World Cup ಗೆಲುವಿನ 40ನೇ ವರ್ಷಾಚರಣೆ: ಒಗ್ಗಟ್ಟಿನಿಂದ ಆಡಿ ಚಾಂಪಿಯನ್ ಆದೆವು- ಕಪಿಲ್
ಮುಂಬಯಿಯಲ್ಲಿ ಸಮಾರಂಭ - ಯಶ್ಪಾಲ್‌ಗೆ ನಮನ - ಆಯ್ಕೆ ಸಮಿತಿಗೂ ಮನ್ನಣೆ
Team Udayavani, Jun 27, 2023, 7:20 AM IST
ಮುಂಬಯಿ: “ನಾವು ಒಗ್ಗಟ್ಟಿನಿಂದ ಆಡಿ ವಿಶ್ವಕಪ್ ಗೆದ್ದೆವು. ನಮ್ಮ ಸಾಧನೆ 40 ವರ್ಷಗಳ ಬಳಿಕವೂ ದೇಶದ ಗಮನ ಸೆಳೆಯುತ್ತಿದೆ. ತಂಡ ಸ್ಫೂರ್ತಿಯನ್ನು ದೇಶ ಈಗಲೂ ನೆನೆಸಿ ಕೊಳ್ಳುತ್ತಿದೆ” ಎಂಬುದಾಗಿ 1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್‌ದೇವ್ ತುಂಬು ಉತ್ಸಾಹದಲ್ಲಿ ಹೇಳಿದಾಗ ಅಲ್ಲಿ ಕರತಾಡನ ಮುಗಿಲು ಮುಟ್ಟಿತ್ತು. ವಿಶ್ವಕಪ್ ಗೆಲುವಿನ 40ನೇ ವರ್ಷಾಚರಣೆಯ ಸಂದರ್ಭದಲ್ಲಿ ಕಪಿಲ್ ಅಂದಿನ ಮಹತ್ಸಾಧನೆಯನ್ನು ನೆನಪಿಸಿಕೊಂಡ ಕ್ಷಣವದು.
ರವಿವಾರ ತಡರಾತ್ರಿ ಮುಂಬಯಿ ಯಲ್ಲಿ ಒಗ್ಗೂಡಿದ ಅಂದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರೆಲ್ಲ 1983ರ ಯಶೋಗಾಥೆಯನ್ನು ಮೆಲುಕು ಹಾಕಿದರು. ಅಂದಿನ ತಂಡದ ಸದಸ್ಯ ರವಿಶಾಸ್ತ್ರಿ ಲಂಡನ್‌ನಲ್ಲಿದ್ದ ಕಾರಣ ಉಪಸ್ಥಿತರಿರಲಿಲ್ಲ. ಕಾರ್ಯಕ್ರಮಕ್ಕೂ ಮುನ್ನ 1983ರ ವಿಶ್ವಕಪ್ ಗೆಲುವಿನ ರೂವಾರಿ ಯಶ್ಪಾಲ್ ಶರ್ಮ ಅವರ ಅಗಲಿಕೆಗೆ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಯಶ್ಪಾಲ್ 2021ರಲ್ಲಿ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದರು.
ಅಂದು “ಗೆಲುವಿನ ತಂಡ’ವನ್ನು ಆಯ್ದ ಆಯ್ಕೆ ಸಮಿತಿ ಸದಸ್ಯರಾಗಿದ್ದ ಚಂದು ಬೋರ್ಡೆ ಮತ್ತು ಬಿಷನ್ ಸಿಂಗ್ ಬೇಡಿ ಅವರಿಗೂ ಸಮಾರಂಭಕ್ಕೆ ಆಹ್ವಾನ ನೀಡಿದ್ದು ವಿಶೇಷವಾಗಿತ್ತು. ಬೇಡಿ ಹೊಸದಿಲ್ಲಿಯಲ್ಲಿದ್ದ ಕಾರಣ ಬರಲಿಲ್ಲ. ಆದರೆ ಚಂದು ಬೋರ್ಡೆ ಬಹಳ ಉಮೇದಿನಿಂದ ಆಗಮಿಸಿದ್ದರು. ತಂಡದ ಮ್ಯಾನೇಜರ್ ಮಾನ್ ಸಿಂಗ್ ಕೂಡ ಉಪಸ್ಥಿತರಿದ್ದರು.
