ಹೊಸ ಬರೆ ಇಲ್ಲ ಉಡುಗೊರೆ ಹೊರೆಯೂ ಇಲ್ಲ : ತೆರಿಗೆ ಹೊರೆ ಹಾಕದ ಬಿಎಸ್‌ವೈ ಮ್ಯಾಜಿಕ್ ಬಜೆಟ್
Team Udayavani, Mar 9, 2021, 6:20 AM IST
ಕೊರೊನಾ ಸಂಕಷ್ಟದ ನಡುವೆಯೇ ಎಂಟನೇ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಸರ್ವರನ್ನು ಸಂತುಷ್ಟಗೊಳಿಸಲು ಯತ್ನಿಸಿದ್ದಾರೆ. ಕೃಷಿ ಮತ್ತು ಪೂರಕ ಚಟುವಟಿಕೆಗಳು, ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ, ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ, ಬೆಂಗಳೂರು ಸಮಗ್ರ ಅಭಿವೃದ್ಧಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆ ಎಂದು ಆರು ವಲಯಗಳಾಗಿ ವಿಂಗಡಿಸಿ ಎಲ್ಲರನ್ನೂ ಖುಷಿಪಡಿಸಲು ಯತ್ನಿಸಿದ್ದಾರೆ.
ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹೊತ್ತಿನಲ್ಲೇ ತಮ್ಮ 8ನೇ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಹಿಳೆಯರಿಗೆ ಭರಪೂರ ಯೋಜನೆಗಳು, ಗ್ರಾಮೀಣಾಭಿವೃದ್ಧಿ, ಕೃಷಿ ಮತ್ತು ನೀರಾವರಿ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ.
ಕೊರೊನಾ ಸಂಕಷ್ಟದ ನಡುವೆ ತಮ್ಮ ಆರ್ಥಿಕ ಇತಿಮಿತಿಯೊಳಗೆ ಪ್ರಗತಿಗೆ ಪೂರಕವಾದ ಬಜೆಟ್ ಮಂಡಿಸಿರುವ ಅವರು ಸರ್ವರನ್ನೂ ಸಂತೈಸುವ ಕೆಲಸ ಮಾಡಿದ್ದಾರೆ. ಸಂಪನ್ಮೂಲ ಕ್ರೋಡೀಕರಣ ವಿಚಾರದಲ್ಲೂ ಅತಿಯಾದ ನಿರೀಕ್ಷೆ ಮಾಡದೆ ಆರ್ಥಿಕ ಸಂಕಷ್ಟ ನಿರ್ವಹಣೆಗೆ ಸಾಲಕ್ಕೆ ಮೊರೆ ಹೋಗುವ “ಜಾಣ್ಮೆ’ ಮೆರೆದಿದ್ದಾರೆ.
“ಲೆಕ್ಕಾಚಾರ’ದ ಬಜೆಟ್
ಆರ್ಥಿಕ ಸ್ಥಿತಿ ವಾಸ್ತವತೆ ಅರಿತು ಅಳೆದು ತೂಗಿ “ಲೆಕ್ಕಾಚಾರ’ದ ಬಜೆಟ್ ಮಂಡಿಸಿರುವ ಮುಖ್ಯ ಮಂತ್ರಿ ಹೊಸ ಯೋಜನೆಗಳ ಘೋಷಣೆಯಲ್ಲಿ ಧಾರಾಳತನ ತೋರಿಲ್ಲ.
ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆಯ ಘೋಷಣೆ ಜತೆಗೆ 500 ಕೋಟಿ ರೂ. ಆನುದಾನ ಒದಗಿಸಿ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೂ 500 ಕೋಟಿ ರೂ., ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 50 ಕೋಟಿ ರೂ., ಅಲ್ಪಸಂಖ್ಯಾಕರ ಕಲ್ಯಾಣಕ್ಕೆ 1,500 ಕೋಟಿ ರೂ. ಒದಗಿಸುವ ಮೂಲಕ ಎಲ್ಲ ವರ್ಗದವರ ಓಲೈಕೆಗೆ ಮುಂದಾಗಿದ್ದಾರೆ.
