ಬಜೆಟ್ ಅಂದರೆ ಬಹಳ ಸರಳ, ಆದರೆ …!
Team Udayavani, Feb 10, 2021, 6:20 AM IST
ಸದ್ಯ ಬಜೆಟ್ ಮಂಡನೆಯ ಸುದ್ದಿ ನಿತ್ಯವೂ ಮಾಧ್ಯಮಗಳಲ್ಲಿ ರಾರಾಜಿಸುತ್ತಿವೆ. ಕೇಂದ್ರ ಸರಕಾರದ ಮುಂಬರುವ ಸಾಲಿನ ಬಜೆಟ್ ಮಂಡನೆಯಾಗಿದೆ. ಹಲವು ರಾಜ್ಯಗಳಲ್ಲಿ ಆಯವ್ಯಯ ಮಂಡನೆಯ ಭರಾಟೆ ಜೋರಾಗಿಯೇ ನಡೆದಿದೆ. ಇದರಿಂದ ನಗರಾಡಳಿತ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳೂ ಹೊರತಾಗಿಲ್ಲ. ಬಜೆಟ್ ಅಂಕಿಅಂಶಗಳ ಬಗೆಗೆ ಚರ್ಚೆಗಳು ಬಿರುಸಾಗಿಯೇ ಸಾಗಿವೆ. ಆದರೆ ಒಂದೇ ಮಾತಿನಲ್ಲಿ ಹೇಳುವುದಾದರೆ ಬಜೆಟ್ ಸರಳ ಕಥೆ ಎಂದರೆ ಇರುವ ಸೀಮಿತ ಸಂಪನ್ಮೂಲವನ್ನು ತಮಗೆ ಬೇಕಾದ ಕಡೆ ಕೊಂಡೊಯ್ಯಲು ನಡೆಯುವ ಲಾಬಿ ಅಥವಾ ಪೈಪೋಟಿ!
ಪ್ರತೀ ವರ್ಷ ಬಜೆಟ್ ಕುರಿತು ಅಧ್ಯಯನ ನಡೆಸಿ ಪ್ರತಿಕ್ರಿಯೆ ನೀಡುತ್ತಿದ್ದ ದಿ|ಡಾ|ವಿ.ಎಸ್.ಆಚಾರ್ಯರು, “ಸಿರಿವಂತರಿಂದ ತೆರಿಗೆ ಮೂಲಕ ಸಂಪನ್ಮೂಲವನ್ನು ಸಂಗ್ರಹಿಸಿ ಅದನ್ನು ಬಡವರ್ಗಕ್ಕೆ ತಲುಪುವಂತೆ ಹಂಚಿ ಹಾಕುವುದೇ ಬಜೆಟ್. ಇದನ್ನು ಮಾಡುವುದು ಆಡಳಿತ ನಡೆಸುವ ಸರಕಾರದ ಜವಾಬ್ದಾರಿ’ ಎಂದು ಹೇಳಿದ್ದರು. ಬಜೆಟ್ ಎಂಬುದು ಯಾರೋ ಬುದ್ಧಿವಂತರಿಗೆ ಮಾತ್ರ ಅರ್ಥವಾಗುವಂಥದ್ದು ಎಂದು ತಿಳಿದವರಿಗೆ ಅವರು ಸರಳವಾಗಿ ವಿವರಿಸಿದ ರೀತಿ ಇದು.
1 ರೂ.ನಲ್ಲಿ 85 ಪೈಸೆ ಸೋರಿಕೆ!
