ಉರ್ದು ಮಾತನಾಡಲಿಲ್ಲ ಎಂದು ಚಂದ್ರು ಕೊಲೆ: ಗೃಹ ಸಚಿವ ಆರಗ ಜ್ಞಾನೇಂದ್ರ
ದಲಿತ ಯುವಕನನ್ನ ಚೂರಿಯಿಂದ ಚುಚ್ಚಿ ಅಮಾನುಷವಾಗಿ ಕೊಲೆ ಮಾಡಿದ್ದಾರೆ
Team Udayavani, Apr 6, 2022, 11:19 AM IST
ಬೆಂಗಳೂರು : ”ಉರ್ದು ಮಾತಾಡಲು ಬರಲಿಲ್ಲ, ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ ಎಂದ ಕಾರಣಕ್ಕಾಗಿ ಚಂದ್ರುವನ್ನು ಚೂರಿಯಿಂದ ಚುಚ್ಚಿ ಚುಚ್ಚಿ ಅಮಾನುಷವಾಗಿ ಕೊಲೆ ಮಾಡಿದ್ದಾರೆ” ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಬುಧವಾರ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆ.ಜೆ.ನಗರ ಚಂದ್ರು ಹತ್ಯೆ ಬಗ್ಗೆ ಮಾಹಿತಿ ಪಡೆದಿದ್ದೇನೆ. ಉರ್ದು ಮಾತಾಡಲು ಆತನಿಗೆ ಹೇಳಿದ್ದಾರೆ, ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ ಎಂದು ಚೂರಿಯಿಂದ ಚುಚ್ಚಿ ಚುಚ್ಚಿ ಅಮಾನುಷವಾಗಿ ಕೊಲೆ ಮಾಡಿದ್ದಾರೆ. ಚಂದ್ರು ಒಬ್ಬ ದಲಿತ ಯುವಕ. ಘಟನೆಗೆ ಸಂಬಂಧಿಸಿ ಕೆಲವರ ಬಂಧನ ಮಾಡಲಾಗಿದೆ. ತನಿಖೆ ನಡೆಯುತ್ತಿದೆ ಎಂದರು.
ಚಂದ್ರು ಹತ್ಯೆ ನಡೆದ ಕಾರಣ
ಜೆ.ಜೆ.ನಗರ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ತಡರಾತ್ರಿ ಎರಡು ಯುವಕರ ಗುಂಪಿನ ನಡುವೆ ನಡೆದ ಗಲಾಟೆಯಲ್ಲಿ ಕಾಟನ್‌ಪೇಟೆಯ ಜೈಮಾರುತಿನಗರ ನಿವಾಸಿ ಚಂದ್ರು(22) ಕೊಲೆಯಾಗಿದೆ. ಈ ಸಂಬಂಧ ಜೆ.ಜೆ.ನಗರ ನಿವಾಸಿಗಳಾದ ಮೊಹಮ್ಮದ್ ಶಾಹಿದ್, ಸೈಯದ್ ಶಾಹಿದ್ ಹಾಗೂ ಶಾಹಿದ್ ಎಂಬವರನ್ನು ಬಂಧಿಸಲಾಗಿದೆ.