ಸ್ಮೃತಿವನ
ತುಮಕೂರಿನಲ್ಲಿ ಡಾ| ಶಿವಕುಮಾರ ಸ್ವಾಮೀಜಿ ಹಾಗೂ ಉಡುಪಿಯಲ್ಲಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಗೌರವಾರ್ಥ ತಲಾ 2 ಕೋಟಿ ರೂ. ವೆಚ್ಚದಲ್ಲಿ ಸ್ಮೃತಿವನ ಸ್ಥಾಪನೆ, ಅಯೋಧ್ಯೆಯಲ್ಲಿ ಸುಸಜ್ಜಿತ ಕರ್ನಾಟಕ ಯಾತ್ರಿ ನಿವಾಸ ನಿರ್ಮಾಣಕ್ಕೆ 10 ಕೋಟಿ ರೂ. ನೆರವು ಒದಗಿಸುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ.
ಮಹಿಳೆಯರಿಗೆ ಬಂಪರ್
ಮಹಿಳೆಯರಿಗೆ “ಬಂಪರ್’ ಕೊಡುಗೆ ಘೋಷಿಸಿದ್ದು, ಒಟ್ಟು 37,188 ಕೋಟಿ ರೂ. ಅನುದಾನ ಮಹಿಳಾ ಉದ್ದೇಶಿತ ಯೋಜನೆ ಗಳಿಗೆ ಮೀಸಲಿಡಲಾಗಿದೆ. ಸರಕಾರದ ಮಹಿಳಾ ಉದ್ಯೋಗಿಗಳಿಗೆ 6 ತಿಂಗಳ ಮಕ್ಕಳ ಆರೈಕೆ ರಜೆ ನೀಡುವುದಾಗಿ ತಿಳಿಸಲಾಗಿದೆ. ಮಹಿಳಾ ಉದ್ಯಮಿ ಗಳಿಗೆ ಶೇ. 4 ಬಡ್ಡಿ ದರದಲ್ಲಿ 2 ಕೋಟಿ ರೂ. ವರೆಗೆ ಸಾಲ ಸೌಲಭ್ಯ ಘೋಷಿಸಲಾಗಿದೆ.
ಒಕ್ಕಲಿಗ ಅಭಿವೃದ್ಧಿ ನಿಗಮ
ಒಕ್ಕಲಿಗ ಸಮುದಾಯದ ಅಭಿವೃದ್ಧಿಗಾಗಿ ಹೊಸ ನಿಗಮ ಸ್ಥಾಪಿಸುವುದಾಗಿ ಘೋಷಿಸಲಾಗಿದ್ದು 500 ಕೋಟಿ ರೂ. ಅನುದಾನ ಸಹ ನೀಡುವುದಾಗಿ ತಿಳಿಸಲಾಗಿದೆ. ಲಿಂಗಾಯಿತ ವೀರಶೈವ ಅಭಿವೃದ್ಧಿ ನಿಗಮ ಸ್ಥಾಪನೆ ಅನಂತರ ಒಕ್ಕಲಿಗರ ಅಭಿವೃದ್ಧಿಗೂ ನಿಗಮ ಸ್ಥಾಪಿಸುವ ಬೇಡಿಕೆ ಇತ್ತು. ಆ ನಿಗಮಕ್ಕೆ ಕೊಟ್ಟಿರುವಷ್ಟೇ ಅನುದಾನ ಇದಕ್ಕೂ ನೀಡಲಾಗಿದೆ.
ಮಹಿಳೆಯರಿಗೆ ಅಗ್ಗದ ಸಾಲ
ಸ್ವಯಂ ಉದ್ಯೋಗ ಮಾಡುವ 85 ಸಾವಿರ ಮಹಿಳೆಯರಿಗೆ ಕಿರು ಸಾಲ, ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ 500 ಕೋಟಿ ರೂ. ಅನುದಾನ, ಹಣ್ಣು- ತರಕಾರಿ, ಸಂಬಾರ ಪದಾರ್ಥಗಳಿಗಾಗಿ ಹೊಸ ರಫ್ತು ವಲಯ, ಜಿಲ್ಲೆಗೊಂದು ಗೋ ಶಾಲೆ, 1,500 ಕೋಟಿ ರೂ. ವೆಚ್ಚದಲ್ಲಿ 58 ಅಣೆಕಟ್ಟುಗಳ ಪುನಶ್ಚೇತನ, ಕೃಷ್ಣಾ ಮೇಲ್ದಂಡೆ ಯೋಜನೆಗೆ 5,600 ಕೋಟಿ ರೂ., ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ 3,000 ಕೋಟಿ ರೂ., ಕರಾವಳಿ ಪ್ರದೇಶದ ಸಮಗ್ರ ಅಭಿವೃದ್ಧಿಗೆ ವಿಶೇಷ ಯೋಜನೆ ಮೂಲಕ ಎಲ್ಲ ವಲಯದವರನ್ನೂ ಸಂತುಷ್ಟಪಡಿಸುವ ಪ್ರಯತ್ನ ಮಾಡಿದ್ದಾರೆ.