ಲಕ್ಷ, ಸಾವಿರ ಕೋಟಿ ರೂ.ಗಳಲ್ಲಿ ತೆರಿಗೆ ಸಂಗ್ರ ಹವೂ ಅದರ ವಿತರಣೆಯೂ.. ಪ್ರಕ್ರಿಯೆ ಹೀಗೆ ಲಾಗಾಯ್ತಿನಿಂದಲೂ ಸಾಗುತ್ತಿದೆ. ಈ ನಡುವೆ ಮಂತ್ರಿಮಾಗಧರೇ ಮೊದಲಾದ ಜನಪ್ರತಿನಿಧಿಗಳ, ಅಧಿಕಾರಿ ವರ್ಗದ ದರ್ಬಾರ್‌ಗಳೆಲ್ಲವೂ ನಡೆಯು ತ್ತಿರುವುದು ಜನರಿಂದ ಸಂಗ್ರಹಿಸಿದ ತೆರಿಗೆ ಹಣ ದಿಂದಲೇ… 1985ರಲ್ಲಿ ಮಾಜಿ ಪ್ರಧಾನಿ ದಿ| ರಾಜೀವ್ ಗಾಂಧಿಯವರು “ಸರಕಾರ ಬಡವರಿಗಾಗಿ ಮಂಜೂರು ಮಾಡುವ ಪ್ರತೀ ಒಂದು ರೂಪಾಯಿಯಲ್ಲಿ 15 ಪೈಸೆ ಮಾತ್ರ ಫಲಾನುಭವಿಗೆ ತಲುಪುತ್ತದೆ’ ಎಂದು ಹೇಳಿಕೆ ನೀಡಿದ್ದನ್ನು 2017ರಲ್ಲಿ ಸರ್ವೋಚ್ಚ ನ್ಯಾಯಾ ಲಯದ ನ್ಯಾಯಾಧೀಶರಾದ ನ್ಯಾ|ಎ.ಕೆ.ಸಿಕ್ರಿ ಮತ್ತು ನ್ಯಾ|ಅಶೋಕ್ ಭೂಷಣ್ ಅವರೂ ಉಲ್ಲೇಖೀಸಿದ್ದರು. ಈಗ ಪರಿಸ್ಥಿತಿ ಸುಧಾರಿಸಿದೆ ಎಂದರೆ ಅದು ಅತಿಶಯೋಕ್ತಿಯೇ ಸರಿ.
ಬಡವರೂ ತೆರಿಗೆ ಪಾವತಿದಾರರು
ಪೆನ್ನು, ಪೆನ್ಸಿಲ್, ಚೆಂಡು ಹೀಗೆ ಏನನ್ನು ಖರೀದಿಸಿ ದರೂ ಮತ್ತು ಮನೆ ತೆರಿಗೆ, ಗ್ರಂಥಾಲಯ ತೆರಿಗೆ, ನೀರಿನ ತೆರಿಗೆ ಹೀಗೆ ಜನಸಾಮಾನ್ಯರಿಂದ ತರಹೇವಾರಿ ತೆರಿಗೆ ಪಾವತಿ ಆಗಿರುತ್ತದೆ. ಹೀಗೆ ಒಬ್ಬ ಸಾಮಾನ್ಯ ಮನುಷ್ಯ ಕನಿಷ್ಠ ವರ್ಷಕ್ಕೆ ಸುಮಾರು 30,000 ರೂ. ತೆರಿಗೆ ಪಾವತಿಸಿರುತ್ತಾನೆ. ಆತನಿಗೇ ಇದು ತಿಳಿದಿರುವುದಿಲ್ಲ.
81 ಚದರಡಿ ಮನೆಯಲ್ಲಿ ನಾಲ್ವರು!
