ಬಿಳಿನೆಲೆಯ ಭಾಗ್ಯ ಹೊಳೆಗೆ ಕೊನೆಗೂ ಸಿಗಲಿದೆ ಸೇತುವೆ ಭಾಗ್ಯ
Team Udayavani, Mar 14, 2021, 5:45 AM IST
ಕಡಬ: ಕೊನೆಗೂ ಬಿಳಿನೆಲೆಯ ಭಾಗ್ಯ ಹೊಳೆಗೆ ಸೇತುವೆಯ ಭಾಗ್ಯ ಲಭಿಸಲಿದೆ. ಉದ್ಮಯ ಎಂಬಲ್ಲಿ ಶಾಲಾ ಸಂಪರ್ಕ ಸೇತು ಯೋಜನೆಯಡಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಕಿರು ಸೇತುವೆ ನಿರ್ಮಾಣದ ಕಾಮಗಾರಿ ಮುಂದಿನ ವಾರ ಆರಂಭಗೊಳ್ಳಲಿದೆ.
ಸ್ಥಳೀಯರು ಮಳೆಗಾಲದಲ್ಲಿ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಉದಯವಾಣಿ ಸುದಿನ ಹಲವು ಬಾರಿ ಸಚಿತ್ರ ವರದಿಗಳನ್ನು ಪ್ರಕಟಿಸಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನ ಸೆಳೆದಿತ್ತು. ಅನುದಾನ ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಪುತ್ತೂರಿನ ಮಾಸ್ಟರ್ ಪ್ಲಾನರಿ ಸಂಸ್ಥೆ(ಎಂ.ಎನ್.ಪ್ರಭಾಕರ್)ಸೇತುವೆ ನಿರ್ಮಾಣದ ಹೊಣೆಯನ್ನು ಹೊತ್ತುಕೊಂಡಿದೆ. ಲೋಕೋಪಯೋಗಿ ಇಲಾಖೆಯ ಮೂಲಕ ಕಾಮಗಾರಿ ನಿರ್ವಹಣೆಯಾಗಲಿದ್ದು, ಮಳೆಗಾಲದ ಮೊದಲು ಕಾಮಗಾರಿ ಪೂರ್ಣಗೊಳಿಸಿ ಸೇತುವೆಯನ್ನು ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕೆಂಬ ಉದ್ದೇಶವಿದೆ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಯಶವಂತ್ ತಿಳಿಸಿದ್ದಾರೆ.
ಮಳೆಗಾಲ ಆರಂಭವಾಗುತ್ತಲೇ ಜನರಲ್ಲಿ ನಡುಕ
ಮಳೆಗಾಲ ಆರಂಭವಾಗುತ್ತದೆ ಎನ್ನುವಾಗಲೇ ಬಿಳಿನೆಲೆ ಗ್ರಾಮದ ಕಾಡಂಚಿನ ಪುತ್ತಿಲ ಬೈಲಡ್ಕ ಭಾಗದ ಜನರ ಎದೆಯಲ್ಲಿ ನಡುಕ ಶುರುವಾಗುತ್ತದೆ. ಯಾಕೆಂದರೆ ಸೇತುವೆ ಇಲ್ಲದ ಇಲ್ಲಿನ ಭಾಗ್ಯ ಹೊಳೆಯನ್ನು ಮಳೆಗಾಲದಲ್ಲಿ ದಾಟುವುದೇ ಸಾಹಸದ ಕೆಲಸ. ಮಳೆಗಾಲದಲ್ಲಿ ಉಕ್ಕಿ ಹರಿಯುವ ಈ ಹೊಳೆಯನ್ನು ದಾಟಲು ಸ್ಥಳೀಯರೇ ನಿರ್ಮಿಸುವ ಅಡಿಕೆ ಮರದ ಕಾಲು ಸಂಕವೇ ಸಂಪರ್ಕ ಸೇತು.
ಭಾಗ್ಯ ಹೊಳೆಗೆ ಉದ್ಮಯ ಎಂಬಲ್ಲಿ ಸೇತುವೆ ನಿರ್ಮಿಸಬೇಕೆಂಬ ಬೇಡಿಕೆ ಇಂದು ನಿನ್ನೆಯದಲ್ಲ. ಸುಮಾರು 30ಕ್ಕೂ ಹೆಚ್ಚು ಮನೆಗಳ ಜನರು, ಶಾಲಾ ವಿದ್ಯಾರ್ಥಿಗಳು ಸೇತುವೆಯಿಲ್ಲದೆ ಮಳೆಗಾಲದಲ್ಲಿ ಅಪಾಯಕಾರಿಯಾಗಿ ಹೊಳೆ ದಾಟಬೇಕಿತ್ತು. ಬೇಸಗೆಯ 3 ತಿಂಗಳು ಹೊರತು ಪಡಿಸಿ ಉಳಿದ ದಿನಗಳಲ್ಲಿ ಜನತೆ ಹೊರ ಜಗತ್ತಿನ ಸಂಪರ್ಕಕ್ಕಾಗಿ ತಾವೇ ನಿರ್ಮಿಸುವ ಅಡಿಕೆ ಮರದ ತೂಗು ಸೇತುವೆ ಮಾದರಿಯ ಕಾಲು ಸಂಕವನ್ನೇ ಆಶ್ರಯಿಸಬೇಕಿದೆ.