“ನಾವೆಲ್ಲ ತಂಡವಾಗಿ ಆಡಿ, ಒಗ್ಗಟ್ಟಿನಿಂದ ದುಡಿದು ಈ ವಿಶ್ವಕಪ್ ಗೆದ್ದೆವು. ನಾನು ಈ ತಂಡದ ಒಂದು ಭಾಗವಾಗಿದ್ದೆ, ಅಷ್ಟೇ. ಯಶ್ಪಾಲ್ ಶರ್ಮ ನಮ್ನನ್ನೆಲ್ಲ ಮೇಲಿನಿಂದ ಹಾರೈಸುತ್ತಿದ್ದಾರೆ” ಎಂದು ಕಪಿಲ್ ಖುಷಿಯಿಂದ, ಅಷ್ಟೇ ಭಾವುಕರಾಗಿ ನುಡಿದರು.
ಆಲ್‌ರೌಂಡರ್‌ಗಳಿಗೆ ಆದ್ಯತೆ
“ನಾನು ಅಂದಿನ ಕೆಲವು ವಿಶ್ವಕಪ್ ತಂಡದ ಸದಸ್ಯರನ್ನು 40 ವರ್ಷಗಳ ಬಳಿಕ ಭೇಟಿ ಆಗುತ್ತಿದ್ದೇನೆ” ಎಂದವರು ಅಂದಿನ ಆಯ್ಕೆ ಸಮಿತಿ ಸದ್ಯರಲ್ಲಿ ಒಬ್ಬರಾಗಿದ್ದ ಚಂದು ಬೋರ್ಡೆ. ಗುಲಾಂ ಅಹ್ಮದ್ ಅಂದಿನ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು. ಚಂದು ಬೋರ್ಡೆ, ಬಿಷನ್ ಸಿಂಗ್ ಬೇಡಿ, ಚಂದು ಸರ್ವಟೆ ಮತ್ತು ಪಂಕಜ್ ರಾಯ್ ಆಯ್ಕೆ ಸಮಿತಿಯ ಉಳಿದ ಸದಸ್ಯರಾಗಿದ್ದರು. ಇವರಲ್ಲಿ ಗುಲಾಂ ಅಹ್ಮದ್, ಚಂದು ಸರ್ವಟೆ ಮತ್ತು ಪಂಕಜ್ ರಾಯ್ ಈಗಿಲ್ಲ.
“ನಾವು ಇಂಗ್ಲೆಂಡ್ ವಾತಾವರಣಕ್ಕೆ ಸೂಕ್ತವಾಗಬಲ್ಲ ಆಟಗಾರರನ್ನು ಆರಿ ಸಲು ನಿರ್ಧರಿಸಿದೆವು. ಸ್ಪೆಷಲಿಸ್ಟ್ ಆಟ ಗಾರರಿಗಿಂತ ಮಿಗಿಲಾಗಿ ಆಲ್‌ರೌಂಡರ್‌ಗಳ ಆಯ್ಕೆಗೆ ಒತ್ತು ಕೊಟ್ಟೆವು. ಈ ತಂಡವನ್ನು ವಿಶ್ವವೇ ಕೊಂಡಾಡುತ್ತಿದೆ. ಅಭಿಮಾನದಿಂದ ನನ್ನನ್ನು ಆಹ್ವಾನಿಸಿದ್ದಕ್ಕೆ ಧನ್ಯವಾದಗಳು” ಎಂಬುದಾಗಿ ಚಂದು ಬೋರ್ಡೆ ಹೇಳಿದರು.
ಆಯ್ಕೆ ಸಮಿತಿ ಪಾತ್ರ
1983ರ ಹೀರೋಗಳಲ್ಲಿ ಒಬ್ಬರಾಗಿದ್ದ ಮೊಹಿಂದರ್ ಅಮರನಾಥ್ ಕೂಡ ಆಯ್ಕೆ ಮಂಡಳಿಯನ್ನು ಮೊದಲು ಸ್ಮರಿಸಿಕೊಂಡರು. “ಚಂದು ಬೋರ್ಡೆ ನನ್ನ ರೋಲ್ ಮಾಡೆಲ್. ಅವರ ಬೌಲಿಂಗ್ ಶೈಲಿಯನ್ನೇ ನಾನು ಅನು ಸರಿಸುತ್ತಿದ್ದೆ. ನಮ್ಮ ಗೆಲುವಿನಲ್ಲಿ ಆಯ್ಕೆ ಸಮಿತಿ ವಹಿಸಿದ ಪಾತ್ರ ಸದಾ ಸ್ಮರಣೀಯ” ಎಂದರು. ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳೆರಡರಲ್ಲೂ ಪಂದ್ಯ ಶ್ರೇಷ್ಠರೆನಿಸಿದ ಹೆಗ್ಗಳಿಕೆ ಮೊಹಿಂದರ್ ಅಮರನಾಥ್ ಅವರದಾಗಿತ್ತು.