ಉಡುಪಿ ನಗರಸಭೆ ವ್ಯಾಪ್ತಿಯ ಮಂಚಿಕುಮೇರಿ ಯಲ್ಲಿ ಹಲವು ಕೊರಗ ಸಮುದಾಯದ ಮನೆಗಳಿವೆ. ಅದರಲ್ಲಿ ಒಂದು ಮನೆ ಸುಂದರ ಮತ್ತು ಪ್ರಿಯಾ ದಂಪತಿಯದ್ದು. ಇವರ ಮನೆಗೆ ಹೋಗಲು 50ಕ್ಕೂ ಹೆಚ್ಚು ಮುರಕಲ್ಲಿನ ಅಡ್ಡಾದಿಡ್ಡಿ ಮೆಟ್ಟಿಲು ಏರಬೇಕು. ಮನೆ ನಿರ್ಮಿಸಲು ಇಟ್ಟಿಗೆ, ಕಲ್ಲು ಸಾಗಿಸಬೇಕಾದರೆ ಇವರ ಮನೆ ಮೇಲ್ಭಾಗದಿಂದ ಕೆಳಗೆ ತಗಡಿನ ದಾರಿ ಮಾಡಿ ಗುರುತ್ವಾಕರ್ಷಣ ಶಕ್ತಿಯಿಂದ ಕೆಳಗೆ ಇಳಿಸಬೇಕು. ಎತ್ತರದ ಪ್ರದೇಶದಿಂದ ತಗ್ಗು ಪ್ರದೇಶದ ಇಳಿಜಾರಿನಲ್ಲಿ ಮನೆ ಇದೆ. ಇವರಿಗೆ ಮಡಲಿನ ಜೋಪಡಿ ಒಂದು ಇತ್ತು. ವಿದ್ಯುತ್ ಸಂಪರ್ಕಕ್ಕಾಗಿ ಸಿಮೆಂಟ್ ಬ್ಲಾಕ್, ತಗಡಿನ ಮನೆ ನಿರ್ಮಿಸಲಾಯಿತು. ಮನೆ ಅಂದರೆ 9×9 ಅಡಿ ಚಚ್ಚೌಕದ ಕೊಠಡಿ. ಇದು ಬಿಕಾಂ ಓದಿ ಕೆಲಸ ಅರಸುತ್ತಿರುವ ಪುತ್ರಿ ಸುಪ್ರೀತಾ ಸಹಿತ ನಾಲ್ವರು ಸದಸ್ಯರಿರುವ ಮನೆ. ಸುಪ್ರೀತಾ ಓದುವಾಗ ಬಂಧುಗಳ ಮನೆಗೆ ಹೋಗುತ್ತಿದ್ದಳು. ಇವರು ದೇಶದ ಬಡವರ ಪ್ರತಿನಿಧಿಯಷ್ಟೆ. ಅಮೆರಿಕದ ಅಭಿವೃದ್ಧಿ ಸೂಚ್ಯಂಕಕ್ಕೆ ಸಮನಾಗಿರುವ ಉಡುಪಿ ನಗರದ ಒಂದು ಚಿತ್ರಣ. ಇಂತಹವರು ದೇಶದಲ್ಲಿ ಎಷ್ಟಿರಬಹುದು? ಇವರೆಲ್ಲರನ್ನು ಉದ್ಧರಿಸುವ ಯೋಜನೆಗಳಿಗೆ ಸರಕಾರದಲ್ಲಿ ಕೊರತೆ ಇಲ್ಲ, ಅನುಷ್ಠಾನ ಹಂತದಲ್ಲಿ ಎಡವಟ್ಟಾಗುತ್ತದೆ. ಬಡವರು ಖರೀದಿಸುವ ಯಾವುದೇ ಸಾಮಗ್ರಿಗಳಿಗೆ ತೆರಿಗೆ ವಿಧಿಸುವುದಿಲ್ಲವಾದರೆ ಅವರು ಸ್ವಯಂ ಉದ್ಧಾರವಾಗಬಹುದು.
ಅನುದಾನ ಹೊಡೆಯುವ ನಿಷ್ಣಾತರು!
