳು ಹಾಗೂ ಸಮಾಜದ ಹಿತದೃಷ್ಟಿಯಿಂದ ಕಾಂಗ್ರೆಸ್ ಸರಕಾರದ ಈ ನೀತಿಯ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತಾಂತರ ನಿಷೇಧ ಕಾಯ್ದೆ ವಾಪಸ್ ತೆಗದುಕೊಳ್ಳುತ್ತದೆ ಎಂದು ನಾವು ಮೊದಲೇ ಎಚ್ಚರಿಸಿದ್ದೆವು. ಈಗ ಅದನ್ನು ನಿಜ ಮಾಡುತ್ತಿದೆ. ಸಮವಸ್ತ್ರ ಸಂಹಿತೆಯನ್ನು ಬದಿಗಿಟ್ಟಿದೆ. ಇಡೀ ರಾಜ್ಯಕ್ಕೆ ಹಿಜಾಬ್ ತೊಡಿಸುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.