ಪ್ರತೀ ವರ್ಷ ಅಡಿಕೆ ಮರದ ಕಾಲು ಸಂಕ ನಿರ್ಮಾಣ
ಇಲ್ಲಿನ ಅರ್ಗಿನಿ, ಅಮೈ, ಬೈಲು ಪ್ರದೇಶದ ಜನರು ಬಿಳಿನೆಲೆ ಮುಖಾಂತರ ಕಡಬ, ಸುಬ್ರಹ್ಮಣ್ಯ ಮೊದಲಾದ ಪ್ರಮುಖ ಪಟ್ಟಣಗಳನ್ನು ಸಂಪರ್ಕಿಸಬೇಕಾದರೆ ಭಾಗ್ಯ ಹೊಳೆಯನ್ನು ದಾಟಿ ಮುಂದುವರಿಯಬೇಕಾಗಿದೆ. ಪ್ರತೀ ವರ್ಷ ಇಲ್ಲಿನ ಜನರು ಹಣ ಹೊಂದಿಸಿ ಸುಮಾರು 20 ಸಾವಿರ ರೂ. ವೆಚ್ಚದಲ್ಲಿ ಅಡಿಕೆ ಮರದ ಕಾಲು ಸಂಕ ನಿರ್ಮಿಸುತ್ತಾರೆ. ಹೊಳೆಯ ಎರಡೂ ಬದಿಗಳಲ್ಲಿರುವ ದೊಡ್ಡ ಮರಗಳಿಗೆ ಕಬ್ಬಿಣದ ರೋಪ್ ಆಳವಡಿಸಿ ಅಡಿಕೆ ಮರದಿಂದ ಪಾಲ ನಿರ್ಮಿಸಿದರೆ ಅದು ಒಂದು ವರ್ಷ ಮಾತ್ರ ಪ್ರಯೋಜನಕ್ಕೆ ಸಿಗುತ್ತದೆ. ಮಳೆಗಾಲ ಕಳೆದಾಗ ಕಬ್ಬಿಣದ ರೋಪ್ ತುಕ್ಕು ಹಿಡಿದು ಅಡಿಕೆ ಮರ ಶಿಥಿಲಗೊಂಡು ಮತ್ತೆ ಹೊಸದಾಗಿ ಸೇತುವೆ ನಿರ್ಮಿಸಬೇಕಾದ ಅನಿವಾರ್ಯತೆ ಇಲ್ಲಿದೆ.
34 ಲಕ್ಷ ರೂ. ವೆಚ್ಚದಲ್ಲಿ ಕಿರು ಸೇತುವೆ ನಿರ್ಮಿಸಲು ಅನುದಾನ
ಹಲವು ವರ್ಷಗಳಿಂದ ಭಾಗ್ಯ ಹೊಳೆಗೆ ಸೇತುವೆ ನಿರ್ಮಿಸಬೇಕೆಂಬ ಬೇಡಿಕೆ ಇತ್ತು. ಅಲ್ಲಿ ಶಾಲಾ ಸಂಪರ್ಕ ಸೇತು ಯೋಜನೆಯಡಿ 50 ಲಕ್ಷ ರೂ. ವೆಚ್ಚದಲ್ಲಿ ಲಘು ವಾಹನಗಳೂ ಸಂಚರಿಸುವ ರೀತಿಯಲ್ಲಿ 3 ಮೀ. ಅಗಲ ಮತ್ತು 25 ಮೀ. ಉದ್ದದ ಸೇತುವೆ ನಿರ್ಮಾಣಗೊಳ್ಳಲಿದೆ. ವಾರದೊಳಗೆ ಕಾಮಗಾರಿ ಆರಂಭಗೊಳ್ಳಲಿದೆ. ಅದೇ ರೀತಿ ಶಿರಾಡಿ ಗ್ರಾಮದ ಶಿರ್ವತ್ತಡ್ಕದಲ್ಲಿಯೂ ಶಾಲಾ ಸಂಪರ್ಕ ಸೇತು ಯೋಜನೆಯಡಿ 34 ಲಕ್ಷ ರೂ. ವೆಚ್ಚದಲ್ಲಿ ಕಿರು ಸೇತುವೆ ನಿರ್ಮಿಸಲು ಅನುದಾನ ನೀಡಲಾಗಿದೆ. -ಎಸ್.ಅಂಗಾರ,
ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ
– ನಾಗರಾಜ್ ಎನ್.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.