ಕೊರೊನಾ ಕಾಲಘಟ್ಟದಲ್ಲಿ ಪತ್ರಕರ್ತರು ಶ್ರೀಕೃಷ್ಣಮಠದ ಪರ್ಯಾಯ ಪೀಠಸ್ಥ ಅದಮಾರು ಮಠದ ಶ್ರೀಈಶಪ್ರಿಯತೀರ್ಥರನ್ನು ವಿಚಾರಿಸಿದಾಗ ಶ್ರೀಕೃಷ್ಣಮಠದ ನಿರ್ವಹಣೆಗಾಗಿ ಒಂದು ಕೋ.ರೂ. ಸಾಲ ಮಾಡುತ್ತಿರುವುದಾಗಿ ಹೇಳಿದ್ದು ಒಳಗೊಳಗೇ ಭಾರೀ ಟೀಕೆಗೆ ಗುರಿಯಾಯಿತು. ಮರುದಿನ ಪತ್ರಕರ್ತರು ಇನ್ನೊಂದು ಪ್ರಶ್ನೆಯನ್ನೂ ಮುಂದಿಟ್ಟರು: “ಸರಕಾರದಿಂದ ಅನುದಾನ ಕೇಳುತ್ತೀರಾ?’; ಸ್ವಾಮೀಜಿ ಉತ್ತರವನ್ನೂ ಮುಂದಿಟ್ಟರು: “ಅನುದಾನ ಕೇಳುವುದಾ? ಸರಕಾರದ ಬಳಿ ಇರುವುದೇ ಸೀಮಿತ ಸಂಪನ್ಮೂಲ. ಇದನ್ನು ಎಲ್ಲರೂ ಕೇಳಿದರೆ ಹೇಗಾಗುತ್ತದೆ? ಕೊರೊನಾ ಅವಧಿಯಲ್ಲಿ ಮಠದಿಂದಲೇ ಸರಕಾರಕ್ಕೆ ದೇಣಿಗೆ ನೀಡಿದ್ದೇವಲ್ಲ? ಸಾಲ ಮಾಡಿದವರಿಗೂ ಹೊಣೆ ಇರುತ್ತದೆಯಲ್ಲವೆ?’. ಕೊರೊನಾ ಇರಲಿ, ಬಿಡಲಿ, ಕೊರೊನಾದಿಂದ ಲೋಕ ತತ್ತರಿಸುತ್ತಿರುವಾಗಲೇ ಯಾರ್ಯಾರು ಎಷ್ಟೆಷ್ಟು ಅನುದಾನವನ್ನು ಬಾಚಿಕೊಳ್ಳುತ್ತಿದ್ದಾರೆ?
ಇಂತಹ ಸರಳೀಕರಣ ಸಾಧ್ಯವೆ?
ಸ್ವಯಂಘೋಷಿತ ತೆರಿಗೆ ಪದ್ಧತಿ ಜಾರಿಗೆ ತಂದಾಗ ಎಷ್ಟೋ ಸಿರಿವಂತರು ಬಹಳ ಸಂತೃಪ್ತಿಯಿಂದ ಘೋಷಿಸಿಕೊಂಡಿದ್ದಾರೆನ್ನುವುದು ದಿಟ. ಆದರೆ ಇವರಿಗೆ ಇರುವ ಅನುಮಾನವೆಂದರೆ ತಮ್ಮ ತೆರಿಗೆ ಹಣ ಎಷ್ಟು ಉಪಯೋಗವಾಗುತ್ತದೆ ಎಂಬುದು. ಒಂದು ವೇಳೆ ತೆರಿಗೆದಾರರಿಂದ ಹಣವನ್ನು “ಬಕಾಸುರರು’ ಸಂಗ್ರಹಿಸಿ “ಬಡವರಿಗೆ’ ಹಂಚುವ ಬದಲು, ತೆರಿಗೆ ಪಾವತಿದಾರರು ತೆರಿಗೆ ಪಾವತಿಸುವಷ್ಟು ಹಣವನ್ನು ಅರ್ಹ ಬಡವರಿಗೆ ಅವರಿಗೆ ಬೇಕಾದಂತೆ ವಿನಿಯೋಗಿಸಿ ಬಳಕೆ ಪ್ರಮಾಣಪತ್ರ(ಯುಟಿಲೈಸೇಶನ್ ಸರ್ಟಿಫಿಕೇಟ್)ವನ್ನು ಸಂಬಂಧಪಟ್ಟ ಇಲಾಖೆಗಳಿಗೆ ಸಬ್‌ಮಿಟ್ ಮಾಡುವ ಸರಳೀಕೃತ ಅವಕಾಶವಿದ್ದರೆ ಎಂತಹ ಕಲ್ಯಾಣರಾಜ್ಯ ನಿರ್ಮಾಣವಾಗಬಹುದು? ಆದರೆ ಇದೇ ತೆರಿಗೆ ಹಣವನ್ನು ಅನುಭವಿಸಿ ಬೆಳೆದ “ಬಕಾಸುರ’ರು “ಬಡಾಸುರ’ರಾಗುವ ಭಯದಲ್ಲಿ ಇದಕ್ಕೆ ಅವಕಾಶ ಕೊಡುತ್ತಾರೆಯೆ?