ಅಸಾಮಾನ್ಯ ತಂಡಸ್ಫೂರ್ತಿ
1983ರ ವಿಶ್ವಕಪ್‌ನಲ್ಲಿ ಅತ್ಯಧಿಕ 18 ವಿಕೆಟ್ ಉರುಳಿಸಿದ ರೋಜರ್ ಬಿನ್ನಿ ಕೂಡ ತಂಡದ ಸ್ಫೂರ್ತಿಯನ್ನು ಕೊಂಡಾಡಿದರು. “ತಂಡದ ಇಚ್ಛಾಶಕ್ತಿ ಮುಗಿಲೆತ್ತರಲ್ಲಿತ್ತು. ಕಪಿಲ್‌ದೇವ್ ಜಿಂಬಾಬ್ವೆ ವಿರುದ್ಧ ತೋರ್ಪಡಿಸಿದ ಬ್ಯಾಟಿಂಗ್ ಜೋಶ್ ಮತ್ತು ಫೈನಲ್‌ನಲ್ಲಿ ಹೊರಹೊಮ್ಮಿದ ತಂಡದ ಕೆಚ್ಚು ಅಸಾಮಾನ್ಯವಾಗಿತ್ತು” ಎಂದರು. ಬಿಸಿಸಿಐ ಅಧ್ಯಕ್ಷ ಗಾದಿಯನ್ನು ಅಲಂಕರಿಸಿದ 1983ರ ವಿಶ್ವಕಪ್ ವಿಜೇತ ತಂಡದ ಏಕೈಕ ಸದಸ್ಯನೆಂಬುದು ರೋಜರ್ ಬಿನ್ನಿ ಪಾಲಿನ ಹೆಗ್ಗಳಿಕೆಯಾಗಿದೆ.
ಎಂದಿನಂತೆ ಕೆ. ಶ್ರೀಕಾಂತ್ ತಮ್ಮ ಅರೆಬರೆ ಹಿಂದಿ ಮೂಲಕ ಹಾಸ್ಯ ಚಟಾಕಿ ಹಾರಿಸುತ್ತ ಇಡೀ ಸಮಾರಂಭದ ಕೇಂದ್ರಬಿಂದು ಎನಿಸಿದರು.
ಪತ್ನಿಯರಿಗೂ ಅವಕಾಶ!
ತಂಡದ ಮ್ಯಾನೇಜರ್ ಆಗಿದ್ದ ಮಾನ್ ಸಿಂಗ್ ಸ್ವಾರಸ್ಯವೊಂದನ್ನು ಬಿಚ್ಚಿಟ್ಟರು. “ಅಂದು ಆಟಗಾರರ ಪತ್ನಿಯರಿಗೆ ಬಸ್ಸಿನಲ್ಲಿ, ಹೊಟೇಲ್‌ನಲ್ಲಿ ಒಟ್ಟಿಗೆ ಇರಲು ಅವಕಾಶ ಇರಲಿಲ್ಲ. ಇದು ಬಿಸಿಸಿಐ ನಿಯಮವಾಗಿತ್ತು. ಆದರೆ ನಾನು ಇದಕ್ಕೆ ಅವಕಾಶ ಕಲ್ಪಿಸಿದೆ. ಇದರಿಂದ ಹೆಚ್ಚಿನ ಲಾಭವಾದದ್ದು ನವವಿವಾಹಿತ ಕೆ. ಶ್ರೀಕಾಂತ್ ಅವರಿಗೆ. ನವದಂಪತಿಗೆ ನಾನು ನನ್ನ ಕೋಣೆಯನ್ನು ಬಿಟ್ಟುಕೊಟ್ಟಿದ್ದೆ’ ಎಂದು ಚಟಾಕಿ ಹಾರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.