ಮನೆ ಕಟ್ಟಿ ನೋಡಿ
ಕೈಗೆಟಕುವ ದರಗಳ ಮನೆ ಖರೀದಿಸಿ ಪ್ರೋತ್ಸಾಹಿ ಸಲು 35 ಲಕ್ಷ ರೂ.ಗಳಿಂದ 45 ಲಕ್ಷ ರೂ. ವರೆಗಿನ ಮೌಲ್ಯದ ಅಪಾರ್ಟ್‌ಮೆಂಟ್‌ಗಳ ಮೊದಲ ನೋಂದಣಿಗೆ ಮುದ್ರಾಂಕ ಶುಲ್ಕ ಶೇ. 5ರಿಂದ 3ಕ್ಕೆ ಇಳಿಸಿ ಮಧ್ಯಮ ವರ್ಗಕ್ಕೆ ಸಿಹಿ ಸುದ್ದಿ ನೀಡಿದ್ದಾರೆ. ಅದೇ ರೀತಿ ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರಿಗೆ ರಿಯಾಯಿತಿ ಬಿಎಂಟಿಸಿ ಬಸ್ ಪಾಸ್ “ವನಿತಾ ಸಂಗಾತಿ’ ಯೋಜನೆ ಅನುಷ್ಠಾನ, ಕೈಮಗ್ಗ ನೇಕಾರರಿಗೆ ವಾರ್ಷಿಕ 2 ಸಾ.ರೂ. ನೆರವು ಯೋಜನೆ ಮುಂದುವರಿಸುವುದಾಗಿ ಘೋಷಿಸಿದ್ದಾರೆ.
ಕರಾವಳಿಗೆ ಕೊಡುಗೆ
– ಅಡಿಕೆ ಹಳದಿ ಎಲೆ ರೋಗ ಕುರಿತು ವೈಜ್ಞಾನಿಕ ಸಂಶೋಧನೆ, ಪರ್ಯಾಯ ಬೆಳೆ ಪ್ರೋತ್ಸಾಹಿಸಲು 25 ಕೋ.ರೂ. ಮೀಸಲು.
– ಮಂಗಳೂರಿನ ಗಂಜೀಮಠದಲ್ಲಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ ರಾಜ್ಯ ಸರಕಾರದ ಪಾಲು 66 ಕೋ.ರೂ. ಅನುದಾನ ಘೋಷಣೆ.
– ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಮಂಗಳೂರು-ಪಣಜಿ ಜಲಮಾರ್ಗ, ನೇತ್ರಾವತಿ, ಗುರುಪುರ ನದಿಗಳಲ್ಲಿ ಜಲಮಾರ್ಗ.
– ಮೀನುಗಾರಿಕಾ ದೋಣಿಗಳ ಡೀಸೆಲ್ ಕರ ರಿಯಾಯಿತಿಯನ್ನು ನೇರವಾಗಿ ಮೀನುಗಾರರಿಗೆ ವಿತರಣ ಕೇಂದ್ರದಲ್ಲೇ ವಿತರಿಸಲು ಕ್ರಮ.
– ತ್ರಾಸಿ, ಮರವಂತೆ, ಒತ್ತಿನೆಣೆ ಹಾಗೂ ಸೋಮೇಶ್ವರ ಕಡಲ ತೀರಗಳ ಸಮಗ್ರ ಅಭಿವೃದ್ಧಿಗೆ ಒಟ್ಟು 20 ಕೋ.ರೂ. ಘೋಷಣೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUDA case; ಸಿಎಂ ಸಿದ್ದರಾಮಯ್ಯ ವಿಚಾರಣೆಗೆ ಕರೆದ ಲೋಕಾಯುಕ್ತ ಪೊಲೀಸರು
Waqf Notice: ʼವಕ್ಫ್ ಬೋರ್ಡ್‌ಗೆ ಆಸ್ತಿ ನೋಂದಣಿ ತಕ್ಷಣ ಸ್ಥಗಿತಗೊಳಿಸಲು ಸಿಎಸ್‌ಗೆ ಸೂಚಿಸಿʼ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.