ಬಜೆಟ್ ಅನುಷ್ಠಾನ : ಹೊಸ ಪರಂಪರೆ ಆರಂಭಿಸಿದ ಸಿಎಂ ಬೊಮ್ಮಾಯಿ
ಮಹತ್ವಾಕಾಂಕ್ಷಿ ಯೋಜನೆಗಳು ಸಮರ್ಪಕವಾಗಿ ಜಾರಿಯಾಗುತ್ತಲೇ ಇರಲಿಲ್ಲ
Team Udayavani, May 5, 2022, 7:05 PM IST
ಬೆಂಗಳೂರು : ಬಜೆಟ್ ಘೋಷಣೆಯ ಅನುಷ್ಠಾನದ ಪರಿಶೀಲನೆಗೆ ಇಲಾಖಾವಾರು ಸಭೆ ನಡೆಸುವ ಮೂಲಕ ಆಡಳಿತ ವ್ಯವಸ್ಥೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಇದೀಗ ಹೊಸ ಪರಂಪರೆ ಆರಂಭಿಸಿದ್ದಾರೆ.
ಇದುವರೆಗಿನ ಮುಖ್ಯಮಂತ್ರಿಗಳು ಬಜೆಟ್ ಪೂರ್ವಭಾವಿ ಸಭೆ ನಡೆಸಿ ಅನುಷ್ಠಾನ ಜವಾಬ್ದಾರಿಯನ್ನು ಅಧಿಕಾರಿಗಳ ಸುಪರ್ಧಿಗೆ ಬಿಡುತ್ತಿದ್ದರು. ಹೀಗಾಗಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳು ಸಮರ್ಪಕವಾಗಿ ಜಾರಿಯಾಗುತ್ತಲೇ ಇರಲಿಲ್ಲ. ಆದರೆ ಸಿಎಂ ಬಸವರಾಜ್ ಬೊಮ್ಮಾಯಿ ಈ ಸಂಪ್ರದಾಯವನ್ನು ಮುರಿದಿದ್ದು, ಖುದ್ದು ಬಜೆಟ್ ಘೋಷಣೆಗಳ ಅನುಷ್ಠಾನ ಹೇಗೆ ನಡೆಯುತ್ತಿದೆ ಎಂದು ಪರಿಶೀಲನೆಗೆ ಮುಂದಾಗಿದ್ದಾರೆ. ಬಜೆಟೋತ್ತರ ಇಲಾಖಾವಾರು ಪರಿಶೀಲನೆ ಆರಂಭಿಸುವ ಮೂಲಕ ಹೊಸ ಪರಂಪರೆ ಆರಂಭಿಸಿದ್ದಾರೆ. ಚುನಾವಣಾ ವರ್ಷದಲ್ಲಿ ಆಡಳಿತ ಯಂತ್ರಕ್ಕೆ ಚುರುಕು ನೀಡುವುದಕ್ಕೂ ಸಾಧ್ಯ ಎಂದು ಸಿಎಂ ಈ ಸಭೆ ಆರಂಭಿಸಿದ್ದಾರೆ.
ಸಿಎಂ ಕಚೇರಿ ಮೂಲಗಳ ಪ್ರಕಾರ, ಬಜೆಟ್ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸರಕಾರ ಒಂದು ಸಮಿತಿಯನ್ನು ರಚನೆ ಮಾಡಿದ್ದು, ಶೇ.80 ರಷ್ಟು ಘೋಷಣೆಗಳಿಗೆ ಕಾರ್ಯಾದೇಶ ನೀಡಲಾಗಿದೆ. ಇಲಾಖಾವಾರು ತಳಹಂತದಲ್ಲಿ ಇವುಗಳ ಜಾರಿಯಷ್ಟೇ ಬಾಕಿ ಉಳಿದಿದ್ದು, ಖುದ್ದು ಮುಖ್ಯಮಂತ್ರಿಗಳೇ ಈಗ ಮೇಲ್ವಿಚಾರಣೆ ಆರಂಭಿಸಿದ್ದಾರೆ. ಕಳೆದ ಎರಡು ದಿನಗಳಿಂದ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳು ಸಭೆ ನಡೆಸುತ್ತಿದ್ದಾರೆ. ಹೀಗಾಗಿ ವಿಧಾನಸೌಧ, ವಿಕಾಸಸೌಧ, ಎಂಎಸ್ ಬಿಲ್ಡಿಂಗ್ ಸೇರಿದಂತೆ ಪ್ರಮುಖ ಸರಕಾರಿ ಕಚೇರಿಗಳಲ್ಲಿ ಈಗ ಚಲನಶೀಲತೆ ಲಭ್ಯವಾಗಿದೆ.
ಗುರುವಾರ ಸಿಎಂ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಭೆ ಜರುಗಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್, ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್, ಅಭಿವೃದ್ಧಿ ಆಯುಕ್ತೆ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್ ಪ್ರಸಾದ್, ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ:ಎಂ.ಟಿ.ರೇಜು, ನಿರ್ದೇಶಕಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ , ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.