ಯಾರಧ್ದೋ ದುಡ್ಡು ಎಲ್ಲಮ್ಮನ ಜಾತ್ರೆ!
ಇದೊಂದು ಸತ್ಯಕಥೆ. ಹಿರಿಯ ಅಧಿಕಾರಿಯೊಬ್ಬರು ಜಿಲ್ಲಾ ಕೇಂದ್ರಗಳಿಗೆ ಪ್ರಗತಿ ಪರಿಶೀಲನೆ ನಡೆಸಲು ಬರುತ್ತಾರೆ. ಅಧಿಕಾರಿ ವಿಮಾನದಲ್ಲಿ ಬಂದಿಳಿದು ಪ್ರವಾಸಿ ಬಂಗ್ಲೆಗೆ ಹೋಗಿ ಫ್ರೆಶ್‌ಅಪ್ ಆಗುತ್ತಾರೆ. ಅವರ ಬೆಂಗಳೂರು ಕಚೇರಿಯಿಂದ ಕಾರನ್ನು
(ಕಾರಲ್ಲಿ ಚಾಲಕ ಮಾತ್ರ) ತಂದಿರುತ್ತಾರೆ. ಪ್ರವಾಸಿ ಬಂಗ್ಲೆಯಿಂದ ಅಧಿಕಾರಿ ಆ ಕಾರಿನಲ್ಲಿ ಜಿಲ್ಲಾ ಕೇಂದ್ರಕ್ಕೆ ಹೋಗಿ ಪ್ರಗತಿ ಪರಿಶೀಲನೆ ನಡೆಸಿ ಇದೇ ರೀತಿ ಬೆಂಗಳೂರಿಗೆ ವಾಪಸಾಗುತ್ತಾರೆ. ಇನ್ನು ಕೆಲವರು ಇದ್ದಾರೆ. ಇವರು ಜಿಲ್ಲಾ ಮಟ್ಟದ ಅಧಿಕಾರದಲ್ಲಿರುವಾಗ ಮಾಡಿದ ಅಕ್ರಮ ಸಂಪಾದನೆಯನ್ನು ಬೇನಾಮಿಯಾಗಿ ಹೂಡಿಕೆ ಮಾಡಿ ಉನ್ನತಾಧಿಕಾರಿಯಾಗಿ ಪ್ರಗತಿ ಪರಿಶೀಲನೆಗೆ ಬರುವಾಗ ಈ ಬೇನಾಮಿ ಹೂಡಿಕೆಯ ಲೆಕ್ಕಾಚಾರಗಳನ್ನೂ ಪರಿಶೀಲಿಸುತ್ತಾರೆ. “ಯಾರಧ್ದೋ ದುಡ್ಡು ಎಲ್ಲಮ್ಮನ ಜಾತ್ರೆ’ ಎಂಬ ಗಾದೆಗೂ ಮೀರಿದ್ದಿದು.
– ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.