ಐಟಿಐ ಶಿಕ್ಷಣ ಪಡೆದಿರುವ ಚಂದ್ರು, ಕಳೆದ 1 ತಿಂಗಳಿನಿಂದ ಗೂಡ್ಸ್‌ಶೆಡ್ ರಸ್ತೆಯ ರೈಲ್ವೆ ವಿಭಾಗ ಕೇಂದ್ರದಲ್ಲಿ ಉದ್ಯೋಗ ತರಬೇತಿ ಪಡೆಯುತ್ತಿದ್ದ. ಸೋಮವಾರ ರಾತ್ರಿ ಸ್ನೇಹಿತ ಸೈಮನ್ ಹುಟ್ಟುಹಬ್ಬ ಆಚರಿಸಲು ಆತನ ಮನೆಗೆ ಹೋಗಿದ್ದು, 4-5 ಮಂದಿ ಸ್ನೇಹಿತರು ಒಟ್ಟಾಗಿ ಮದ್ಯ ಸೇವಿಸಿ ಪಾರ್ಟಿ ಮಾಡಿದ್ದಾರೆ. ತಡರಾತ್ರಿ 12.30ರ ಸುಮಾರಿಗೆ ಚಿಕನ್ ರೋಲ್ ತೆಗೆಸಿಕೊಡುವಂತೆ ಸ್ನೇಹಿತ ಸೈಮನ್ ಬಳಿ ಚಂದ್ರು ಹೇಳಿಕೊಂಡಿದ್ದ. ಹೀಗಾಗಿ ಚಿಕನ್ ರೋಲ್ ಹುಡುಕಿಕೊಂಡು ತಡರಾತ್ರಿ ಇಬ್ಬರೂ ಬೈಕ್‌ನಲ್ಲಿ ಜೆ.ಜೆ.ನಗರ ಬಳಿ ತಿರುಗಾಡಿದ್ದರು. ಹಳೆ ಗುಡ್ಡದಹಳ್ಳಿಯ ಕಾವೇರಿ ಆಶ್ರಮ ಶಾಲೆ ಸಮೀಪ ವೇಗವಾಗಿ ಚಂದ್ರು ಬೈಕ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದ. ಅದೇ ವೇಳೆ ಆರೋಪಿ ಶಾಹಿದ್ ಎಂಬಾತ ಎದುರಿಗೆ ಬರುತ್ತಿದ್ದು, ಇಬ್ಬರು ಪರಸ್ಪರ ಢಿಕ್ಕಿ ಹೊಡೆದುಕೊಂಡಿದ್ದಾರೆ. ಅದೇ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಮಾರಮಾರಿ ನಡೆದಿದೆ.
ಆಗ ಶಾಹಿದ್ ಮತ್ತಿಬ್ಬರು ಯುವಕರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಈ ವೇಳೆ ಆಕ್ರೋಶಗೊಂಡ ಶಾಹಿದ್, ತನ್ನ ಬಳಿಯಿದ್ದ ಚಾಕುವಿನಿಂದ ಚಂದ್ರುವಿನ ತೊಡೆ ಭಾಗಕ್ಕೆ ಇರಿದಿದ್ದಾನೆ. ರಕ್ತಸ್ರಾವದಲ್ಲಿ ಬಿದ್ದಿದ್ದ ಆತನನ್ನು ಆಸ್ಪತ್ರೆಗೆ ಕರೆದೊಯ್ಯುವುದು ಸುಮಾರು ಒಂದೂವರೆ ಗಂಟೆ ತಡವಾಗಿದ್ದರಿಂದ ರಕ್ತ ಹೆಪ್ಪು ಗಟ್ಟಿ ಮುಂಜಾನೆ 4 ಗಂಟೆ ಸುಮಾರಿಗೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು.
ಸಿಸಿ ಕ್ಯಾಮೆರಾದಲ್ಲಿ ಸೆರೆ
ಕೃತ್ಯ ನಡೆದ ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ಥಳೀಯ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಆರೋಪಿಗಳು ಕೊಲೆ ಮಾಡಿರುವ ದೃಶ್ಯ ಪತ್ತೆಯಾಗಿತ್ತು. ಈ ಆಧಾರದ ಮೇಲೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಶಾಹಿದ್ ಚಪ್ಪಲಿ ಅಂಗಡಿ ಇಟ್ಟು ಕೊಂಡಿದ್ದು, ವ್ಯಾಪಾರ ಮುಗಿಸಿ ಎಂದಿನಂತೆ ಮನೆಗೆ ವಾಪಸ್ ಹೋಗುತ್ತಿದ್ದ ಈ ವೇಳೆ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಜೆ.ಜೆ. ನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.